
ನಾಳೆ (ಡಿಸೆಂಬರ್ 4) ದತ್ತಾತ್ರೇಯ ಜಯಂತಿ ಆಚರಿಸಲಾಗುತ್ತದೆ. ದತ್ತಾತ್ರೇಯನನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವೆಂದು ಹೇಳಲಾಗುತ್ತದೆ. ದತ್ತಾತ್ರೇಯ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯಂದು ಆಚರಿಸಲಾಗುತ್ತದೆ.
ಈ ಜಯಂತಿಯನ್ನು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ದತ್ತಾತ್ರೇಯ ಜಯಂತಿಯ ವಿಶೇಷತೆಯೇನು ಎಂಬುದನ್ನು ತಿಳಿಯೋಣ.
ಕರ್ನಾಟಕದಲ್ಲಿ ಮೂರು ದತ್ತಪೀಠಗಳು:
ಗಾಣಿಗಾಪುರ: ಈ ಪೀಠದಲ್ಲಿ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳ ಪಾದುಕೆಗಳಿವೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ದುಷ್ಟ ಶಕ್ತಿಗಳ ಕಾಟ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.
ಗುರುವಾಪುರ: ಇಲ್ಲಿ ಶ್ರೀಪಾದವಲ್ಲಭರು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಇಲ್ಲಿಗೆ ಭೇಟಿ ನೀಡುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಚಿಕ್ಕಮಂಗಳೂರಿನ ದತ್ತಪೀಠ: ದತ್ತಗಿರಿ ಎಂಬುದು ಪವಿತ್ರ ಗಿರಿಧಾಮ. ಇದನ್ನು ಬಾಬಾಬುಡನ್ ಗಿರಿ ಎಂದು ಕರೆಯುತ್ತಾರೆ. ಈ ಪರ್ವತದ ಮೇಲಿನ ಗುಹೆಯಲ್ಲಿ ದತ್ತಾತ್ರೇಯ ಪೀಠವಿದೆ. ಇಲ್ಲಿ ಶ್ರೀ ಗುರು ದತ್ತಾತ್ರೇಯರು ಧ್ಯಾನ ಮಗ್ಗರಾಗಿದ್ದಾಗ ದೇಹತ್ಯಾಗ ಮಾಡಿದರು ಎಂದು ನಂಬಲಾಗುತ್ತದೆ.
ಇದೇ ಗುಹೆಯಲ್ಲಿ ಸತಿ ಅನಸೂಯಾ ದೇವಿಯು ತಪಸ್ಸು ಮಾಡಿದ್ದರು. ಇಲ್ಲಿಗೆ ಬಂದ ಭಕ್ತರು ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಉತ್ತಮ ಸಂತಾನಕ್ಕಾಗಿ ಪ್ರಾರ್ಥಿಸುತ್ತಾರೆ.
ಪೂಜಾ ಸಮಯ:
ಡಿಸೆಂಬರ್ 4ರ ಬೆಳಿಗ್ಗೆ 8.37 ರಿಂದ ಆರಂಭವಾಗಿ, ಡಿಸೆಂಬರ್ 5ರ ಬೆಳಗಿನ ಜಾವ 4:43 ರವರೆಗೆ ದತ್ತ ಜಯಂತಿಯನ್ನು ಆಚರಣೆ ಮಾಡಬಹುದು.
ಗುರುವಾರ ಆಚರಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ದತ್ತಾತ್ರೇಯನನ್ನು ಪೂಜಿಸುವುದರಿಂದ ತ್ರಿಮೂರ್ತಿಗಳ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.