
ಮಂಗಳೂರಿನ ರಿತುಪರ್ಣ ಪ್ರತಿಭೆ ಮತ್ತು ಪರಿಶ್ರಮದಿಂದ ವಾರ್ಷಿಕ ₹ 72.5 ಲಕ್ಷ ವೇತನದ ಉದ್ಯೋಗವನ್ನು ವಿಶ್ವದ ಪ್ರತಿಷ್ಠಿತ ಕಂಪನಿಯಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಈ ಪ್ರೇರಣಾದಾಯಕ ಕಥನ ನಿಮ್ಮ ಓದಿಗಾಗಿ..
‘ಸೀನಿಯರ್‌ಗಳು ಇಂಟರ್ನ್‌ಷಿಪ್‌ಗಾಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದರು. ನನಗೂ ಇಂಟರ್ನ್‌ಷಿಪ್ ಮಾಡುವ ತುಡಿತ ಹುಟ್ಟಿತು. ಆಗ ನಾನಿನ್ನೂ ಮೂರನೇ ಸೆಮಿಸ್ಟರ್‌ನಲ್ಲಿದ್ದೆ. ಆನ್‌ಲೈನ್‌ನಲ್ಲಿ ತಡಕಾಡಿ, ಹಲವಾರು ಕಂಪನಿಗಳಿಗೆ ಇಂಟರ್ನ್‌ಷಿಪ್‌ಗೆ ಅವಕಾಶ ಕೋರಿ ಮೇಲ್ ಮಾಡುತ್ತಿದ್ದೆ. ಇಮೇಲ್ ತೆರೆದಾಗಲೆಲ್ಲ ಅರ್ಜಿ ತಿರಸ್ಕೃತ ಉತ್ತರಗಳೇ ದಪ್ಪಕ್ಷರಗಳಲ್ಲಿ ಕಾಣುತ್ತಿದ್ದವು. ಇಮೇಲ್ ನೋಡುವುದನ್ನೇ ನಿಲ್ಲಿಸಿದೆ. ಕೆಲ ದಿನ ಬಿಟ್ಟು ಮತ್ತೆ ಪರಿಶೀಲಿಸಿದಾಗ ಅಮೆರಿಕದ ರೋಲ್ಸ್ ರಾಯ್ಸ್ ಕಂಪನಿಯ ಮೇಲ್‌ವೊಂದು ನನಗಾಗಿ ಕಾಯುತ್ತಿತ್ತು. ಅದೃಷ್ಟದ ಅನ್ವೇಷಣೆಗೆ ಮುನ್ನುಡಿ ಬರೆದ ದಿನವದು...’
–ಅಮೆರಿಕದ ಟೆಕ್ಸಾಸ್‌ನಲ್ಲಿರುವ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಜೆಟ್ ಎಂಜಿನ್ ಕಂಪನಿಯಲ್ಲಿ ₹72.5 ಲಕ್ಷ ವಾರ್ಷಿಕ ವೇತನದ ಉದ್ಯೋಗಕ್ಕೆ ನೇಮಕಗೊಂಡಿರುವ ಮಂಗಳೂರಿನ ಎಂಜಿನಿಯರ್ ರಿತುಪರ್ಣ ಕೆ.ಎಸ್. ಅವರ ಮಾತುಗಳಿವು.
ವೈದ್ಯೆಯಾಗಬೇಕೆಂದು ಕನಸು ಹೊತ್ತ ಯುವತಿ, ಅನಿವಾರ್ಯತೆಯನ್ನು ಒಪ್ಪಿಕೊಂಡು ಎಂಜಿನಿಯರಿಂಗ್ ಸೇರಿ, ಕಠಿಣ ಪರಿಶ್ರಮದಿಂದ ಸವಾಲುಗಳನ್ನೇ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡವರು. ಅವರು ಕಂಪನಿ ನೀಡಿದ ಟಾಸ್ಕ್‌ಗಳನ್ನು ಪೂರ್ಣಗೊಳಿಸುತ್ತಲೇ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡು, ದಣಿವರಿಯದೆ ಹೊಣೆಗಾರಿಕೆಯನ್ನು ನಿರ್ವಹಿಸಿದರು.
