ADVERTISEMENT

ಜಾನಪದ ಬಿತ್ಯಾರೋ ನಾಡಿಗೆಲ್ಲ...

ಪ್ರಜಾವಾಣಿ ವಿಶೇಷ
Published 14 ಡಿಸೆಂಬರ್ 2024, 23:30 IST
Last Updated 14 ಡಿಸೆಂಬರ್ 2024, 23:30 IST
<div class="paragraphs"><p>ಗೊ.ರು.ಚನ್ನಬಸಪ್ಪ (ಗೊರುಚ)&nbsp;</p></div>

ಗೊ.ರು.ಚನ್ನಬಸಪ್ಪ (ಗೊರುಚ) 

   

ಚಿತ್ರ: ಪ್ರಶಾಂತ್ ಎಚ್.ಜಿ.

ಡಿ.20 ರಿಂದ 22ರ ವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿರುವ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಜಾನಪದ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಕೃಷಿಕ. ಆಕರ್ಷಕ ಮಾತುಗಾರ ಮತ್ತು ಉತ್ತಮ ಸಂಘಟನಾಕಾರರು.

ಗೊ.ರು.ಚನ್ನಬಸಪ್ಪ (ಗೊರುಚ) ಎಂದ ಕೂಡಲೇ ಥಟ್ಟನೆ ಕಣ್ಣೆದುರು ಬರುವ ಚಿತ್ರ ಬಿಳಿಯ ಖಾದಿ ಜುಬ್ಬ ಮತ್ತು ಪಂಚೆಯುಟ್ಟ ಕೋಲುಮುಖದ ಸಣಕಲು ದೇಹ, ಮುಖದ ತುಂಬ ಪ್ರಸನ್ನ ನಗು. ಅಡಿಗಡಿಗೂ ಗಾದೆ, ನುಡಿಗಟ್ಟು, ಹಳ್ಳಿಯ ಸೊಗಡಿನ ಪದಪುಂಜಗಳೊಂದಿಗೆ ಅಡೆತಡೆಗಳಿಲ್ಲದೆ ಬರುವ ಮಾತು. ಜನಪದ ಸಾಹಿತ್ಯ, ಕಲೆ, ಕಲಾವಿದ, ಅವರ ವೇಷಭೂಷಣ, ವಾದ್ಯ ಪರಿಕರಗಳನ್ನು ಅವರು ಪರಿಚಯ ಮಾಡಿಕೊಡುವ ವಿಶಿಷ್ಟ ಪರಿ. ಅವರು ಮಾತಿಗೆ ನಿಂತರೆ, ಗ್ರಾಮೀಣ ಬದುಕೇ ಅನಾವರಣಗೊಳ್ಳುತ್ತದೆ. ಸಭಾಂಗಣವಾಗಲಿ, ಬಯಲಾಗಲಿ, ಉದ್ಯಾನವಾಗಲಿ, ಸಂತೆಯಾಗಲಿ ಜನರನ್ನು ತಕ್ಷಣಕ್ಕೆ ಸೆಳೆದುಕೊಳ್ಳಬಲ್ಲ ಅದ್ಭುತ ಮಾತುಗಾರಿಕೆ ಅವರದು. ಈ ಕಾರಣಕ್ಕಾಗಿಯೇ ಸಂಘಟನೆ ಮತ್ತು ಮಾತುಗಾರಿಕೆಗೆ ಗೊರುಚ ಒಂದು ಉತ್ತಮ ಮಾದರಿ.

ADVERTISEMENT

ತೊಂಬತ್ನಾಲ್ಕು ಉಗಾದಿಗಳಲ್ಲಿ ಉಂಡ ಹಿರಿಮೆ ಇವರದು. ಎಂಬತ್ತೊಂಬತ್ತು ಸಂಕ್ರಾಂತಿಯ ಎಳ್ಳುಬೆಲ್ಲ ಹಂಚಿದ ಮಹಾತಾಯಿ ಇವರು. ನೂರಾಎಂಟು ಶಿವರಾತ್ರಿ ಜಾಗರಣೆ ಮಾಡಿದ ಹಿರಿಯ ಜೀವವಿದು...ಇದು ಗೊರುಚ ಅವರು ಜನಪದ ಕಲಾವಿದರ ವಯಸ್ಸನ್ನು ಹೇಳುವ ವಿಭಿನ್ನ ಬಗೆ.

