ADVERTISEMENT

ಕಲ್ಪವೃಕ್ಷಕ್ಕೆ ಕೀಟಗಳ ಕಾಟ: ಸಮಸ್ಯೆ ಪರಿಹಾರಕ್ಕೆ ಇಲ್ಲಿವೆ ಪರಿಣಾಮಕಾರಿ ಸೂತ್ರಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 12:13 IST
Last Updated 24 ಜುಲೈ 2025, 12:13 IST
   

ಕರ್ನಾಟಕದ ಪ್ರಮುಖ ಬೆಳೆಯಾದ ತೆಂಗು ರಾಜ್ಯದ ಆರ್ಥಿಕತೆ ಮತ್ತು ಜೀವನೋಪಾಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಕೀಟ ಬಾಧೆಯಿಂದ ತತ್ತರಿಸಿರುವ ಕಲ್ಪವೃಕ್ಷದಿಂದಾಗಿ ಅದನ್ನೇ ನಂಬಿರುವ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಉಷ್ಣವಲಯದ ಈ ಬೆಳೆಯು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಾದ ತುಮಕೂರು, ಹಾಸನ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಂಗಳೂರು ಗ್ರಾಮೀಣ ಭಾಗದ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. 

ತೆಂಗಿನ ಮರದ ಪ್ರತಿಯೊಂದು ಭಾಗವು ಆರ್ಥಿಕವಾಗಿ ಉಪಯುಕ್ತವಾಗಿದೆ. ಅಡುಗೆ, ಎಣ್ಣೆ, ಸೌಂದರ್ಯವರ್ಧಕಗಳು, ಶುಭ ಸಮಾರಂಭಗಳಲ್ಲಿ ಮತ್ತು ಇತರ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ತೆಂಗು ಬೆಳೆಯು ಅನೇಕ ಜನರಿಗೆ ನೇರ ಅಥವಾ ಪರೋಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಇಷ್ಟೆಲ್ಲಾ ಉಪಯೋಗವಿರುವ ತೆಂಗಿಗೆ ಕಳೆದ ಕೆಲ ದಶಕಗಳಿಂದ ಕಪ್ಪು ತಲೆಯ ಕಂಬಳಿಹುಳು ಕಾಟ ಹೆಚ್ಚಾಗಿದೆ.

ADVERTISEMENT

ಈ ಕೀಟ ಬಾಧೆಯಿಂದ ತೆಂಗಿನ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಇದರಿಂದ ತೆಂಗು ಬೆಳೆಗೆ ಗಮನಾರ್ಹ ಹಾನಿ ಮತ್ತು ಇಳುವರಿ ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯು ಮಾರ್ಚ್‌ನಿಂದ ಮೇವರೆಗೂ ತೀವ್ರವಾಗಿರುತ್ತದೆ. ಆರಂಭದಲ್ಲೇ ನಿಯಂತ್ರಿಸದಿದ್ದರೆ ಮರವೂ ಸಾಯುವ ಅಪಾಯವಿದೆ.

ಈ ಕೀಟವು ಎಲೆಗಳ ಕೆಳಭಾಗದಲ್ಲಿ ರೇಷ್ಮೆಯಂತಹ ಪರದೆಗಳನ್ನು ಸೃಷ್ಟಿಸಿ ಎಲೆಯ ಕೆಳಭಾಗದ ಹಸಿರು ಪತ್ರಹರಿತ್ತನ್ನು ಕೆರೆದು ತಿನ್ನುತ್ತವೆ. ಕ್ರಮೇಣ ಮರದ ಎಲ್ಲಾ ಎಲೆಗಳಿಗೆ ಕೀಟವು ತಾನು ಬಿಡುವ ರೇಷ್ಮೆಯಂತಹ ದಾರಗಳ ಮೂಲಕ ಒಂದು ಎಲೆಯಿಂದ ಮತ್ತೊಂದು ಎಲೆಗೆ, ಒಂದು ಮರದಿಂದ ಇನ್ನೊಂದು ಮರಕ್ಕೆ, ಗಾಳಿಯಲ್ಲಿ ಹಾರಿ ಬಂದು ಒಂದು ತೋಟದಿಂದ ಹತ್ತಿರದ ಇನ್ನೂಂದು ತೋಟಕ್ಕೆ ವಿಸ್ತರಿಸುತ್ತದೆ. ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಸಸ್ಯದ ದ್ಯುತಿಸಂಶ್ಲೇಷಣ ಕ್ರಿಯೆಯ ಸಾಮರ್ಥ್ಯವನ್ನು ಕಡಿಮೆಯಾಗಲಿದೆ. ಬಾಧೆ ತೀವ್ರಗೊಂಡಲ್ಲಿ ಇಡೀ ತೋಟಗಳು ಸುಟ್ಟುಹೋದಂತೆ ಕಾಣುತ್ತವೆ. ಕೀಟಗಳನ್ನು ನಿಯಂತ್ರಿಸದಿದ್ದರೆ, ಇಳುವರಿಯಲ್ಲಿ ಗಣನೀಯವಾಗಿ ಕಡಿಮೆಯಾಗಿ ಸುಮಾರು ಶೇ 80ರಿಂದ 100ರಷ್ಟು ಇಳುವರಿ ಕುಂಠಿತಗೊಳ್ಳಬಹುದು.

