ADVERTISEMENT

ಮೊದಲ ಓದು: ಅತ್ತ ಇತ್ತ ಸುತ್ತ ಮುತ್ತಲಿನ ಕತೆಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
<div class="paragraphs"><p>ಒಳಚರಂಡಿ ಕತೆಗಳು</p></div>

ಒಳಚರಂಡಿ ಕತೆಗಳು

   

ಕಥಾ ಸಂಕಲನ: ಒಳಚರಂಡಿ

  • ಸಂ: ನಾಗತಿಹಳ್ಳಿ ಚಂದ್ರಶೇಖರ

    ADVERTISEMENT
  • ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

  • ಸಂ: 99005 55255

ಅರೆರೆ.. ಇಂಥವರಿಲ್ಲೇ ಇದ್ರಲ್ಲಪ್ಪ.. ನಮ್ಮ ಓಣಿಯಿಂದಾಚೆ, ಇಂಥವರೊಬ್ಬರು ನಮ್ಮ ಪಕ್ಕದ ಮನೇಲೇ ಇದ್ರು, ಛೆ.. ಛೆ.. ಇದೊಂಚೂರು ನಮ್ಮ ಯೌವ್ವನದ ಕತೆ ಇದ್ದಂತೆಯೇ ಇದೆ ಅಂತನ್ಕೊಂಡು, ಹುಳ್ಳನಗೆ ಬೀರುವಾಗಲೇ ಹುಬ್ಬುಗಂಟಾಗುತ್ತದೆ.. ಕೆಲವೊಮ್ಮೆ ಕಳ್ಳನಗು, ಕೆಲವೊಮ್ಮೆ ಎಲ್ಲೋ ಓದಿದ್ದೆವಲ್ಲ ಈ ಕತೆ ಎಂಬ ಅನುಮಾನದಲ್ಲಿಯೇ ಮತ್ತೆ ಇಡಿಯಾಗಿಯೇ ಓದಿಸಿಕೊಂಡು ಹೋಗುತ್ತವೆ.

ಈ ಹಿಂದೆ, ಪ್ರಜಾವಾಣಿ, ಮಯೂರ ಸೇರಿದಂತೆ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳ ಸಂಕಲನ ಇದು. ಹೊಸ ಓದುಗರಿಗೆ ತಾಜಾ ಓದು ಎಂದೆನಿಸುತ್ತದೆ. ಎಂಟು ಕತೆಗಳು ಅಷ್ಟ ದಿಕ್ಕುಗಳಿಂದಲೂ ನಮ್ಮ ಸಮಾಜದ ಚಲನೆಯನ್ನು ಹಿಡಿದಿಡುತ್ತವೆ. ನಮ್ಮೊಳಗಿನ ಸಣ್ಣತನ, ಸಣ್ಣವರ ಔದಾರ್ಯ, ಭ್ರಷ್ಟಾಚಾರ, ಮಾಧ್ಯಮಗಳ ಮನಸ್ಥಿತಿ, ಲಾಭಕೋರರು.. ಇವರೆಲ್ಲ ಇಲ್ಲೇ ನಮ್ಮ ಸುತ್ತಲೂ ಇರುವ ಪಾತ್ರಗಳೇ ಎನಿಸುತ್ತವೆ.

ಸಿನಿಮಾ, ಮಾಧ್ಯಮ, ಆರೋಗ್ಯ, ಅಭಿಯಾನ ಇತರ ಪ್ರಚಲಿತ ವಿದ್ಯಮಾನಗಳೇ ಕಥೆಯ ಹೂರಣ ಆಗಿರುವುದರಿಂದ ಓದುಗರೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕನೆಕ್ಟ್‌ ಆಗುತ್ತವೆ. ಕತೆಗಳು ಆಯಾ ಕಾಲದ ಕನ್ನಡಿಯಾಗಿರುವಂತೆ, ಇಲ್ಲಿಯ ಕತೆಗಳು ಆಯಾ ಕಾಲಮಾನದ ವಿಡಂಬನೆಯನ್ನು ಹಿಡಿದಿಟ್ಟಿವೆ. ಕೆಲವೊಮ್ಮೆ ಹತಾಶರಾಗುವಂತೆ, ಕೆಲವೊಮ್ಮೆ ರೋಷ ಉಕ್ಕಿಸುವಂತೆ, ಕೆಲವೊಮ್ಮೆ ನಮ್ಮದೇ ಸಣ್ಣತನವನ್ನು ನೋಡಿ, ಸಂಕೋಚ ಪಟ್ಟಂಥ ಭಾವಗಳು, ಇಲ್ಲಿಯ ಕತೆಗಳನ್ನು ಓದಿದಾಗ ಮೂಡುತ್ತವೆ.

ಪ್ರತಿ ಕತೆಯೂ ಈ ಕಾಲಮಾನದ ಜನಮನಸ್ಥಿತಿಯನ್ನು ಬಯಲಿಗೆಳೆಯುತ್ತವೆ. ಕತೆ ಮುಗಿದಾಗ ಓದುಗರಿಂದ ಬರುವ ನಿಡಿದಾದ ಉಸಿರಿನಲ್ಲಿ ಅನಿರೀಕ್ಷಿತ ಅಂತ್ಯದ ಬಗ್ಗೆ ಒಂದು ಪ್ರಶ್ನೆ, ಒಂದು ಚಿಂತನೆ ಎರಡನ್ನೂ ಉಳಿಸಿಹೋಗುತ್ತವೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.