ADVERTISEMENT

ಪ್ರತಿಕ್ರಿಯೆ: ಆತ್ಮಾವಲೋಕನದ ಬದಲು ಅಸಹನೆ, ಅನುಮಾನ ಮತ್ತು ಆರೋಪ...

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:30 IST
Last Updated 3 ಸೆಪ್ಟೆಂಬರ್ 2022, 19:30 IST

– ಬಿ. ಎಸ್. ಜಯಪ್ರಕಾಶ ನಾರಾಯಣ, ಬೆಂಗಳೂರು

ಆ.28ರ ಭಾನುವಾರದ ಪುರವಣಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ‘ಗೌಣವಾಗುತ್ತಿರುವ ಬುದ್ಧಿಜೀವಿಗಳು’ ಲೇಖನ ಬಂದಿದೆಯಷ್ಟೆ. ಮೊದಲ ವಾಕ್ಯದಿಂದಲೇ ಇದು ಸಮಸ್ಯಾತ್ಮಕವಾಗಿದೆ. ಅದೇನೆಂದರೆ, ದೇಶದ ಸಮಸ್ಯೆಗಳೆಲ್ಲ 2014ರಲ್ಲೇ ಶುರುವಾದವೆನ್ನುವ ಅನುಕೂಲಸಿಂಧು ಗ್ರಹಿಕೆ. ಇದು ‘ಬುದ್ಧಿಜೀವಿಗಳು’ ಬಿತ್ತುತ್ತಿರುವ ಚಿತ್ರಣವೋ ಅಥವಾ ವಾಸ್ತವವೋ?

ಬಿಳಿಮಲೆ ಮೆಚ್ಚಿಕೊಂಡಿರುವವರಲ್ಲಿ ರಾಜೀವ್ ಗಾಂಧಿಯೂ ಒಬ್ಬರು. ಅವರು ಪ್ರಧಾನಿಯಾಗಿದ್ದಾಗ ಸಲ್ಮಾನ್ ರಶ್ದಿಯವರ ‘ಸೆಟಾನಿಕ್ ವರ್ಸಸ್‌’ ಅನ್ನು ನಿಷೇಧಿಸಿದರು. ಬಿಳಿಮಲೆ ಪ್ರಕಾರ ‘ಡೆಮಾಕ್ರಸಿ ಮತ್ತು ಸಂವಾದ ಸಂಸ್ಕೃತಿಯ ಪರ ಇದ್ದವರಾದ’ ಅವರಿಗೆ ಆಗ ಮುಸ್ಲಿಮರ ವೋಟುಗಳ ಮೇಲೆ ಕಣ್ಣಿತ್ತಷ್ಟೆ. ಇದರ ಬಗ್ಗೆ ನಮ್ಮ ಬುದ್ಧಿಜೀವಿಗಳನ್ನು ಪ್ರಶ್ನಿಸಿ ನೋಡಿ, ಸಾರಾಸಗಟಾಗಿ ‘ಅಸಹಿಷ್ಣು’ ಎನ್ನುವ ಲೇಬಲ್ಲನ್ನು ಅಂಟಿಸಿ ಬಿಡುತ್ತಾರಷ್ಟೆ!

