ಕೃಷಿ ಬೆಳೆಗಳಲ್ಲಿ ಬಿತ್ತನೆ ಸಾಮಾನ್ಯ. ಆದರೆ, ತೋಟಗಾರಿಕೆ ಬೆಳೆಗಳಲ್ಲಿ ಸಸಿ ನಾಟಿ ಮಾಡಲಾಗುತ್ತದೆ. ಅದು ಸಹಜ ಪ್ರಕ್ರಿಯೆ ಎಂದು ಉಪೇಕ್ಷಿಸುವಂತಿಲ್ಲ. ಏಕೆಂದರೆ, ಸಸಿಮಡಿ ಸಜ್ಜುಗೊಳಿಸುವ ಪ್ರಕ್ರಿಯೆಯೇ, ಈ ಭಾಗದಲ್ಲಿ ಕೃಷಿಯಿಂದಲೇ ವಿಮುಖವಾಗುವ ಹಂತದಲ್ಲಿದ್ದ ರೈತರ ಬದುಕು ಬದಲಿಸಿದೆ. ನೀರುಂಡು, ಮಣ್ಣುಹೊದ್ದು ಮೆಲ್ಲಗೆ ಮೊಳೆತು ನಸುನಕ್ಕಂತೆ ನಳನಳಿಸುವ ‘ಹಸಿರು ಹೊನ್ನು’ ರೈತರ ಹೊಟ್ಟೆಯನ್ನಷ್ಟೇ ಅಲ್ಲ; ಜೇಬನ್ನೂ ತುಂಬಿಸುತ್ತಿದೆ.
ಗೋಕಾಕ ತಾಲ್ಲೂಕಿನ ಅರಭಾವಿಮಠದಿಂದ ಘಟಪ್ರಭಾ ಮಾರ್ಗದಲ್ಲಿ ನಾಲ್ಕುಕಿಲೋಮೀಟರ್ ಸಾಗಿದರೆ, ಒಂದಲ್ಲ, ಎರಡಲ್ಲ.. 120ಕ್ಕೂ ಅಧಿಕ ನರ್ಸರಿಗಳು ಕಾಣಸಿಗುತ್ತವೆ. ಇಲ್ಲಿ ತರಹೇವಾರಿ ತರಕಾರಿ, ಹೂವು-ಹಣ್ಣು ಮತ್ತು ಕಬ್ಬಿನ ಸಸಿ ಬೆಳೆಸಲಾಗುತ್ತಿದೆ.
ಎರಡೂವರೆ ದಶಕದ ಹಿಂದಿನ ಮಾತು. ಆಗ ರೈತರು ತಮ್ಮ ಅಲ್ಪಭೂಮಿಯಲ್ಲೇ ಎತ್ತರದ ಮಡಿ ಮಾಡಿ, ತರಕಾರಿಗಳ ಸಸಿ ಬೆಳೆಯುತ್ತಿದ್ದರು. ಅವುಗಳನ್ನು ತಮ್ಮ ಜಮೀನಿನಲ್ಲೇ ನಾಟಿ ಮಾಡಿ ಕೃಷಿ ಮಾಡುತ್ತಿದ್ದರು. ಅಕ್ಕಪಕ್ಕದ ಗ್ರಾಮಗಳ ರೈತರು ಖರೀದಿಸುತ್ತಿದ್ದರು. ಈ ಮಧ್ಯೆ, ಆಂಧ್ರಪ್ರದೇಶದ ಕೆಲವರು ಇಲ್ಲಿಗೆ ಬಂದು ನರ್ಸರಿ ಆರಂಭಿಸಿ, ಕೈತುಂಬಾ ಆದಾಯ ಗಳಿಸಿದರು. ಇದು ಸ್ಥಳೀಯ ರೈತರನ್ನೂ ಆಕರ್ಷಿಸಿತು.
ಬೇರೆ ರಾಜ್ಯಗಳಿಂದ ಬಂದವರು ಇಲ್ಲಿ ನರ್ಸರಿ ಮಾಡುತ್ತಿರುವಾಗ, ನಾವೇಕೆ ಮಾಡಬಾರದೆಂದು ತಡಮಾಡದೆ ಕಾರ್ಯೋನ್ಮುಖರಾದರು. ಆರಂಭದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ನರ್ಸರಿಗಳ ಸಂಖ್ಯೆ ಹೆಚ್ಚುತ್ತಾಹೋಯಿತು.
