
ಚಿತ್ರ: ಗೆಟ್ಟಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಹಾಗೂ ನಕ್ಷತ್ರಗಳಿಗೆ ಅನುಸಾರವಾಗಿ ಪ್ರತೀ ರಾಶಿಗೂ ಒಂದೊಂದು ವಿಶೇಷ ರತ್ನಗಳಿವೆ. ರಾಶಿಗೆ ಅನುಗುಣವಾಗಿ ರತ್ನಗಳನ್ನು ಧರಿಸುವುದರಿಂದ ಶುಭಫಲ ಹಾಗೂ ರಾಶಿಯಲ್ಲಿನ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ರತ್ನಗಳಲ್ಲಿ ಖನಿಜ ಹಾಗೂ ಜೈವಿಕ ರತ್ನಗಳು ಎಂಬ ಎರಡು ಪ್ರಕಾರಗಳಿವೆ.
ಜೈವಿಕ ರತ್ನಗಳು ಎಂದರೆ, ಜೀವಂತವಿರುವ ಜೀವಿಗಳ ಉತ್ಪನ್ನದಿಂದ ತಯಾರಿಸಿದ ರತ್ನಗಳಾಗಿವೆ.
ಉದಾಹರಣೆ: ಮುತ್ತು, ಹವಳ.
ಖನಿಜ ರತ್ನಗಳು ಎಂದರೆ, ಭೂಗರ್ಭದಲ್ಲಿ ರಾಸಾಯನಿಕ ಪ್ರಕ್ರಿಯೆಯಿಂದ ನೂರಾರು ವರ್ಷಗಳ ಕಾಲ ಸಿದ್ಧವಾದವುಗಳಾಗಿವೆ.
ಉದಾಹರಣೆ: ಮಾಣಿಕ್ಯ, ಪದ್ಮರಾಗ, ಪಚ್ಚೆ ಹಾಗೂ ನೀಲ ಇತ್ಯಾದಿಗಳು.
ರತ್ನಧಾರಣೆಯ ಮಹತ್ವ:
ರತ್ನಗಳ ಗುಣ ಧರ್ಮಕ್ಕೆ ಅನುಸಾರವಾಗಿ ರತ್ನ ಧರಿಸುವ ವ್ಯಕ್ತಿಯ ಶರೀರ ಹಾಗೂ ಮನಸ್ಸಿನ ಮೇಲೆ ರತ್ನಗಳು ಪ್ರಭಾವ ಬೀರುತ್ತವೆ.
ಪ್ರತಿಯೊಂದು ರತ್ನಕ್ಕೂ ವಿಶಿಷ್ಟ ಬಣ್ಣವಿರುತ್ತದೆ. ಅದು ದೈವಿಕ ಹಾಗೂ ವಿಜ್ಞಾನಕ್ಕೆ ಅನುಸಾರವಾಗಿ ಪ್ರತಿಯೊಂದು ಬಣ್ಣದಲ್ಲಿ ಸತ್ವ, ರಜ ಹಾಗೂ ತಮ ಗುಣಗಳು ಇರುತ್ತದೆ. ಕೆಂಪು ಬಣ್ಣ ರಜೋಗುಣ, ಹಳದಿ ಬಣ್ಣ ಸತ್ವ ಗುಣ ಹಾಗೂ ಕಪ್ಪು ಬಣ್ಣ ತಮೋಗುಣವನ್ನು ಸೂಚಿಸುತ್ತದೆ.
ಕೆಂಪು ಬಣ್ಣದ ರತ್ನ ಸೂರ್ಯನಿಗೆ ಸಂಬಂಧಿಸಿದರೆ, ಹಳದಿ ಬಣ್ಣದ ಪುಷ್ಯರಾಗ ಗುರುಗ್ರಹಕ್ಕೆ ಸಂಬಂಧಿಸಿದೆ.
ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಯಾವ ಗ್ರಹವು ದುರ್ಬಲ ಅಥವಾ ದೋಷಿಯಾಗಿರುತ್ತದೆಯೋ ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ.
ಸೂರ್ಯ ಗ್ರಹ:
ಮಾಣಿಕ್ಯ: ಸೂರ್ಯನ ಪ್ರಭಾವವಿರುವ ಸಿಂಹ ರಾಶಿಯವರು ಮಾಣಿಕ್ಯವನ್ನು ಧರಿಸಬೇಕು. ಇದರಿಂದ ಶೌರ್ಯ, ಧೈರ್ಯ, ಆರೋಗ್ಯ ವೃದ್ಧಿಯಾಗಲಿದೆ.
