ADVERTISEMENT

ಸ್ತ್ರೀವಾದಿ ನೆಲೆಯ ಚಿಂತನೆಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 19:30 IST
Last Updated 8 ಆಗಸ್ಟ್ 2020, 19:30 IST
ಹೊಸ್ತಿಲಾಚೆ ಈಚೆ
ಹೊಸ್ತಿಲಾಚೆ ಈಚೆ   

ಲೇ: ಸಬಿತಾ ಬನ್ನಾಡಿ
ಪ್ರ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪುಟಗಳು: 192, ಬೆಲೆ: ₹ 140

ಲೇಖಕಿ ಸಬಿತಾ ಬನ್ನಾಡಿಯವರು ಸ್ತ್ರೀವಾದಿ ನೆಲೆಯ ಚಿಂತನೆಯಲ್ಲಿ ಬರೆದ ಲೇಖನಗಳ ಗುಚ್ಛವೇ ‘ಹೊಸ್ತಿಲಾಚೆ ಈಚೆ’. ‘ಅಟ್ಟುಣ್ಣುವ ಈ ಪರಿ’ ಲೇಖನದಲ್ಲಿ ಅವರು ಬರೆಯುತ್ತಾರೆ: ‘ಅಡುಗೆಗೂ ಹೆಂಗಸರಿಗೂ ತಳುಕು ಹಾಕಿದವರು ಯಾರೋ? ಈಗಂತೂ ಮಾಸ್ಟರ್‌ಷೆಫ್‌ಗಳ ಕಾಲ. ಲಾಭವಿಲ್ಲದಲ್ಲಿ ಹೆಂಗಸರೂ ಲಾಭವಿರುವಲ್ಲಿ ಗಂಡಸರೂ ಅಡುಗೆ ಮಾಡುತ್ತಾರೆ’. ಕೃತಿಯ ಉದ್ದಕ್ಕೂ ಇಂತಹ ಸೂಕ್ಷ್ಮ ಒಳನೋಟಗಳನ್ನು ಬೀರುತ್ತಾ ಹೋಗುತ್ತಾರೆ ಲೇಖಕಿ. ಗಂಡಿನ ಧಾರ್ಷ್ಟ್ಯವನ್ನು ಗಟ್ಟಿತನದಿಂದ ಪ್ರಶ್ನಿಸುವ ಇಲ್ಲಿನ ಬರಹಗಳು, ಮಹಿಳೆಯು ಇಂದಿನ ದಿನಮಾನದಲ್ಲಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಮುಕ್ತವಾಗಿ ಚರ್ಚಿಸುತ್ತವೆ.

ಕೃತಿಯ ಎರಡನೇ ಭಾಗದಲ್ಲಿ ಸಾಹಿತ್ಯದ ಅನುಸಂಧಾನದ ಮೂಲಕ ಹೆಣ್ಣನ್ನು ಅರಿಯುವ ಯತ್ನ ಮಾಡಲಾಗಿದೆ. ವಚನಕಾರ್ತಿಯರಲ್ಲಿ ದಲಿತ ಸಂವೇದನೆಯನ್ನು ಹುಡುಕುವ ಲೇಖಕಿ, ಅಕ್ಕನ ವಚನಗಳನ್ನು ವಿಶ್ಲೇಷಿಸುತ್ತಾ ಬರೆಯುವುದು ಹೀಗೆ: ‘ದೇಹದ ನಗ್ನತೆ ಅಂಜುವ ವಿಚಾರವೂ ಅಲ್ಲ, ತಡೆದು ನಿಲ್ಲಿಸುವ ಸಾಧನವೂ ಅಲ್ಲ.’ ಸ್ತ್ರೀ ನೋಟದ ಚಿಂತನೆಗಳನ್ನು ದಿಟ್ಟತನದಿಂದ ವಿಸ್ತರಿಸಿದ ಕುರುಹುಗಳಾಗಿ ಇಲ್ಲಿನ ಲೇಖನಗಳು ಗೋಚರಿಸುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.