ADVERTISEMENT

ಯಾರು ಗ್ರೇಟ್‌? ಗಂಡನೋ.. ಹೆಂಡತಿಯೋ..: ನರಸಿಂಹಮೂರ್ತಿ, ಸುಮಾ ರಮೇಶ್ ಏನಂತಾರೆ?

ಬನ್ನಿ ಮೆಲ್ಲೋಣ ನಗೆಗಡುಬು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 23:30 IST
Last Updated 22 ಆಗಸ್ಟ್ 2025, 23:30 IST
   

ಯಾರು ಗ್ರೇಟ್‌? ಗಂಡನೋ ಹೆಂಡತಿಯೋ?

- ಎಂ.ಎಸ್.ನರಸಿಂಹಮೂರ್ತಿ

ಸೂರ್ಯ ದೊಡ್ಡವ್ನೋ ಚಂದ್ರ ದೊಡ್ಡವ್ನೋ ಅಂತ ಯಾರೂ ಕೇಳೊಲ್ಲ. ಜಗತ್ತನ್ನು ನಿಯಂತ್ರಿಸೋ ಸೂರ್ಯನೇ ದೊಡ್ಡವ್ನು ಅಂತ ಎಲ್ರಿಗೂ ಗೊತ್ತು. ಹಾಗೇ ನಾಡನ್ನು, ಕುಟುಂಬವನ್ನು ನಿಯಂತ್ರಿಸ್ಕೊಂಡು ಬಂದಿರೋದೇ ಗಂಡ್ಸು. ಈ ಪ್ರಪಂಚ ಸೃಷ್ಟಿ ಆಗಿದ್ದಾದರೂ ಹೇಗೆ? ಬೈಬಲ್ ಪ್ರಕಾರ, ಮೊದಲು ಜಗತ್ತಿನಲ್ಲಿ ಗಂಡಸು ಸೃಷ್ಟಿಯಾದ. ಸಿಂಗಲ್ ಆಗಿದ್ದ ಅವನಿಗೆ ಬೋರ್ ಹೊಡೆಯೋಕೆ ಶುರುವಾಯ್ತು. ಜಗಳ ಆಡೋಕೆ ಯಾರೂ ಇಲ್ಲ ಅಂತ ಅವನು ದೇವರಿಗೆ ಹೇಳ್ದ. ಆಗ ಅವನ್ದೇ ಒಂದು ರಿಬ್ (ಪಕ್ಕೆಲುಬು) ಮುರಿದು, ಆ ರಿಬ್ಬಿನಿಂದ ಹೆಣ್ಣನ್ನು ಸೃಷ್ಟಿ ಮಾಡಿದ ದೇವರು. ಅಲ್ಲಿಗೆ, ಹುಟ್ತಾನೇ ಗಂಡನ ರಿಬ್‍ನ ಮುರ್ಕೊಂಡು ಬಂದವ್ಳು ಹೆಂಡತಿ.

ADVERTISEMENT

ಯಾರಾದ್ರೂ ಕೇಳ್ಕೊಂಡು ಮನೆಗೆ ಬರೋವ್ರು, ‘ಇದ್ದಾರಮ್ಮಾ ಯಜಮಾನ್ರು?’ ಅಂತಾನೇ ಕೇಳೋದು. ‘ಇದ್ದಾರಾ ಯಜಮಾನಿ’ ಅಂತ ಕೇಳೋದಿಲ್ಲ. ಯಾವುದೇ ಮುಖ್ಯ ನಿರ್ಧಾರ ತಗೊಬೇಕಿದ್ರೂ ‘ನಮ್ಮ ಯಜಮಾನ್ರನ್ನ ಕೇಳಿ ಹೇಳ್ತೀನಿ’ ಅಂತಾಳೆ ಹೆಣ್ಣು. ಪ್ಲ್ಯಾನಿಂಗ್ ಆಫೀಸರ್ ಹೆಣ್ಣೇ ಆದ್ರೂ ಎಕ್ಸಿಕ್ಯುಟಿಂಗ್ ಆಫೀಸರ್ ಗಂಡೇ ಆಗಿರ್ತಾನೆ.