ಎಲೆಯ ಕೆಳಭಾಗದ ಹಸಿರು ಪತ್ರಹರಿತ್ತನ್ನು ಕೆರೆದು ತಿನ್ನುತ್ತಿರುವ ಕೀಟಗಳು

ಕಪ್ಪು ತಲೆಯ ಕಂಬಳಿಹುಳುವನ್ನು ಹೀಗೆ ಪತ್ತೆ ಮಾಡಬಹುದು...

ಲಾರ್ವಾ: ಮರಿಹುಳು ಹಸಿರು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ಗಾಢ ಕಂದು ಬಣ್ಣದ ತಲೆ ಮತ್ತು ಕೆಂಪು ಬಣ್ಣದ ಬೆನ್ನು,  ದೇಹದ ಮೇಲೆ ಕಂದು ಪಟ್ಟೆಗಳನ್ನು ಹೊಂದಿರುತ್ತದೆ.

ಪ್ಯೂಪಾ: ತೆಳುವಾದ ರೇಷ್ಮೆ ಕುಕೂನ್‌ನ ಜಾಲದೊಳಗೆ ಪ್ಯೂಪಾ ಸಣ್ಣ ಗಾತ್ರದ ಕಂದು ಬಣ್ಣದ್ದಾಗಿದೆ.

ವಯಸ್ಕ ಪತಂಗದ ರೆಕ್ಕೆಗಳು ಬಿಳಿ ಮಿಶ್ರಿತ ಬೂದುಬಣ್ಣ ಹೊಂದಿದ್ದು, ಹೆಣ್ಣು ಪತಂಗದಲ್ಲಿ ಉದ್ದವಾದ ಆಂಟೆನಾ (ಸ್ಪರ್ಶಿಕೆ) ಮತ್ತು ಮುಂಭಾಗದ ರೆಕ್ಕೆಗಳಲ್ಲಿ ಮೂರು ಮಸುಕಾದ ಚುಕ್ಕೆಗಳನ್ನು ಒಳಗೊಂಡಿರುತ್ತದೆ. ಗಂಡು ಪತಂಗದ ತುದಿ ಮತ್ತು ಗುದದ ಅಂಚಿನಲ್ಲಿ ಹಿಂಭಾಗದ ರೆಕ್ಕೆಗಳಲ್ಲಿ ಅಂಚುಗಳಿರುವ ಕೂದಲು ಹೊಂದಿರುತ್ತವೆ.

ಕರ್ನಾಟಕದಲ್ಲಿ ತೆಂಗಿನಕಾಯಿ ಉತ್ಪಾದನೆಗೆ ಕಪ್ಪು ತಲೆಯ ಕಂಬಳಿಹುಳು ಬಾಧೆಯು ಪ್ರಮುಖ ವಿಪತ್ತಾಗಿದ್ದು, ರೈತರ ಜೀವನೋಪಾಯ ಮತ್ತು ತೆಂಗಿನಕಾಯಿಯ ಒಟ್ಟಾರೆ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ.

ಕೀಟ ಬಾಧೆಯಿಂದ ಹಾನಿಗೀಡಾದ ಎಲೆಗಳು

ಕಪ್ಪು ತಲೆಯ ಕಂಬಳಿಹುಳು ಕೀಟಗಳ ನಿರ್ವಹಣೆ ಹೇಗೆ?

ಕಪ್ಪು ತಲೆಯ ಕಂಬಳಿಹುಳು ಕೀಟಗಳ ನಿರ್ವಹಣೆಗೆ ಹಲವು ವಿಧಾನಗಳಿವೆ. ಇವುಗಳಲ್ಲಿ ಸಾಂಪ್ರದಾಯಿಕ, ಜೈವಿಕ ಹಾಗೂ ರಾಸಾಯನಿಕ ಸಿಂಪಡನೆಯ ಕ್ರಮಗಳನ್ನು ಅನುಸರಿಸಬಹುದು.

