ADVERTISEMENT

ಓದು ಖುಷಿಗೆ.. ಕಲ್ಪನೆಗೆ.. ವಿಕಾಸಕ್ಕೆ..

ಎಸ್.ರಶ್ಮಿ
Published 15 ನವೆಂಬರ್ 2025, 23:30 IST
Last Updated 15 ನವೆಂಬರ್ 2025, 23:30 IST
<div class="paragraphs"><p>ಈ ಓದಿನ ಖುಷಿ ಮೊಬೈಲ್‌ನಲ್ಲಿ ಸಿಗೋದಿಲ್ಲ ಅಲ್ವಾ... </p></div>

ಈ ಓದಿನ ಖುಷಿ ಮೊಬೈಲ್‌ನಲ್ಲಿ ಸಿಗೋದಿಲ್ಲ ಅಲ್ವಾ...

   

ಚಿತ್ರಗಳು: ರಂಜು ಪಿ.

‘ಮಕ್ಕಳಿಗೆ ಪಠ್ಯಪುಸ್ತಕಗಳನ್ನೇ ಓದಲು ಸಮಯವಿಲ್ಲ, ಇನ್ನು ಬೇರೆ ಪುಸ್ತಕಗಳನ್ನು ಯಾವಾಗ ಓದುತ್ತಾರೆ’ ಎನ್ನುವ ಮಾತು ಪೋಷಕರು, ಶಿಕ್ಷಕರಿಂದ ಆಗಾಗ ಕೇಳಿಬರುತ್ತದೆ. ಆದರೆ ಬಾಲ್ಯದಲ್ಲೇ ಓದುವ ರುಚಿ ಹತ್ತಿಸಿಕೊಂಡವರು ಮಾತ್ರ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳನ್ನು ಓದುತ್ತಾ ಹಾಯಾಗಿದ್ದಾರೆ.

ದೃಶ್ಯ 1

ಮೆಟ್ರೊದಲ್ಲಿ ಪಯಣಿಸುತ್ತಿದ್ದ ಮಗುವೊಂದು ಮಾತಿಗೆಳೀತು. 

ADVERTISEMENT

ನಿಮ್ಹೆಸರೇನು?

ನನಗೆ ಗೊತ್ತಿಲ್ಲ, ನಿನ್ನ ಹೆಸರೇನು?

ತೃಷಿಕಾ

ಓಹ್‌.. ನನಗೆ ಹೆಸರೇ ಇಲ್ಲ, ನೀನೇ ಒಂದು ಹೆಸರಿಡು..

ನಿಮ್ಹೆಸರು ಅಕ್ಷತಾ ಅಂತಿರಲಿ

ಹೆಸರು ಯಾಕೆ ಬೇಕು? 

ಓಹ್‌.. ಹೌದಲ್ವಾ... (ಪುಟ್ಟ ಬೆರಳೊಂದು ತನ್ನ ಮಿದುಳಿನ ಬಳಿಗೊಯ್ದು, ಟಕ್‌ಟಕ್‌ ಅಂತ ಒಂದೆರಡು ಬಾರಿ ಬಡಿದುಕೊಂಡು..) ಏನು ಗೊತ್ತಾ.. ಹೆಸರಿದ್ದರೆ ಮಾತ್ರ ನಮಗೆ ಕರೆಯೋಕೆ ಸಾಧ್ಯ ಅಲ್ವಾ... 

ಅಷ್ಟರಲ್ಲಿ ರೈಲು ಸುರಂಗ ಹೊಕ್ಕಿತು.. ಓಹ್‌.. ಭಯ.. ನನಗೆ... ಭಯ.. ಅಂತ ಕಿರುಚಿತು ಮಗು.

ಯಾಕೆ ಭಯ? 

ಯಾಕೇಂದ್ರೆ ಭೂತ ಬರುತ್ತೆ..

ಹೌದಾ..! ಭೂತ ಅಂದ್ರೆ..?

ಅದೇ ಭೂತ.. ದೊಡ್ಡದಾಗಿ, ಕಪ್ಪಾಗಿ, ಕಣ್ಣು ಕೆಂಪಾಗಿ, ಹಸಿರು ಕೂದಲಿದ್ದು ಜೋರಾಗಿ ನಡೀತಾ ಬರುತ್ತೆ..