ವರ್ಷಪೂರ್ತಿ ಕ್ರಿಯಾಶೀಲವಾಗಿರುವ ಈ ನರ್ಸರಿಗಳಲ್ಲಿ ಟೊಮೆಟೊ, ಕ್ಯಾಬೇಜ್, ಬದನೆ, ಹಸಿಮೆಣಸಿನಕಾಯಿ, ಡಬ್ಬು ಮೆಣಸಿನಕಾಯಿ, ಚೆಂಡೂ ಹೂವು, ಕಲ್ಲಂಗಡಿ, ಕಬ್ಬು ಹೀಗೆ... ಹತ್ತಾರು ಬೆಳೆಗಳ ಸಸಿ ಸಿದ್ಧಪಡಿಸಲಾಗುತ್ತಿದೆ. ಒಂದೊಂದೇ ಬೆಳೆಯ ಐದಾರು ತಳಿಗಳ ಸಸಿಗಳು ಲಭ್ಯ ಇವೆ. ಹೈಬ್ರೀಡ್ ಮತ್ತು ಜವಾರಿ ತಳಿ ಸಿಗುತ್ತವೆ. ಸೀಸನ್ ಆಧಾರದಲ್ಲಿ ಇಲ್ಲಿ ಸಸಿ ಬೆಳೆಸಲಾಗುತ್ತದೆ.
ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಹಾವೇರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರೈತರು ಖರೀದಿಸುತ್ತಿದ್ದಾರೆ.
‘ಇಪ್ಪತ್ತೊಂದು ವರ್ಷಗಳ ಹಿಂದೆ ನಮ್ಮ ಹೊಲಕ್ಕೆ ಸೀಮಿತವಾಗಿ, ಬಯಲಿನಲ್ಲೇ ತರಕಾರಿ ಸಸಿ ಬೆಳೆಯುತ್ತಿದ್ದೆವು. ಕೆಲವೊಮ್ಮೆ ಸಸಿಗಳೇ ಹಾಳಾಗಿ, ಉತ್ತಮ ಫಸಲು ಬರುತ್ತಿರಲಿಲ್ಲ. ನೆರಳು ಪರದೆ, ಪಾಲಿಹೌಸ್ ಪರಿಚಯವಾದ ನಂತರ ಅವುಗಳಲ್ಲೇ ಸಸಿ ಬೆಳೆಯಲಾರಂಭಿಸಿದೆವು. ದಿನಗಳೆದಂತೆ ಸಸಿಗಳನ್ನು ಬೆಳೆಯುವ ಕಾಯಕ ಬೃಹತ್ತಾಗಿ ಬೆಳೆಯುತ್ತ ಹೋಯಿತು. ಈಗ ಸ್ವಂತ ಮತ್ತು ಗುತ್ತಿಗೆ ಪಡೆದ ಹನ್ನೊಂದು ಎಕರೆ ಜಮೀನಿನಲ್ಲಿ ಸಸಿ ಬೆಳೆಯುತ್ತಿದ್ದು, 120 ಜನ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಾದಂತೆ, ಸಸಿಗಳನ್ನು ಸಿದ್ಧಪಡಿಸಲು ಯಂತ್ರೋಪಕರಣ ಬಳಸುತ್ತಿದ್ದೇವೆ’ ಎಂದು ನರ್ಸರಿ ಮಾಲೀಕ ಪ್ರವೀಣ ಮುತಾರಿ ಹೇಳುತ್ತಾರೆ.
ಉತ್ತರದ ನರ್ಸರಿ ಹಬ್
‘ಘಟಪ್ರಭಾ ತರಕಾರಿ ಮಾರುಕಟ್ಟೆಯಲ್ಲಿ ನಸುಕಿನ ಜಾವ ಮೂರಕ್ಕೆ ವಹಿವಾಟು ಆರಂಭವಾಗುತ್ತದೆ. ಉತ್ತಮ ರೈಲು ಮತ್ತು ರಸ್ತೆ ಸಂಪರ್ಕ ಇರುವುದರಿಂದ ಇಲ್ಲಿಂದ ಮಹಾರಾಷ್ಟ್ರ, ಗೋವಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಸರಬರಾಜು ಆಗುತ್ತದೆ. ಇಲ್ಲಿ ತರಕಾರಿ ಮಾರಲು 35ಕ್ಕೂ ಅಧಿಕ ಹಳ್ಳಿಗಳಿಂದ ನಿತ್ಯ ಬರುವ ರೈತರು, ವಾಪಸ್ ಹೋಗುವಾಗ ಘಟಪ್ರಭಾ ಮತ್ತು ಪಕ್ಕದ ಹಳ್ಳಿಗಳಿಂದ ಸಸಿ (ತೆರವು) ಒಯ್ಯಲು ಆರಂಭಿಸಿದರು. ಸಸಿಗಳ ಮಾರಾಟದಲ್ಲಿ ಉತ್ತಮ ಗಳಿಕೆ ಇರುವುದನ್ನು ಮನಗಂಡ ರೈತರು ಒಬ್ಬೊಬ್ಬರಾಗಿ ನರ್ಸರಿಗಳನ್ನು ಆರಂಭಿಸತೊಡಗಿದರು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ.