ಸಾಂಪ್ರದಾಯಿಕ ವಿಧಾನ: ಕೀಟನಿರೋಧಕ ಕ್ರಮವಾಗಿ, ಬೇಸಿಗೆಯ ಆರಂಭದಲ್ಲಿ ಮೊದಲು ಭಾದಿತ ಎಲೆಗಳನ್ನು ಕತ್ತರಿಸಿ ಸುಡಬಹುದು.

ಜೈವಿಕ ವಿಧಾನ: ಕಪ್ಪು ತಲೆಯ ಕಂಬಳಿಹುಳು ಕೀಟಗಳ ಬೆಳವಣಿಗೆಯನ್ನು ನಿಯಂತ್ರಿಸಲು, ಸಮುದಾಯ ಆಧಾರಿತ ಜೈವಿಕ ನಿಯಂತ್ರಣ ಪದ್ಧತಿಯ ಭಾಗವಾಗಿ ಪರಾವಲಂಬಿ ಮತ್ತು ಪರಭಕ್ಷಕ ಕೀಟಗಳನ್ನು ಬಿಡುಗಡೆ ಮಾಡಬೇಕು. ಲಾರ್ವಾದಲ್ಲಿ ಬೆಥಿಲಿಡ್, ಬ್ರಕೋನಿಡ್ ಮತ್ತು ಇಕ್ನ್ಯೂಮೋನಿಡ್‌ಗಳಿವೆ. ಇವುಗಳು ಕಂದು ಜಾತಿಯವು ಮತ್ತು ಬ್ರಾಕಿಮೆರಿಯಾ ನೊಸಾಟೊಯ್ ಕಪ್ಪು ತಲೆಯ ಕಂಬಳಿಹುಳು ಕೀಟವನ್ನು ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಮಕಾರಿ.  ಮತ್ತು ಪ್ಯೂಪಾದಲ್ಲಿ ಯೂಲೋಫಿಡ್‌ಗಳನ್ನು ಬಿಡುಗಡೆ ಮಾಡಬೇಕು.

ಪರಾವಲಂಬಿ ಕೀಟ ಬಿಡುಗಡೆಯ ಅನುಪಾತವು 1:8 ಆಗಿದ್ದು, ಕಪ್ಪು ತಲೆಯ ಕಂಬಳಿಹುಳು ಬಾಧೆಯು ಕೀಟವು 2 ನೇ ಅಥವಾ 3 ನೇ ಹಂತದ ಲಾರ್ವಾ ಆಗಿದ್ದಾಗ ಪ್ರತಿ ಹೆಕ್ಟೇರ್‌ ತೆಂಗಿಗೆ ಮೂರು ಸಾವಿರ ಪರಾವಲಂಬಿ ಕೀಟಗಳನ್ನು ಬಿಡುಗಡೆ ಮಾಡಬೇಕು. ಆಹಾರ (ಕಪ್ಪು ತಲೆಯ ಕಂಬಳಿಹುಳು) ಲಭ್ಯವಿರುವ ಸ್ಥಳದಲ್ಲಿ ಪರಾವಲಂಬಿಯನ್ನು ಬಿಡುಗಡೆ ಮಾಡಬೇಕು. ಇದಕ್ಕಾಗಿ ಪರಾವಲಂಬಿ ಬಿಡುಗಡೆ ಬಲೆಗಳನ್ನು ಬಳಸಬಹುದು.

ಕೀಟ ಬಾಧೆ ಉಲ್ಭಣಗೊಂಡಿದ್ದರಿಂದ ಹಾನಿಗೀಡಾದ ತೆಂಗಿನ ಮರಗಳು

ಇವುಗಳ ಕುರಿತ ಮಾಹಿತಿ ಎಲ್ಲಿ ಲಭ್ಯ?

ಕರ್ನಾಟಕ ಸರ್ಕಾರವು ತನ್ನ ಕೃಷಿ ಇಲಾಖೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲಕ ಜೈವಿಕ ನಿಯಂತ್ರಣ ವಿಧಾನಗಳ ಸಂಶೋಧನೆ ಸೇರಿದಂತೆ ಈ ಕೀಟದ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ರಾಜ್ಯ ಸರ್ಕಾರವೂ ಸಮೀಕ್ಷೆಗಳನ್ನು ನಡೆಸುತ್ತಿದೆ. ಸಮಗ್ರ ಕೀಟ ನಿರ್ವಹಣೆ (ಐಪಿಎಂ) ಪದ್ಧತಿಗಳನ್ನು ಉತ್ತೇಜಿಸುತ್ತಿದೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡುತ್ತಿದೆ.