ಕೈಲಾಸಂ ಕಾಲದ ಒಂದು ಜೋಕು

ಒಂದು ಮನೇಲಿ ವಿಪರೀತ ಜಗಳ ನಡೀತಾ ಇರುತ್ತೆ. ಆಗ ಇಬ್ರು ಅಧಿಕಾರಿಗಳು ಬಂದು ಬಾಗಿಲು ತಟ್ತಾರೆ. ಗಂಡ-ಹೆಂಡ್ತಿ ಜಗಳ ನಿಲ್ಸಿ ಬಾಗಿಲು ತೆಗೀತಾರೆ. ‘ಯಾರು ಬೇಕಿತ್ತು?’ ಎಂದಾಗ, ‘ನಾವು ಸೆನ್ಸಸ್‍ನವರು, ಮನೆ ಯಜಮಾನ್ರು ಯಾರು?’ ಅಂತ ಕೇಳ್ತಾರೆ. ಅದಕ್ಕೆ ಗಂಡ ‘ಆ ವಿಷಯಕ್ಕೇ ಈಗ ಜಗಳ ಆಗ್ತಾ ಇರೋದು. ಅರ್ಧ ಗಂಟೆ ಬಿಟ್ಟು ಬನ್ನಿ’ ಅಂತಾನೆ!

ಮಗುವನ್ನು ಹೆರುವವಳು ಹೆಣ್ಣು ನಿಜ. ಆದರೆ, ಡೆಲಿವರಿ ಆದಾಗ ಆಸ್ಪತ್ರೆಯ ಬಿಲ್ ಕಟ್ಟೋರು ಯಾರು? ಗಂಡಸೇ ತಾನೆ? ಗಂಡು ತಲೆ ಆದರೆ ಹೆಣ್ಣು ಕತ್ತು; ತಲೆಯನ್ನು ಬೇಕಾದ ಕಡೆ ತಿರುಗಿಸೋದು ಕತ್ತು ಅಂತ ಜಂಬ ಹೊಡೆಯೋವರಿದ್ದಾರೆ. ಗಂಡು ಅಂಬೋ ತಲೆಯೇ ಸಿಗದಿದ್ದರೆ ಕತ್ತು ಏನು ಮಾಡಲು ಸಾಧ್ಯ? 

ದುಬಾರಿ ಸೀರೆ, ಚಿನ್ನಾಭರಣ ತೊಟ್ಟು ನಲಿಯುವವಳು ಹೆಣ್ಣು. ಆದರೆ ಅವನ್ನೆಲ್ಲ ಧಾರಾಳವಾಗಿ ಕೊಡಿಸುವವನು ಗಂಡು! ಜಯಲಲಿತಾ ಬಳಿ 10 ಸಹಸ್ರ ಚಪ್ಪಲಿಗಳು ಇದ್ದವಂತೆ. ಇದ್ದದ್ದು ಮಾತ್ರ ಎರಡು ಕಾಲು! 

ಹೆಣ ಹೊರೋ ಕೆಲಸದಿಂದ ಹಿಡಿದು ಗಣಿ ತೋಡೊ ಕೆಲಸದವರೆಗೂ ಗಂಡೇ ಶಕ್ತಿ ಮೀರಿ ದುಡೀತಾನೆ. ಅವನಿಲ್ಲ ಅಂದರೆ ಚಿನ್ನದ ಅದಿರು ಆಚೆ ಬರೋಲ್ಲ. ಹೆಣ್ಣು ಬಂಗಾರ ತೊಟ್ಟು ಮೆರೆಯೋಕೆ ಆಗೋಲ್ಲ.