ಗೊರುಚ ಅವರ ಮಾತಿನ ಮೋಡಿಯ ಜೊತೆಗೆ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು ರೇಡಿಯೊ ರೂಪಕಗಳಾಗಿ, ರಂಗದ ಮೇಲೆ ನಾಟಕಗಳಾಗಿ ಹಲವು ಪ್ರಸಾರ, ಪ್ರದರ್ಶನಗಳನ್ನು ಕಂಡ ‘ಸಾಕ್ಷಿಕಲ್ಲು’ ಮತ್ತು ‘ಬೆಳ್ಳಕ್ಕಿ ಹಿಂಡು ಬೆದರ್‍ಯಾವೇ’ ಕೃತಿಗಳು. ಅಲ್ಲದೇ ಬಾಗೂರು ನಾಗಮ್ಮ, ಮೈದುನ ರಾಮಣ್ಣ, ಗ್ರಾಮಗೀತೆಗಳು, ಜೋಗದ ಜೋಕು ಅವರ ಜನಪದ ಗೀತ ಸಾಹಿತ್ಯ ಸಂಗ್ರಹಗಳು. ಕರ್ನಾಟಕ ಪ್ರಗತಿಪಥ, ವಿಭೂತಿ ಸಂಪುಟಗಳೂ ಸೇರಿದಂತೆ ಅವರು ಸಂಪಾದಿಸಿದ, ರಚಿಸಿದ ಗ್ರಂಥಗಳೆಲ್ಲ ಜಾನಪದೀಯ ನೆಲೆಯಿಂದಲೇ ರೂಪುಗೊಂಡಿವೆ. ಆದ್ದರಿಂದಲೇ ಅವರು ಜಾನಪದ ಕ್ಷೇತ್ರ ತಜ್ಞರ ಸಾಲಿನಲ್ಲೇ ಗುರುತಿಸಿಕೊಳ್ಳುತ್ತಾರೆ. ಈಚಿನ ಗ್ರಂಥ ‘ಆಲೋಚನೆ’ ಅವರು ಎಪ್ಪತ್ತು ದಶಕಗಳಲ್ಲಿ ಜಾನಪದ, ಮತ್ತಿತರ ಕ್ಷೇತ್ರಗಳಲ್ಲಿ ನಡೆಸಿದ ಚಿಂತನೆಗಳನ್ನು ಹೊತ್ತು ಬಂದಿದೆ.

ತೊಂಬತ್ತೈದನೆಯ ಉಗಾದಿಯನ್ನು ಕಾಣುವ ಸಂಭ್ರಮದಲ್ಲಿರುವ ಗೊರುಚ, ಮೇ 18, 1930ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಗೊಂಡೇದಹಳ್ಳಿಯಲ್ಲಿ ರುದ್ರಪ್ಪ ಗಿರಿಗೌಡ ಹಾಗೂ ಅಕ್ಕಮ್ಮನವರ ಮಗನಾಗಿ ಜನಿಸಿದರು. ಪ್ರೌಢಶಾಲಾ ಶಿಕ್ಷಣವನ್ನಷ್ಟೇ ಮುಗಿಸಲು ಸಾಧ್ಯವಾಗಿದ್ದ ಇವರು ಜೀವನೋಪಾಯಕ್ಕೆ ಆರಿಸಿಕೊಂಡಿದ್ದೂ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಜಾನಪದ ಲೋಕದ ರೂವಾರಿ ಎಚ್‌.ಎಲ್‌.ನಾಗೇಗೌಡ ಅವರನ್ನು ತಮ್ಮ ಮಾತುಗಾರಿಕೆಯಿಂದ ಗಮನಸೆಳೆದಿದ್ದರಿಂದ ಇವರು ಬೆಂಗಳೂರಿನ ಕಡೆಗೆ ಮುಖ ಮಾಡುವಂತಾಯಿತು.

