
2025ನೇ ವರ್ಷದ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿಶ್ವದಾದ್ಯಂತ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅನೇಕರು 2026ರಲ್ಲಿ ತಮ್ಮ ರಾಶಿಯ ಭವಿಷ್ಯ ಹೇಗಿರಲಿದೆ? ಎಂಬುದರ ಕುರಿತು ಸಹ ಚಿಂತಿಸುತ್ತಿರುತ್ತಾರೆ. ಅದರಂತೆ ಮೇಷ ರಾಶಿಯವರಿಗೆ 2026 ಹೇಗಿರಲಿದೆ ಎಂಬುದನ್ನು ನೋಡೋಣ.
ಮುಂದಿನ ವರ್ಷ ಗ್ರಹಗಳ ಚಲನೆಯ ದೃಷ್ಟಿಯಿಂದ ಮೇಷ ರಾಶಿಯವರಿಗೆ ಅತ್ಯಂತ ಮಹತ್ವದ್ದಾಗಿದೆ. ಇದರಿಂದಾಗಿ ಈ ವರ್ಷ ಶ್ರಮ, ತ್ಯಾಗ ಮತ್ತು ಸ್ಥಿರ ಫಲಗಳ ಸಮನ್ವಯವನ್ನು ಈ ರಾಶಿಯವರಿಗೆ ದೊರೆಯಲಿದೆ.
ಶನಿ ಗ್ರಹ ಈ ವರ್ಷ ಮೀನ ರಾಶಿಯಲ್ಲಿ ಸಂಚರಿಸುವುದರಿಂದ, ಮೇಷ ಲಗ್ನಕ್ಕೆ ಇದು ದ್ವಾದಶ ಭಾವ ಸಂಚಾರವಾಗುತ್ತದೆ. ಶನಿ ದ್ವಾದಶ ಭಾವದಲ್ಲಿರುವುದರಿಂದ ವ್ಯಯ ಹೆಚ್ಚಳ, ವಿದೇಶ ಪ್ರಯಾಣ, ಆಸ್ಪತ್ರೆ ಅಥವಾ ಏಕಾಂತ ವಿಚಾರಗಳು ಪ್ರಾಬಲ್ಯ ಪಡೆಯುತ್ತವೆ. ಆದರೆ ಇದು ವ್ಯರ್ಥ ಶ್ರಮವಲ್ಲ, ಗುಪ್ತವಾಗಿ ಮಾಡಿದ ಪರಿಶ್ರಮ ಮುಂದಿನ ವರ್ಷಗಳಿಗೆ ಬಲವಾದ ನೆಲೆ ಒದಗಿಸುತ್ತದೆ. ಆಧ್ಯಾತ್ಮಿಕ ಸಾಧನೆ, ಸೇವಾ ಕಾರ್ಯಗಳು ಹಾಗೂ ಪರೋಪಕಾರದಿಂದ ಮನಶಾಂತಿ ಲಭಿಸುತ್ತದೆ.
ಗುರು ಗ್ರಹವು ಮೇ ಕೊನೆ ತನಕ ಮಿಥುನ ರಾಶಿಯಲ್ಲಿ ಸಂಚರಿಸುವುದರಿಂದ, ತೃತೀಯ ಭಾವ ಬಲಗೊಳ್ಳುತ್ತದೆ. ಗುರು ತೃತೀಯ ಭಾವದಲ್ಲಿರುವ ಕಾರಣ ಧೈರ್ಯ, ಪ್ರಯತ್ನ, ಸಂವಹನ ಹಾಗೂ ಸ್ವ ಪ್ರಯತ್ನದಿಂದ ಲಾಭ ದೊರೆಯುತ್ತದೆ.
