ADVERTISEMENT

2026ರಲ್ಲಿ ಮಿಥುನ ರಾಶಿಯ ಫಲಾಫಲ: ಉದ್ಯೋಗದಲ್ಲಿ ಬಡ್ತಿ, ವಿವಾಹ ಸೇರಿ ಇನ್ನೂ ಹಲವು

ವಿಠ್ಠಲ್ ಭಟ್
Published 23 ಡಿಸೆಂಬರ್ 2025, 6:34 IST
Last Updated 23 ಡಿಸೆಂಬರ್ 2025, 6:34 IST
<div class="paragraphs"><p>ಸಾಂದರ್ಭಿಕ ಚಿತ್ರ:</p></div>

ಸಾಂದರ್ಭಿಕ ಚಿತ್ರ:

   

ಎಐ

ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅನೇಕರು ಮುಂದಿನ ವರ್ಷ ತಮ್ಮ ರಾಶಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದರ ಕುರಿತು ಯೋಚಿಸುತ್ತಿರುತ್ತಾರೆ. ಅದರಂತೆ, ಮಿಥುನ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ನೋಡೋಣ.

ADVERTISEMENT

2026ನೇ ಇಸವಿ ಮಿಥುನ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ಜೀವನದ ದಿಕ್ಕನ್ನು ನಿರ್ಧರಿಸುವ ವರ್ಷವಾಗಿದೆ. ಕರ್ನಾಟಕದ ಅಕ್ಷಾಂಶ–ರೇಖಾಂಶ ಆಧಾರಿತ ಗೋಚರ ಗ್ರಹದ ಸಂಚಾರಗಳನ್ನು ಪರಿಗಣಿಸಿದಾಗ, ಈ ವರ್ಷ ಶ್ರಮಕ್ಕೆ ಸ್ಥಾನಮಾನ ಹಾಗೂ ಸ್ಥಿರ ಫಲ ದೊರೆಯುವ ಸೂಚನೆ ನೀಡುತ್ತದೆ.

ಶನಿ ಗ್ರಹ ಸಂಪೂರ್ಣ ವರ್ಷ ಮೀನ ರಾಶಿಯಲ್ಲಿ ಸಂಚರಿಸುವುದರಿಂದ, ಮಿಥುನ ರಾಶಿಯವರಿಗೆ ದಶಮ ಭಾವ ಸಂಚಾರ. ಶನಿ ಕರ್ಮ ಭಾವದಲ್ಲಿರುವುದರಿಂದ ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮೇಲಧಿಕಾರಿಗಳ ಒತ್ತಡ ಇದ್ದರೂ, ಶಿಸ್ತಿನಿಂದ ಕೆಲಸ ಮಾಡಿದವರಿಗೆ ಗೌರವ, ಬಡ್ತಿ ಅಥವಾ ಸ್ಥಾನದಲ್ಲಿ ಬದಲಾವಣೆ ಸಾಧ್ಯ. ಸರ್ಕಾರಿ, ಆಡಳಿತ, ತಾಂತ್ರಿಕ ಹಾಗೂ ನಿರ್ವಹಣಾ ಕ್ಷೇತ್ರಗಳಿಗೆ ಇದು ಶಕ್ತಿಶಾಲಿ ಸಂಚಾರವಾಗಲಿದೆ.

ಗುರು ಗ್ರಹ ಮೇ 30ರವರೆಗೆ ಮಿಥುನ ರಾಶಿಯಲ್ಲಿ ಇರುವುದರಿಂದ, ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಹೊಸ ಅವಕಾಶಗಳು ದೊರೆಯುತ್ತವೆ. ಉದ್ಯೋಗ ಬದಲಾವಣೆ ಅಥವಾ ಹೊಸ ವ್ಯವಹಾರ ಆರಂಭಕ್ಕೆ ಇದು ಅನುಕೂಲಕರ ಸಮಯವಾಗಿದೆ.