ಮನೇಲಿ ಒಂದು ಜಿರಲೆ ಕಂಡ್ರೆ ಹೆಣ್ಣು ಹೆದರಿ ಆಚೆಗೆ ಓಡಿಹೋಗ್ತಾಳೆ. ಆಗ ಗಂಡಸೇ ಬರಬೇಕು, ಜಿರಲೇನ ಹೊಡಿಬೇಕು. ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಅಂತ ಹಾಡು ಬರೆದಿದ್ದೂ ಗಂಡಸೇ! ಗಂಡಸಿನ ಶಕ್ತಿಯಾಗಲಿ, ಅವನ ಧೈರ್ಯವಾಗಲಿ ವಿಪರೀತ. ಹುಲಿಯ ಚರ್ಮದ ಮೇಲೆ ಮಲಗುವವನು ಗಂಡು ಸನ್ಯಾಸಿ. ಹುಲಿಯ ಜೊತೆಯಲ್ಲಿ ಮಲಗುವವನು ಕೈ ಹಿಡಿದ ಗಂಡ!

- ಸುಮಾ ರಮೇಶ್

ನಾರಿ ಒಲಿದರೆ ಸ್ವರ್ಗಕ್ಕೆ ದಾರಿ, ಒಲಿಯದಿರೆ ಸೊರಗಲು ರಹದಾರಿ. ಬಾಲೆಯಾಗಲಿ ಬಾಲಿಕೆಯಾಗಲಿ, ವೃಂದೆ ಇರಲಿ ವೃದ್ಧೆ ಇರಲಿ, ಅವಳಿದ್ದೆಡೆ ಜೀವಂತಿಕೆ ಪುಟಿದೇಳುವುದು. ಕೃತಯುಗದಿಂದ ಕೃತಕ ಬುದ್ಧಿಮತ್ತೆಯ ಯುಗದವರೆಗೂ ಹೆಣ್ಣಿನಿಂದ ಎಲ್ಲರೂ ಉಪಕೃತರಾದವರೇ! ಇಸ್ತ್ರಿ ಇಲ್ಲದಿರೆ ಬಟ್ಟೆ ಮುದುರುವಂತೆ, ಸ್ತ್ರೀ ಇಲ್ಲದಿರೆ ಬದುಕೇ ಮುದುಡುವುದು. Woman ಪದದಲ್ಲಿ ಮ್ಯಾನ್, lady ಅಲ್ಲಿ ಲ್ಯಾಡ್, mistress ಅಲ್ಲಿ ಮಿಸ್ಟರ್, she ಅಲ್ಲಿ he ಇರುವಂತೆ ಹೆಣ್ಣಿಲ್ಲದಿರೆ ಗಂಡಿನ ಅಸ್ತಿತ್ವವೇ ಇರದು.

ಕಾರ್ಯೇಷು ದಾಸಿ, ಕಾರ್ಯಸ್ಥಳದಲ್ಲೆಲ್ಲಾ ಅವಳೇ ಬಾಸಿಯೂ ಹೌದು, ಕರಣೇಷು ಮಂತ್ರಿ, ಕಲಹಗಳಿಗೂ ಅವಳೇ ತಂತ್ರಿ, ಭೋಜೇಷು ಮಾತೆ, ಇವಳದ್ದೇ ಆಹಾರ ಖಾತೆ, shineಯೇಷು ರಂಭಾ, ಊರ್ವಶಿ, ಮೇನಕೆಯರ ಕೊಲ್ಯಾಬೊರೇಶನ್‌ನಲ್ಲಿ ಮಿಂಚುವಳು ತುಂಬಾ, ರೂಪೇಷು ಲಕ್ಷ್ಮಿ, ಕ್ಯಾಲೆಂಡರ್ ಲಕ್ಷ್ಮಿಯಂತೆ ಚಿಲ್ಲರೆ ಉದುರಿಸದೆ ಲಕ್ಷ ಲಕ್ಷ ರೂಪಾಯಿ ಸಂಬಳ ತರುವ ಕೆಲಸದ ಪ್ಯಾಕೇಜ್ ಹೋಲ್ಡರ್, ಕ್ಷಮಯಾ ಧರಿತ್ರಿ, ಅಕ್ಷಮ್ಯಗಳಿಗೂ ಇವಳ ಬಳಿ ಐತ್ರಿ ಇನಾಯಿತಿ.