‘ಘಟಪ್ರಭಾ ನದಿ ಸನಿಹದಲ್ಲೇ ಇರುವ ಈ ಗ್ರಾಮಗಳು ಉತ್ತಮ ನೀರಾವರಿ ಸೌಕರ್ಯ ಹೊಂದಿವೆ. ಕೆಂಪುಮಿಶ್ರಿತ (ಜಾಜ್) ಮಣ್ಣು ಸಸಿಗಳ ತಯಾರಿಕೆಗೆ ಹೇಳಿಮಾಡಿಸಿದಂತಿದೆ. ಮೊದಲು ತಮ್ಮ ಜಮೀನಿನ ಬಯಲು ಪ್ರದೇಶದಲ್ಲೇ ಸಸಿ ಬೆಳೆಸುತ್ತಿದ್ದ ರೈತರು, ನಂತರ ನೆರಳು ಪರದೆಯತ್ತ ವಾಲಿದರು. ಈಗ ಪಾಲಿಹೌಸ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎಲ್ಲೂ ಇಷ್ಟೊಂದು ನರ್ಸರಿಗಳಿಲ್ಲ. ಹಾಗಾಗಿ ಇದಕ್ಕೆ ಉತ್ತರದ ನರ್ಸರಿಗಳ ಹಬ್ ಎಂದೂ ಕರೆಯುವುದುಂಟು’ ಎಂದು ಅವರು ಹೇಳುತ್ತಾರೆ.
ದೊಡ್ಡ ಹಿಡುವಳಿದಾರರಷ್ಟೇ ಅಲ್ಲ; ತುಂಡು ಭೂಮಿ ಹೊಂದಿದವರ ನರ್ಸರಿಗಳೂ ಇಲ್ಲಿವೆ. ಕನಿಷ್ಠ 8 ಗುಂಟೆಯಿಂದ ಒಂದು ಎಕರೆಯಲ್ಲಿನ ನರ್ಸರಿ ಹೆಚ್ಚಿವೆ.
‘ತೆಂಗಿನನಾರಿನ ಹುಡಿ (ಕೊಕೋಪಿಟ್)ಯನ್ನು ಪ್ಲಾಸ್ಟಿಕ್ ಟ್ರೇನಲ್ಲಿ ಹಾಕುತ್ತೇವೆ. ನಂತರ ವಿವಿಧ ಕಂಪನಿಗಳ ಬೀಜಗಳನ್ನು ಹಾಕಿ, ಮೂರು ದಿನ ಪ್ಲಾಸ್ಟಿಕ್ ಹೊದಿಕೆಯಿಂದ ಟ್ರೇಗಳನ್ನು ಮುಚ್ಚಿಟ್ಟು ತೇವಾಂಶ, ಉಷ್ಣತೆ ಕಾಪಾಡುತ್ತೇವೆ. ಸಸಿ ಮೊಳಕೆಯೊಡೆದ ನಂತರ, ಸಾಲು ಸಾಲಾಗಿ ಟ್ರೇಗಳನ್ನು ಜೋಡಿಸಿ ಇರಿಸುತ್ತೇವೆ. ನಂತರ ನೀರು, ಔಷಧದ ಮೂಲಕ ಉಪಚಾರ ಮಾಡಿದರೆ 25 ರಿಂದ 35 ದಿನಗಳಲ್ಲಿ ಸಸಿಗಳು ಸಿದ್ಧವಾಗುತ್ತವೆ’ ಎಂದು ನರ್ಸರಿಯೊಂದರ ಮಾಲೀಕ ಸುರೇಶ ದೇವಮಾನೆ ತಿಳಿಸುತ್ತಾರೆ.
‘ನಮ್ಮವು ಹೈಟೆಕ್ ನರ್ಸರಿಗಳಾಗಿರುವ ಕಾರಣ, ಬೇಸಿಗೆಕಾಲ, ಚಳಿಗಾಲ, ಮಳೆಗಾಲ ಯಾವುದಿದ್ದರೂ ತೊಂದರೆ ಇಲ್ಲ. ಬಿಸಿಲು ಸಸಿಗಳಿಗೆ ತಾಗದಂತೆ, ಮಳೆಹನಿಗಳ ಸಿಂಚನವಾಗದಂತೆ ತಡೆಯುವ ವ್ಯವಸ್ಥೆ ಇದೆ. ವಿವಿಧ ಸಸಿಗಳ ದರ ಬೇರೆ ಬೇರೆ ಇದೆ’ ಎನ್ನುತ್ತಾರೆ ಅವರು.
