
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಗೆಟ್ಟಿ
ಸಾಮಾನ್ಯವಾಗಿ ಭಾರತೀಯ ಮೀಮಾಂಸೆಗಳು, ಸ್ವಪ್ನ ಸಂಬಂಧವಾದ ಕೆಲ
ವಿಚಾರಗಳನ್ನು ವರ್ತಮಾನ ಹಾಗೂ ಭವಿಷ್ಯದ ಸಂಗತಿಗಳಿಗೆ ಕೊಂಡಿಗಳನ್ನು ಕೂಡಿಸುವ ಕೆಲಸ ಮಾಡುತ್ತ ಇರುತ್ತವೆ. ಪಾಶ್ಚಾತ್ಯ ಜಗತ್ತೇ ಇರಲಿ, ಇಲ್ಲಾ ಇಡೀ ಭೂಮಿಯ ಯಾವುದೇ ಭಾಗದ ಜನ, ಕನಸುಗಳ ಮೂಲಕವೂ ಅಲೌಕಿಕದ ಅಥವಾ ಇತರ ದುಷ್ಟ ಶಕ್ತಿಯ ಅದೃಶ್ಯ ನೆಲೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದು ಅಸಹಜವೇನಲ್ಲ. ತಿಳಿಯಲಾಗದ್ದು ಏನೋ ಒಂದು ಹೆದರಿಕೆಯನ್ನೇ ಹೆಚ್ಚೆಚ್ಚು ಹುಟ್ಟಿಸುತ್ತದೆ. ಇಲ್ಲಾ..!! ಏನು ಎಂಬುದನ್ನು ಬಿಡದೇ ಸಂಶೋಧಿಸಿಯೇ ನೋಡುತ್ತೇನೆ ಎಂಬ ಹಠವನ್ನೇ ಹಿಡಿಯಲು ಕೂಡಾ ಪ್ರೇರೇಪಿಸುತ್ತದೆ. ಹಾಗೇ, ಎಷ್ಟೇ ವಿಧದಲ್ಲಿ, ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಪ್ರಯತ್ನಿಸಿದಷ್ಟೂ, ಒಂದಾದರೂ ತಾರ್ಕಿಕ ಎಳೆ ಹಿಡಿದಿರಿಸಿ, ಮುಂದುವರಿದು ಗೆಲ್ಲಲು ಅಸಾಧ್ಯವೇ ಆಗುವ ಅಸಹಾಯಕ ಸ್ಥಿತಿಯನ್ನೂ ಒಮ್ಮೆಗೆ ಉಂಟು ಮಾಡುತ್ತಿರುತ್ತದೆ. ಸ್ವಪ್ನ ಪ್ರಪಂಚವೇ ಹಾಗೆ!! ಇದು ನಿಗೂಢ.
ಇದುವರೆಗೂ ಜೀವಮಾನದಲ್ಲಿ ಎಂದೂ ನೋಡಿಯೇ ಇರದ ವ್ಯಕ್ತಿಯೊಬ್ಬ‘ಈ ದಾರಿ ಇದೆ ನೋಡು, ಇದನ್ನು ಹಿಡಿದು ಸಾಗುವ ನೀನು ನಿನ್ನ ಪಾಲಿಗೆ ಏನು,ಯಾವುದು ನಿನ್ನ ಈವರೆಗಿನ ಏನೇ ಆಸೆ ಆಕಾಂಕ್ಷೆಗಳೋ, ಗುಪ್ತ ಮನಸ್ಸಿನ ಹಂಬಲಗಳೋ..., ಅದನ್ನು