ಎಲ್ಲಿ ನೋಡಿದೆ ಈ ಭೂತ?

ಮೋಟು ಔರ್‌ ಪತ್ಲುನಲ್ಲಿ...

ದೃಶ್ಯ 2

ನಿನಗ ಭೂತದ ಕತಿ ಹೇಳಲಿ? ಮೂರು ವರ್ಷದ ಕ್ಷಿತಿಜಾ, ಫಳಫಳ ಹೊಳೆಯುವ ಕಂಗಳನ್ನು ಇನ್ನಷ್ಟು ಅರಳಿಸಿ ಕೇಳುತ್ತಿದ್ದಳು. 

ಭೂತ ಅಂದ್ರ...

ಭೂತ ಅಂದ್ರ ಅಂಜಸ್ಲಿಕ್ಕಿ ಬರ್ತದ..

ಹೆಂಗಿರ್ತದ ಭೂತ?

ಅದು.. ಅದು ಹೆಂಗನೂ ಇರಬಹುದು. ನೀ ಹೇಳು, ಅದರ ಕಣ್ಣು ಯಾವ ಬಣ್ಣದ್ದಿರಬೇಕು ಅಂತ.. ಅದೇ ಬಣ್ಣದ್ದಾಗ್ತದ..

ಅವ್ವಾ.. ಬ್ಯಾಡವಾ ನನಗ ಅಂಜಿಕಿ ಬರ್ತದ..

ಅಂಜಬ್ಯಾಡ ಅತ್ಯಾ.. ಕಣ್ಮುಚ್ಕೊಂಡ್ರ ಭೂತ ಹೊಂಟೇ ಹೋಗ್ತದ

ನೀ ದೋಸ್ತಿ ಮಾಡ್ಕೊ, ನಿಂಜೊತಿ ಅದು ಆಟಾನೂ ಆಡ್ತದ..

ಯಾರು ಹೇಳಿದ್ರು?

ಸಂಧ್ಯಾಜ್ಜಿ ಕಥಿ ಹೇಳೂಮುಂದ ಅಂದಾರ. ಅಂಜಬಾರದು ಅಂತ. ಅಂಜದೇ ಮಾತಾಡಬೇಕು ಅಂತ. ನಾನೇ ಭೂತದ್ದ ಚಿತ್ರಾನೂ ಬರದೀನಿ.

ದೃಶ್ಯ 3

ಗಗನಚುಕ್ಕಿ ಜಲಪಾತದ ಬಳಿ...

ಪುಟ್ಟದೊಂದು ಹಕ್ಕಿ ಆಗಾಗ ಜಲಪಾತದ ನೀರಿನಲ್ಲಿ ಮಿಂದೆದ್ದು ಗೂಡಿನ ಕಡೆ ಹೋಗುತ್ತಿತ್ತು. ಮತ್ತೆ ಬರುತ್ತಿತ್ತು. ಬೆಟ್ಟದ ಮೇಲೆ ಒಂದೆರಡು ಕ್ಷಣ ಕುಳಿತಂತೆ ಮಾಡಿ ಮತ್ತೆ ಗೂಡಿನೆಡೆ ಹೋಗ್ತಿತ್ತು. ಮತ್ತೆ ಮೇಲಿಂದ ಹಾರುತ್ತ, ಸಿಹಿನೀರ ಸಿಂಚನಕ್ಕೆ ಮೈ ಒಡ್ಡಿ ಮತ್ತೆ ಹಾರಿ ಹೋಯಿತು. ಒಂದೆರಡು ಕ್ಷಣಗಳಷ್ಟೆ.. ಮತ್ತದೇ ಪುಟ್ಟಹಕ್ಕಿ, ಈ ಸಲ ಜಲಪಾತದ ಹಿಂದೆಯಿಂದ ಹಾರಿ, ಮೈ ತೋಯಿಸಿಕೊಂಡು ಹೋಯಿತು.

