
ವೆಂಕಟ್‌ರಾಮನ್ ಕೆ. ಅವರ ತಾರಸಿ ತೋಟದ ಪಕ್ಷಿನೋಟ
ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.
ದಟ್ಟವಾಗಿ ಆವರಿಸಿರುವ ಗಿಡ-ಬಳ್ಳಿಗಳ ನಡುವೆ ಅಲ್ಲಲ್ಲಿ ತಲೆಎತ್ತಿ ನಿಂತಿರುವ ಮರಗಳು, ಕಾಯಿ ಬಿಟ್ಟಿರುವ ಹಣ್ಣಿನ ಗಿಡಗಳು, ಎತ್ತರಕ್ಕೆ ಬೆಳೆದಿರುವ ಕಬ್ಬಿನಜಲ್ಲೆ, ಗೊನೆಯ ಭಾರದಿಂದ ಬಾಗಿರುವ ಬಾಳೆಗಿಡ, ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವ ದುಂಬಿಗಳು, ಜೇನು ಹುಳುಗಳ ಝೇಂಕಾರ, ಮರದಕೊಂಬೆಯಲ್ಲಿ ಕುಳಿತಿರುವ ಜೋಡಿ ಗುಬ್ಬಿಗಳ ಚಿಲಿಪಿಲಿ, ಮೂಗನ್ನು ಅರಳಿಸುವ ಮಲ್ಲಿಗೆ ಸುಗಂಧ, ಕೆಸುವಿನ ಎಲೆ ಮೇಲೆ ಜಾರುತ್ತಿರುವ ಮುತ್ತಿನಂಥ ನೀರ ಹನಿಗಳು, ಬಳ್ಳಿಗಳ ಛಾವಣಿಯನ್ನು ಸೀಳಿಕೊಂಡು ಬಂದು ಚಿತ್ತಾರ ಮೂಡಿಸುವ ಸಂಜೆ ಸೂರ್ಯನ ಕಿರಣಗಳು...
ಬೆಂಗಳೂರಿನ ಶ್ರೀರಾಮಪುರದಲ್ಲಿರುವ ತಮ್ಮ ಕಚೇರಿ ಕಟ್ಟಡದ ನಾಲ್ಕನೇ ಮಹಡಿಯ ತಾರಸಿಯ ಸಣ್ಣ ಜಾಗದಲ್ಲಿ ಉದ್ಯಮಿ ವೆಂಕಟ್‌ರಾಮನ್ ಕೆ. ಆಗಾ ಅವರು ಇಂಥ ತೋಟವನ್ನು ನಿರ್ಮಾಣ ಮಾಡಿದ್ದಾರೆ!
ಶ್ರೀರಾಮಪುರ ಮೆಟ್ರೊ ನಿಲ್ದಾಣದಲ್ಲಿ ನಿಂತು ನೋಡಿದರೆ ಈ ಕಟ್ಟಡದ ಮೇಲೆ ದಟ್ಟ ಹಸಿರು ಗೋಚರಿಸುತ್ತದೆ. ಮಲೆನಾಡಿನ ಸಸ್ಯವೈವಿಧ್ಯ ಹಾಗೂ ವಾತಾವರಣವನ್ನು ನಿರ್ಮಿಸುವ ಅವರ ಕನಸು ಸಾಕರಗೊಂಡಿದ್ದು ತಾರಸಿ ತೋಟದ ಮೂಲಕ.
ಈ ತೋಟದಲ್ಲಿ ಹೂ, ಹಣ್ಣು, ತರಕಾರಿ ಸೇರಿ ನೂರಕ್ಕೂ ಹೆಚ್ಚು ವಿವಿಧ ಸಸಿ, ಬಳ್ಳಿಗಳು, ಮರಗಳಿವೆ. ಕಾಫಿ, ಕರಿಮೆಣಸು ಮುಂತಾದ ಮಲೆನಾಡಿನ ಪ್ರಮುಖ ಬೆಳೆಗಳಿವೆ. ಕುಂಡಗಳ ಬದಲಿಗೆ ತಾರಸಿ ಮೇಲೆ ಮಣ್ಣು ತುಂಬಿ ತೋಟ ನಿರ್ಮಿಸಿರುವುದು ವಿಶೇಷ. ‘ಇಲ್ಲಿ ಕೆಲ ಹೊತ್ತು ವಿರಮಿಸಿದರೆ ಕೆಲಸದ ಒತ್ತಡವೆಲ್ಲ ನೀಗಿ ಮನಸು ಹಗುರಾಗುತ್ತದೆ’ ಎನ್ನುತ್ತಾರೆ ವೆಂಕಟ್.