ಬಾಪ್‌ರೇ! ಇಷ್ಟೆಲ್ಲಾ ಮಲ್ಟಿ ಟಾಸ್ಕಿಂಗ್ ಹೆಣ್ಣಿನಿಂದ ಮಾತ್ರ ಸಾಧ್ಯ ಬಿಡಿ. ಹೆಣ್ಣು ಸೃಷ್ಟಿಕರ್ತ ಬ್ರಹ್ಮನ ಮಾಸ್ಟರ್‌ಪೀಸ್. ಯಾವುದನ್ನೂ ಸುಲಭದಲ್ಲಿ ಒಪ್ಪದ ಆಕೆ ಬ್ರಹ್ಮನ ಕೈಚಳಕಕ್ಕೆ ಇನ್ನಷ್ಟು ತಿದ್ದುಪಡಿ ತರಲು ಮುಂದಾಗಿದ್ದರಿಂದಲೇ ಇಂದು ಹಲವು ಕಾಸ್ಮೆಟಿಕ್ಸ್ ಉದ್ದಿಮೆಗಳು ತಲೆಯೆತ್ತುವಂತಾಯಿತು.

ಹೆಂಡ ಪದದ ಸ್ತ್ರೀ ಲಿಂಗ ‘ಹೆಂಡತಿ’ ಇರಬಹುದೇ ಎಂಬ ಅನುಮಾನ ಹಲವರದು. ಹೆಂಡ ಏರಿಸಿಯೂ ತಟ್ಟಾಡದ ಗಂಡುಗಲಿಗಳು ಹೆಂಡತಿಯನ್ನು ಕಂಡು ತಬ್ಬಿಬ್ಬಾಗುವುದಿದೆ. ನೆಟ್‌ವರ್ಕ್ ಇಶ್ಯೂ ಇಲ್ಲದಂತೆ ಅವಳ ಆದೇಶಗಳು ಎಲ್ಲಾ ವ್ಯಾಪ್ತಿ ಪ್ರದೇಶಗಳಿಗೂ ನಿಲುಕುತ್ತವೆ. ಮನೆಯೊಳಗಿನ ಬಜೆಟ್ ಮಂಡನೆ ಮಡದಿಯದಾದರೆ, ಹೊರಗಿನ ಬಜೆಟ್ಟನ್ನು ನಿರ್ಮಲಾ ಮೇಡಂ ಮಂಡಿಸುವರು. ಹಾಗಾಗಿ, ಎಲ್ಲೆಡೆ ಮನಿ, ಮೆನಿ ಮ್ಯಾಟರ್‌ಗಳಲ್ಲಿ ಮಹಿಳೆಯದ್ದೇ ದನಿ. ಮುಂದಿನ ದಿನಗಳಲ್ಲಿ ಗಂಡು ತಿಣುಕಬೇಕಿದೆ ಉಳಿಸಿಕೊಳ್ಳಲು ತನ್ನ ಬಾಳಿನ ಬನಿ.

ಹೆಚ್ಚಾಗಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುವವರು ಯಾರು? ಹೆಂಗಸರೋ? ಗಂಡಸರೋ?