ಅಮ್ಮಾ, ನೋಡಮ್ಮ.. ಆ ಹಕ್ಕೀಗೆ ಅವರಮ್ಮ ಬೈದಿರಬೇಕು. ಸ್ನಾನ ಮಾಡಿ ಬಾ ಅಂತ. ಅದು ಶವರ್‌ ತೊಗೊಂಡು ಬರ್ತೀನಿ ಅಂತ ಪುರ್‌ ಅಂತ ಹಾರಿ, ಬರೀ ನೀರು ಸಿಡಿಸಿಕೊಂಡು ಹೋಯ್ತು. ಅವರಮ್ಮ ಇಷ್ಟು ಬೇಗ ಎಂತ ಸ್ನಾನವೇ ಮುದ್ದು ಅಂತ ಗದರಿರಬೇಕು. ಅದಕ್ಕೇ ತುಸು ಸಮಯ ಬೆಟ್ಟದ ಮೇಲ ಕುಳಿತು, ಟೈಮ್‌ ಪಾಸ್‌ ಮಾಡಿ, ಮತ್ತೆ ಜುಂಯ್‌ ಅಂತ ನೀರು ಸೋಕಿಸಿ ಕೊಂಡು ಗೂಡಿಗೆ ಮರಳಿರಬೇಕು. ಆಮೇಲೆ ಅವರಮ್ಮ ನಿನ್ಹಂಗೇ ಗದರಿರಬೇಕು. ರೆಕ್ಕೆ ತೋಯ್ದಿಲ್ಲ, ಕತ್ತಿನ ಕೆಳಗೆ ಒದ್ದೆಯಾಗಿಲ್ಲ, ಇದೆಂಥ ಸ್ನಾನವೇ.. ಶವರ್ ಬೇಡ, ಏನೂ ಬೇಡ.. ಅಲ್ಲಿ ನಿಂತಿರೋ ನೀರಲ್ಲಿ, ನನ್ಮುಂದೆನೇ ಮಿಂದು ಬಾ ಅಂದಿರಬೇಕು. 

ಅದಕ್ಕೇ ಅದು ಈ ಸಲ ಜಲಪಾತದ ಹಿಂದೆ ಹೋಗಿ, ಈ ಚಳೀನಲ್ಲಿ ಮೈಯೆಲ್ಲ ತೋಯಿಸಿಕೊಂಡು, ನಡುಗಿಸಿಕೊಂಡು ಹೋಯ್ತಲ್ಲ.. ನೋಡು.. ಅವರಮ್ಮ ಈಗ ಮೈ ಒರೆಸಿ ಮುದ್ದು ಮಾಡ್ತಿರಬೇಕು. ಘಮ್‌ ಅಂತಿದ್ದಿ ಅಂತ ಹೇಳ್ತಿರಬಹುದು. ಎಲ್ಲ ಅಮ್ಮಂದಿರಿಗೂ ಮಕ್ಕಳನ್ನ ಸಂಶಯದಿಂದ ನೋಡೋದು ಅಭ್ಯಾಸವೇ ಅಲ್ವೇನಮ್ಮ.. ಎಲ್ಲ ಮಕ್ಕಳಿಗೂ ಸ್ನಾನ ಅಂದ್ರೆ ಮಾಡೋವ
ರೆಗೂ ಬೇಜಾರು. ಮಾಡಲು ಹೋದರೆ ಮುಗಿಸಲು ಬೇಜಾರು ಅಲ್ವೇನಮ್ಮಾ...

ಎಷ್ಟು ಮಾತಾಡ್ತಿ.. ಹೆಂಗ ಹೊಳೀತದ ಇವೆಲ್ಲ.. ಅವರಜ್ಜಿ ಪ್ರಶ್ನೆ. ಪುಸ್ತಕ ಓದುಮುಂದ ಅವರೆಲ್ಲ ಹಿಂಗೇ ವಿಚಾರ ಮಾಡಿ ಬರದಿರಬಹುದು, ಹೆಂಗ ಬರದಿರಬಹುದು ಅಂತನಿಸಿದಾಗೆಲ್ಲ ನನಗೂ ಇಂಥ ಕಥಿ ಹೊಳೀತಾವ..