ಕರ್ನಾಟಕದ ತೋಟಗಾರಿಕಾ ಇಲಾಖೆ ಹಲವಾರು ತಾಲ್ಲೂಕುಗಳಲ್ಲಿ ಸಮೀಕ್ಷೆ ಮಾಡಿ, ರೈತ ಸಂಪರ್ಕ ಕೇಂದ್ರಗಳ ಕೃಷಿ ಸಹಾಯಕರನ್ನು ಈ ಕೀಟ ಬಾಧೆಯ ಮೌಲ್ಯಮಾಪನಕ್ಕಾಗಿ ತೊಡಗಿಸಿಕೊಂಡಿದೆ. ತೋಟಗಾರಿಕಾ ಇಲಾಖೆಯ ಪ್ರಕಾರ, ಕೀಟ ಬಾಧೆಯ ಮೌಲ್ಯಮಾಪನಗಳು ಮತ್ತು ದತ್ತಾಂಶವನ್ನು ದಾಖಲಿಸುವುದು, ಎಲ್ಲಾ ಭಾದಿತ ಬ್ಲಾಕ್‌ಗಳ ಸಮಗ್ರ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ. ನಂತರ ಜಿಲ್ಲಾ ಮಟ್ಟದ ಸಮಿತಿಗಳು, ತಾಲ್ಲೂಕು ಮಟ್ಟದ ವರದಿ ಹಾಗೂ ಸಂಶೋಧನೆಗಳನ್ನು ಪರಿಶೀಲಿಸುತ್ತವೆ. ಪರಾವಲಂಬಿ ಕೀಟಗಳನ್ನು ಐಸಿಎಆರ್-ಎನ್‌ಬಿಎಐಆರ್, ಬೆಂಗಳೂರು ಮತ್ತು ಐಸಿಎಆರ್- ಸಿಪಿಸಿಆರ್‌ಐ, ಕಾಸರಗೋಡು ಸೇರಿದಂತೆ, ರಾಜ್ಯದ ಹಲವಾರು ಲ್ಯಾಬ್‌ಗಳಿಂದ ತರಿಸಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮೂಲಕ ಉಚಿತ ಪರಾವಲಂಬಿ ವಿತರಣೆ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತ್ವರಿತ ಉಚಿತ ಪರಾವಲಂಬಿ ವಿತರಣೆಯನ್ನು ಖಚಿತ ಪಡಿಸಿಕೊಳ್ಳಲು ರೈತರಿಂದ ಇಂಡೆಂಟ್‌ಗಳನ್ನು ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತಿದೆ.

ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಕಲಾ ಸಂಸ್ಥೆಯ ನುರಿತ ಕೃಷಿ ತಜ್ಞರ ತಂಡವು, ಕಳೆದ ಮೂರು ನಾಲ್ಕು ತಿಂಗಳುಗಳಿಂದ ಪ್ರಮುಖ ತೆಂಗು ಬೆಳೆಯುವ ರಾಮನಗರ, ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಿದ್ದು, ರೈತರಿಗೆ ಈ ಕೀಟದಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ತೆಂಗಿನ ಕೃಷಿಯನ್ನು ಖಚಿತ ಪಡಿಸಿಕೊಳ್ಳಲು ಪರಿಣಾಮಕಾರಿ ಕೀಟ ನಿರ್ವಹಣಾ ತಂತ್ರಗಳನ್ನು ತಿಳಿಸಿ ಕೊಟ್ಟು ಪ್ರಾಯೋಗಿಕವಾಗಿ ಮಾಡಿ ತೋರಿಸಿದೆ.

