ADVERTISEMENT

ಬುದ್ಧ ಬದುಕಿದ್ದಾನೆ!

ರವೀಂದ್ರ ಭಟ್ಟ
Published 13 ಸೆಪ್ಟೆಂಬರ್ 2025, 23:34 IST
Last Updated 13 ಸೆಪ್ಟೆಂಬರ್ 2025, 23:34 IST

ಎಐ ಚಿತ್ರ:ಈಶ್ವರ ಬಡಿಗೇರ

ಎಐ ಚಿತ್ರ:ಈಶ್ವರ ಬಡಿಗೇರ

ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಜೀವನ, ಸಂದೇಶ ಮತ್ತು ಬೋಧನೆಗಳ ಮೂಲಕ. ನಮ್ಮ ನೆಲದ ಗೌತಮ ಬುದ್ಧ, ಮಹಾತ್ಮಾ ಗಾಂಧಿ ಅವರಲ್ಲಿ ಸೇರಿದ್ದಾರೆ. ಇವರಿಬ್ಬರ ಸಾರವನ್ನು ಹೀರಿಕೊಂಡಂತೆ ಟಿಬೆಟನ್ನರ ಧರ್ಮಗುರು ದಲೈಲಾಮಾ ಬದುಕಿದ್ದಾರೆ.

ADVERTISEMENT

ಅಹಿಂಸಾ ಪರಮೋಧರ್ಮ ಎಂದು ಸಾರಿದ ಭಗವಾನ್ ಬುದ್ಧ ಇನ್ನೂ ಬದುಕಿದ್ದಾನೆ!. ಜೊತೆಗೆ ಮಹಾತ್ಮಾ ಗಾಂಧಿಯೂ ಇದ್ದಾರೆ. ನಿಮಗೆ ಈ ಬಗ್ಗೆ ಕೊಂಚವಾದರೂ ಅನುಮಾನವಿದ್ದರೆ ಹಿಮಾಚಲಪ್ರದೇಶದ ಧರ್ಮಶಾಲಾಕ್ಕೆ ಹೋಗಿ ಬನ್ನಿ. ಅದು ದೂರವಾಯ್ತು ಎಂದರೆ ಮೈಸೂರು ಜಿಲ್ಲೆಯ ಬೈಲುಕುಪ್ಪೆಗೆ ಹೋದರೂ ಆದೀತು. ಕೊಳ್ಳೇಗಾಲ, ಹುಣಸೂರು, ಮುಂಡಗೋಡು ಅಥವಾ ಭಾರತದಲ್ಲಿ ಇರುವ ಯಾವುದೇ ಟಿಬೆಟ್ ನಿರಾಶ್ರಿತರ ಶಿಬಿರಕ್ಕೆ ಹೋದರೂ ನಿಮಗೆ ಬುದ್ಧ ಸಿಗುತ್ತಾನೆ. ಜೊತೆಗೆ ಗಾಂಧಿ ಕೂಡ. ಯಾಕೆಂದರೆ ಅಲ್ಲಿ ದಲೈಲಾಮಾ ಭಾವಚಿತ್ರದ ಜೊತೆಗೆ ಗಾಂಧೀಜಿ ಭಾವಚಿತ್ರವೂ ಇವೆ. ಧರ್ಮಶಾಲಾಕ್ಕೆ ಯಾಕೆ ಹೋಗಬೇಕು ಎಂದರೆ ನಿರಾಶ್ರಿತ ಟಿಬೆಟನ್ ಸರ್ಕಾರ ಇರುವುದು ಅಲ್ಲಿ. ಅಲ್ಲೇ ಪಕ್ಕದಲ್ಲಿ ಮೆಕ್ಲಾಡ್ ಗಂಜ್ ಎಂಬ ಪುಟ್ಟ ಪಟ್ಟಣವಿದೆ. ಅಲ್ಲಿ ಟಿಬೆಟನ್ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅಲ್ಲಿರುವ ಪ್ರತಿಯೊಬ್ಬ ಟಿಬೆಟನ್ ಹೃದಯದಲ್ಲಿಯೂ ಬುದ್ಧ ಬದುಕಿದ್ದಾನೆ.