ಚಂದ್ರ ಗ್ರಹ :
ಮುತ್ತು: ಚಂದ್ರನ ಪ್ರಭಾವವಿರುವ ಕರ್ಕಾಟಕ ರಾಶಿಯವರು ಮುತ್ತು ಧರಿಸುವುದು ಉತ್ತಮವಾಗಿದೆ. ಈ ರತ್ನ ಧರಿಸುವುದರಿಂದ ಸುಖ ಪ್ರಾಪ್ತಿಯಾಗಲಿದೆ.
ಮಂಗಳ ಗ್ರಹ :
ಹವಳ: ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಹವಳ ಧರಿಸುವುದರಿಂದ ತೇಜಸ್ಸು, ಲಾಭ ಹಾಗೂ ಯಶಸ್ಸು ದೊರೆಯುತ್ತದೆ.
ಬುಧ ಗ್ರಹ:
ಪಚ್ಚೆ : ಮಿಥುನ ಮತ್ತು ಕನ್ಯಾ ರಾಶಿಯವರು ಧರಿಸಿದರೆ ಬುಧನ ಅನುಗ್ರಹವಿರುವ ರಾಶಿಗಳಾಗಿವೆ. ಬುಧಗ್ರಹಕ್ಕೆ ಅನುಸಾರವಾಗಿ ಭೌತಿಕ ಕ್ಷಮತೆ, ವಾಕ್ ಶಕ್ತಿ ಸುಧಾರಣೆ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಸುಧಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಗುರು ಗ್ರಹ:
ಪುಷ್ಯರಾಗ : ಧನಸ್ಸು ಮತ್ತು ಮೀನ ರಾಶಿಯವರು ಪುಷ್ಯರಾಗ ಧರಿಸುವುದರಿಂದ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ ಎಂದು ಹೇಳಲಾಗುತ್ತದೆ.
ಶುಕ್ರ ಗ್ರಹ:
ವಜ್ರ : ವೃಷಭ ಮತ್ತು ತುಲಾ ರಾಶಿಯವರು ವಜ್ರ ಧರಿಸುವುದು ಶುಭಕರವಾಗಿದೆ. ವೀರ್ಯ ವೃದ್ಧಿ, ವೈವಾಹಿಕ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ.
ಶನಿ ಗ್ರಹ:
ನೀಲಾ: ಮಕರ ಮತ್ತು ಕುಂಭ ರಾಶಿಯವರು ನೀಲಾ ರತ್ನ ಧರಿಸಬೇಕು. ಇದರಿಂದಾಗಿ ಚಿಂತನಶೀಲತೆ ಹೆಚ್ಚಾಗುವುದರೊಂದಿಗೆ ಬುದ್ಧಿ ಶುರುಕುಗೊಳ್ಳುತ್ತದೆ.
ಧರಿಸುವ ಬಗೆ:
ರತ್ನಗಳನ್ನು ಸ್ತ್ರೀಯರು ಎಡ ಕೈಗೆ ಧರಿಸಬೇಕು. ಎಡ ಕೈ ಚಂದ್ರನಾಡಿಗೆ ಸಂಬಂಧಿಸಿದಾಗಿರುವುದರಿಂದ, ಸ್ತ್ರೀಯರಿಗೆ ಉತ್ತಮ ಫಲ ದೊರೆಯುತ್ತದೆ.
ಪುರುಷರು ಬಲ ಕೈಗೆ ಈ ರತ್ನಗಳನ್ನು ಧರಿಸಬೇಕು. ಬಲ ಕೈ ಸೂರ್ಯ ನಾಡಿಗೆ ಸಂಬಂಧಿಸಿರುವುದರಿಂದ ಪುರುಷರಿಗೆ ಉತ್ತಮ ಫಲ ದೊರೆಯುತ್ತದೆ.
ಆಗ್ರಹದ ವಾರದಂದು ( ಆ ರಾಶಿಗೆ ನಿಗದಿಯಾದ ದಿನ) ಸೂರ್ಯೋದಯದ ನಂತರ ರತ್ನಧಾರಣೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.