– ಎಂ.ಎಸ್.ನರಸಿಂಹಮೂರ್ತಿ

ಗಂಡೇ ಜಗಳಗಂಟ. ಮನೆಯಿಂದ ಆಚೆ ಬಂದ್ರೆ ಸಾಕು. ಬಸ್ಸಲ್ಲಿ ಜಗಳ, ರಸ್ತೇಲಿ ಜಗಳ, ಆಟೋ ಡ್ರೈವರ್ ಜೊತೆ ಜಗಳ, ಆಫೀಸಲ್ಲಿ ಜಗಳ... ಇಬ್ಬರು ಹೆಂಗಸ್ರು ಜಗಳ ಮಾಡ್ತಾ ಇದ್ರೂ ಗಂಡು ಬೇಕಾಗಿ ಮೂಗು ತೂರಿಸಿ ದನಿ ಎತ್ತರಿಸ್ತಾನೆ. ಟಿ.ವಿ ಆನ್ ಮಾಡಿ, ಯಾವ್ದೇ ಸಿನಿಮಾ ಫೈಟಿಂಗ್ ನೋಡಿ. ಗಂಡಸ್ರೇ ಫೈಟಿಂಗ್ ಮಾಡ್ತಾ ಇರ್ತಾರೆ. ಇನ್ನು ರಾಜಕೀಯಕ್ಕೆ ಬಂದರೆ, ಸದನದಲ್ಲಿ ನಡೆಯುವ ನಡಾವಳಿಗಳನ್ನ ನೋಡಿ. ಕಚ್ಚಾಡ್ತಿರ್ತಾರೆ, ಕೂಗಾಡ್ತಿರ್ತಾರೆ, ಟೇಬಲ್ ಮೇಲೆ ಹತ್ತಿ ನಿಂತಿರ್ತಾರೆ, ಬಟ್ಟೆ ಹರ್ಕೊಂಡು ಜಗಳ ಮಾಡ್ತಿರ್ತಾರೆ. ಯಾರು? ಹೆಂಗಸ್ರಲ್ಲ, ಅವ್ರೆಲ್ಲ ಗಂಡಸ್ರು.

ಗಂಡಸರಿಗೆ ಜಗಳ ಆಡ್ಲಿಲ್ಲ ಅಂದ್ರೆ ಏನೋ ಒಂಥರಾ ನವೆ. ಅವನೊಬ್ನೇ ಕೂತಾಗ್ಲೂ ಗಡ್ಡ ಕೆರ್ಕೊತಾ ಇರ್ತಾನೆ. ನಿಂತಾಗ ಕಾಲು ಕೆರೀತಾನೆ. ಇನ್ನು ಪ್ರಾಣಿ ಪ್ರಪಂಚದಲ್ಲಂತೂ ಟಗರು ಕಾಳಗ ಇದೆಯೇ ವಿನಾ ಕುರಿ ಕಾಳಗ ಇಲ್ಲ. ಇನ್ನು ಕೋಳಿ ಕಾಳಗ ಅಂತಾರೆ. ಪಾಪ, ಕೋಳಿ ಹೆದರ್ಕೊಂಡು ತೆಪ್ಪಗೆ ಮುದುರಿ ಕೂತಿರುತ್ತೆ. ಭಯಂಕರವಾಗಿ ಕಾದಾಡೋದು ಹುಂಜ. ಇನ್ನು ಕಂಬಳದಲ್ಲಿ ಎಮ್ಮೆಗಳನ್ನ ಯಾವತ್ತೂ ಓಡ್ಸೊಲ್ಲ. ಅಲ್ಲಿ ಓಡ್ಸೋದೆಲ್ಲ ಕೋಣಗಳನ್ನೇ. ಎಮ್ಮೆಕೋಣ ಅಂತ ಕರೆದು, ಸುಮ್ನೆ ಎಮ್ಮೇನ ಜೊತೆಗೆ ಸೇರಿಸಿರ್ತೀವಿ ಪಾಪ.