1959ರಲ್ಲಿ ದೇಶಭ್ರಷ್ಟರಾಗಿ ಇಲ್ಲಿಗೆ ಬಂದ ಟಿಬೆಟನ್ನರು ಇನ್ನೂ ಶಾಂತಿಯುತ ಹೋರಾಟವನ್ನೇ ನೆಚ್ಚಿಕೊಂಡಿದ್ದಾರೆ. ಮೆಕ್ಲಾಡ್ ಗಂಜ್ ಅನತಿ ದೂರದಲ್ಲಿಯೇ ಕಾಶ್ಮೀರವಿದೆ. ಅಲ್ಲಿ ನಿರಂತರ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಭಾರತದ ಈಶಾನ್ಯಭಾಗದಲ್ಲಿ ಸಾಕಷ್ಟು ಉಗ್ರಗಾಮಿ ಚಟುವಟಿಕೆಗಳೂ ನಡೆಯುತ್ತಿವೆ. ಹಿಮಾಚಲಪ್ರದೇಶದ ಸುತ್ತಮುತ್ತ ಬೇಕಾದಷ್ಟು ಭಯೋತ್ಪಾದಕ ಕೃತ್ಯಗಳಿಗೆ ಕಡಿಮೆ ಏನಿಲ್ಲ. ಸಶಸ್ತ್ರ ನಕ್ಸಲೀಯ ಚಟುವಟಿಕೆಗಳಿಗೂ ನಮ್ಮ ದೇಶದಲ್ಲಿ ಕೊರತೆ ಇಲ್ಲ. ಮಾವೋವಾದಿಗಳೂ ಸಕ್ರಿಯರಾಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕೋಮುಘರ್ಷಣೆಗಳೂ ನಡೆಯುತ್ತಿವೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ನಾವು ಯುದ್ಧ ಸಾರಿಯೂ ಆಗಿದೆ. ರಷ್ಯಾ ಉಕ್ರೇನ್ ಯುದ್ಧ ನಡೆಯುತ್ತಲೇ ಇದೆ. ಗಾಜಾದ ಮೇಲೆ ದಾಳಿ ಇನ್ನೂ ನಿಂತಿಲ್ಲ. ಪಕ್ಕದ ನೇಪಾಳದಲ್ಲಿ ಸಂಘರ್ಷಕ್ಕೆ ಸರ್ಕಾರವೇ ಪತನವಾಗಿದೆ. ಶ್ರೀಲಂಕಾದಲ್ಲಿಯೂ ಹೀಗೆಯೇ ಆಗಿದೆ. ಆದರೆ ಧರ್ಮಶಾಲಾ ಮತ್ತು ಭಾರತದ ಇತರ ಭಾಗಗಳಲ್ಲಿ ನೆಲೆ ನಿಂತಿರುವ ಟಿಬೆಟನ್ನರ ಹೃದಯದಲ್ಲಿ ಇನ್ನೂ ಹಿಂಸೆಯ ಕಿಚ್ಚು ಹತ್ತಿಲ್ಲ. ಕಳೆದ 65 ವರ್ಷಗಳಿಂದಲೂ ಅವರು ಸ್ವಾತಂತ್ರ್ಯಕ್ಕಾಗಿ ಶಾಂತಿಯುತ ಹೋರಾಟವನ್ನೇ ನಡೆಸಿದ್ದಾರೆ.