ಐಐಎಂ ಬಾಂಬೆಯಿಂದ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದಿರುವ ವೆಂಕಟ್‌ಗೆ, ಮಲೆನಾಡು ಎಂದರೆ ವಿಶೇಷ ಪ್ರೀತಿ. ಹೀಗಾಗಿ ತಮ್ಮ ಕಟ್ಟಡದಲ್ಲಿ ಪುಟ್ಟ ಮಲೆನಾಡನ್ನು ಸೃಷ್ಟಿಸಬೇಕೆಂಬ ಅವರ ಕನಸು ಸಾಧ್ಯವಾಗಿದ್ದು 2020ರಲ್ಲಿ. ಈ ತೋಟ ನಿರ್ಮಾಣದ ಹಿಂದೆ ಇರುವುದು ತಾಯಿ ಮೇಲಿನ ಪ್ರೀತಿ. ಅವರ ನೆನಪುಗಳು ತೋಟದ ಮೂಲಕ ಹಸಿರಾಗಿವೆ.
‘ಅಮ್ಮನಿಗೆ ಪ್ರಕೃತಿಯೆಂದರೆ ಅಚ್ಚುಮೆಚ್ಚು. 50 ವರ್ಷ ಹಳೆಯ ನಮ್ಮ ಮನೆಯಲ್ಲಿ ಕೆಲವು ಸಸಿಗಳನ್ನು ಕುಂಡಗಳಲ್ಲಿಟ್ಟುಕೊಂಡು ಪೋಷಿಸಿದ್ದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾನು ಆ ಕೆಲಸ ಮುಂದುವರಿಸಿದೆ. ಕುಂಡಗಳ ಬದಲಿಗೆ ಡ್ರಮ್‌ಗಳಲ್ಲಿ ನುಗ್ಗೆ, ಸೀಬೆ, ಕರಿಬೇವು, ದಾಳಿಂಬೆ ಗಿಡಗಳನ್ನು ನೆಟ್ಟೆ. ಅವು ಸಮೃದ್ಧವಾಗಿ ಬೆಳೆದವು. ಆ ಮನೆಯನ್ನು ಒಡೆದು ಹೊಸ ಕಟ್ಟಡ ಕಟ್ಟುವಾಗ ತಾರಸಿಯಲ್ಲಿ ಮಲೆನಾಡಿನಂಥ ವಾತಾವರಣವನ್ನು ಸೃಷ್ಟಿಸಬೇಕು ಎಂದುಕೊಂಡಿದ್ದೆ. ನಾನಂದುಕೊಂಡದ್ದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಈಗ ತೋಟ ಬೆಳೆದಿದೆ’ ಎನ್ನುತ್ತಾರೆ ವೆಂಕಟ್.