ಪೂರೈಸಿ ನಿಲ್ಲುವ ವಿಚಾರಕ್ಕೆ ಬೇಕಾದ ಸರ್ವತ್ರ ಗಟ್ಟಿ ಉಪಾಯಗಳನ್ನು ತಿಳಿಸಿಕೊಡುವ ಒಬ್ಬ ಎತ್ತರದ, ಬಲಿಷ್ಠ, ತೀರಾ ಒರಟು ವ್ಯಕ್ತಿ ಕಾಣಿಸುತ್ತಾನೆ. ಅವನ ಎಲ್ಲಾ ನಿರ್ದೇಶನಗಳನ್ನೂ ವಿನಯದಿಂದ ಪಾಲಿಸು. ನಿನಗೆ ಇದರಿಂದ ಒಳ್ಳೆಯದೇ ಆಗುತ್ತದೆ’ ಎಂದು ಅಣತಿ ಕೊಟ್ಟ ರೀತಿ ಆಗುತ್ತದೆ. ಹಲವು ಮಾದರಿಯಲ್ಲಿ ಕನಸಿಗೆ ಸಿಕ್ಕ ಪ್ರೇರಣೆಗಳ ವಿಸ್ಮಯಕಾರಕ ನಿಜ ಸ್ಥಿತಿ ವಾಸ್ತವಕ್ಕೂ ನಂತರ ನೆರವೇರಿರುತ್ತದೆ. ಇದು ಆಶ್ಚರ್ಯವಲ್ಲದೆ ಇನ್ನು ಏನು ಎಂಬ ಕುತೂಹಲಕಾರಿ ಯೋಚನೆಯನ್ನೂ ತಂದಿರಿಸುತ್ತದೆ.
ನಮ್ಮ ನಿದ್ದೆಯ ಮಾದರಿಗಳನ್ನು ಆಧುನಿಕ ವಿಜ್ಞಾನ ವಿಶ್ಲೇಷಿಸುವ ಮಾರ್ಗ ಒಂದು ರೀತಿಯಲ್ಲಿ ಇದ್ದರೆ, ಭಾರತೀಯ ದಾರ್ಶನಿಕರ ವಿಶ್ಲೇಷಣೆ ಸದಾ ಬೇರೆಯದೇ ಮಾರ್ಗದಲ್ಲಿ ಇರುತ್ತದೆ. ಜಾಗೃತ, ಸ್ವಪ್ನ, ಸುಷುಪ್ತಿ ಹಾಗೂ ವಿವರಕ್ಕೆ ದಕ್ಕದ ತುರೀಯಾವಸ್ಥೆಗಳನ್ನು ಭಾರತೀಯ ಪರಂಪರೆ ಗುರುತಿಸುತ್ತದೆ. ಈಗಿನ ಆಧುನಿಕ ಸಂಶೋಧನೆ ನಮ್ಮ ಹಂಬಲದ, ಗಾಢ ಯೋಚನೆಗೆ ಬಂದ, ಸಂಕಷ್ಟದ ಪರಿಸ್ಥಿತಿಗಳ ಚೌಕಟ್ಟಿನಲ್ಲಿ ಕನಸುಗಳು ಬೀಳುತ್ತಿರುತ್ತವೆಯೇ ವಿನಾ, ಇನ್ನೇನೋ ಯಾವುದೋ ವರ್ತಮಾನವನ್ನು ಭವಿಷ್ಯಕ್ಕೆ ಬೆಸೆಯಬಹುದಾದ ಸ್ಪಷ್ಟ ಸೂಚನೆ ಕೊಡಲಾರವು ಎಂಬುದನ್ನು ಪ್ರತಿಪಾದಿಸುತ್ತದೆ. ಆಧುನಿಕ ವಿಜ್ಞಾನದ ಈ ವಿವರ ಸುಳ್ಳೇನಲ್ಲ. ನಮಗೆ ಬೀಳುವ ಕನಸುಗಳು ನೂರರಲ್ಲಿ ಶೇ 95 ರಷ್ಟು ಆಧುನಿಕ ಸಂಶೋಧನೆಯ ಪ್ರಕಾರದ ನೆಲೆಯಲ್ಲಿಯೇ ಇದ್ದಿರುತ್ತವೆ.