ಟಿಬೆಟ್ ದೇಶವನ್ನು ಚೀನಾ ಆಕ್ರಮಿಸಿಕೊಂಡ ನಂತರ ಒಂದು ಅಂದಾಜಿನ ಪ್ರಕಾರ ಅಲ್ಲಿ 12 ಲಕ್ಷಕ್ಕೂ ಅಧಿಕ ಟಿಬೆಟನ್ನರು ಹತರಾಗಿದ್ದಾರೆ. 6 ಸಾವಿರಕ್ಕೂ ಹೆಚ್ಚು ಬೌದ್ಧ ದೇವಾಲಯಗಳನ್ನು ನಾಶ ಮಾಡಲಾಗಿದೆ. ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಿದ್ದಕ್ಕೆ ಸಾವಿರಾರು ಟಿಬೆಟನ್ನರು ಸೆರೆವಾಸದಲ್ಲಿದ್ದಾರೆ. ಟಿಬೆಟ್ ಪ್ರದೇಶ ಈಗ ಚೀನಾದ ಸೇನಾ ನೆಲೆಯಾಗಿ ಬದಲಾಗಿದೆ. ಟಿಬೆಟ್ ಪ್ರದೇಶದಲ್ಲಿ ಟಿಬೆಟನ್ನರಿಗಿಂತ ಚೀನಿಯರೇ ಹೆಚ್ಚಾಗಿದ್ದಾರೆ. ಟಿಬೆಟ್ ಸಂಸ್ಕೃತಿ, ಸಂಪ್ರದಾಯ ಪಾಲನೆಗೆ ನಿರ್ಬಂಧ ಹೇರಲಾಗಿದೆ. ಟಿಬೆಟ್ ಭಾಷೆ ಕಲಿಯುವುದಕ್ಕೂ ಅಲ್ಲಿ ಅವಕಾಶ ನೀಡುತ್ತಿಲ್ಲ. ಶಿಕ್ಷಣವೆಲ್ಲ ಚೀನಿ ಭಾಷೆಯಲ್ಲಿಯೇ ನಡೆಯುತ್ತಿದೆ. ಪ್ರತಿ ದಿನ ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ತಮ್ಮ ಸಂಬಂಧಿಗಳು ಸೆರೆವಾಸಿಗಳಾಗುತ್ತಿರುವುದರ ಬಗ್ಗೆ ಮತ್ತು ಹತ್ಯೆಯಾಗುತ್ತಿರುವುದರ ಬಗ್ಗೆ ಭಾರತದಲ್ಲಿ ನಿರಾಶ್ರಿತರಾಗಿರುವ ಟಿಬೆಟನ್ನರು ಪ್ರತಿದಿನ ಕೇಳುತ್ತಲೇ ಇದ್ದಾರೆ. ಲಾಮಾಗಳು ನಾಪತ್ತೆಯಾಗುತ್ತಿದ್ದಾರೆ. ಮಾಂಕ್ ಗಳು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದಾರೆ. ಬೌದ್ಧ ಧರ್ಮದ ಪ್ರಕಾರ ಆತ್ಮಾಹುತಿ ಅತ್ಯಂತ ಪ್ರಬಲ ಅಸ್ತ್ರ. ಅದನ್ನು ಪ್ರಯೋಗಿಸಿ ನೂರಾರು ಸನ್ಯಾಸಿಗಳು ಹುತಾತ್ಮರಾಗಿ
ದ್ದಾರೆ. ಆದರೂ ಇಲ್ಲಿನ ಟಿಬೆಟನ್ನರ ಹೃದಯದಲ್ಲಿ ಇನ್ನೂ ಅಹಿಂಸೆಯ ಜಲವೇ ಒಸರುತ್ತಿದೆ. ಅದರ ಮೂಲಸೆಲೆ ಬುದ್ಧನಲ್ಲದೆ ಬೇರೆ ಯಾರೂ ಅಲ್ಲ.