ಇನ್ನು ದಸರಾ ಮೆರವಣಿಗೆ‌ಯಲ್ಲಿ ಅಂಬಾರಿ ಹೊರೋದು ಗಂಡು. ಅಂಬಾರಿ ಹೊತ್ತಾಗ ತರ್ಲೆ ಮಾಡಬಾರ್ದು ಅಂತ ಆ ಕಡೆ, ಈ ಕಡೆ ಒಂದೊಂದು ಹೆಣ್ಣು ಆನೆಯನ್ನ ನಿಲ್ಲಿಸಿರ್ತಾರೆ. ಇಲ್ಲಾಂದ್ರೆ ಅದು ಯಾವಾಗ ರಾಂಗ್ ಆಗುತ್ತೋ ಹೇಳೋಕಾಗೊಲ್ಲ. ಪಕ್ಕದಲ್ಲಿ ಹೆಣ್ಣಿದ್ದಾಗ ಬಲವಂತವಾಗಿ ಸುಮ್ನಿರುತ್ತೆ.

ಮಹಾಭಾರತದಲ್ಲಿ ಅರ್ಜುನ ಸುಭದ್ರೇನ ಕದ್ಕೊಂಡು ಬಂದ, ರಾಮಾಯಣದಲ್ಲಿ ರಾವಣ ಸೀತೇನ ಕದ್ಕೊಂಡು ಹೋದ. ಇವು ದೊಡ್ಡ ದೊಡ್ಡ ಯುದ್ಧಗಳಿಗೆ ಕಾರಣವಾದ್ವು. ಅಂದ್ರೆ ಜಗಳಕ್ಕೆ ಪ್ರೇರಣೆ ಕೊಡೋವ್ನು, ಜಗಳಕ್ಕೆ ಕಂಕಣ ಕಟ್ಕೊಂಡು ಬರೋವ್ನು ಗಂಡೇ.

ಜಗಳ ಮಾಡೋಕೆ ಕಾರಣವೇ ಬೇಡ. ಅವನ ಕಡೆ ಯಾರಾದ್ರೂ ನೋಡಿದ್ರೆ, ‘ಏನೋ, ಗುರಾಯಿಸ್ತೀಯಾ?’ ಅಂತ ಜಗಳ ಶುರು ಮಾಡ್ತಾನೆ. ನೋಡ್ದೇ ಇದ್ರೆ, ‘ಏನೋ ನೆಗ್ಲೆಕ್ಟ್ ಮಾಡ್ತೀಯಾ?’ ಅಂತ ಕೆಣಕ್ತಾನೆ. ಸುಮ್ನಿದ್ರೂ ಒದೆ ಕೊಡ್ತಾನೆ, ಮಾತಾಡಿದ್ರೂ ಅವ್ನಿಂದ ಒದೆ. ಗಂಡಸಿನ ಜಗಳಕ್ಕೆ ಕಾಲು ಕೆರೆಯೋ ಬುದ್ಧಿಗೆ ಕೊನೆ ಇಲ್ಲ, ಮೊದಲಿಲ್ಲ.

– ಸುಮಾ ರಮೇಶ್

ಕಾಲು ಕೆರ್ಕೊಂಡು ಜಗಳಕ್ಕೆ ಹೋಗೋದ್ರಲ್ಲೂ ಹೆಂಗಸರದೇ ಮೇಲುಗೈ ಅನ್ನೋದ್ರಲ್ಲಿ  ಅನುಮಾನವೇ ಇಲ್ಲ. ಬ್ಯೂಟಿ, ಸ್ವೀಟಿ, ಕ್ಯೂಟಿ ನಾರಿ ‘ಘಾಟಿ’ ಕೂಡಾ ಹೌದು. ‘ಜಗಳಗಂಟಿ’ ಪದ ಅವಳಿಗೆ ಹುಟ್ಟಿನಿಂದಲೇ ಅಂಟಿಕೊಂಡಿದೆ. ಕಲಹಪ್ರಿಯನು ನಾರದನೇ ಆದರೂ ಅವನ ಹೆಸರಿನ ಆದಿಯ ಎರಡು ಅಕ್ಷರಗಳು ನಾರಿಯನ್ನೇ ಸೂಚಿಸುವುದರಿಂದ ‘ನಾರಿಯಿಂದ ಆದವ’ ನಾರದ ಎನ್ನಬಹುದು. ಹಾಗಾಗಿ, ಕಲಹದ ಆದಿಶಕ್ತಿಯೂ ನಾರಿಯೇ ಅಲ್ಲವೇ?

