ADVERTISEMENT

ಆರು ಆಕಾಶವಾಣಿ ಕೇಂದ್ರಗಳ ‘ಒಬಿ ಕಿಂಗ್‌’ ಎನ್.ವ್ಹಿ. ರಮೇಶ್

ಪವಿತ್ರಾ ಭಟ್
Published 13 ಫೆಬ್ರುವರಿ 2026, 10:22 IST
Last Updated 13 ಫೆಬ್ರುವರಿ 2026, 10:22 IST
<div class="paragraphs"><p>ಎನ್.ವ್ಹಿ. ರಮೇಶ್</p></div>

ಎನ್.ವ್ಹಿ. ರಮೇಶ್

   
‘ದ.ರಾ. ಬೇಂದ್ರೆಯವರ ಒಡನಾಟದಲ್ಲಿ ನಾಟಕಗಳ ಮೂಲಕ ಆಕಾಶವಾಣಿಯಲ್ಲಿ ಹೊಸತನ್ನೇ ಸೃಷ್ಟಿಸಿದ್ದೆವು. ಕ್ಯಾಸೆಟ್‌ ರೆಕಾರ್ಡರ್ ಮಷಿನ್ ಹೊತ್ತುಕೊಂಡು ಹಳ್ಳಿ ಹಳ್ಳಿಗೆ ಓಡಾಡಿ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಸೆರೆಹಿಡಿದು ಶ್ರೋತೃಗಳಿಗೆ ಕೇಳಿಸುವುದೇ ಸಂಭ್ರಮವಾಗಿತ್ತು. ಹೊರಾಂಗಣ ಧ್ವನಿಮುದ್ರಣವನ್ನು ಹೆಚ್ಚು ಮಾಡುತ್ತಿದ್ದ ಕಾರಣ ನನ್ನನ್ನು ‘ಒಬಿ ಕಿಂಗ್‌’ (Outside Broadcast) ಎಂತಲೇ ಕರೆಯುತ್ತಿದ್ದರು.

ಬಾನುಲಿ ಕೇಂದ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸ‌ಲ್ಲಿಸಿರುವ ಮೈಸೂರಿನ ಎನ್.ವ್ಹಿ. ರಮೇಶ್ ಅವರು. ವಿಶ್ವ ರೇಡಿಯೊ ದಿನದ ‍ಪ್ರಯುಕ್ತ ತಮ್ಮ ನೆನಪು, ಅನುಭವಗಳ ಬುತ್ತಿಯನ್ನು ತೆರೆದಿಟ್ಟರು.

ಇಂದಿಗೂ ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ರೇಡಿಯೊದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 13ರಂದು ‘ವಿಶ್ವ ರೇಡಿಯೊ ದಿನ’ ಆಚರಿಸಲಾಗುತ್ತದೆ.

ADVERTISEMENT

ತನ್ನಿಮಿತ್ತ ರೇಡಿಯೊಗಳಲ್ಲಿ ನಾಟಕ, ನೃತ್ಯ, ವಿಭಿನ್ನ ಧ್ವನಿ ಮೂಲಕ ಕೇಳುಗರಿಗೆ ಹತ್ತಿರವಾದ ಮೈಸೂರಿನ ಎನ್.ವ್ಹಿ. ರಮೇಶ್ ಅವರು ‘ಪ್ರಜಾವಾಣಿ ಡಿಜಿಟಲ್‌’ ಜತೆಗೆ ಆಕಾಶವಾಣಿಯಲ್ಲಿ ಕಳೆದ ದಿನಗಳನ್ನು, ಶ್ರೋತೃಗಳನ್ನು ಸೆಳೆಯಲು ಮಾಡಿದ ಹೊಸ ಪ್ರಯೋಗಗಳ ಬಗೆಗಿನ ನೆನಪುಗಳನ್ನು ಹಂಚಿಕೊಂಡರು.