ಮೆಕ್ಲಾಡ್ ಗಂಜ್‌ನಲ್ಲಿರುವ ಗ್ಯುಟೊ ಬುದ್ಧ ವಿಹಾರ

‘ಅಹಿಂಸಾ ಮಾರ್ಗದಲ್ಲಿ ನೀವು ನಡೆಯುತ್ತಿರುವ ಹಿಂದಿನ ಶಕ್ತಿ ಯಾವುದು?’ ಎಂದು ಟಿಬೆಟ್ ಯೂತ್ ಕಾಂಗ್ರೆಸ್‌ನ ಜಂಟಿ ಕಾರ್ಯದರ್ಶಿ ತ್ಸೆರಿಂಗ್ ಚಾಂಫೆಲ್ ಅವರನ್ನು ಕೇಳಿದರೆ ಅವರು ‘ನಮ್ಮ ಅಹಿಂಸಾ ಹೋರಾಟದ ಹಿಂದಿನ ಶಕ್ತಿ ಬುದ್ಧ, ದಲೈಲಾಮಾ ಮತ್ತು ಗಾಂಧೀಜಿ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ‘ಅಹಿಂಸಾ ಮಾರ್ಗದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವಾಗ ನಮಗೆ ಸಿಗುವುದಿಲ್ಲ ಎಂಬ ಅಪನಂಬಿಕೆ ಯಾಕೆ? ಸ್ವಾತಂತ್ರ್ಯ ಹೋರಾಟ ಆರಂಭವಾಗಿ ಸುಮಾರು 90 ವರ್ಷದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ಹೋರಾಟ ಆರಂಭವಾಗಿ ಈಗ 65 ವರ್ಷಗಳಾಗಿವೆ. ನಮ್ಮ ಹೋರಾಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

ಇದೇ ಅಭಿಪ್ರಾಯವನ್ನು ನಿರಾಶ್ರಿತ ಸರ್ಕಾರದ ಅಧ್ಯಕ್ಷ, ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಕೂಡಾ ಅನುಮೋದಿಸುತ್ತಾರೆ. ‘ಚೀನಾದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಅರಿವು ಮೂಡಿಸುವುದು ಹಾಗೂ ಆ ಮೂಲಕ ಸಂಪೂರ್ಣ ಸ್ವರಾಜ್ಯ ಪಡೆಯುವುದು ನಮ್ಮ ಗುರಿ’ ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ಸುಮಾರು 1.20 ಲಕ್ಷ ಟಿಬೆಟನ್ನರಿದ್ದಾರೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕರ್ನಾಟಕದಲ್ಲಿಯೇ ಇದ್ದಾರೆ. ಇಲ್ಲಿರುವ ಎಲ್ಲ ಟಿಬೆಟನ್ನರ ಯೋಗಕ್ಷೇಮವನ್ನೂ ಮೆಕ್ಲಾಡ್ ಗಂಜ್‌ನಲ್ಲಿರುವ ನಿರಾಶ್ರಿತರ ಸರ್ಕಾರವೇ ನೋಡಿಕೊಳ್ಳುತ್ತಿದೆ. 5 ವರ್ಷಕ್ಕೊಮ್ಮೆ ಚುನಾವಣೆ ನಡೆದು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಅಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಸಚಿವ ಸಂಪುಟವನ್ನು ನೇಮಕ ಮಾಡುತ್ತಾರೆ. ಈಗ ಅಧ್ಯಕ್ಷರಾದವರು ಕರ್ನಾಟಕದವರು. ನಿರಾಶ್ರಿತ ಟಿಬೆಟನ್ ಸರ್ಕಾರದ ಶಿಕ್ಷಣ ಸಚಿವರು, ಮಾಹಿತಿ ಸಚಿವರು, ಶಾಸಕಾಂಗದ ಉಪ ಸಭಾಪತಿಗಳು ಎಲ್ಲರೂ ಕರ್ನಾಟಕದಿಂದ ಹೋದವರೇ ಆಗಿದ್ದಾರೆ. ಈಗಿನ
ಅಧ್ಯಕ್ಷರನ್ನು ಭೇಟಿ ಮಾಡಿದ ತಕ್ಷಣವೇ ಅವರು ‘ನಾನು ಕನ್ನಡ ನಾಡಿನ ಮಣ್ಣಿನ ಮಗ’ ಎಂದೇ ಸ್ವಾಗತಿಸಿದರು.

