ADVERTISEMENT

ಮೊದಲ ಓದು | ಏಳು ಕೋಣೆಗಳಲ್ಲಡಗಿದ ಕಥಾಗುಚ್ಛ

ಪ್ರಜಾವಾಣಿ ವಿಶೇಷ
Published 5 ಫೆಬ್ರುವರಿ 2022, 20:15 IST
Last Updated 5 ಫೆಬ್ರುವರಿ 2022, 20:15 IST
7 ರೂಮ್ಸ್‌
7 ರೂಮ್ಸ್‌   

7 ರೂಮ್ಸ್‌–ಕಥಾಸಂಕಲನ

ಲೇ: ನಂದಿನಿ ನಾರಾಯಣ್‌(ಸಿಹಿಮೊಗೆ)
ಪ್ರ: ಸ್ನೇಹ ಬುಕ್‌ ಹೌಸ್‌
ಸಂ: 9845031335

ಸುತ್ತಮುತ್ತಲು ನಡೆಯುವ ಘಟನೆಗಳೇ ಹಲವು ಕಥೆಗಾರರಿಗೆ ಕಥೆ ಹೆಣೆಯಲು ಪ್ರೇರಣೆಯಾಗುವುದು ಸಹಜ. ಸಾಗರದಾಚೆ ತಾವು ಅನುಭವಿಸದೇ ಇರುವ, ಕಾಣದೇ ಇರುವ ಘಟನೆಗಳು, ವ್ಯಕ್ತಿಗಳನ್ನು ರಂಗು ರಂಗಾಗಿ ಕಾಲ್ಪನಿಕವಾಗಿ ಸೃಷ್ಟಿಸಿ ಕಥೆ ಹೆಣೆಯುವುದೂ ಕೆಲವರ ಕೈಚಳಕ. ಇಲ್ಲಿ ವಿದುಷಿ ನಂದಿನಿ ನಾರಾಯಣ್‌ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನ ಒಡಲಾಳದ ನೈಜ ಕಥನವನ್ನು ‘7 ರೂಮ್ಸ್‌’ ಮುಖಾಂತರ ತೆರೆದಿಟ್ಟಿದ್ದಾರೆ.

ADVERTISEMENT

ಇದು ನಂದಿನಿ ನಾರಾಯಣ್‌ ಅವರ ಚೊಚ್ಚಲ ಕಥಾಸಂಕಲನ. ಜರ್ಮನಿ ದೇಶದ ಫ್ರಾಂಕ್‌ಫರ್ಟ್‌ ನಗರದ ‘ಮುನ್ಷೆನರ್‌ ಸ್ಟ್ರಾಸ್‌’ನಲ್ಲಿರುವ ಥ್ರಿ ಸ್ಟಾರ್‌ ಹೋಟೆಲ್‌ಗೆ ಬಂದು ನೆಲೆಸಿದಂತ ಅತಿಥಿಗಳು ಬಚ್ಚಿಟ್ಟ ಭಾವನೆಗಳನ್ನು ಬಿಚ್ಚಿಟ್ಟಾಗ ತೆರೆದುಕೊಂಡಿದ್ದು ಈ ‘7 ರೂಮ್ಸ್‌’.

‘ವಿಂಡೋ ಶಾಪಿಂಗ್‌’ನಂತೆ ವಿದೇಶಗಳಿಗೆ ಪ್ರವಾಸ ಕೈಗೊಂಡವರಿಗೆ ಆ ಜಗತ್ತು ಕಾಣುವುದು ಕಿಟಕಿಯ ಒಳಗಿನಿಂದಷ್ಟೆ. ಅದೇ ರೀತಿ ಜರ್ಮನಿಯ ಹಲವು ವಿಷಯಗಳು ಓದುಗರಿಗೆ ಪರಿಚಯವಿದ್ದರೂ, ಅಲ್ಲಿನ ಒಡಲಾಳದ ನೈಜ ಬಣ್ಣವನ್ನು ಲೇಖಕಿ ದಾಖಲಿಸಲು ಪ್ರಯತ್ನಿಸಿದ್ದಾರೆ.