‘ನಾನು ಚಿಕ್ಕಂದಿನಿಂದಲೇ ಡಾಕ್ಟರ್ ಆಗಬೇಕೆಂದು ಕನವರಿಸುತ್ತಿದ್ದೆ. ದ್ವಿತೀಯ ಪಿಯುಸಿವರೆಗೂ ಬಿಳಿ ಏಪ್ರಾನ್, ಕೊರಳಲ್ಲಿ ಸೆಥೋಸ್ಕೋಪ್ ಹಾಕಿಕೊಳ್ಳುವ ಕನಸು ತುಂಬಿಕೊಂಡಿದ್ದೆ. ಆಗ, ಕೋವಿಡ್ ದುರಿತ ಕಾಲ. ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರೂ, ನೀಟ್ ಫಲಿತಾಂಶ ಬಂದಾಗ ನಿರಾಶೆ ಆಯಿತು. ಸರ್ಕಾರಿ ಕೋಟಾದಲ್ಲಿ ಸೀಟ್ ಸಿಗಲಿಲ್ಲ. ಖಾಸಗಿಯಾಗಿ ಸೀಟ್ ಪಡೆದುಕೊಂಡು ಹೋಗಬಾರೆದೆಂದು ತೀರ್ಮಾನಿಸಿದೆ. ಅಪ್ಪ–ಅಮ್ಮನ ಸಲಹೆಯಂತೆ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೊಟಿಕ್ಸ್ ಆ್ಯಂಡ್ ಅಟೊಮೇಷನ್ ಓದಲು ಸೇರಿಕೊಂಡೆ..’ ಎನ್ನುತ್ತಾರೆ ರಿತುಪರ್ಣ.
ಇಷ್ಟವಿಲ್ಲದ ಎಂಜಿನಿಯರಿಂಗ್ ಕೋರ್ಸ್ ಸೇರಿಕೊಂಡಿದ್ದ ರಿತುಪರ್ಣರಿಗೆ ತರಗತಿಗೆ ಹಾಜರಾಗಲು ಮನಸ್ಸಾಗುತ್ತಿರಲಿಲ್ಲ. ಇನ್ನಷ್ಟು ಶ್ರಮ ಹಾಕಿದ್ದರೆ ವೈದ್ಯಕೀಯ ಸೀಟ್ ಪಡೆಯಬಹುದಿತ್ತು ಎಂಬ ಕೊರಗು ಕಡಿಮೆ ಆಗಿರಲಿಲ್ಲ. ಅಂತಹ ಗಳಿಗೆಯಲ್ಲಿ ಮನೋಬಲ ಅವರ ಕೈಹಿಡಿದು ಮುನ್ನಡೆಸಿತು. ವಾಸ್ತವಕ್ಕೆ ಬಂದು ಅಭ್ಯಾಸದೊಂದಿಗೆ ಅನ್ವೇಷಣೆಯೆಡೆಗೆ ಗಮನ ಕೇಂದ್ರೀಕರಿಸಿದರು.
ಪಠ್ಯ ಚಟುವಟಿಕೆಯ ಭಾಗವಾಗಿ ರಿತುಪರ್ಣ ಸಹಪಾಠಿಗಳೊಡಗೂಡಿ ಅಭಿವೃದ್ಧಿಪಡಿಸಿದ ಅಡಿಕೆ ಔಷಧ ಸಿಂಪರಣೆ ಮತ್ತು ಅಡಿಕೆ ಗೊನೆ ಕೊಯ್ಯುವ ಯಂತ್ರದ ಪ್ರಾತ್ಯಕ್ಷಿಕೆಯು 2022ರಲ್ಲಿ ಗೋವಾದಲ್ಲಿ ನಡೆದ ಐಎನ್‌ಇಎಕ್ಸ್ ಇಂಟರ್‌ನ್ಯಾಷನಲ್ ಎಕ್ಸ್‌ಪೊದ ಅಂತಿಮ ಸ್ಪರ್ಧೆಯಲ್ಲಿ ಒಂದು ಸ್ವರ್ಣ, ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.
ಇದೇ ವೇಳೆ, ಮಂಗಳೂರು ನಗರದ ಜ್ವಲಂತ ಸಮಸ್ಯೆಗಳ ಅಧ್ಯಯನಕ್ಕೆ ಅಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೇರೆ ಬೇರೆ ಎಂಜಿನಿಯರಿಂಗ್ ಕಾಲೇಜುಗಳ 20 ಆಯ್ದ ವಿದ್ಯಾರ್ಥಿಗಳ ತಂಡ ರಚಿಸಿದ್ದರು. 2024ರಲ್ಲಿ ರಚನೆಯಾಗಿದ್ದ ತಂಡದಲ್ಲಿ ರಿತುಪರ್ಣ ಕೂಡ ಒಬ್ಬರಾಗಿದ್ದರು. ಮನೆ–ಮನೆ ಕಸ ಕೊಂಡೊಯ್ಯುವ ಸಮಸ್ಯೆಗೆ ಪರಿಹಾರವಾಗಿ, ಕಸ ವಾಹನದ ಚಲನೆಯನ್ನು ಗುರುತಿಸುವ ಆ್ಯಪ್‌ವೊಂದನ್ನು ಅವರು ತಮ್ಮ ಸ್ನೇಹಿತರೊಡಗೂಡಿ ಅಭಿವೃದ್ಧಿಪಡಿಸಿದರು.