ತಾರಸಿಯ ಮೇಲೆ ಮಣ್ಣು ಹಾಕಿ ಅದರಲ್ಲಿ ತೋಟ ನಿರ್ಮಿಸಬೇಕು ಎಂದು ಎಂಜಿನಿಯರ್‌ಗೆ ಹೇಳಿದಾಗ ‘ಕಷ್ಟ’ ಎಂದಿದ್ದರಂತೆ. ಮಣ್ಣು, ಗಿಡಗಳ ಭಾರದಿಂದ ತಾರಸಿ ಕುಸಿಯಬಹುದು, ನೀರು ಸೋರಿಕೆ ಆಗಬಹುದು ಎಂದು ಎಚ್ಚರಿಸಿದ್ದರಂತೆ. ತೋಟ ಮಾಡಲೇಬೇಕು ಎಂದು ತೀರ್ಮಾನಿಸಿದ್ದ ವೆಂಕಟ್, ತಜ್ಞರ ಅಭಿಪ್ರಾಯ ಪಡೆದರು. ಅಲ್ಲದೆ, ಬೇರೆ ದೇಶಗಳ ತಾರಸಿ ತೋಟಗಳ ಬಗ್ಗೆ ಅಧ್ಯಯನ ಮಾಡಿದರು. ಜೊತೆಗೆ ತಮ್ಮ ಎಂಜಿನಿಯರಿಂಗ್ ಅನುಭವ ಬಳಸಿಕೊಂಡರು. ತೋಟ ನಿರ್ಮಾಣಕ್ಕೆ ತಕ್ಕಂತೆ ಕ್ಷಮತೆಯುಳ್ಳ ಕಟ್ಟಡ ನಿರ್ಮಿಸಿ, ಅದಕ್ಕೆ ತಕ್ಕಂತೆ ತಾರಸಿಯನ್ನೂ ವಿನ್ಯಾಸ ಮಾಡಿಸಿದರು.
ಮಣ್ಣಿಗೆ ಕೊಕೊಪಿಟ್ ಬೆರೆಸಿ 9 ಅಡಿ ದಪ್ಪಕ್ಕೆ ಹಾಸಿ ಅದರಲ್ಲಿ ಗಿಡಗಳನ್ನು ಹಾಕಿದರು. 2020ರಲ್ಲಿ ತೋಟ ನಿರ್ಮಾಣ ಆರಂಭವಾಯಿತು. ಕೋವಿಡ್ ಲಾಕ್‌ಡೌನ್‌ನಿಂದಾಗಿ ತೋಟ ನಿರ್ಮಾಣಕ್ಕೆ, ಸಸಿಗಳ ಪೋಷಣೆಗೆ ಹೆಚ್ಚಿನ ಸಮಯ ಸಿಕ್ಕಿತು. ಮಲೆನಾಡು ಅನಿಸಬೇಕು. ತೋಟದಲ್ಲಿ ಕುಳಿತರೆ ಪರಿಮಳ ಬರಬೇಕು ಎಂದು ಕಾಫಿ, ಏಲಕ್ಕಿ ಬಾಳೆ, ಕೆಸುವು, ಮಲ್ಲಿಗೆ, ಕರಿಮೆಣಸು, ಮುಂತಾದವುಗಳನ್ನು ಹಾಕಿದ್ದಾರೆ. ಇವುಗಳ ಜೊತೆಗೆ ಸಪೋಟ, ದಾಳಿಂಬೆ, ಸೀತಾಫಲ, ಹಿಪ್ಪುನೇರಳೆ, ಚೆರಿ, ಡ್ರ್ಯಾಗನ್ ಫ್ರೂಟ್, ಅಂಜೂರ, ಬೆಣ್ಣೆಹಣ್ಣು, ನೆಲ್ಲಿ, ಅವರೆಬಳ್ಳಿ, ಹೇರಳೆಕಾಯಿ, ನಿಂಬೆಹಣ್ಣು, ಕಬ್ಬು, ಬನ್ನಿಮರ, ಜಾಜಿ, ಪಾರಿಜಾತ, ತೇಜಪತ್ರೆ, ಆಡುಸೋಗೆ, ಮಧುನಾಶಿನಿ, ಲಾವಂಚ, ಅಮೃತಬಳ್ಳಿ, ಸಂಪಿಗೆ, ದೊಡ್ಡಪತ್ರೆ, ವೆನಿಲಾ, ವೀಳ್ಯದೆಲೆ, ಶುಂಠಿ, ಸುವರ್ಣಗೆಡ್ಡೆ ಸೇರಿ ನೂರಕ್ಕೂ ಅಧಿಕ ವಿಧದ ಗಿಡ–ಮರಗಳಿವೆ.