ಪುಸ್ತಕ ಮೇಳವೊಂದರಲ್ಲಿ ಓದಿನಲ್ಲಿ ಮಗ್ನರಾಗಿರುವ ಮಕ್ಕಳು 

ಈ ಮೂರು ದೃಶ್ಯಗಳಲ್ಲಿ ಒಂದಂತೂ ಸ್ಪಷ್ಟ. ಟೀವಿ, ಮೊಬೈಲು ಫೋನುಗಳಲ್ಲಿ ನೋಡುವ ಮಕ್ಕಳ ಕಲ್ಪನಾ ಲಹರಿಯಲ್ಲಿ ಬಣ್ಣಗಳು ಕಡಿಮೆ. ನೋಡಿದ ಕತೆಯನ್ನೇ ಹೇಳುತ್ತವೆ. ಕತೆ ಕೇಳುತ್ತ, ಪುಸ್ತಕ ನೋಡುತ್ತ ಬೆಳೆಯುವ ಮಕ್ಕಳಲ್ಲಿ ಕಲ್ಪನಾ ಶಕ್ತಿಗೆ ಮೇರೆ ಎಂಬುದೇ ಇಲ್ಲ. ಮಕ್ಕಳಲ್ಲಿ ಓದುವ ಹವ್ಯಾಸವಿದ್ದಲ್ಲಿ ಅವರ ಕಲ್ಪನಾ ಶಕ್ತಿ ಗರಿಗೆದರುತ್ತದೆ. ಮತ್ತು ತನಗೆ ಏನೋ ಗೊತ್ತಿದೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಇನ್ನೂ ತಿಳಿಯಬೇಕು ಎಂಬ ಕುತೂಹಲ ಮೂಡುತ್ತದೆ. ಮಕ್ಕಳ ಸಾಹಿತ್ಯಕ್ಕೆ ಇದೀಗ ಹೊಸ ರೂಪ ದೊರೆತಿದ್ದು, ಚಿತ್ರಕತೆಗಳು ಮಕ್ಕಳನ್ನು ಅವರದ್ದೇ ಕಲ್ಪನಾ ಲೋಕಕ್ಕೆ ಕರೆದೊಯ್ದು ವಿಹರಿಸಿಬರುವಂತೆ ಮಾಡುತ್ತವೆ.

ಆದ್ರೆ ಮಕ್ಕಳ ಪುಸ್ತಕ ಪ್ರಕಾಶನದಲ್ಲಿ ಹೆಸರು ಮಾಡಿರುವ ಬಹುರೂಪಿಯ ಶ್ರೀಜಾ ಅವರು ತಮ್ಮದೊಂದು ಅನುಭವ ಹಂಚಿಕೊಂಡರು.

ರಂಗ ಶಂಕರದಲ್ಲಿ ಈಚೆಗೆ ಮಕ್ಕಳು ನಾಟಕ ನೋಡಲು ಹೋಗಿದ್ದರು. ಅಲ್ಲಿಯ ಪುಸ್ತಕ ಮಳಿಗೆಗೂ ಭೇಟಿ ನೀಡಿದ್ದರು. ಒಂದು ಮಗು ತನಗೆ ಬೇಕಾದ ಪುಸ್ತಕವನ್ನು ಎತ್ತಿಕೊಂಡು, ಅಪ್ಪನಿಗೆ ಅದನ್ನು ಕೊಡಿಸಲು ಕೇಳಿದಾಗ, ‘ಒಂದು ಸಲ ಓದಿ ಮುಗಿಸುವ ಈ ಪುಸ್ತಕಕ್ಕೆ ಅಷ್ಟು ಹಣ ಕೊಡಬೇಕಾ’ ಎಂದು ಪ್ರಶ್ನಿಸಿ, ಆ ಪುಸ್ತಕವನ್ನು ಅದರ ಮೂಲ ಜಾಗದಲ್ಲಿ ಕೂರಿಸಿ ಬಂದರು. ಪಾಲಕರ ಈ ಪ್ರಶ್ನೆಯೇ ಇಂದು ಮಕ್ಕಳನ್ನು ಪುಸ್ತಕ ಲೋಕದಿಂದ ದೂರ ಕರೆದೊಯ್ಯತ್ತಿದೆ.