ಅತಿ ವೇಗದ ಕಣ್ಣು ಚಲನೆಯ ನಿದ್ದೆ, ನಿಶ್ಚಲವಾದ ಕಣ್ಣುಗಳ ಸ್ಥಿತಿಯ ನಿದ್ದೆ, ಹಾಗೆ
ಒಮ್ಮೆಯೇ ಎಚ್ಚರವಾಗಿ ಮತ್ತೆ ಏಕಾಏಕಿ ನಿದ್ದೆಗೆ ಜಾರುವ ಹಂತವನ್ನೂ ನಿದ್ದೆಯ ಹಂತಗಳನ್ನಾಗಿ ಆಧುನಿಕ ಸಂಶೋಧನೆ ಗುರುತಿಸುತ್ತದೆ. ಈ ಹಂತಗಳಲ್ಲಿ ಹರಳುಗಟ್ಟುವ, ವಿಶಿಷ್ಟವಾದ ಪ್ರೇರಕ ಸಂಜ್ಞೆಯ, ಸಂದೇಶ ವಾಹಕಗಳು ಎಂಬ ಮಾದರಿಯಲ್ಲಿ ಅಂತರ್ಗತ ಸಂವೇದನೆಯಾಗಿ ಮಿದುಳಿಗೆ ದಕ್ಕುವಂತೆ ಕನಸು ಮೂಡಿಕೊಳ್ಳುತ್ತವೆ ಎಂದು ವಿಶದೀಕರಿಸುತ್ತವೆ. ಇದು ತೀರಾ ಅಪರೂಪದ ಅನುಭವ. ಬಹಳಷ್ಟು ಜನರು ವಿನಾಕಾರಣ ಸುಳ್ಳುಗಳನ್ನು ಕಟ್ಟುತ್ತ ಈ ರೀತಿಯ ಸ್ವಪ್ನ ಕಂಡೆ, ಹೀಗೆ, ಹಾಗೆ, ಓ.. ಸ್ವಪ್ನ ಕಂಡೆ ಅಂತ ಆಕರ್ಷಕವಾಗಿ ರೈಲು ಬಿಡುತ್ತಲೂ ಇರುತ್ತಾರೆ. ಆದರೆ 'ಆತ್ಮ' ಎಂಬುದಾಗಿ ಗುರುತಿಸಿಕೊಂಡ, ಭಾರತೀಯ ವೇದಾಂತದ ನೆಲೆಯಲ್ಲಿ ತನ್ನನ್ನು ವಿಸ್ತರಿಸಿಕೊಂಡ ವಿಶಿಷ್ಟವಾದುದೊಂದು, ದೇಹವೂ ಹಾಗೂ ಅಂಗಾಂಗಗಳೂ ನಿದ್ದೆಯ ಸಮಯದಲ್ಲಿ ಸಂಪೂರ್ಣವಾಗಿ ನಿಶ್ಚಲ ಸ್ಥಿತಿಗೆ ಜಾರುತ್ತವೆ.
ನಮ್ಮ ಋಷಿ,ಮುನಿಗಳ ಗಾಢ ತಪಸ್ಸು, ಏಕಾಗ್ರತೆ ಹಾಗೆಯೇ ಕಠಿಣ ಧ್ಯಾನಗಳೂ ಕೂಡಾ ಕೇವಲ 'ಅದು' (ಇಲ್ಲಿ ಅದು ಎಂದರೆ, ಸರ್ವತ್ರ, ಸರ್ವ ಸ್ವತಂತ್ರ ಶಕ್ತಿ ಎಂದು ಗುರುತಿಸಬೇಕು.) ಎಂಬುದನ್ನು ಪೂರ್ತಿ ಕೇಂದ್ರೀಕರಿಸಿಕೊಂಡೇ ಇರುತ್ತಿದ್ದವು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಭಿನ್ನತೆ ಹೊಂದಿದ ಈ ರೀತಿಯ ಧ್ಯಾನ ಹಾಗೂ ತಪಸ್ಸಿನಲ್ಲಿ ಅನೇಕ ವಿಧವಾದ ಸಶಕ್ತ ಪರಿವರ್ತನೆಗಳನ್ನು,ಬದಲಾವಣೆಗಳನ್ನು ದೇಹ ಪಡೆಯುತ್ತದೆ ಎಂಬ ನಂಬಿಗೆ ಭಾರತೀಯರದ್ದಾಗಿದೆ. ಆಧುನಿಕ ಸಂಶೋಧನೆಗಳೂ, ಗಾಢವಾದ ನಿದ್ದೆ ದೇಹದ ಹಾಗೂ ಮನಸ್ಸಿನ ಅಸ್ವಸ್ಥತೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಪ್ರತಿಪಾದಿಸುತ್ತವೆ.