ಕನ್ನಡದ ವರಕವಿ, ಶಬ್ದಗಾರುಡಿಗ ದ.ರಾ ಬೇಂದ್ರೆ ಒಡನಾಟದಲ್ಲಿದ್ದ ರಮೇಶ್‌ ಅವರು 7ನೇ ವಯಸ್ಸಿಗೇ ಬಾನುಲಿ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಲು ಆರಂಭಿಸಿದ್ದರು. ಕರ್ನಾಟಕದ ಆರು ಕೇಂದ್ರಗಳಾದ ಕಲಬುರಗಿ, ರಾಯಚೂರು, ಬಿಜಾಪುರ (ವಿಜಯಪುರ), ಭದ್ರಾವತಿ, ಮೈಸೂರು, ಮಡಿಕೇರಿಯ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

‘ನಮ್ಮ ತಂದೆಯವರು ಆಕಾಶವಾಣಿಯಲ್ಲಿ 43 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಾನು 7ನೇ ವಯಸ್ಸಿನಿಂದ 63 ವರ್ಷಗಳ ಕಾಲ ರೇಡಿಯೊದಲ್ಲಿ ಕೆಲಸ ಮಾಡಿದ್ದೇನೆ. ಒಟ್ಟು 53 ವರ್ಷಗಳ ಕಾಲ ರೇಡಿಯೊದೊಂದಿಗೆ ಒಡನಾಟವಿತ್ತು. ನಮ್ಮ ತಂದೆ ಹಾಗೂ ನನ್ನ ಅನುಭವ ಸೇರಿದರೆ 96 ವರ್ಷ ರೇಡಿಯೊದಲ್ಲಿ ಕೆಲಸ ಮಾಡಿದ ದಾಖಲೆ ನಮ್ಮ ಕುಟುಂಬಕ್ಕಿದೆ. ರೇಡಿಯೊ ಬಗ್ಗೆ ಮೂರು ‍ಪುಸ್ತಕಗಳನ್ನೂ ಬರೆದಿದ್ದೇನೆ’ ಎಂದಿದ್ದಾರೆ.

‘ಬೇಂದ್ರಯವರ ನಿರ್ದೇಶನದಲ್ಲಿ ‘ವತ್ಸಲಾ’ ಎನ್ನುವ ನಾಟಕದಲ್ಲಿ ಅಭಿಮನ್ಯುವಿನ ಪಾತ್ರಕ್ಕೆ ಧ್ವನಿಯಾಗಿದ್ದೆ. ಆಗೆಲ್ಲ ದ.ರಾ ಬೇಂದ್ರೆಯವರು ಆಗಾಗ ನಮ್ಮ ಮನೆಗೂ ಬರುತ್ತಿದ್ದರು. ಹೀಗಾಗಿ ಅವರೊಂದಿಗೆ ಒಡನಾಟವೂ ಚೆನ್ನಾಗಿತ್ತು. ಬೇಂದ್ರೆಯವರು ಹೇಳಿದ ಜೀವನ ಪಾಠ ಇಂದಿಗೂ ನೆನಪಿದೆ. ‘ಸಾಹಿತಿಯಾದವನು ಅಳವಡಿಸಿಕೊಳ್ಳಲೇಬೇಕಾದ ಮಂತ್ರ ಎಂದರೆ ‘ಬರಿ–ಹರಿ–ಬರಿ’ ಎನ್ನುವುದು. ಒಂದೇ ಬಾರಿಗೆ ಎಲ್ಲವೂ ಸರಿಯಾಗುತ್ತದೆ ಎನ್ನುವುದನ್ನು ಬಿಟ್ಟು ಮತ್ತೆ ಮತ್ತೆ ಬರೆದಾಗ ಮಾತ್ರ ಅದಕ್ಕೊಂದು ಹೊಳಪು ಎನ್ನುತ್ತಿದ್ದರು’ ಎಂದು ರಮೇಶ್ ನೆನಪಿಸಿಕೊಂಡರು.