ಅವರು ಸುಮ್ಮನಾಗಿಸಿದ್ದು ಕೇವಲ ತಮ್ಮ ಮಗುವನ್ನು ಅಲ್ಲ, ಮಗುವಿನ ಓದುವ ಕುತೂಹಲದ ತಲೆಗೆ ಮೊಟಕಿದ್ದು. ಅರಿಯಬೇಕು, ಓದನ್ನು ಆಸ್ವಾದಿಸಬೇಕು ಎಂದುಕೊಂಡು ಒಂದು ಸದಭಿರುಚಿಯನ್ನು ಅಲ್ಲಿಯೇ ಚಿವುಟಿದರು. ಇನ್ನು ಆ ಮಗು ಇನ್ನೊಂದು ಪುಸ್ತಕವನ್ನು ಕೇಳುವುದಾದರೆ ಒಂದ್ಹತ್ತು ಸಲ ಯೋಚಿಸುವುದು. ಕೇಳಬೇಕೆ? ಕೇಳಿ ಬೈಸಿಕೊಳ್ಳಬೇಕೆ? ಒಂದೇ ಪುಸ್ತಕ ಎಷ್ಟು ಸಲ ಓದಬಹುದು? ಓದಿದ ಮೇಲೆ ಅದರ ಉಪಯೋಗವಿಲ್ಲವೇ? ಹೆತ್ತವರು ಮಕ್ಕಳಲ್ಲಿ ಆನಂದದ ಬದಲು ಉಪಯುಕ್ತತೆಯ ಪಾಠವನ್ನು ಕೊಟ್ಟು ಕೊಳ್ಳುಗನಾಗಿಸುವ ಭರದಲ್ಲಿ ಒಬ್ಬ ಓದುಗನನ್ನು ಕಳೆದುಹಾಕುತ್ತಾರೆ.

ತಮ್ಮ ಮಗುವನ್ನೂ ಬದುಕನ್ನು ಎದುರಿಸಲು ತಯಾರಾಗಿಸಲು ಪಠ್ಯಕ್ರಮವನ್ನೇ ಓದು ಎಂದು ಬಿಂಬಿಸುತ್ತಾರೆ. ಪಠ್ಯಕ್ರಮವನ್ನಲ್ಲದೇ ಉಳಿದ ಪುಸ್ತಕ ಓದುವ ಮಕ್ಕಳು ಬದುಕನ್ನು ಸ್ವೀಕರಿಸಿ ಆನಂದಿಸುತ್ತಾರೆ.

ಪ್ರಥಮ್ ಬುಕ್ಸ್‌ನ ಹೇಮಾ ಖುರ್ಸಾಪೂರ ಅವರು, ಮಕ್ಕಳಿಗೆ ಏನೂ ತಿಳಿದಿಲ್ಲವೆಂಬ ಭ್ರಮೆಯಿಂದಾಚೆ ಬನ್ನಿ. ಪುಸ್ತಕಲೋಕವನ್ನು ಪರಿಚಯಿಸಿ, ನಿಮ್ಮ ಮಕ್ಕಳನ್ನು ನೀವು ಅರಿಯಲು ಅನುಕೂಲವಾಗುವುದು ಎನ್ನುತ್ತಾರೆ. ಪ್ರಥಮ್‌ ಬುಕ್ಸ್‌ನಲ್ಲಿ ಎಳೆಮಕ್ಕಳಿಂದ, ಹದಿಹರೆಯದ ಮಕ್ಕಳವರೆಗೂ ವೈವಿಧ್ಯಮಯ ಚಿತ್ರ ಪುಸ್ತಕಗಳು ಲಭ್ಯ ಇವೆ. ಅವರ ವೆಬ್‌ಸೈಟಿನಲ್ಲಿ ಹೋಗಿ, ಆ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ. ಹೆಚ್ಚು ಓದಿರುವ ಪುಸ್ತಕಗಳನ್ನು ಮುದ್ರಿಸುತ್ತಾರೆ. ಮುದ್ರಿತ ಪುಸ್ತಕಗಳು ಮಕ್ಕಳ ಮನಸಿನ ಪ್ರತಿಬಿಂಬದಂತೆಯೇ ಕಾಣುತ್ತವೆ. 

ಮಕ್ಕಳಲ್ಲಿ ಸಿಟ್ಟು ಹೆಚ್ಚಿದ್ದರೆ, ವರ್ತನೆಯಲ್ಲಿ ಸಮಸ್ಯೆಗಳಿದ್ದರೆ ಹೆಚ್ಚು ಅಳುತ್ತಿದ್ದರೆ, ಸಿಡುಕುತ್ತಿದ್ದರೆ, ಒಬ್ಬಂಟಿಯಾಗಿ ಕೂರುತ್ತಿದ್ದರೆ, ಮಾತು ಕಡಿಮೆ ಇದ್ದರೆ ಅಂಥ ಮಕ್ಕಳ ಕೈಗೆ ಪುಸ್ತಕ ಕೊಡಿ. ಪುಸ್ತಕಗಳಿಗೆ ಚಿಕಿತ್ಸಕ ಶಕ್ತಿ ಇದೆ ಎಂಬುದು ಮಕ್ಕಳ ಕತೆ, ಕವಿತೆ ರಚಿಸುವ ಲಲಿತಾ ಹೊಸಪ್ಯಾಟಿ ಅವರ ಅಭಿಪ್ರಾಯ. 