ಕರ್ನಾಟಕ ಜಾನಪದ ಕ್ಷೇತ್ರದಲ್ಲಿ ಸಂಘಟನೆಗೆ ಒತ್ತು ನೀಡಿದ ದಿಗ್ಗಜರ ಮೊದಲ ಸಾಲಿನಲ್ಲಿ ನಿಲ್ಲುವ ಚನ್ನಬಸಪ್ಪ ಅವರು, ಜಾನಪದದ ಮಹತ್ತನ್ನು ಗ್ರಹಿಸುವುದು ಹೀಗೆ: ‘ಕನ್ನಡ ನೆಲದ ಜನಕೋಟಿಯ ಜೀವದುಸಿರು ಜನಪದ ಸಾಹಿತ್ಯ. ಗುಣ, ಸತ್ವಗಳ ದೃಷ್ಟಿಯಿಂದ ಅದು ಅಮೂಲ್ಯ ಭಂಡಾರ. ಮಾನವನ ಜೀವನಾನುಭವದ ಮಹಾಸಾಗರ. ಆ ಸಾಗರದ ಗರ್ಭದಲ್ಲಿ ಹುದುಗಿರುವ ಅನರ್ಘ್ಯ ರತ್ನಗಳು ಅಪಾರ. ಬದುಕಿಗೆ ಊರುಗೋಲಾಗಬಲ್ಲ, ದಾರಿದೀಪವಾಗಬಲ್ಲ ಆ ರತ್ನಗಳ ಬೆಲೆ ಇನ್ನೂ ಬಹಳ ಜನಕ್ಕೆ ತಿಳಿಯಬೇಕಾಗಿದೆ.’–ಇವು 1967ರಲ್ಲಿ ತರೀಕೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಜಾನಪದ ಸಮ್ಮೇಳನದ ನೆನಪಿನ ಸಂಪುಟ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಅವರ ಸಂಪಾದಕ ನುಡಿಯಲ್ಲಿ ಬರೆದ ಸಾಲುಗಳು. ಜನಪದ ಗೀತ ಗಾಯನದೊಂದಿಗೆ ಆ ಸಾಹಿತ್ಯದ ರಸದೌತಣವನ್ನು ಉಣಬಡಿಸುತ್ತಿದ್ದ ತರೀಕೆರೆಯ ಕೆ.ಆರ್‌.ಲಿಂಗಪ್ಪ ಅವರ ಅಭಿನಂದನಾ ಗ್ರಂಥ ‘ಗ್ರಾಮ ಜ್ಯೋತಿ’ಯ ಸಂಪಾದಕರ ಮಾತಿನಲ್ಲಿ ಗೊರುಚ ಹೀಗೆ ಬರೆದುಕೊಳ್ಳುತ್ತಾರೆ: ‘ಕೆ.ಆರ್‌.ಲಿಂಗಪ್ಪ ಅವರ ಅನುಭವ ಅಂಟಿಸಿದ ಹಣತೆಗಳು ಹಲವಾರು...ಜಾನಪದ ಹುಚ್ಚಾಸ್ಪತ್ರೆಗೆ ನನ್ನನ್ನು ದಾಖಲು ಮಾಡಿದ ಕೀರ್ತಿಯೂ ಅವರಿಗೆ’–ಈ ಎರಡು ಸಂದರ್ಭಗಳ ಮಾತುಗಳೇ ಸಾಕು, ಅವರಿಗೆ ಜಾನಪದದ ಬಗೆಗಿನ ಅನನ್ಯ ಪ್ರೀತಿ ಮತ್ತು ತಿಳಿವಳಿಕೆಯನ್ನು ಅರಿಯಲು.

ಗೊರುಚ ‘ಜಾನಪದ ಜಗತ್ತು’ ಪತ್ರಿಕೆಯ ಸಂಪಾದಕರಾಗಿದ್ದರು. ಆಗ ಪತ್ರಿಕೆಯನ್ನು ವಿಭಿನ್ನ ರೀತಿಯಲ್ಲಿ ಹೊರತರುವ ಅವರ ಉತ್ಸಾಹಕ್ಕೆ ಕೆಲವು ಉದಾಹರಣೆ ಇಲ್ಲಿವೆ: ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಚಟುವಟಿಕೆಗಳ ವರದಿ ವಿಭಾಗಕ್ಕೆ ‘ಕೇರೆಲ್ಲ ಐಭೋಗ ಬೀದೆಲ್ಲ ಸಿಂಗಾರ’, ಹೊಸ ಪುಸ್ತಕಗಳ ಪಟ್ಟಿಯನ್ನು ‘ಜೋತಾಡುತಾವೆ ಹೊಸ ಹೂವು’, ಪುಸ್ತಕಗಳ ವಿಮರ್ಶೆಯನ್ನು ‘ಬೆಲ್ಲದ ಹಾಲಿನ ಸವಿ ನೋಡಿ’, ಜಾನಪದದ ಬಗೆಗಿನ ‍ಪ್ರಶ್ನೋತ್ತರ ವಿಭಾಗವನ್ನು ‘ಬಲ್ಲಂತ ಜಾಣ ಬಿಡಿಸೇಳೊ’, ಕಲಾವಿದರ ಸಾವಿನ ಸುದ್ದಿಯನ್ನು ‘ಕಣ್ಣೀರು ಕರುದಾವೆ’ ಎಂಬಂಥ ಶೀರ್ಷಿಕೆಗಳಡಿಯಲ್ಲಿ ಪ್ರಕಟಿಸುತ್ತಿದದ್ದು ಆಕರ್ಷಕ ಮತ್ತು ಅರ್ಥಪೂರ್ಣ.