ಈ ಬಾರಿ ಎರಡು ಕೆ.ಜಿಯಷ್ಟು ಕಾಫಿ ಬೀಜ ಹಾಗೂ ನೆಲ್ಲಿ, 15 ಕೆ.ಜಿಯಷ್ಟು ಅವರೆಕಾಯಿ ಸಿಕ್ಕಿದೆ. ಮೂರು ವರ್ಷಗಳಿಂದ ತಾರಸಿಯಲ್ಲಿ ಬೆಳೆದ ಕಬ್ಬನ್ನೇ ಸಂಕ್ರಾಂತಿ ಹಬ್ಬಕ್ಕೆ ಬಳಸುತ್ತಿದ್ದಾರೆ. ತಾಯಿಯ ನೆನಪಿಗಾಗಿ ಅವರು ಬೆಳೆದ ನಿಂಬೆಗಿಡವೂ ತಾರಸಿಯಲ್ಲಿದೆ. ವೈವಿಧ್ಯ ಗಿಡಗಳ ಆಯ್ಕೆ ವೆಂಕಟ್ ಪತ್ನಿಯದ್ದು.
ನಾನು ತಾರಸಿ ತೋಟದಲ್ಲಿ ಸ್ವಲ್ಪ ಕಾಲ ಕಳೆದು ಹೊರಡುವಾಗ ಮನಸ್ಸು ಮಲೆನಾಡು ತೊರೆದು ಬರುವಂತೆ ಭಾಸವಾಯಿತು.
ನೀರು ಸೋರಿಕೆಯಾಗದಂತೆ ತಾರಸಿಯನ್ನು ವಿನ್ಯಾಸ ಮಾಡಲಾಗಿದೆ. ಬೇರುಗಳು ಒಳಹೊಕ್ಕು ತಾರಸಿ ಬಿರುಕು ಬಿಡದಂತೆ ರಬ್ಬರ್ ಹಾಸಿಗೆ ಹಾಕಿ ಅದರ ಮೇಲೆ ಮಣ್ಣು ತುಂಬಲಾಗಿದೆ. ಮಳೆ ನೀರು ನಿಲ್ಲದ ಹಾಗೆ ರೂಪಿಸಲಾಗಿದೆ. ಮಳೆ ನೀರು ಸಂಗ್ರಹವಾಗಿ ಮರುಬಳಕೆಯಾಗುತ್ತದೆ. ಕೃತಕವಾಗಿ ಮಳೆ ಬರಿಸುವ ವ್ಯವಸ್ಥೆಯೂ ಇದ್ದು, ಅದರ ಶೇಕಡ 80 ರಷ್ಟು ನೀರು ಪುನರ್ ಬಳಕೆಗೆ ಸಿಗುತ್ತದೆ. ಹೆಚ್ಚೆಂದರೆ ದಿನಕ್ಕೆ 200 ಲೀಟರ್ ನೀರು ಬೇಕು.
ಎಲ್ಲವೂ ನೈಸರ್ಗಿಕವಾಗಿಯೇ ಇದೆ ಎನ್ನುವಂತೆ ರೂಪುಗೊಂಡಿರುವುದರಿಂದ ನಿರ್ವಹಣೆ ವೆಚ್ಚವಿಲ್ಲ. ದಿನಕ್ಕೆ ಹೆಚ್ಚೆಂದರೆ 40-50 ನಿಮಿಷ ಮೀಸಲಿಡುತ್ತಾರೆ. ಮನೆಯ ಹಸಿಕಸ ಗೊಬ್ಬರವಾಗಿ ಗಿಡಗಳ ಬುಡ ಸೇರುತ್ತದೆ. ವರ್ಷಕ್ಕೊಮ್ಮೆ ಸೆಗಣಿ ಗೊಬ್ಬರ ಬೇಕು. ಉದುರಿದ ಎಲೆಗಳು ಮಣ್ಣಿನಲ್ಲೇ ಹೂತು ಫಲವತ್ತತೆ ಹೆಚ್ಚಿಸುತ್ತವೆ. ಕುಂಡಗಳಲ್ಲಿ ಇರಿಸಿದರೆ ಎಲೆಗಳ ವಿಲೇವಾರಿ ಮಾಡಬೇಕು. ಇಲ್ಲಿ ಎಲ್ಲವೂ ನೈಸರ್ಗಿಕವಾಗಿಯೇ ನಡೆಯುತ್ತದೆ. ಭಾರಿ ಗಾಳಿ ಮಳೆಗೂ ಜಗ್ಗದೆ ತೋಟ ಗಟ್ಟಿಯಾಗಿ ನಿಂತಿದೆ.