ಜನ್ಮ ಕುಂಡಲಿಯಲ್ಲಿ ಛಾಯಾ ಗ್ರಹಗಳಾದ ರಾಹು, ಕೇತುಗಳು ಪ್ರಧಾನವಾದ ಪಾತ್ರವನ್ನು ಸ್ವಪ್ನ ಸಂಬಂಧಿಯಾದ ವಿಚಾರಗಳಲ್ಲಿ ನಿರ್ವಹಿಸುತ್ತವೆ. ಚಂದ್ರನೂ ಮನೋಮಯವಾದ ಧಾತುಗಳನ್ನು, ಮಿದುಳನ್ನೂ ನಿಯಂತ್ರಿಸುವ ಗ್ರಹವಾಗಿ ಸ್ವಪ್ನ ಸಂಬಂಧೀ ಪ್ರೇರಣೆಗಳಿಂದ ಭವಿಷ್ಯದ ಕುರಿತಾಗಿ ತಿಳಿಸುವ ಸೂಕ್ಷ್ಮಗಳನ್ನ ಒದಗಿಸುತ್ತಾನೆ. ರಾಹು, ಕೇತು, ಚಂದ್ರರೂ ಕೂಡಾ ಸ್ವಪ್ನಗಳನ್ನು ವಾಸ್ತವವಾಗಿಸುವ ಆಧಾರ ನಿಕ್ಷೇಪ ತುಂಬಿಸಿ ಕೊಡುತ್ತಾರೆ. ಇದರಿಂದಾಗಿಯೇ, ಒಬ್ಬ ವ್ಯಕ್ತಿ, ಜನ್ಮ ಕುಂಡಲಿಯನ್ನು ಆಧರಿಸಿ, ಮುಖ ಲಕ್ಷಣ ಗ್ರಹಿಸಿ, ಸ್ವಪ್ನ ಭಾವ ಆಧರಿಸಿ ಭವಿಷ್ಯ ಹೇಳುತ್ತಾನೆ.
ಮಹಾತ್ಮಾ ಗಾಂಧೀಜಿ, ಹಿಟ್ಲರ್, ಜಾನ್ ಎಫ್ ಕೆನಡಿ, ಜಿಯಾ ಉಲ್ ಹಕ್, ಬೆನಝೀರ್ ಭುಟ್ಟೋ ಮುಂತಾದವರ ಅಸಂಗತ ಸಾವುಗಳ ಬಗ್ಗೆ ಮೊದಲಾಗಿ ಕೆಲವನ್ನು ಗ್ರಹಿಸಿ (ಸ್ವಪ್ನ ದೃಷ್ಟಾಂತದ ಮೂಲಕ) ಹೇಳಿದ್ದರು ಎಂಬುದನ್ನು ನಾವು ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೇವೆ. ಬಹಳ ದಿನಗಳ ಕಾಲ ನೆನಪಿಗೇ ಇರದಿದ್ದ ಜನರು ಸ್ವಪ್ನದಲ್ಲಿ ಕಾಣಿಸಿಕೊಂಡಾಗ ಏನೋ ಒಂದು ತೊಂದರೆಗೆ ಅವರು ಸಿಲುಕಿಕೊಳ್ಳುವ ಅಂಶಗಳನ್ನೂ ಹಲವು ಸಲ ಗಮನಿಸಬಹುದಾಗಿದೆ. ಇದು ಕೇವಲ ಆಕಸ್ಮಿಕವಲ್ಲ ಎಂಬುದೂ ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.