ಜೂನ್‌ನಿಂದ ಗುರು ಗ್ರಹ ಕರ್ಕ ರಾಶಿಗೆ ಪ್ರವೇಶಿಸಿ ಉಚ್ಚ ಸ್ಥಾನ ಪಡೆಯುವುದರಿಂದ, ಮೇಷ ರಾಶಿಯವರಿಗೆ ಶುಭಫಲ ದೊರೆಯುವ ಕಾಲ ಆರಂಭವಾಗುತ್ತದೆ. ಗುರು ಚತುರ್ಥ ಭಾವದಲ್ಲಿ ಉಚ್ಚನಾಗಿರುವುದರಿಂದ ಗೃಹ ಸುಖ, ಆಸ್ತಿ, ವಾಹನ ಖರೀದಿ, ಮಾನಸಿಕ ಸ್ಥಿರತೆ ಹಾಗೂ ಕುಟುಂಬ ಬೆಂಬಲ ಹೆಚ್ಚಾಗುತ್ತದೆ. ಇದು ಈ ವರ್ಷದಲ್ಲಿನ ಅತ್ಯಂತ ಬಲಿಷ್ಠ ಗ್ರಹ ಯೋಗವಾಗಿದೆ.
ರಾಹು ನವೆಂಬರ್ ಕೊನೆ ತನಕ ಕುಂಭ ರಾಶಿಯಲ್ಲಿ ಇರುವುದರಿಂದ, ಏಕಾದಶ ಭಾವದ ಮೂಲಕ ಲಾಭ, ಸ್ನೇಹ ವಲಯ ವಿಸ್ತರಣೆ ಮತ್ತು ಅಪ್ರತೀಕ್ಷಿತ ಆದಾಯ ಸಾಧ್ಯ. ರಾಹು ಲಾಭ ಭಾವದಲ್ಲಿರುವುದರಿಂದ ತಂತ್ರಜ್ಞಾನ, ಆನ್‌ಲೈನ್ ಮತ್ತು ಹೊಸ ಮಾಧ್ಯಮಗಳಿಂದ ಆರ್ಥಿಕ ಲಾಭ ಸಿಗಲಿದೆ. ನವೆಂಬರ್ ನಂತರ ರಾಹು ಮಕರ ರಾಶಿಗೆ ಪ್ರವೇಶಿಸುವುದರಿಂದ ದಶಮ ಭಾವದಲ್ಲಿ ವೃತ್ತಿಯ ಅಸ್ಥಿರತೆ, ಮೇಲಧಿಕಾರಿಗಳೊಂದಿಗೆ ಅಭಿಪ್ರಾಯ ಸಂಭವಿಸಬಹುದು.
ಅದೇ ಸಮಯದಲ್ಲಿ ಅಂದರೆ ನವೆಂಬರ್ ನಂತರ ಕೇತು ಸಿಂಹದಿಂದ ಕರ್ಕ ರಾಶಿಗೆ ಸಂಚರಿಸುವುದರಿಂದ, ಚತುರ್ಥ ಭಾವದಲ್ಲಿ ವೈರಾಗ್ಯ ಹೆಚ್ಚಾಗುತ್ತದೆ. ಕೇತು ಗೃಹ ಭಾವದಲ್ಲಿರುವುದರಿಂದ ಮನೆ, ತಾಯಿ, ಆಸ್ತಿ ವಿಚಾರಗಳಲ್ಲಿ ನಿರ್ಲಿಪ್ತ ಭಾವ, ಸ್ಥಳಾಂತರ ಯೋಗ ಅಥವಾ ಒಳಗಿನ ಅಸಮಾಧಾನ ಕಾಣಿಸಿಕೊಳ್ಳಬಹುದು.
ವಿವಾಹ ಹಾಗೂ ಸಂತಾನ ವಿಚಾರಗಳಲ್ಲಿ ಗುರು ಉಚ್ಚ ಫಲ ನೀಡುವ 2026ರ ದ್ವಿತೀಯಾರ್ಧ ಅತ್ಯಂತ ಅನುಕೂಲಕರ. ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ.
ಒಟ್ಟಾರೆ, 2026ನೇ ವರ್ಷ ಮೇಷ ರಾಶಿಯವರಿಗೆ ಹೊರಗಿನ ಸಾಧನೆಗಿಂತ ಒಳಗಿನ ಶಕ್ತಿಯನ್ನು ಬೆಳೆಳೆಸಿಕೊಳ್ಳಲು, ಮುಂದಿನ ದಶಕಕ್ಕೆ ಬುನಾದಿ ಹಾಕಲು ಮಹತ್ವದ ವರ್ಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.