ಹೀಗೆ, ಪಠ್ಯದೊಂದಿಗೆ ಪ್ರಾಜೆಕ್ಟ್‌ಗಳ ಮೇಲೆ ಗಮನ ಕೇಂದ್ರೀಕರಿಸಿದ್ದ ರಿತುಪರ್ಣ, ಮೂರನೇ ಸೆಮಿಸ್ಟರ್‌ನಲ್ಲಿರುವಾಗಲೇ ಇಂಟರ್ನ್‌ಷಿಪ್ ಆರಂಭಿಸಿದರು.
‘ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದು ನಿಜವಾದ ಕನಸು ಎಂಬ ಅಬ್ದುಲ್ ಕಲಾಂ ಅವರ ಪ್ರೇರಣೆಯ ನುಡಿಯಂತೆ, ಬಾನೆತ್ತರದ ಗುರಿಗಳಲ್ಲೇ ದೃಷ್ಟಿ ನೆಟ್ಟಿತ್ತು. ರೋಲ್ಸ್ ರಾಯ್ಸ್ ಕಂಪನಿಯಿಂದ ಮೇಲ್ ಬಂದಿತ್ತು. ‘ಇಂಟರ್ನ್‌ಷಿಪ್ ಮಾಡಲು ನಿಮಗೆ ಅರ್ಹತೆ ಇದೆಯೇ’ ಎಂಬ ಅರ್ಥ ಕೊಡುವಂತಿತ್ತು. ಅದು ನನ್ನ ಆತ್ಮಾಭಿಮಾನವನ್ನು ಕೆಣಕಿತು. ಯಾವುದೇ ರೀತಿಯ ಟಾಸ್ಕ್ ಕೊಟ್ಟರೂ ಸ್ವೀಕರಿಸಬಲ್ಲೆನೆಂಬ ವಿಶ್ವಾಸದೊಂದಿಗೆ ಪ್ರತಿಕ್ರಿಯಿಸಿದೆ..’
‘ನಿರೀಕ್ಷೆ ಹುಸಿಯಾಗಲಿಲ್ಲ. ಸುಮಾರು 25 ದಿನಗಳ ನಂತರ ಟಾಸ್ಕ್‌ನೊಂದಿಗೆ ಕಂಪನಿಯಿಂದ ಮರು ಮೇಲ್ ಬಂದಿತು. ಟಾಸ್ಕ್ ಪೂರ್ಣಗೊಳಿಸಲು ನಾಲ್ಕು ವಾರಗಳನ್ನು ನಿಗದಿ ಪಡಿಸಲಾಗಿತ್ತು. ಆದರೆ, ನಾನು ಎರಡು ವಾರದಲ್ಲಿ ಅದನ್ನು ಪೂರ್ಣಗೊಳಿಸಿದೆ. ಒಂದರ ಬೆನ್ನಿಗೆ ಇನ್ನೊಂದರಂತೆ ಕಂಪನಿ ನೀಡಿದ ಆರು ಟಾಸ್ಕ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಮೇಲೆ, ರೋಲ್ಸ್ ರಾಯ್ಸ್‌ನಲ್ಲಿ ಇಂಟರ್ನ್‌ಷಿಪ್‌ಗೆ ಅರ್ಹತೆ ಪಡೆದುಕೊಳ್ಳಲು ಸಾಧ್ಯವಾಯಿತು. ಮೂರು ತಿಂಗಳು ನಿರಂತರ ಟಾಸ್ಕ್‌ಗಳು, ಎರಡು ತಿಂಗಳ ಇಂಟರ್ನ್‌ಷಿಪ್‌ನಲ್ಲಿ ನಾನು ಕಲಿತಿದ್ದು ಅಗಾಧ’ ಎನ್ನುವಾಗ ರಿತುಪರ್ಣ ಮಾತಿನಲ್ಲಿ ಸಂತೃಪ್ತಿ ಇತ್ತು.