ರಾಸಾಯನಿಕ ಸಿಂಪಡಣೆ: ಕೀಟ ಬಾಧೆ ಹೆಚ್ಚಾಗಿದ್ದಲ್ಲಿ, ತೀವ್ರತೆಯನ್ನು ನಿಗ್ರಹಿಸಲು ಪ್ರತಿ ಲೀಟರ್ ನೀರಿಗೆ 5 ಮಿಲಿ (ಮೀನಿನ ಎಣ್ಣೆ, ಬೇವಿನ ಎಣ್ಣೆ, ಮತ್ತು ಹೊಂಗೆ ಎಣ್ಣೆ ಸಮವಾಗಿ ಸೇರಿಸಿರುವ ಲಿಕ್ವಿಡ್ ಸೋಪ್) ಜೊತೆಗೆ ಕ್ಲೋರಾಂಟ್ರಾನಿಲಿಪ್ರೋಲ್ ಶೇ 18.5 SC @ 1 ಮಿಲಿ/ಲೀ ಅಥವಾ ಪ್ರೊಫೆನೊಫೋಸ್ ಶೇ 50 EC @ 2.5 ಮಿಲಿ/ಲೀ ಅಥವಾ ಡಿಫ್ಲುಬೆನ್ಜುರಾನ್ 25 WP @ 1 ಗ್ರಾಂ/ಲೀ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಂಭಿಕ ಎಲೆಗಳ ಮೇಲೆ ಸಿಂಪಡಿಸಬೇಕು. ಕಪ್ಪು ತಲೆಯ ಕಂಬಳಿಹುಳುಗಳ ಲಾರ್ವಾಗಳನ್ನು ತ್ವರಿತವಾಗಿ ನಾಶಮಾಡುತ್ತದೆ.

ರಾಸಾಯನಿಕ ಸಿಂಪಡಣೆ ಮಾಡಿದ್ದಲ್ಲಿ ಮೂರು ವಾರಗಳ ನಂತರವೇ ಪರಾವಲಂಬಿ ಮತ್ತು ಪರಭಕ್ಷಕ ಕೀಟಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಸಾಯನಿಕ ಕೀಟನಾಶಕದ ಪರಿಣಾಮದಿಂದಾಗಿ ಈ ಪರಭಕ್ಷಕ ಕೀಟಗಳೂ ನಾಶವಾಗುತ್ತವೆ.

ಕಪ್ಪು ತಲೆಯ ಕಂಬಳಿಹುಳುಗಳ ಮೇಲೆ ಪರಾವಲಂಬಿ ಕೀಟಗಳಾದ ಗೋನಿಯೋಜಸ್ ನೆಫಾಂಟಿಡಿಸ್ (ಬೆಥಿಲಿಡೆ), ಬ್ರಕಾನ್ ಬ್ರೆವಿಕಾರ್ನಿಸ್ ಮತ್ತು ಮೆಟಿಯೊರೈಟ್‌ ಹಟ್ಸೋನಿ (ಬ್ರಾಕೊನಿಡೇ) ಗಳನ್ನು ಬಿಡುಗಡೆ ಮಾಡುವುದು ಒಂದು ವಿಧಾನವಾಗಿದೆ.

ಕೆಲವು ಪ್ರದೇಶಗಳಲ್ಲಿ, ರೈತರಿಗೆ ತರಬೇತಿ ನೀಡಿ ಈ ಪರಾವಲಂಬಿಗಳನ್ನು ಬಾಧೆ ಪೀಡಿತ ಪ್ರದೇಶಗಳಲ್ಲಿ ಬಿಡುಗಡೆ ಮಾಡಲು ಸರಬರಾಜು ಮಾಡಲಾಗಿದೆ. ಪರಾವಲಂಬಿಗಳನ್ನು ಬಳಸಿಕೊಂಡು ಕೀಟ ನಿಯಂತ್ರಣ ಮಾಡಿದಲ್ಲಿ ಕಡಿಮೆ ವೆಚ್ಚ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ಪರಿಗಣಿಸಲಾಗಿದೆ. ಇವುಗಳಿಗೆ ರೈತರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದು ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪರಿಸರ ಪ್ರಯೋಜನಕಾರಿ ಕೀಟಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಪರಾವಲಂಬಿ, ಪರಭಕ್ಷಕ ಕೀಟ ಸಾಕಣೆ ತರಬೇತಿ

ಪರಾವಲಂಬಿ, ಪರಭಕ್ಷಕ ಕೀಟ ಸಾಕಣೆಯಲ್ಲಿ ತರಬೇತಿ ಪಡೆಯಲು ಬಯಸುವ ರೈತರು ಮತ್ತು ವಿಸ್ತರಣಾ ಕಾರ್ಯಕರ್ತರು ಬೆಂಗಳೂರಿನ ಐಸಿಎಆರ್-ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ (ಎನ್‌ಬಿಎಐಆರ್) ಅಥವಾ ಕಾಸರಗೋಡಿನ ಐಸಿಎಆರ್-ಕೇಂದ್ರ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ನಿರ್ದೇಶಕರನ್ನು ಸಂಪರ್ಕಿಸಬಹುದು.

ಲೇಖಕ ಕೃಷಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.