
ಆಗ…
ಬಸ್ ತಂಗುದಾಣದ ಗೋಡೆಗಳು ಗುಟ್ಕಾ, ಪಾನ್ ಉಗುಳಿದ ಕಲೆಗಳಿಂದ ಗಲೀಜಾಗಿದ್ದವು. ನೆಲದಲ್ಲಿ ಬೀಡಿ–ಸಿಗರೇಟ್ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅಲ್ಲಿ ಕುಳಿತುಕೊಳ್ಳಲು ಯಾರೂ ಇಷ್ಟಪಡುತ್ತಿರಲಿಲ್ಲ. ಬಸ್ಸಿಗಾಗಿ ಹೊರಗೆ ನಿಂತೇ ಕಾಯಬೇಕಾಗುತ್ತಿತ್ತು.
ಈಗ…
ಅದೇ ತಂಗುದಾಣದ ಗೋಡೆಗೆ ಸುಂದರ ಕಪಾಟು ಅಲಂಕಾರವಾಗಿದೆ. ಅದರಲ್ಲಿ 900ಕ್ಕೂ ಹೆಚ್ಚು ವಿವಿಧ ಪ್ರಕಾರದ ಪುಸ್ತಕಗಳು, ಓದಲು ಬೆಂಚುಗಳು, ಮೇಜುಗಳು ಇವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಯುವಕರು, ಲೋಕ ಅರಿಯಲು ಬಯಸುವ ಹಿರಿಯರು—ಎಲ್ಲರೂ ಇಲ್ಲಿಗೆ ಬರುತ್ತಾರೆ. ನೆಮ್ಮದಿಯಾಗಿ ಕುಳಿತು ಓದಿನಲ್ಲಿ ಮಗ್ನರಾಗುತ್ತಾರೆ.
ಇದು ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಬಸ್ ತಂಗುದಾಣದಲ್ಲಿರುವ ‘ಪುಸ್ತಕ ಗೂಡಿ’ನ ಚಿತ್ರಣ.
ಈ ಗೂಡಿನಲ್ಲಿ ಕುವೆಂಪು, ವಿ.ಕೃ.ಗೋಕಾಕ್, ದ.ರಾ. ಬೇಂದ್ರೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಕುಂ.ವೀರಭದ್ರಪ್ಪ, ಈಚನೂರು ಶಾಂತ, ವ್ಯಾಸರಾಯ ಬಲ್ಲಾಳ ಸೇರಿದಂತೆ ಅನೇಕ ಶ್ರೇಷ್ಠ ಲೇಖಕರ ಕಾದಂಬರಿ, ಕಥಾಸಂಕಲನ, ಕವನಸಂಕಲನ, ನಾಟಕಗಳು ಹಾಗೂ ಸಾಹಿತ್ಯೇತರ ಕೃತಿಗಳಿವೆ.
ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನಿಯತಕಾಲಿಕೆಗಳೂ ಲಭ್ಯ.
ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸ ಕುಂಠಿತವಾಗುತ್ತಿದೆ ಎನ್ನುವ ಮಾತು ಜೋರಾಗಿದೆ. ಆದರೆ ಹ್ಯಾಳ್ಯಾದ ಈ ಪುಸ್ತಕ ಗೂಡು ಅದಕ್ಕೆ ಅಪವಾದ. ಓದಿನ ಅಭಿರುಚಿ ಹೆಚ್ಚಿಸುವ ಮಾದರಿಯಾಗಿ ಇದು ಗಮನ ಸೆಳೆಯುತ್ತಿದೆ.
2024ರಲ್ಲಿ ಹ್ಯಾಳ್ಯಾ ಗ್ರಾಮ ಪಂಚಾಯಿತಿ ₹30 ಸಾವಿರ ವೆಚ್ಚದಲ್ಲಿ ಅಧ್ಯಕ್ಷೆ ಡಿ. ಹಾಲಮ್ಮ ನಿಜೇಶ್ ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಚ್.ಎಂ. ಗಂಗಾಧರಯ್ಯ ಅವರ ಆಸಕ್ತಿಯಿಂದ ಈ ಯೋಜನೆ ಆರಂಭವಾಯಿತು. ಗ್ರಂಥಪಾಲಕ ಬಿ. ಲೋಕೇಶ್ ಅವರ ಕಲ್ಪನೆಯ ಕೂಸಾದ ಈ ಗೂಡಿಗೆ ಇಲಾಖೆಯ ಸಹಕಾರವೂ ಸಿಕ್ಕಿದೆ.
‘ಮಳೆ, ಗಾಳಿ, ಬಿಸಿಲಿನಿಂದ ಪುಸ್ತಕಗಳನ್ನು ರಕ್ಷಿಸಲು ಕಪಾಟುಗಳನ್ನು ನಿರ್ಮಿಸಿದ್ದೇವೆ. ವಾಹನಗಳ ಹೊಗೆ ಮತ್ತು ಧೂಳಿನಿಂದ ಸಂಪೂರ್ಣ ರಕ್ಷಣೆಗಾಗಿ ಗ್ಲಾಸ್ ಅಳವಡಿಸಲು ₹78 ಸಾವಿರ ಮಂಜೂರಾಗಿದೆ. ಮಕ್ಕಳನ್ನು ಆಕರ್ಷಿಸಲು ಚಿತ್ರಗಳನ್ನು ಬಿಡಿಸುವ ಯೋಜನೆಯೂ ಇದೆ’ ಎನ್ನುತ್ತಾರೆ ಗ್ರಂಥಪಾಲಕ ಬಿ. ಲೋಕೇಶ್.