‘ಇಂಟರ್ನ್‌ಷಿಪ್ ಮುಗಿಸಿದ ಮೇಲೆ ಮೂರ್ನಾಲ್ಕು ಸುತ್ತಿನಲ್ಲಿ ಸಂದರ್ಶನ ನಡೆದವು. ಎಲ್ಲವೂ ನಡೆದಿದ್ದು ಆನ್‌ಲೈನ್‌ನಲ್ಲೇ. ಕಬ್ಬಿಣದ ಕಡಲೆಯಂತಹ ಟಾಸ್ಕ್ ನಿಭಾಯಿಸಿದ ಕಾರಣಕ್ಕೆ ಸಂದರ್ಶನ ಅಷ್ಟೊಂದು ಕಷ್ಟ ಅನ್ನಿಸಲಿಲ್ಲ. ಇದಾಗಿ ಕೆಲವೇ ದಿನಗಳಲ್ಲಿ ವಾರ್ಷಿಕ ₹39.58 ಲಕ್ಷ ಪ್ಯಾಕೇಜ್‌ನ ನೇಮಕಾತಿ ಆದೇಶ ಬಂತು. ಇಲ್ಲಿಂದ ಇನ್ನೊಂದು ಸವಾಲು ಎದುರಾಯಿತು. ನೇಮಕಗೊಂಡ ಮೇಲೆ ಆನ್‌ಲೈನ್ ತರಬೇತಿ ಆರಂಭವಾಯಿತು. ಅಮೆರಿಕದ ಸಮಯಕ್ಕೆ ಅನುಗುಣವಾದ ತರಬೇತಿ ಅದು. ಇಲ್ಲಿನ ಸಮಯ ರಾತ್ರಿ 12ಕ್ಕೆ ಶುರುವಾಗುವ ತರಬೇತಿ ಬೆಳಿಗ್ಗೆ 6.30ಕ್ಕೆ ಮುಕ್ತಾಯವಾಗುತ್ತಿತ್ತು. ನಿದ್ದೆಯಿಲ್ಲದೆ ನಿತ್ರಾಣಗೊಳ್ಳುವ ಪರಿಸ್ಥಿತಿ ಬಂತು. ಎಲ್ಲವನ್ನೂ ನಿಭಾಯಿಸುವ ಬಲ ಕೊಟ್ಟಿದ್ದು ಅಪ್ಪ–ಅಮ್ಮನ ಕಕ್ಕುಲಾತಿ’ ಎಂದು ಧನ್ಯತಾಭಾವದಿಂದ ಹೇಳುತ್ತಾರೆ.
ಇಂಟರ್ನ್‌ಷಿಪ್ ಹಾಗೂ ತರಬೇತಿ ವೇಳೆ ರಿತುಪರ್ಣ ಪರಿಣಾಮಕಾರಿಯಾಗಿದ್ದರು. ಇದನ್ನು ಗಮನಿಸಿದ ಕಂಪನಿ ಪ್ಯಾಕೇಜ್ ಮೊತ್ತವನ್ನು ವಾರ್ಷಿಕ ₹72.5 ಲಕ್ಷಕ್ಕೆ ಹೆಚ್ಚಿಸಿತು. ಪಾಲಕರ ಮನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿಸಬಾರದೆಂಬ ಸದುದ್ದೇಶದಿಂದ ಇಂಟರ್ನ್‌ಷಿಪ್‌ಗೆ ಅವಕಾಶ ಸಿಗುವವರೆಗೂ, ಎಲ್ಲ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿದರು. ನಂತರ ಮಗಳ ಸಾಧನೆ ಕಂಡ ಪಾಲಕರ ಸಂತೋಷಕ್ಕೆ ಪಾರವೇ ಇಲ್ಲ.
ಸ್ವದೇಶದಲ್ಲಿ ಆರು ತಿಂಗಳ ಇಂಟರ್ನ್‌ಷಿಪ್ ಪೂರ್ಣಗೊಳಿಸಿ, ಉದ್ಯೋಗ ಸೇರಲು ಬರುವ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಕುಡ್ಲದ ಈ ಕುವರಿ ಮಂಗಳೂರಿನಲ್ಲಿ ಸೀನಿಯರ್ ಕೆಮಿಸ್ಟ್ ಆಗಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೋದೂರು ಗ್ರಾಮದ ಸರೇಶ್ ಕೆ.ಎನ್ ಮತ್ತು ಗೀತಾ ಸರೇಶ್ ದಂಪತಿಯ ಪುತ್ರಿ.
ತುಂಬಾ ಸಲ ಬದುಕಿನಲ್ಲಿ ಅಂದುಕೊಂಡಂತೆ ನಡೆಯುವುದಿಲ್ಲ. ಬಯಸಿದ್ದು ಒಂದು, ಆಗುವುದು ಮತ್ತೊಂದು. ಆದರೆ, ರಿತುಪರ್ಣ ಆಗಬಯಸಿದ್ದು ವೈದ್ಯೆ, ಆಗಿದ್ದು ಎಂಜಿನಿಯರ್. ಆದರೂ ಅವರ ಸಮರ್ಪಣಾ ಮನೋಭಾವ ಯಶಸ್ಸಿನ ತುತ್ತತುದಿಗೆ ತಲುಪಿಸಿದೆ. ಇಷ್ಟವಿಲ್ಲದನ್ನು, ಇಷ್ಟವಾಗಿಸಿಕೊಂಡಿದ್ದರ ಫಲ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.