ADVERTISEMENT

ನೆಹರು ಪ್ರಧಾನಿಯಾದ ಹೊಸದರಲ್ಲಿ ಗಾಂಧೀಜಿ ಕೊಲೆಯಾಯಿತು. ಅದು ದುರ್ದೈವ. ಆಗ ಕಾಂಗ್ರೆಸ್‌ ಹಿನ್ನೆಲೆಯುಳ್ಳ ದುರುಳರು ಏಳೆಂಟು ಸಾವಿರ ಚಿತ್ಪಾವನ ಬ್ರಾಹ್ಮಣರನ್ನು-ಗೋಡ್ಸೆಯ ಜಾತಿಗೆ ಸೇರಿದವರೆಂದು- ಬರ್ಬರವಾಗಿ ಕೊಂದರು. ಆಮೇಲೆ ಇಂದಿರಾ ಗಾಂಧಿ ಎಮರ್ಜೆನ್ಸಿ ಹೇರಿದರು. ಕನ್ನಡ ಲೇಖಕರ ಪೈಕಿ ಆಗ ಜೈಲಿಗೆ ಹೋಗಿದ್ದು ಚಂಪಾ ಒಬ್ಬರೇ. ಒಂದೆರಡು ಅಪವಾದಗಳನ್ನು ಬಿಟ್ಟು ಮಿಕ್ಕ ಬುದ್ಧಿಜೀವಿಗಳು ಕರ್ತವ್ಯ ನಿಭಾಯಿಸಿದರೇ? ಬಳಿಕ, ಇಂದಿರಾ ಗಾಂಧಿಯವರ ಕಗ್ಗೊಲೆಯ ಬಳಿಕ ಕಾಂಗ್ರೆಸ್‌ ಹಿನ್ನೆಲೆ ಹೊಂದಿದ್ದ ಪುಂಡರು ಸಾವಿರಾರು ಸಿಖ್ಖರನ್ನು ಕೊಂದರು. ಆಗ ರಾಜೀವ್ ಗಾಂಧಿ ‘ದೊಡ್ಡ ಆಲದಮರ ಬಿದ್ದಾಗ ಅಕ್ಕಪಕ್ಕದ ಮರಗಿಡಗಳೂ ಬುಡಮೇಲಾಗುತ್ತವೆ’ ಎಂದಿದ್ದರು. ಅಯೋಧ್ಯೆಯ ದೇವಸ್ಥಾನದ ಬೀಗವನ್ನು ತೆಗೆದಿದ್ದೂ ಅವರೇ! ಅದರ ಲಾಭವನ್ನು ಬಿಜೆಪಿ ಬಾಚಿಕೊಂಡಿತು, ನಿಜ. ಶಾಬಾನೋ ಪ್ರಕರಣದ ಕುಣಿಕೆಯಿಂದ ಪಾರಾಗಾಲು ಹಿಂದೂಗಳ ವೋಟ್‌ ಮೇಲೆ ಕಣ್ಣಿಟ್ಟ ಕಾಂಗ್ರೆಸ್ಸಿನ ಪಾಪದ ಪಾಲೂ ಇದರಲ್ಲಿದೆ. ಬಿಳಿಮಲೆ ಅವರು ಇದ್ಯಾವುದನ್ನೂ ಪ್ರಸ್ತಾಪಿಸಿಲ್ಲ. ಇರಲಿ, ಅವರು ಹೇಳಿರುವ ಅವಸ್ಥೆಗೆ ಈ ಅಂಶಗಳು ಕಾರಣವೆನ್ನಬಹುದು:

(1) ಬುದ್ಧಿಜೀವಿಗಳು ವಿಶ್ವಾಸಾರ್ಹತೆಯ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಜತೆಗೆ ಇವರು ಯಾರಿಗೂ ಉತ್ತರದಾಯಿಗಳಾಗಿಲ್ಲ.

(2) ವ್ಯವಸ್ಥೆಯನ್ನು ಸುಧಾರಿಸುವ ಬದಲು ಇರುವ ವ್ಯವಸ್ಥೆಯನ್ನೂ ಬುಡಮೇಲು ಮಾಡುವ ದುರುದ್ದೇಶ ಹೆಚ್ಚಿನ ಬುದ್ಧಿಜೀವಿಗಳಿಗಿದೆ.

(3) ಬುದ್ಧಿಜೀವಿಗಳು ಮಾನಸಿಕವಾಗಿ 1970-80ರ
ಕಾಲಘಟ್ಟದಲ್ಲೇ ಇದ್ದಾರೆ. 30 ವರ್ಷಗಳಲ್ಲಿ ಭಾರತದಲ್ಲಾಗಿರುವ ಬದಲಾವಣೆಯ ಫಲಗಳನ್ನು ತಾವು ಅನುಭವಿಸುತ್ತಿದ್ದರೂ ಅದನ್ನು ಬೇಕೆಂದೇ ನಿರಾಕರಿಸುವ ಚಪಲ ಇವರಿಗೆ ಜಾಸ್ತಿ!

(4) ಬುದ್ಧಿಜೀವಿ ಎನಿಸಿಕೊಳ್ಳಬೇಕಾದರೆ ಬಿಜೆಪಿಯನ್ನು ವಿರೋಧಿಸಲೇಬೇಕು ಎನ್ನುವುದು ಅಲಿಖಿತ ನಿಯಮವಾಗಿದೆ (ಬಿಳಿಮಲೆಯವರ ಲೇಖನವನ್ನು ನೋಡಿದರೇ ಇದು ಗೊತ್ತಾಗುತ್ತದೆ!)

