ADVERTISEMENT

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

ದೀಪಕ್ ಎನ್.
Published 14 ಜನವರಿ 2026, 7:01 IST
Last Updated 14 ಜನವರಿ 2026, 7:01 IST
<div class="paragraphs"><p>ತೆಂಗಿನ ಮರದಲ್ಲಿ ಬೀಡುಬಿಟ್ಟಿರುವ ಮಂಗಗಳು</p></div>

ತೆಂಗಿನ ಮರದಲ್ಲಿ ಬೀಡುಬಿಟ್ಟಿರುವ ಮಂಗಗಳು

   

ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ, ನವಿಲು, ಕೆಂಚಳಿಲು ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಪ್ರಾಣಿಗಳ ಸಂಘರ್ಷದಲ್ಲೇ ಅತಿ ಹೆಚ್ಚು ಸಮಸ್ಯೆಯಾಗಿರುವುದು ‘ಮಂಗನ’ ಕಾಟ.

ಮಂಗಗಳು ತರಕಾರಿ, ಭತ್ತದ ಫಸಲು, ಬಾಳೆ, ಸಿಯಾಳ, ಹಣ್ಣುಹಂಪಲು ಎಲ್ಲವನ್ನೂ ತಿನ್ನುತ್ತವೆ. ಕಷ್ಟದಲ್ಲಿ ಕೃಷಿ ಮಾಡಿ ಫಸಲು ಬರುವಾಗ ಕಾಡುಪ್ರಾಣಿ ಪಕ್ಷಿಗಳಿಂದ ಕೃಷಿಕರ ಪಾಲಿಗೆ ಯಾವುದೂ ಕೈಗೆ ಸಿಗುತ್ತಿಲ್ಲ. ಕಾಡುಪ್ರಾಣಿ ಪಕ್ಷಿಗಳ ಕಾಟದಿಂದ ಕೃಷಿಕರು ರೋಸಿ ಹೋಗಿದ್ದಾರೆ.

ADVERTISEMENT

ಮಂಗಗಳ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಕೆಲವೊಂದು ಭಾಗಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಆಶ್ಚರ್ಯ. ಆದರೆ, ನಿಜ. ವರ್ಷದ ಎಲ್ಲ ಋತುಮಾನಗಳಲ್ಲಿಯೂ ಇವುಗಳ ಕಾಟ ತಪ್ಪಿದ್ದಲ್ಲ. ಇದು ಎಷ್ಟರ ಮಟ್ಟಿಗೆ ಎಂದರೆ ತೆಂಗಿನ ಎಳೆಗಾಯಿಯನ್ನು ಹಾಳು ಮಾಡುತ್ತವೆ. ಹಲವೆಡೆ ಬಿತ್ತನೆ ಮಾಡಿದ ಬೀಜಗಳನ್ನು ಮೊಳಕೆಯೊಡೆಯುವ ಮುನ್ನವೇ ಕೆದಕಿ ತಿನ್ನುತ್ತವೆ. ಹೀಗಾಗಿ ಅವುಗಳ ಕಾಟ ನಿಯಂತ್ರಿಸಲು ಮಾಡಿದ ಉಪಾಯಗಳು ವಿಫಲವಾಗಿರುವಾಗ ‘ರೈತ ಮಿತ್ರ ಕೋವಿ’ ಭರವಸೆ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತೂರಿನವರಾದ ಪಾಡುರಂಗ ಭಟ್ಟ ಅವರು ರೈತರ ಅನುಕೂಲಕ್ಕಾಗಿ ‘ಕೋವಿ’ಯನ್ನು ತಯಾರಿಸಿದ್ದಾರೆ.