ಬೀದಿಜಗಳ, ನಲ್ಲಿ ಜಗಳಗಳ ಆರಂಭ, ಅಂತ್ಯಗಳೆರಡೂ ನಾರಿಯಿಂದಲೇ. ಮಧ್ಯದಲ್ಲಿ ಪುರುಷರು ಆಗೊಮ್ಮೆ ಈಗೊಮ್ಮೆ ಮಾತಿನ ಚಾಟಿ ಬೀಸಿದರೂ ಮಹಿಳೆಯರ ಸುಲಲಿತ ಪದಪುಂಜಗಳ ಹರಿವಿಗೆ, ಜುಟ್ಟಾಜುಟ್ಟಿ, ಕೇಶಾಕೇಶಿ, ಮುಷ್ಟಾಮುಷ್ಟಿಯಂತಹ ದೇಹಭಾಷೆಗೆ ಪುರುಷರು ಮಂಕಾಗಿ ಬಿಡುತ್ತಾರೆ. ಕದನವಿರಾಮ ಘೋಷಣೆಯಾದ ನಂತರವೂ ಬೈಗುಳಗಳು ತೊಟ್ಟಿಕ್ಕುತ್ತಲೇ ಪುನಃ ಪುನಃ ರಿನ್ಯೂ ಆಗುವುದು ಮಹಿಳೆಯರ ಕೃಪೆಯಿಂದಲೇ.

ಅಸಲಿಗೆ ಜಗಳಕ್ಕೆ ಮಹಿಳೆಯರ ಕಾಲು ಕೆರೆತ ಶುರುವಾಗುವುದು ಪುರುಷರ ಅಶಿಸ್ತಿನಿಂದ. ಬೆಳಿಗ್ಗೆ ಎದ್ದೊಡನೆಯೇ ಬ್ರಶ್ ಮಾಡಲು ಹೋಗಿ, ಮೈದುಂಬಿಕೊಂಡ ಟೂಥ್‌ಪೇಸ್ಟ್ ಟ್ಯೂಬನ್ನು ಎತ್ತೆತ್ತಲೋ ಅದುಮಿ ಜಗಳಕ್ಕೆ ಶ್ರೀಕಾರ ಹಾಕುವುದು ಪುರುಷರೇ. ನಂತರ ಕಾಫಿಯ ವೇಪರ್ ಆಸ್ವಾದಿಸುತ್ತಲೇ ನ್ಯೂಸ್‌ಪೇಪರ್ ಮೇಲೆ ಅದನ್ನು ತುಳುಕಿಸುವುದು, ಓದಿದ ಪತ್ರಿಕೆಯ ಪುಟಗಳನ್ನು ಸೋಫಾ, ಚೇರುಗಳ ಮೇಲೆ ಹರಡಿ, ಮುಖ ಮಾರಿ ಒರೆಸಿದ ಟವೆಲ್ಲನ್ನು ಅದರ ಮೇಲೆಸೆದರೆ ಹೆಂಡತಿಯಾದರೂ ಹರಿಹಾಯದೆ ಹೇಗೆ ಸುಮ್ಮನಿದ್ದಾಳು? ಕಾಲು ಕೆರೆದುಕೊಂಡು ಅವಳು ಸಿದ್ದಳಾದರೂ ಕಲಹಕ್ಕೆ ಅಂಜಿ ಅವ ನಾಪತ್ತೆಯಾದರೆ callಉ ಮಾಡಿ ತನ್ನ ವಾಣಿಯನ್ನು ಹರಿಯಬಿಡಲು ಇಂದು ಜಂಗಮವಾಣಿಗಳಿವೆ.