‘ಸುಮಾರು 500 ನಾಟಕಗಳನ್ನು ನಿರ್ದೇಶನ ಮಾಡಿ, ನಟನೆ ಮಾಡಿದ್ದೇನೆ. ಈ ಮೂಲಕ ಆಕಾಶವಾಣಿಯಲ್ಲಿ ಹೆಚ್ಚು ನಾಟಕಗಳನ್ನು ಜನರಿಗೆ ಕೇಳಿಸಿದ ಖುಷಿ ನನಗಿದೆ. ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯನ್ನು ನಾಟಕ ರೂಪದಲ್ಲಿ ಮಾಡಲಾಗಿತ್ತು. ಇದಕ್ಕಾಗಿ ನಾಯಿಯ ಬೊಗಳುವಿಕೆಯ ಶಬ್ದಕ್ಕಾಗಿ ಪೊಲೀಸ್‌ ನಾಯಿಯ ಮೂಲ ಧ್ವನಿಯನ್ನು ರೆಕಾರ್ಡ್‌ ಮಾಡಿ ನಾಟಕಕ್ಕೆ ಅಳವಡಿಸಲಾಗಿತ್ತು. ಇದು ಜನರನ್ನು ಸೆಳೆಯಲು ಯಶಸ್ವಿಯೂ ಆಯಿತು. ಈ ನಾಟಕ ಒಂದೇ ತಿಂಗಳಲ್ಲಿ 13 ಬಾರಿ ಪ್ರಸಾರಗೊಂಡಿದೆ’ ಎಂದರು.

‘ಇನ್ನೊಂದು ವಿಶೇಷ ಸಂಗತಿಯೆಂದರೆ, ಸಮೇತನಹಳ್ಳಿ ರಾಮರಾಯರ ಶಾಂತಲೆಯ ಬಗೆಗಿನ ನಾಟಕದ ಪ್ರಸ್ತುತಿಯನ್ನು ಸ್ಪೆಷಲ್‌ ಎಫೆಕ್ಟ್‌ ನೀಡುವ ಮೂಲಕ ಪ್ರಸಾರ ಮಾಡಲಾಗಿತ್ತು. ಅದಕ್ಕಾಗಿ ಮೈಸೂರಿನಲ್ಲಿರುವ ಪರಿಣಿತ ಡ್ಯಾನ್ಸರ್‌ಗಳನ್ನು ಸ್ಟುಡಿಯೊಗೆ ಕರೆಸಿ ಶಾಂತಲೆ ಹೇಗೆ ನೃತ್ಯವನ್ನು ಆರಂಭಿಸುತ್ತಾಳೆ, ಹೇಗೆ ಕೊನೆಗೊಳಿಸುತ್ತಾಳೆ, ತಾಳಕ್ಕೆ ತಕ್ಕಂತೆ ಹೇಗೆ ಹೆಜ್ಜೆ ಹಾಕುತ್ತಾಳೆ ಎನ್ನುವುದನ್ನು ರೆಕಾರ್ಡ್‌ ಮಾಡಿಸಿ ಆಡಿಯೊ ಫಿಲ್ಮಂನ ರೀತಿ ಮಾಡಲಾಗಿತ್ತು. ಅದು ಯಶಸ್ವಿಯೂ ಆಯಿತು. ಒಂದು ನಾಟಕ ಅರ್ಧ ಗಂಟೆಯಿಂದ ಒಂದೂವರೆ ಗಂಟೆಯವರೆಗೂ ಪ್ರಸಾರಗೊಳ್ಳುತ್ತಿತ್ತು’ ಎಂದು ವಿವರಿಸಿದರು.