ಓದುಗರ ಅನುಕೂಲಕ್ಕಾಗಿ ಫ್ಯಾನ್ ಅಳವಡಿಸಲಾಗಿದೆ. ಸಿಸಿಟಿವಿ ಕಣ್ಗಾವಲೂ ಇದೆ. ಹೀಗಾಗಿ ಪುಸ್ತಕಗಳು ಸುರಕ್ಷಿತ.
‘ಓದುವ ಹವ್ಯಾಸ ಇದ್ದರೆ ಸೋಮಾರಿತನಕ್ಕೆ ಜಾಗವಿಲ್ಲ’,
‘ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ’,
‘ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಅದು ನಿನ್ನನ್ನು ತಲೆಯೆತ್ತುವಂತೆ ಮಾಡುತ್ತದೆ’—
ಇಂತಹ ಗೋಡೆ ಬರಹಗಳು ಓದುಗರ ಮನ ಸೆಳೆಯುತ್ತವೆ.
‘ತಂಬಾಕು, ಬೀಡಿ–ಸಿಗರೇಟ್ ಕಸದ ತಾಣವಾಗಿದ್ದ ಈ ಸ್ಥಳದ ಸಂಪೂರ್ಣ ಚಿತ್ರಣವನ್ನು ಪುಸ್ತಕ ಗೂಡು ಬದಲಿಸಿದೆ. ಓದಿನ ಶಕ್ತಿಯೇ ಇದು’ ಎನ್ನುತ್ತಾರೆ ಸ್ನಾತಕೋತ್ತರ ಪದವೀಧರ ಕೊಟ್ರೇಶ್.
‘ಮಕ್ಕಳಿಗೆ ಕಥೆ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ನಿಯತಕಾಲಿಕೆಗಳು—ಎಲ್ಲವೂ ಇಲ್ಲಿವೆ. ಸಮಯ ವ್ಯರ್ಥಗೊಳಿಸುವ ಬದಲು ಓದಿನಲ್ಲಿ ತೊಡಗಿಸಿಕೊಳ್ಳುವ ಸಂಸ್ಕೃತಿ ಬೆಳೆದಿದೆ’ ಎನ್ನುತ್ತಾರೆ ಯುವ ಮುಖಂಡ ಟಿ. ಮಹಾಂತೇಶ್.
ಐದನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ಮೊಬೈಲ್ ಗೇಮ್ ಟಿವಿ ಕಾರ್ಟೂನ್‌ಗಳಲ್ಲಿ ಮುಳುಗಿದ್ದ. ಪುಸ್ತಕ ಗೂಡು ಬಂದ ಮೇಲೆ ಮೊಬೈಲ್ ಬಿಟ್ಟು ಕಥೆ ಪುಸ್ತಕಗಳನ್ನು ಓದುತ್ತಿದ್ದಾನೆ. ಈ ಬದಲಾವಣೆಗೆ ಕಾರಣವಾದ ಪುಸ್ತಕ ಗೂಡಿಗೆ ನಾವು ಪೋಷಕರು ಚಿರಋಣಿಗಳು.– ಭಾಗ್ಯಮ್ಮ, ಪೋಷಕಿ
‘ಪುಸ್ತಕ ಜೋಳಿಗೆ’ ಯೋಜನೆಯಡಿ ಜನರಿಂದ ದಾನವಾಗಿ ಪುಸ್ತಕಗಳನ್ನು ಸಂಗ್ರಹಿಸಲಾಗುತ್ತಿದೆ. ಗ್ರಂಥಾಲಯ ಇಲಾಖೆಯೂ ಪುಸ್ತಕಗಳನ್ನು ಪೂರೈಸುತ್ತಿದೆ.
‘ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ರೂಢಿಸಲು ಪಂಚಾಯಿತಿ ಮತ್ತು ಗ್ರಂಥಪಾಲಕರ ಪರಿಶ್ರಮವೇ ಕಾರಣ’ ಎಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಕೆ. ಹರ್ಷವರ್ಧನ್ ಅಭಿಪ್ರಾಯಪಡುತ್ತಾರೆ.
ಹೊಸತನವನ್ನು ಯೋಚಿಸುವ ಅಧಿಕಾರಿಗಳು, ಬೆಂಬಲಿಸುವ ಜನಪ್ರತಿನಿಧಿಗಳು, ಜೊತೆಯಾಗುವ ಗ್ರಾಮಸ್ಥರು ಇದ್ದರೆ—ಪುಸ್ತಕ ಗೂಡು ಎಲ್ಲೆಡೆಯೂ ಸಾಧ್ಯ. ⇒v
ಹ್ಯಾಳ್ಯಾ ಬಸ್ ತಂಗುದಾಣದ ಪುಸ್ತಕ ಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.