ಅಸಲಿಗೆ ಅವಳ ಹೆಸರುಗಳು ಅಂತ್ಯಗೊಳ್ಳುವುದೇ law ಮುಖೇನ. ವಿಮಲಾ, ಕಮಲಾ, ಕೋಮಲಾ, ನಿರ್ಮಲಾ, ಕಲಾ ಎಂದೆಲ್ಲ. ಹಾಗಾಗಿ, ಲಾ ಪ್ರತಿಪಾದಕಿಯಾದ ಅವಳು ಇದ್ದೆಡೆಯೆಲ್ಲಾ ವಾದವಿವಾದಗಳೇ! ಗಯ್ಯಾಳಿತನದಿಂದಲೇ guyಗಳನ್ನು ಆಳುವಳವಳು!

ಪುರಾಣ ಕಾಲದಲ್ಲಿ ವಿಷ್ಣುವಿನ ಕಾಲೊತ್ತುತ್ತಾ ಕುಳಿತಿದ್ದ ಲಕ್ಷ್ಮಿ, ಭೃಗು ಮಹರ್ಷಿಗಳು ಮಾಡಿದ ಎಡವಟ್ಟಿನಿಂದ ಕಾಲು ಕೆರೆದು ಜಗಳವಾಡಿಕೊಂಡು ಭೂಲೋಕದಲ್ಲಿ ಪದ್ಮಾವತಿಯಾಗಿ ಜನಿಸಿದಳು. ಕೈಕೇಯಿಯ ಕಲಹ ಇಡೀ ರಾಮಾಯಣಕ್ಕೆ ನಾಂದಿಯಾಯಿತು.

ಗೂಗಲ್ ಕಂಪನಿಯ ಸಿಇಓ ಸುಂದರ ಪಿಚೈ ಯಾವುದೋ ಸಮಾರಂಭಕ್ಕೆ ತೆರಳಿದಾಗ ದಾರಿ ತಪ್ಪಿದರು. ಅದರಿಂದ ಮನೆಗೆ ಬರುವುದು ತಡವಾಗಿ, ಹೆಂಡತಿಯ ಕೋಪಕ್ಕೆ ಗುರಿಯಾದರು. ಅರ್ಧರಾತ್ರಿಯಲ್ಲಿ ಕಚೇರಿಗೆ ತೆರಳಿ ಚಿಂತಿಸಿ, ತಮ್ಮ ತಂಡದವರ ನೆರವಿನಿಂದ ಗೂಗಲ್ ಮ್ಯಾಪ್ ಕಂಡುಹಿಡಿದರು. ದಟ್ ಈಸ್ ವುಮನ್ ಪವರ್. ‘ಇದಮಿತ್ಥಂ’ ಎನ್ನುತ್ತಾ ಮನೆಯೊಳಗೂ ಅವಳು ತೋರಿದ ದಾರಿಯಲ್ಲೇ ನಡೆಯುತ್ತಾ ಮನೆಯ ಹೊರಗೂ ಜಿಪಿಎಸ್ ಮುಖೇನ ಟರ್ನ್ ಲೆಫ್ಟ್, ಟರ್ನ್ ರೈಟ್, ಗೋ ಸ್ಟ್ರೇಟ್ ಎನ್ನುವ ಅವಳ ಕೇರಿಂಗ್, ಸ್ಕೇರಿಂಗ್ ಆದೇಶದಂತೆ ಸ್ಟೀರಿಂಗ್ ತಿರುಗಿಸಿದಾಗಲೇ ಗಮ್ಯ ತಲುಪಲು ಸಾಧ್ಯ. ಅಷ್ಟಿಲ್ಲದೇ ಹೇಳ್ತಾರೆಯೇ ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಅಂತ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.