ಮೇ 30ರ ಬಳಿಕ ಗುರು, ಕರ್ಕ ರಾಶಿಗೆ ಪ್ರವೇಶಿಸಿ ಉಚ್ಚನಾಗುವುದರಿಂದ ಇದು ದ್ವಿತೀಯ ಭಾವವಾಗಿರಲಿದೆ. ಗುರು ಧನಭಾವದಲ್ಲಿ ಉಚ್ಚನಾಗಿರುವುದರಿಂದ ಆದಾಯ ವೃದ್ಧಿ, ಉಳಿತಾಯ, ಕುಟುಂಬದ ಬೆಂಬಲ ಹಾಗೂ ಧನಸಂಚಯಕ್ಕೆ ಬಲವಾದ ಯೋಗ ಕೂಡಿಬರುತ್ತದೆ. ಇದು ಮಿಥುನ ರಾಶಿಯವರಿಗೆ ವರ್ಷದ ಅತ್ಯಂತ ಶುಭ ಕಾಲವಾಗಿರಲಿದೆ.

ನವೆಂಬರ್ ವರೆಗೂ ರಾಹು ಕುಂಭ ರಾಶಿಯಲ್ಲಿರುವುದರಿಂದ ಮಿಥುನ ರಾಶಿಯವರಿಗೆ ಇದು ನವಮ ಭಾವವಾಗಿರಲಿದೆ. ರಾಹು ಭಾಗ್ಯ ಭಾವದಲ್ಲಿರುವುದರಿಂದ ವಿದೇಶ ಸಂಪರ್ಕ, ಉನ್ನತ ಶಿಕ್ಷಣ, ತಂತ್ರಜ್ಞಾನ ಮತ್ತು ಹೊಸ ತತ್ವಗಳಿಂದ ಲಾಭ ಸಾಧ್ಯ. ನವೆಂಬರ್ ಬಳಿಕ ರಾಹು ಮಕರ ರಾಶಿಗೆ ಹೋಗುವುದರಿಂದ, ಇದು ಅಷ್ಟಮ ಭಾವ. ಅನಿರೀಕ್ಷಿತ ಬದಲಾವಣೆಗಳು, ಹಣಕಾಸು ವ್ಯವಹಾರಗಳಲ್ಲಿ ಎಚ್ಚರ ಅಗತ್ಯ.

ಅದೇ ಸಮಯದಲ್ಲಿ ಕೇತು ಸಿಂಹದಿಂದ ಕರ್ಕ ರಾಶಿಗೆ ಸಂಚರಿಸುವುದರಿಂದ, ಇದು ದ್ವಿತೀಯ ಭಾವ. ಕೇತು ಧನಭಾವದಲ್ಲಿರುವುದರಿಂದ ಹಣದ ವಿಷಯದಲ್ಲಿ ನಿರ್ಲಿಪ್ತತೆ, ಮಾತಿನ ತೀಕ್ಷ್ಣತೆ ಅಥವಾ ಕುಟುಂಬದಲ್ಲಿ ಅಂತರ ಉಂಟಾಗುವ ಸಾಧ್ಯತೆ ಇದೆ.

ವಿವಾಹ ಮತ್ತು ಸಂತಾನ ವಿಚಾರಗಳಲ್ಲಿ ಗುರು ಉಚ್ಚನಾಗಿರುವ ದ್ವಿತೀಯಾರ್ಧ ಅತ್ಯಂತ ಅನುಕೂಲಕರ. ಆರೋಗ್ಯದ ದೃಷ್ಟಿಯಿಂದ ನರಮಂಡಲ, ನಿದ್ರೆ ಮತ್ತು ಜೀರ್ಣಕ್ರಿಯೆಗೆ ಗಮನ ಅಗತ್ಯ. ಒಟ್ಟಾರೆ, 2026ನೇ ವರ್ಷ ಮಿಥುನ ರಾಶಿಯವರಿಗೆ ವೃತ್ತಿ ಶಿಖರ, ಧನಬಲ ಮತ್ತು ಜೀವನದ ದೀರ್ಘಕಾಲೀನ ದಿಕ್ಕು ಸ್ಪಷ್ಟಗೊಳಿಸುವ ತಾಂತ್ರಿಕವಾಗಿ ಅತ್ಯಂತ ಮಹತ್ವದ ವರ್ಷವಾಗಿದೆ. ಆದರೆ ಯಾವುದೇ ನಿರ್ಣಯಕ್ಕೆ ಬರುವುದಕ್ಕೆ ಮೊದಲು ಕಡ್ಡಾಯವಾಗಿ ನಿಮ್ಮ ವಯಕ್ತಿಕ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.