ನವದೆಹಲಿ, ಕಠ್ಮಂಡು, ಲಂಡನ್, ಜಿನಿವಾ, ನ್ಯೂಯಾರ್ಕ್, ಮಾಸ್ಕೊ, ಬ್ರಸೆಲ್ಸ್, ಕ್ಯಾನ್ಬೆರಾ, ಟೋಕಿಯೋ, ಪ್ರಿಟೋರಿಯಾ, ತೈಪೆ ಮುಂತಾದ ಕಡೆ ರಾಜತಾಂತ್ರಿಕ ಕಚೇರಿಗಳನ್ನು ಹೊಂದಿರುವ ಟಿಬೆಟನ್ನರು ಟಿಬೆಟ್ ಸ್ವಾತಂತ್ರ್ಯಕ್ಕಾಗಿ ಪ್ರಯತ್ನವನ್ನು ಎಲ್ಲ ಕಡೆಯಿಂದಲೂ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸ್ವಾಯತ್ತ ರಾಷ್ಟ್ರವಾಗಿದ್ದ ಟಿಬೆಟ್ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿತ್ತು. ಆದರೆ 1950ರ ದಶಕದಲ್ಲಿ ಟಿಬೆಟ್ ವಿರುದ್ಧ ಆಕ್ರಮಣ ಆರಂಭಸಿದ ಚೀನಾ 1959ರಲ್ಲಿ ಇಡೀ ಟಿಬೆಟ್ ಪ್ರದೇಶವನ್ನು ತನ್ನ ಗಡಿಗೆ ಸೇರಿಸಿಕೊಂಡಿತು. ಆಗ ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಸೇರಿದಂತೆ ಲಕ್ಷಾಂತರ ಟಿಬೆಟನ್ನರು ನಿರಾಶ್ರಿತರಾಗಿ ಭಾರತವನ್ನು ಪ್ರವೇಶಿಸಿದರು.