ಮಕ್ಕಳಿಗೆ ಬಾಲ್ಯವನ್ನೂ, ಬದುಕು ಆನಂದಿಸುವ ಶಕ್ತಿಯನ್ನೂ ನೀಡಲು ಪ್ರಥಮ್‌, ಬಹುರೂಪಿ, ಪರಾಗ್‌, ಕಲ್ಪವೃಕ್ಷ, ನಿರ್ದಿಗಂತ, ಅವ್ಯಕ್ತ, ಬೆರಗು ಮುಂತಾದ ಪ್ರಕಾಶನಗಳು ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿವೆ. ಸಮಕಾಲೀನ ಸಾಹಿತ್ಯವನ್ನೇ ಮಕ್ಕಳಿಗಾಗಿ, ಹೆಕ್ಕಿ, ಅನುವಾದಿಸಿ, ಪ್ರಕಟಿಸುತ್ತಿವೆ. 

ಈ ಕಾಲದ ಜೆನ್‌ ಅಲ್ಫಾ ಮಕ್ಕಳು ಫೋನು ಕೈಬಿಡ್ತಿಲ್ಲ ಎಂದು ದೂರುವ ಪೋಷಕರು, ನಮ್ಮಂತಿಲ್ಲ ಎಂದು ಕೊರಗುವ ಪೋಷಕರು ಇದೀಗ ಆಯ್ಕೆ ಮಾಡಿಕೊಳ್ಳಬೇಕಿದೆ. ಅಂಕ ಗಳಿಗಾಗಿ ಪಠ್ಯವನ್ನು ಮಾತ್ರ ಓದಿಸಿ, ಬದುಕಿಗೆ ತರಬೇತಿಗೊಳಿಸಬೇಕೆ? ಪಠ್ಯಕ್ರಮವಲ್ಲದ ಪುಸ್ತಕಗಳನ್ನು ನೀಡಿ, ಬದುಕನ್ನು ಆನಂದಿಸುವುದನ್ನು ಕಲಿಸಬೇಕೆ? ಆಯ್ಕೆ ಪೋಷಕರದ್ದು, ಬದುಕು ಅವರದ್ದೇ ಮಕ್ಕಳದ್ದು.