‘ನಮ್ಮ ತೋಟದಲ್ಲಿ 250 ತೆಂಗಿನ ಮರಗಳಿದ್ದವು. ಆದರೆ, ಮಂಗನ ಕಾಟದಿಂದಾಗಿ ನಾವೇ ಅಂಗಡಿಗೆ ಹೋಗಿ ತೆಂಗಿನಕಾಯಿ ತರುವಂತಹ ಪರಿಸ್ಥಿತಿ ಎದುರಾಗಿತ್ತು. ಇದರಿಂದಾಗಿ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಆಲೋಚನೆ ಮಾಡಿ ‘ಕೋವಿ’ಯೊಂದನ್ನು ತಯಾರಿಸಿ, ಉಪಯೋಗಿಸಿದೆ. ಪ್ರಯತ್ನ ಯಶಸ್ವಿಯಾಯಿತು. ಇದರಿಂದ ಕೋತಿಗಳು ಓಡಿ ಹೋದವು. ನೀವು ಒಬ್ಬ ಕೃಷಿಕರಾಗಿ ನಾಲ್ಕು ಜನರಿಗೆ ಅನುಕೂಲವಾಗುವಂತೆ ಕೋವಿಗಳನ್ನು ತಯಾರಿಸುವಂತೆ ಸ್ಥಳೀಯರು ಒತ್ತಾಯಿಸಿದರು. ಆಗ ನನ್ನಿಂದ ಒಳ್ಳೆಯದಾಗುತ್ತೆ ಎಂದರೆ ಏಕೆ ಮಾಡಬಾರದೆಂದು ಯೋಚಿಸಿ ಕೋವಿಗಳನ್ನು ತಯಾರಿಸಿ ಏಳು ವರ್ಷದಿಂದ ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ಪಾಡುರಂಗ ಭಟ್ಟ.

‘ಇದು ತುಂಬಾ ಸಾಮಾನ್ಯವಾಗಿರುವ ಮತ್ತು ಸುರಕ್ಷಿತವಾಗಿರುವ ಕೋವಿಯಾಗಿದೆ. ಈ ಕೋವಿಯನ್ನು ರೈಫಲ್‌ನಲ್ಲಿ ಬಳಸುವ ಉಪಕರಣಗಳಿಂದ ತಯಾರಿಸಲಾಗಿದೆ. ನೂರು ವರ್ಷ ಬಳಸಿದರೂ ಕೂಡ ಬಾಳಿಕೆ ಬರುತ್ತದೆ. ಇದರಲ್ಲಿರುವ ಥ್ರೆಡ್ (ಪಟಾಕಿ ಇಟ್ಟು ಮುಚ್ಚಲ ಹಾಕುವ ವಿಧಾನ) ಹಾಳಾಗುವುದಿಲ್ಲ. ಹಾಗೆಯೇ ಬೇಗನೆ ರಿಪೇರಿಗೂ ಬರುವುದಿಲ್ಲ’ ಎಂದು ಪಾಡುರಂಗ ಭಟ್ಟ ವಿವರಿಸಿದರು.

ಮೊದಲಿಗೆ ಕಾಡಿನಂಚಿನ ಹಳ್ಳಿಗಳಿಗೆ ಮಂಗಗಳು ದಾಳಿ ಇಡುತ್ತಿದ್ದವು. ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರದ ಕೊರತೆಯೇ ಅದಕ್ಕೆ ಕಾರಣವಾಗಿತ್ತು. ಆದರೀಗ ನಾಡಿನ ಎಲ್ಲೆಡೆ ಅವುಗಳ ಬಾಧೆ ಇದೆ. ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಅವುಗಳ ಕಾಟ ಸೀಮಿತವಾಗಿಲ್ಲ. ನಗರ-ಪಟ್ಟಣ ಪ್ರದೇಶಗಳಿಗೂ ಹರಡಿಕೊಂಡಿದೆ. ಇದರಿಂದ ಅಲ್ಲಿನ ನಿವಾಸಿಗಳು ಸದಾ ಮನೆಯ ಕಿಟಕಿ ಬಾಗಿಲು ಹಾಕಿಕೊಂಡು ಇರುವಂತಾಗಿದೆ. ಕೋವಿ ಬಳಸುವುದರಿಂದ ಮಂಗಗಳ ಕಾಟ ತುಸು ತಗ್ಗಿಸಬಹುದು ಎಂಬುದು ಭಟ್ಟರ ಮಾತು.