‘ನನ್ನದು ನಾಲ್ಕು ಎಕರೆ ಜಮೀನಿದೆ. ಈ ಪೈಕಿ ತಲಾ ಎರಡು ಎಕರೆಯಲ್ಲಿ ಕಬ್ಬು, ತರಕಾರಿ ಬೆಳೆದಿರುವೆ. ಮೊದಲು ಏರು ಮಡಿಯಲ್ಲಿ ಬೆಳೆದ ಸಸಿ ನಾಟಿ ಮಾಡಿದಾಗ ಫಸಲು ಸರಾಸರಿ ಬರುತ್ತಿತ್ತು. ಈಗ ನರ್ಸರಿಯಲ್ಲಿನ ಸಸಿ ನಾಟಿ ಮಾಡಿದಾಗ ಇಳುವರಿ ಹೆಚ್ಚಿದೆ. ಮೊದಲು ಎರಡೂವರೆ ತಿಂಗಳಿಗೆ ಕಟಾವಿಗೆ ಬರುತ್ತಿದ್ದ ತರಕಾರಿ ಬೆಳೆ, ಈಗ ಎರಡೇ ತಿಂಗಳಿಗೆ ಕಟಾವು ಹಂತಕ್ಕೆ ಬರುತ್ತಿದೆ. ಸಸಿಗಳಿಗೆ ರೋಗಬಾಧೆಯೂ ಇಲ್ಲ’ ಎನ್ನುತ್ತಾರೆ ಶಿಂಧಿಕುರಬೇಟದ ರೈತ ರಾಜು ರಾಯಬಾಗ.
‘ಮೊದಲೆಲ್ಲ ಬಯಲಿನಲ್ಲೇ ಬೆಳೆದ ತರಕಾರಿ ಸಸಿ ಒಯ್ದು ನಾಟಿ ಮಾಡುತ್ತಿದ್ದೆವು. ಕೆಲವೊಮ್ಮೆ ಫಸಲು ಬಾರದೆ ನಷ್ಟವಾಗುತ್ತಿತ್ತು. ಈಗ ವೈಜ್ಞಾನಿಕ ಅಂಶ ಅನುಸರಿಸಿ ನರ್ಸರಿಯಲ್ಲಿ ಬೆಳೆಸಿದ ಸಸಿಗಳನ್ನು ಒಯ್ದು ನಾಟಿ ಮಾಡುತ್ತಿರುವುದರಿಂದ ಉತ್ತಮ ಇಳುವರಿ ಬರುತ್ತಿದೆ. ಎರಡು ಎಕರೆಯಲ್ಲಿ ನಾಟಿ ಮಾಡಲು ಈಗ ತರಕಾರಿ ಸಸಿ ಒಯ್ಯುತ್ತಿದ್ದೇನೆ’ ಎನ್ನುತ್ತಾರೆ ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದ ಸಿದ್ದಪ್ಪ ಹೊಸಮನಿ .⇒
ಹೀಗೆ ಈ ಪರಿಸರದಲ್ಲಿರುವ ನರ್ಸರಿಗಳು ಸಾವಿರಾರು ರೈತರ ಬದುಕನ್ನು ಹಸನು ಮಾಡುತ್ತಿವೆ
ಎಕರೆ ಆದಾಯ ಹತ್ತೇ ಗುಂಟೆಯಲ್ಲಿ
‘ಮೊದಲು ಒಂದು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದೆ. ಆದಾಯ ಅಷ್ಟಕ್ಕಷ್ಟೇ ಇತ್ತು. ಆಂಧ್ರದವರು ಇಲ್ಲಿ ನರ್ಸರಿ ಆರಂಭಿಸಿದ್ದನ್ನು ಪ್ರೇರಣೆಯಾಗಿಸಿಕೊಂಡು ಹತ್ತೇ ಗುಂಟೆಯಲ್ಲಿ ನರ್ಸರಿ ಮಾಡಿದೆ. ಕಬ್ಬು ಬೆಳೆದಾಗ ಎಕರೆಯಲ್ಲಿ ಬರುತ್ತಿದ್ದ ಆದಾಯವೀಗ ಹತ್ತೇ ಗುಂಟೆಯಲ್ಲಿ ಬರುತ್ತಿದೆ. 15 ಮಂದಿಗೆ ಕೆಲಸ ಕೊಟ್ಟ ಖುಷಿಯೂ ಇದೆ. ವರ್ಷವಿಡೀ ಆದಾಯ ಕೈಗೆಟುಕುತ್ತಿದೆ’ ಎಂಬುದು ನಿರ್ವಾಣೆಪ್ಪ ಹೊಸಪೇಟೆ ಅವರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.