‘ಭದ್ರಾವತಿಯಲ್ಲಿದ್ದಾಗ ಶಾಸ್ತ್ರಿಯ ಸಂಗೀತ ಕುರಿತಾದ ನಾಟಕವನ್ನು ಮಾಡಿದ್ದೆ. ಹಿಂದೂಸ್ಥಾನಿ ಸಂಗೀತದಲ್ಲಿನ ರಾಗಗಳ ಕಾರ್ಯಕ್ರಮವನ್ನು ಮಾಡಿಸಿದ್ದೆ. ಅವೆಲ್ಲವೂ ರೋಮಾಂಚಕ ಕ್ಷಣಗಳು. ಸಂಗೀತ, ನೃತ್ಯದ ಪಟ್ಟುಗಳನ್ನು ರೇಡಿಯೊ ಮೂಲಕ ಪ್ರಸ್ತುತಪಡಿಸಿದ್ದೇನೆ. ಎತ್ತಿನ ಗಾಡಿಗಳ ಸದ್ದು, ಕಪ್ಪೆಗಳು ಕೂಗುವ ಸದ್ದುಗಳನ್ನು ರೆಕಾರ್ಡ್‌ ಮಾಡಿ, ನಾಟಕಗಳಲ್ಲಿ ಅಳವಡಿಸಿ ಸಂದರ್ಭಕ್ಕೆ ತಕ್ಕ ಹಾಗೆ ನೈಜ ಶಬ್ಡವನ್ನು ಶ್ರೋತೃ ಗಳು ಕೇಳುವಂತೆ ಮಾಡುತ್ತಿದ್ದೆ. ಸಂಗೀತ ಕಲಾವಿದರ ಬಳಿ ಭಾವನೆಗಳ ತಕ್ಕಹಾಗೆ ಸೌಂಡ್‌ ರೆಕಾರ್ಡ್‌ ಮಾಡಿಸಿ ನಾಟಕಗಳಲ್ಲಿ ಬಳಸುತ್ತಿದ್ದೆ’ ಎಂದು ತಮ್ಮ ಪ್ರಯೋಗಗಳ ಬುತ್ತಿಯನ್ನು ತೆರೆದಿಟ್ಟರು.

‘ಹೊರಾಂಗಣ ಧ್ವನಿಮುದ್ರಣವನ್ನು ಹೆಚ್ಚು ಮಾಡುತ್ತಿದ್ದ ಕಾರಣ ನಂಗೆ ಓಬಿ ಕಿಂಗ್‌ (Outside Broadcast)ಎಂತಲೇ ಕರೆಯುತ್ತಿದ್ದರು. ಕ್ಯಾಸೆಟ್‌ ರೆಕಾರ್ಡರ್ ಮಷಿನ್ ಹೊತ್ತುಕೊಂಡು ಹಳ್ಳಿ ಹಳ್ಳಿಗೆ ಓಡಾಡಿ ಧ್ವನಿಯನ್ನು ರೆಕಾರ್ಡ್ ಮಾಡಿರುವೆ. ಹದಿಹರೆಯದವರ ಬಗ್ಗೆ, ಅರಣ್ಯ, ಪರಿಸರ, ಆರೋಗ್ಯದ ಬಗ್ಗೆ ಸರಣಿ ಕಾರ್ಯಕ್ರಮಗಳನ್ನು ನೀಡಿದ್ದೇನೆ’ ಎಂದರು,

ಈ ಎಲ್ಲ ಸಂಗತಿಗಳು ನನ್ನ ಜೀವನದಲ್ಲಿ ಮರೆಯಲಾರದವು. ಆಕಾಶವಾಣಿ ಮತ್ತು ನನ್ನ ನಡುವಿನ ಅನುಬಂಧ, ಪದಗಳಿಗೆ ನಿಲುಕದ್ದು. 2011ರಲ್ಲಿ ನಿವೃತ್ತಿಯಾಗಿದ್ದೇನೆ. ಈಗಲೂ ಬರವಣಿಗೆ, ಸಂವಾದ ಸೇರಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ರಮೇಶ್‌ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.