ಧರ್ಮಶಾಲಾದ ವಿಹಂಗಮ ನೋಟ

ಟಿಬೆಟನ್ನರು ನಿರಾಶ್ರಿತರಾಗಿ ಭಾರತಕ್ಕೆ ಬಂದು 65 ವರ್ಷಗಳೇ ಕಳೆದು ಹೋಗಿದ್ದರೂ ಭಾರತ ಇನ್ನೂ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಿಲ್ಲ. ಇಲ್ಲಿಯೂ ಅವರ ಬದುಕು ಅತಂತ್ರವೇ ಆಗಿದೆ. ಅವರು ಇಲ್ಲಿ ಆಸ್ತಿ ಹೊಂದುವಂತಿಲ್ಲ. ಬ್ಯಾಂಕ್ ಸಾಲ ದೊರೆಯುವುದು ಕಷ್ಟ. ಭಾರತದ ಯಾವುದೇ ಸರ್ಕಾರಿ ನೌಕರಿ ಸಿಗುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿಯೂ ಕೆಲಸ ಸಿಗುವುದು ಕಷ್ಟ. ಅವರಿಗೆ ಭಾರತದ ಪೌರತ್ವ ಸಿಗುವುದಿಲ್ಲ. ಬಹುತೇಕ ಟಿಬೆಟನ್ ಮಕ್ಕಳು ಟಿಬೆಟನ್ ಶಾಲೆಯಲ್ಲಿಯೇ ಆರಂಭಿಕ ಶಿಕ್ಷಣ ಪೂರೈಸುತ್ತಾರೆ. ಉನ್ನತ ಶಿಕ್ಷಣಕ್ಕೆ ಪರದಾಡಬೇಕಾದ ಸ್ಥಿತಿ ಇದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಅವರನ್ನು ವಿದೇಶಿಗರು ಎಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿ ಉನ್ನತ ಮತ್ತು ವೃತ್ತಿಪರ ಶಿಕ್ಷಣವೂ ಅವರಿಗೆ ಗಗನ ಕುಸುಮವಾಗಿದೆ. ಭಾರತದಲ್ಲಿ ಇರುವ ಟಿಬೆಟನ್ನರು ಕರಕುಶಲ ವ್ಯಾಪಾರ ಮತ್ತು ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಇಲ್ಲಿರುವ ಟಿಬೆಟನ್ನರಿಗೆ ತಮ್ಮದು ಒಂದು ದೇಶ ಇಲ್ಲ. ನಿರ್ದಿಷ್ಟ ಉದ್ಯೋಗ ಇಲ್ಲ. ಆರ್ಥಿಕ ಸ್ವಾತಂತ್ರ್ಯ ಇಲ್ಲ. ‘ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ಮನೆ’ ಎಂಬ ಭಾವ ನಿರಂತರ. ಟಿಬೆಟನ್ನರಿಗೆ ಸಾವಿರಾರು ವರ್ಷಗಳ ಸಂಸ್ಕೃತಿ, ಸಂಪ್ರದಾಯ ಇದೆ. ಸ್ವತಂತ್ರ ಭಾಷೆ ಇದೆ. ಶಿಕ್ಷಣ ಪದ್ಧತಿ ಇದೆ. ವೈದ್ಯಕೀಯ ಪದ್ಧತಿ ಇದೆ. ಸಂಗೀತ, ನೃತ್ಯ ಪ್ರಕಾರಗಳಿವೆ. ಧರ್ಮಶಾಲಾದಲ್ಲಿ ಟಿಬೆಟ್ ವಸ್ತುಸಂಗ್ರಹಾಲಯ ಇದೆ. ಸಂಗೀತ, ನೃತ್ಯ, ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಿದೆ. ಆದರೂ ಸ್ವಾತಂತ್ರ್ಯ ಇಲ್ಲದೇ ಇರುವುದರಿಂದ ಯಾವುದನ್ನೂ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಭಾರತದ ಔದಾರ್ಯದಿಂದ ಇಲ್ಲಿರುವ ಟಿಬೆಟನ್ನರು ಕೊಂಚ ಮಟ್ಟಿಗೆ ಸಮಾಧಾನದಿಂದ ಇದ್ದಾರೆ. ಆದರೆ ಇಲ್ಲಿರುವ ಎಲ್ಲರ ಮನದಲ್ಲಿಯೂ ಸ್ವತಂತ್ರ ಟಿಬೆಟನ್ ಕನಸಿದೆ. ಆ ಕನಸಿನ ನನಸಿಗಾಗಿ ಅವರು ಅನುಸರಿಸುತ್ತಿರುವುದು ಅಹಿಂಸಾ ಮಾರ್ಗ.

ಇನ್ನೊಂದು ಕಾರಣಕ್ಕಾಗಿಯೂ ನಾವು ಟಿಬೆಟನ್ನರ ಕಾಲೋನಿಗೆ ಭೇಟಿ ನೀಡಬೇಕು. 1947ರ ನಂತರ ದೇಶದಲ್ಲಿ ಹುಟ್ಟಿದ ಯಾರಿಗೂ ಕೂಡ ಸ್ವಾತಂತ್ರ್ಯ ಹೋರಾಟದ ಅನುಭವ ಇಲ್ಲ. ಸ್ವಾತಂತ್ರ್ಯದ ಹಸಿವು ಹೇಗಿರುತ್ತದೆ ಎನ್ನುವುದನ್ನು ತಿಳಿಯುವುದಕ್ಕಾದರೂ ನಾವು ಟಿಬೆಟನ್ನರ ಕಾಲೋನಿಗೆ ಹೋಗಬೇಕು. ನೀವೂ ಹೋಗಿ ಬನ್ನಿ. ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಹೋಗಿ.

(ಇಂಡಿಯಾ ಟಿಬೆಟ್ ಸಮನ್ವಯ ಸಮಿತಿಯ ಆಹ್ವಾನದ ಮೇರೆಗೆ ಲೇಖಕರು ಧರ್ಮಶಾಲಾದಲ್ಲಿ ನಡೆದ ಟಿಬೆಟ್ ಪ್ರಜಾಪ್ರಭುತ್ವ 65ನೇ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.