ಇದು ನನ್ನ ವೈಯಕ್ತಿಕ ಅನುಭವ. ಆಗ ಎಚ್‌.ಎಲ್‌.ನಾಗೇಗೌಡ ಅವರು ‘ಜಾನಪದ ಜಗತ್ತು’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಲೇಖನಗಳ ಕಟ್ಟೊಂದನ್ನು ಬಿಚ್ಚಿ ಆಯ್ಕೆ ಮಾಡಿದ ಕೆಲವನ್ನು ನನಗೆ ಕೊಟ್ಟು, ಅವುಗಳನ್ನು ರಾಜ್ಯ ಆರೋಗ್ಯ ನಿರ್ದೇಶನಾಲಯದ ಕಟ್ಟಡದಲ್ಲಿ ‘ಭಾರತ ಜನಸಂಖ್ಯಾ ಯೋಜನೆ’ಯ ಉಪ ನಿರ್ದೇಶಕರಾಗಿದ್ದ ಗೊರುಚ ಅವರಿಂದ ಪರಿಶೀಲನೆ ಮಾಡಿಸಿಕೊಂಡು ಬರುವಂತೆ ತಿಳಿಸಿದರು. ನಾನು ಅವರಲ್ಲಿಗೆ ಹೋದೆ. ಲೇಖನಗಳ ಮೇಲೆ ಕಣ್ಣಾಡಿಸಿದ ಗೊರುಚ, ಕೆಲವು ಶೀರ್ಷಿಕೆಗಳನ್ನು ಬದಲಿಸಿದರು. ಕೆಲವು ಲೇಖನಗಳನ್ನು ಪುಟಗಟ್ಟಲೇ ತೆಗೆದು ಅವುಗಳನ್ನು ನನಗೆ ಕೊಡುತ್ತಾ ಹೋದರು. ಆ ನಡುವೆ ಒಂದೆರಡು ಸಲ ತಮ್ಮ ಮೇಜಿನ ಮೇಲಿದ್ದ ಕನ್ನಡ ನಿಘಂಟನ್ನು ತೆರೆದು ಯಾವುದೋ ಪದವನ್ನು ನೋಡಿ ಇಟ್ಟರು. ಕೊನೆಯಲ್ಲಿ ಅದೇ ಮೊದಲ ಬಾರಿಗೆ ನಾನು ಬರೆದಿದ್ದ ‘ಪಜ್ಜಿಗಿಜ್ಜಿ ಮಾಡಿ ಹಿಟ್ಮಾಡೆ’ ಎಂಬ ಲೇಖನವನ್ನು ಅವರ ಕೈಗಿತ್ತೆ. ಲೇಖನವನ್ನು ಓದಿದ ಅವರು ಅಲ್ಲಿದ್ದ ಅಕ್ಷರ ದೋಷ, ವಾಕ್ಯದೋಷಗಳನ್ನು ತಿದ್ದಿದ್ದಲ್ಲದೆ, ಕೆಲವು ವಾಕ್ಯಗಳನ್ನು ಮತ್ತೆ ಬರೆದು ನನಗೆ ಕೊಟ್ಟರು. ನಾನು ಮಾಡಿದ್ದ ತಪ್ಪುಗಳನ್ನು ಕಂಡು ಸಿಡುಕಲೂ ಇಲ್ಲ, ವ್ಯಂಗ್ಯವನ್ನೂ ಮಾಡಲಿಲ್ಲ, ಅವಮಾನಿಸಲೂ ಇಲ್ಲ. ಆಗ ನನಗೆ ಅರ್ಥವಾಗಿದ್ದು ಇಷ್ಟು: ಹಿರಿಯರು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತಾರೆ, ಆ ಮೂಲಕ ಕಿರಿಯರನ್ನು ತಿದ್ದುತ್ತಾರೆಂದು.

ಗೊರುಚ ಅವರ ವಿಚಾರಕ್ಕೆ ಬಂದಾಗಲೆಲ್ಲ ನನಗೆ ನಮ್ಮ ಹಿರೀಕರು ಹೇಳುವ ‘ತುಂಬಿದ ಕೊಡ ತುಳುಕುವುದಿಲ್ಲ’ ಎನ್ನುವ ಮಾತು ನೆನಪಾಗುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.