ಲೇಖಕಿಯೇ ಹೇಳುವಂತೆ ‘ಕೆಲವರು ನಗು ನಗುತ್ತಾ...ಕೆಲವರು ಭಾವುಕರಾಗಿ ಜರ್ಮನಿಯಲ್ಲಿ ನೆಲೆಸಿದ ಹೃದಯಗಳು ಹಂಚಿಕೊಂಡ ಜೀವನಕಥೆಗಳೇ ಈ ಕಥಾಸಂಕಲನ’.

ಇಲ್ಲಿ ಕಲ್ಲುಪ್ಪಿನ ಬ್ರೆಡ್‌ನಿಂದ ಹಿಡಿದು ಪ್ರೇಮ ಪರ್ವದವರೆಗೆ ಏಳು ಕೋಣೆಗಳಿದ್ದು (ಅಧ್ಯಾಯಗಳು), ಒಂದೊಂದು ಕೋಣೆಯಲ್ಲೂ ವಿಭಿನ್ನ ಕಥೆಗಳಿವೆ. ಹೋಟೆಲ್‌ ರಿಸೆಪ್ಷನಿಸ್ಟ್‌ ಮಾತುಗಳಲ್ಲೇ ಹಲವು ಕಥೆಗಳು ಸಾಗುತ್ತವೆ. ಪತ್ನಿ, ಮಕ್ಕಳಿಂದ ದೂರವಾಗಿ ‘ಭಿಕ್ಷೆ’ ಬೇಡುವುದನ್ನೂ ಕೆಲಸವಾಗಿ ನೋಡಿದ ಕಪ್ಪು ಕೋಟು ಧರಿಸಿದ್ದ ವ್ಯಕ್ತಿಯಿಂದ ಹಿಡಿದು ಕೆಲ ಪಾತ್ರಗಳು ಓದುಗರಿಗೆ ಹಲವು ಪಾಠ ಕಲಿಸುತ್ತವೆ. ‘ಅಲೆಮಾರಿ ಮಮತೆ’ಯಲ್ಲಿ, ಭಾರತದಲ್ಲಾಗುವಂತೇ ಸಾಗರದಾಚೆಗಿನ ದೇಶಗಳಲ್ಲೂ ಸರ್ಕಾರದ ಯೋಜನೆಗಳು ಹೇಗೆ ದುರುಪಯೋಗವಾಗುತ್ತವೆ ಎನ್ನುವ ಘಟನೆಗಳೂ ಇಲ್ಲಿ ಅಡಕವಾಗಿವೆ. ಪ್ರತಿ ಕಥೆಯ ಆರಂಭಕ್ಕೂ ಮುನ್ನದ ಅಚ್ಚುಕಟ್ಟಾದ ಪೀಠಿಕೆ ಕಥಾಪ್ರವೇಶಕ್ಕೆ ಸೂಕ್ತ ವೇದಿಕೆ ಒದಗಿಸಿದೆ. ಕಥಾಸಂಕಲನ ಓದಿದ ಬಳಿಕ ಕೆಲವು ಜರ್ಮನ್‌ ಪದಗಳೂ ಓದುಗರ ರತ್ನಕೋಶ ಸೇರಿಕೊಳ್ಳುತ್ತವೆ.

ಕಥೆಗಳು ಓದಿಸಿಕೊಂಡು ಹೋದರೂ, ಭಿಕ್ಷೆ–ಬಿಕ್ಷೆಯಾಗಿ, ರಂಬೆ–ರೆಂಬೆಯಾಗಿ, ನೋಡುತ್ತಿದ್ದೆ–ನೀಡುತ್ತಿದ್ದೆಯಾಗಿ, ಸುದ್ದಿ–ಸುದ್ಧಿಯಾಗಿ, ರೂಮ್‌–ರೋಮ್‌ ಆಗಿ... ಹೀಗೆ ಹಲವು ಅಕ್ಷರ ತಪ್ಪುಗಳು ಸರಾಗ ಓದಿಗೆ ಕಿರಿಕಿರಿ ಉಂಟುಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.