ನಾನು ಚಿಕ್ಕವಳಿದ್ದಾಗ ನನ್ನ ತಂದೆಯ ಕಂಪ್ಯೂಟರಿನಲ್ಲಿ ಪಂಚತಂತ್ರ, ತೆನಾಲಿ ರಾಮ ಸೇರಿದಂತೆ ವಿವಿಧ ಕಥೆಗಳನ್ನು ನೋಡುತ್ತಿದ್ದೆ. ನಂತರ ಅಕ್ಷರ ಕಲಿಯಲು ಪ್ರಾರಂಭಿಸಿದಾಗ, ಚಿತ್ರಸಹಿತ ಕಥೆ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಅವುಗಳ ಅರ್ಥ ತಿಳಿಯುತ್ತ, ಪುಸ್ತಕ ಓದುವ ಕುತೂಹಲ ಬೆಳೆಯಿತು. ಬರುಬರುತ್ತ ಮಹಾನ್ ನಾಯಕರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದಲು ಶುರು ಮಾಡಿದೆ. ಶಾಲೆಯ ಪಠ್ಯಪುಸ್ತಕಗಳಿಗಿಂತ ನನಗೆ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚು. ಪ್ರತಿ ದಿನ ನಿದ್ದೆ ಮಾಡುವ ಮೊದಲಿಗೆ ಪುಸ್ತಕ ಓದುವ ಅಭ್ಯಾಸವಿದೆ.
--ಮಹತಿ ಪಿ.
ಅಕ್ಷರ ಕಲಿತ ದಿನದಿಂದ ಶಾಲೆಯ ಪುಸ್ತಕದ ಜೊತೆಗೆ ಬೇರೆ ಪುಸ್ತಕಗಳನ್ನೂ ಓದಲು ಶುರು ಮಾಡಿದೆ ಎನ್ನುವುದಕ್ಕಿಂತ ಓದುವ ಅಭ್ಯಾಸವನ್ನು ಹೆತ್ತವರು ಮಾಡಿಸಿದರು. ನನ್ನ ಮೊದಲ ಓದು ಡಿಸ್ನಿ ರಾಜಕುಮಾರಿಯರ ಕಥೆಗಳಿಂದ ಶುರುವಾಯ್ತು. ನಿಧಾನವಾಗಿ ಇಷ್ಟದ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಓದಲು ಶುರು ಮಾಡಿದೆ. ಸುಧಾಮೂರ್ತಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿರುವೆ. ಹಾಗೆ ಜಾರೋನಿಮೋ, ಮ್ಯಾಜಿಕ್ ಟ್ರೀ, ಡೇವಿಡ್ ವಿಲಿಯಮ್ಸ್, ಎನಿಡ್ ಬ್ಲಿಯಟನ್, ರೊಲ್ ಧಾಲ್ ಪುಸ್ತಕಗಳು, ಮಹಿಳಾ ಸಾಧಕಿಯರ ರೆಬೆಲ್ ಗರ್ಲ್ ಸಿರೀಸ್, ವಿಮೆನ್ ಸೈಂಟಿಸ್ಟ್ಸ್ ಆಫ್ ಇಂಡಿಯಾ, ಗರ್ಲ್ಸ್ ಹೂ ರಾಕ್ ದಿ ವರ್ಲ್ಡ್, ಕೆಮಿಸ್ಟ್ರಿ ಫಾರ್ ಬ್ರೇಕ್ಫಾಸ್ಟ್, ಗ್ರೀನ್ ಹುಮೋರ್ ಜೊತೆಗೆ ವಿಜ್ಞಾನದ ಎನ್ಸೈಕ್ಲೊಪೀಡಿಯ, ಆಟೊಮಿಕ್ ಹ್ಯಾಬಿಟ್ ನಂತಹ ಸೆಲ್ಫ್ ಹೆಲ್ಪ್ ಪುಸ್ತಕಗಳು. ಹೀಗೆ ನನ್ನ ಓದು ವಿಸ್ತರವಾಗುತ್ತಾ ಹೋಗಿದೆ. ತೀರಾ ಇತ್ತೀಚೆಗೆ ಗ್ರೀಕ್ ಮೈಥಾಲಜಿ ಪುಸ್ತಕ ಕೂಡ ಆಸಕ್ತಿಯಿಂದ ಓದುತ್ತಿರುವೆ.
-ಅನನ್ಯ, ಮೂಕನಹಳ್ಳಿ
ನಾನು ನಾಲ್ಕನೇ ತರಗತಿ ವಿದ್ಯಾರ್ಥಿ. ನಮ್ಮೂರಿನ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಓದುತ್ತೇನೆ. ದಿ ಸಿಂಗಿಂಗ್‌ ಡಾಂಕಿ ಅನ್ನುವ ಪುಸ್ತಕ ಓದಿರುವೆ. ಅದು ಭಾರಿ ಖುಷಿ ಕೊಟ್ಟಿತು. ಕತ್ತೆ ಅಂತ ಬೈಯ್ಯುವುದು ಮಾತ್ರ ಗೊತ್ತಿತ್ತು. ಹಾಡುವ ಕತ್ತೆ ಅಂದಾಗ ಸಹಜವಾಗಿಯೇ ಕುತೂಹಲ ಹುಟ್ಟಿತು. ಗ್ರಂಥಾಲಯದಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಯ ಪುಸ್ತಕಗಳು ಸಿಗುತ್ತವೆ. ರಸ್ಕಿನ್ ಬರೆದ ಮಕ್ಕಳ‌ ಕಥೆಗಳು ಇಷ್ಟ. ಪುಸ್ತಕಗಳೊಂದಿಗೆ ದಿನಪತ್ರಿಕೆ, ವಾರಪತ್ರಿಕೆಗಳನ್ನೂ ಓದುತ್ತೇನೆ.
-ಕುಮಾರಸ್ವಾಮಿ, ಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.