(5) ತಮ್ಮನ್ನು ಸೆಕ್ಯುಲರಿಸ್ಟ್‌ಗಳು ಎಂದು ಬಿಂಬಿಸಿಕೊಳ್ಳುವ ಬುದ್ಧಿಜೀವಿಗಳು ರಾಜಕಾರಣಿಗಳಿಗಿಂತ ಹೆಚ್ಚು ಜಾತಿವಾದಿಗಳಾಗಿದ್ದಾರೆ. ತಮ್ಮ ಇಷ್ಟದ ಪಕ್ಷ ಅಧಿಕಾರಕ್ಕೆ ಬಂದಾಗ ಇದೇ ಬುದ್ಧಿಜೀವಿಗಳು ಅಲ್ಲೇ ಠಳಾಯಿಸುತ್ತಿರುತ್ತಾರೆ.

(6) ತಾವು ಒಲ್ಲದ ವಿಚಾರಗಳ ಬಗ್ಗೆ ಯಾರಾದರೂ ಮಾತನಾಡಿದರೆ ಅಂಥವರನ್ನು ಬಹಿಷ್ಕರಿಸುವವರು ಇವರೇ. ಇವರಿಗೆ ಸಮಗ್ರ ಸತ್ಯ ಬೇಕಾಗಿಲ್ಲ. ಜತೆಗೆ, ತಾವು ‘ಕಿಂಗ್‌-ಮೇಕರ್ಸ್‌’ ಎನ್ನುವ ಭ್ರಮೆ! ತಮ್ಮನ್ನು ಪೊರೆಯುವ ‘ಆಸ್ಥಾನಗಳು’ ಇಲ್ಲದಿದ್ದರೆ ಬೇಕೆಂದೇ ಹುಯಿಲೆಬ್ಬಿಸುವ ವಿಕೃತಿ ಇವರಲ್ಲಿ ಮೇರೆ ಮೀರಿದೆ.

(7) ಬುದ್ಧಿಜೀವಿಗಳದು ಎಲ್ಲವನ್ನೂ ಬ್ಲ್ಯಾಕ್ ಆ್ಯಂಡ್‌ ವೈಟ್ ಆಗಿ ನೋಡುವ ಸುಲಭೋಪಾಯ! ಉದಾ: ಬ್ರಾಹ್ಮಣ-ಶೂದ್ರ, ಬಹುಸಂಖ್ಯಾತ-ಅಲ್ಪಸಂಖ್ಯಾತ,
ಎಡ-ಬಲ. ಆದರೆ, ನಮ್ಮ ವ್ಯವಸ್ಥೆಯ ಸಂಕೀರ್ಣತೆ ಸಾಮಾಜಿಕ ಆಯಾಮದಿಂದಷ್ಟೇ ಸೃಷ್ಟಿಯಾಗಿಲ್ಲ.

(8) ಝಂಡಾ ಹಿಡಿದುಕೊಂಡಿರುವ ಬಲಪಂಥೀಯ ರಾಜಕಾರಣವನ್ನು ಇವರು ಆಕ್ಷೇಪಿಸುವುದು ಒಳ್ಳೆಯದೇ. ಆದರೆ, ತಮ್ಮ ‘ಹಿಡನ್ ಅಜಂಡಾ’ದ ಬಗ್ಗೆ ಅವರಿಗೆ ಕಿಂಚಿತ್ತೂ ಅನುಮಾನವಿಲ್ಲ.

(9) ಇವತ್ತಿನ ಬುದ್ಧಿಜೀವಿಗಳು ‘ಪೊಲಿಟಿಕಲ್ ಆ್ಯಕ್ಟಿವಿಸ್ಟ್‌’ಗಳಷ್ಟೆ! ನೈಜ ಸಾಹಿತಿಗೆ ಕೊಡುವ ಬೆಲೆಯನ್ನೇ ಇವರಿಗೂ ಕೊಡಬೇಕೆನ್ನುವ ನಿರೀಕ್ಷೆ ದುಬಾರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.