ಕೋವಿ ಬಳಸುವ ವಿಧಾನ

ಈ ಕೋವಿಯಲ್ಲಿ ‘ಆಟಂಬಾಂಬ್‌’ ಹಸಿರು ಪಟಾಕಿಯನ್ನು ಒಳಗಡೆ ಹಾಕಿ ಬತ್ತಿಯನ್ನು ಹೊರಗೆ ಬರುವಂತೆ ಇಟ್ಟು ಮುಚ್ಚಳ ಹಾಕಬೇಕು. ಎದುರುಗಡೆ 15ರಿಂದ 20 ಕಲ್ಲು ಅಥವಾ ಕಡಲೆಕಾಳು ಕಾಳುಗಳನ್ನು ಹಾಕಿಕೊಂಡು ಪಟಾಕಿಯನ್ನು ಹಚ್ಚಬೇಕು. ಆಗ ಬರುವಂತಹ ಶಬ್ದ ಹಾಗೂ ಬಿಳುವ ಹೊಡೆತಕ್ಕೆ ಹೆದರಿ ಕೋತಿಗಳು ಓಡಿ ಹೋಗುತ್ತವೆ. ಕೇವಲ ಭಯಪಡಿಸುವ ಉದ್ದೇಶದಿಂದಲೇ ಇದನ್ನು ತಯಾರಿಸಲಾಗಿದೆ ಎನ್ನುತ್ತಾರೆ ಭಟ್ಟರು.

ಈ ಕೋವಿಯಿಂದ ಹೊಡೆದಂತಹ ಕಲ್ಲುಗಳು 120ರಿಂದ 170 ಅಡಿ ಎತ್ತರಕ್ಕೆ ಹೋಗುತ್ತವೆ. ಇದನ್ನು ಕೋತಿ, ಕರಡಿ, ಚಿರತೆ, ಕಾಡು ಹಂದಿಗಳನ್ನು ಓಡಿಸಲು ಬಳಸಬಹುದಾಗಿದೆ. ಕರಡಿ ಅಥವಾ ಚಿರತೆಗಳನ್ನು ಓಡಿಸಲು ಕೇವಲ ಪಟಾಕಿ ಹಚ್ಚಿದರೆ ಸಾಕು ಕಲ್ಲುಗಳನ್ನು ಹಾಕುವ ಅಗತ್ಯತೆ ಇಲ್ಲ ಎಂಬುದು ಭಟ್ಟರ ಮಾತು.

ವಿವಿಧ ಉಪಾಯಗಳು...

ಮಂಗಗಳನ್ನು ಹಿಡಿಯಲು ಬೋನು ಇಡುವುದು, ಗರ್ನಲ್ ಸಿಡಿಸುವುದು, ರೈಫಲ್‌ನಿಂದ ಹಿಂಡಿನತ್ತ ಗುಂಡು ಹಾರಿಸುವುದು, ಪರಿಣಿತರಿಂದ ಅವುಗಳನ್ನು ಹಿಡಿಸಿ ಕಾಡಿಗೆ ಬಿಡುವುದು, ಹುಲಿ ಪ್ರತಿಮೆ ಇಡುವುದು, ನಾಯಿಗಳಿಗೆ ಹುಲಿ ವೇಷ ಬಳಿದು ತಿರುಗಾಡಲು ಬಿಡುವುದು ಹೀಗೆ ನಾನಾ ಉಪಾಯಗಳನ್ನು ಕೃಷಿಕರು ಮಾಡುತ್ತಿದ್ದಾರೆ.

ಬೆಲೆ ಮತ್ತು ಲಭ್ಯತೆ

ಈ ಕೋವಿಯ ಬೆಲೆ ನಾಲ್ಕೂವರೆ ಸಾವಿರ ರೂಪಾಯಿ ಆಗಿದೆ. ರಾಜ್ಯದ ಹಲವೆಡೆ ನಡೆಯುವ ಕೃಷಿ ಮೇಳದಲ್ಲಿ ಕೋವಿಯನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದೇವೆ. ಹಾಗೆಯೇ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೂ ಈ ಕೋವಿಯನ್ನು ಕೊರಿಯರ್ ಮೂಲಕ ಕಳುಹಿಸಿ ಕೊಡುತ್ತೇವೆ. ಕೋವಿಯನ್ನು ತೆಗೆದುಕೊಳ್ಳಲು ಬಯಸುವವರು ಕೊರಿಯರ್ ಚಾರ್ಜನ್ನು ಅವರೇ ಪಾವತಿಸಬೇಕಾಗುತ್ತದೆ ಎಂದು ಪಾಡುರಂಗ ಭಟ್ಟ ವಿವರಿಸಿದ್ದಾರೆ.

ಪಾಡುರಂಗ ಭಟ್ಟ ಅವರ ಸಂಪರ್ಕಕ್ಕೆ: 97418 10502

ಕೋವಿಯೊಂದಿಗೆ ಪಾಡುರಂಗ ಭಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.