‘ಖರ್ಚು, ತಾರಸಿ ಸೋರಿಕೆ ಬಗ್ಗೆಯೇ ಬಹುತೇಕರು ಕೇಳುತ್ತಾರೆ. ಇದರ ಹಿಂದಿನ ಪರಿಶ್ರಮ, ಹಸಿರಿನಿಂದ ಆಗುವ ಲಾಭದ ಬಗ್ಗೆ ಯಾರಿಗೂ ಉತ್ಸಾಹವಿಲ್ಲ. ಇದರ ನಿರ್ಮಾಣಕ್ಕೆ ₹6 ಲಕ್ಷ ಖರ್ಚಾಗಿದೆ. ನಿರ್ವಹಣೆ ವೆಚ್ಚ ತೀರಾ ಕಡಿಮೆ. ಇಂತಹ ಕೆಲಸಕ್ಕೆ ಗಿಡಗಳ ಮೇಲೆ ಪ್ರೀತಿ ಇರಬೇಕು. ಮನೆಯ ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡುವ ಬದಲು ಇಂತಹದ್ದು ಮಾಡಿದರೆ, ಮನಸ್ಸಿಗೂ ದೇಹಕ್ಕೂ ಒಳ್ಳೆಯದು. ಸಣ್ಣ ಪ್ರಯತ್ನಗಳೇ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡುತ್ತದೆ. ದೊಡ್ಡ ಕಟ್ಟಡಗಳಲ್ಲಿಯೂ ಇದನ್ನು ಪ್ರಯೋಗ ಮಾಡಬಹುದು’ ಎಂದರು ವೆಂಕಟ್.
ಮೆಟ್ರೊದಲ್ಲಿ ಪ್ರಯಾಣಿಸುವಾಗ ತೋಟ ಕಂಡ ಹಲವರು ಭೇಟಿ ನೀಡಿದ್ದಾರೆ. ಇಂತಹದೇ ತೋಟ ನಿರ್ಮಾಣದ ಉತ್ಸಾಹ ತೋರಿದ್ದಾರೆ. ಬಂದವರಿಗೆಲ್ಲಾ ಧೈರ್ಯ ತುಂಬಿ ಪ್ರೋತ್ಸಾಹ ನೀಡುತ್ತಿದ್ದಾರೆ.
‘ಇದರ ನಿರ್ವಹಣೆ ಯಾವತ್ತೂ ಹೊರೆ ಅನಿಸಿಲ್ಲ. ಪ್ರೀತಿಯಿಂದ ಮಾಡುತ್ತಿರುವುದರಿಂದ ಮನಸ್ಸಿಗೆ ಖುಷಿಯನ್ನೇ ನೀಡಿದೆ. ತೆರಿಗೆಯಲ್ಲಿ ಕಡಿತ, ಪ್ರೋತ್ಸಾಹ ಧನ ಮುಂತಾದ ವಿನಾಯಿತಿ ನೀಡಿದರೆ ಬೇರೆಯವರಿಗೂ ಇದು ಪ್ರೇರಣೆಯಾಗಬಹುದು’ ಎನ್ನುವುದು ವೆಂಕಟ್ ಅವರ ಅಭಿಪ್ರಾಯ.
ಇಲ್ಲಿ ವಿಜ್ಞಾನ ಮನಃಶಾಸ್ತ್ರ ಹಾಗೂ ಅಧ್ಯಾತ್ಮಗಳ ಮಿಳಿತ ಇದೆ. ತೋಟದೊಳಗೆ ನಡೆದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ತೂಗುಮಂಚದಲ್ಲಿ ಕುಳಿತರೆ ಗೆಲುವಾಗುತ್ತದೆ. ತೋಟದೊಳಗೆ ತಾಪಮಾನವೂ ಕಡಿಮೆ ಇರುತ್ತದೆ. ನಗರದ ಗಡಿಬಿಡಿ ಮರೆಯಾಗಿ ಹಸಿರು ಆವರಿಸುತ್ತದೆವೆಂಕಟ್ ಮಾಲೀಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.