ADVERTISEMENT

DK ಶಿವಕುಮಾರ್ ಓದಿದ ಖಡ್ಗ ಮಾಲಾ ಸ್ತೋತ್ರ: ಮಹತ್ತರ ಶಕ್ತಿ ಬಗ್ಗೆ ತಿಳಿದುಕೊಳ್ಳಿ

ಮಹಾಬಲಮೂರ್ತಿ ಕೊಡ್ಲೆಕೆರೆ
Published 23 ಅಕ್ಟೋಬರ್ 2025, 9:00 IST
Last Updated 23 ಅಕ್ಟೋಬರ್ 2025, 9:00 IST
<div class="paragraphs"><p>ಡಿಕೆ. ಶಿವಕುಮಾರ್‌</p></div>

ಡಿಕೆ. ಶಿವಕುಮಾರ್‌

   

ಡಿ.ಕೆ ಶಿವಕುಮಾರ್ ಓದಿದ ಶ್ರೀ ಖಡ್ಗ ಮಾಲಾ ಸ್ತೋತ್ರ:

ಪ್ರತಿ ವರ್ಷವೂ ಎರಡು ವಾರಗಳ ಕಾಲಾವಧಿಗೆ ಕಾರಣಿಕ ಶಕ್ತಿಯುಕ್ತ ಪ್ರಸಿದ್ಧ ಶ್ರೀ ದೇವಿ ಮಾತಾ ಹಾಸನಾಂಬೆ ದೇವರ ದರ್ಶನ ಸೌಭಾಗ್ಯ ಭಕ್ತ ಸಮೂಹಕ್ಕೆ ಸಾಧ್ಯವಾಗುವಂತೆ ಮಂದಿರದ ಬಾಗಿಲು ತೆರೆಯಲ್ಪಡುತ್ತದೆ. ಈ ಸಂದರ್ಭದಲ್ಲಿ ದೇವಿ ದರ್ಶನ ಅನೇಕ ವಿಧವಾದ ದೇವಿಯ ಅನುಗ್ರಹಗಳಿಗೆ ಕಾರಣವಾಗುತ್ತದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ವರ್ಷದಿಂದ ವರ್ಷಕ್ಕೆ ದೇವಿಯನ್ನು ಕಣ್ತುಂಬಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಆಧುನಿಕವಾದ ಈ ಕಾಲದಲ್ಲಿ ಪ್ರಸಾರ ಮಾಧ್ಯಮಗಳು ಅನೇಕ ಸಂಗತಿಗಳನ್ನು ಬಿತ್ತರಿಸುವಾಗ ಜನರ ಗಮನ, ಕುತೂಹಲ ಇತ್ಯಾದಿಗಳು, ವಿವಿಧ ಕಾರಣಗಳಿಗಾಗಿ ಈ ಸಂಗತಿಗಳತ್ತ ಸೆಳೆಯಲ್ಪಡುತ್ತಿರುತ್ತವೆ.

ADVERTISEMENT

ಪ್ರಚಾರ ಲಭ್ಯ ಸಂಗತಿಗಳು ಬಹುವಾದ ರೀತಿಯಲ್ಲಿ ಜನರ ನಡುವೆ ಅನೇಕ ರೀತಿಯಲ್ಲಿ ಚರ್ಚಿಸಲ್ಪಡಲೂ ಅವಕಾಶ ಪಡೆಯುತ್ತವೆ. ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯನ ಕಾರಣಿಕ ನುಡಿಗಳೂ ಆಯಾ ವರ್ಷದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳ ವಿಷಯಗಳಲ್ಲಿ ಜನರು ಈ ನುಡಿಗಳನ್ನು ಮುಂದಿಟ್ಟುಕೊಂಡು ಅನೇಕ ವಿಷಯಗಳನ್ನು ಚರ್ಚಿಸಲು ಅವಕಾಶ ಮಾಡಿಕೊಡುತ್ತವೆ. ನಮ್ಮರಾಜ್ಯದ ಉಪ ಮುಖ್ಯ ಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಕೂಡಾ ಶ್ರೀ ದೇವಿ ಹಾಸನಾಂಬೆಯ ದರ್ಶನಕ್ಕೆ ಹೋದಾಗ ದೇವಿಯ ಎದುರು ಖಡ್ಗ ಮಾಲಾ ಸ್ತೋತ್ರವನ್ನು ಪಠಿಸಿದ್ದು ಅನೇಕ ರೀತಿಯ ಚರ್ಚೆಗಳಿಗೆ ಆಸ್ಪದ ಮಾಡಿತು.

ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆದವು. ಪ್ರಧಾನವಾಗಿಯೇ ಸುದ್ದಿಯನ್ನೂ ಬಿತ್ತರಿಸಿದವು. ವೈರಿಗಳು ಯಾವಾಗಲೂ ಮನುಷ್ಯನನ್ನು ಅಡೆತಡೆಗಳಿಗೆ ಒಯ್ಯುತ್ತಾರೆ. ವೈರಿ ಯಾವಾಗಲೂ ಮನುಷ್ಯನಿಗೆ ಮನುಷ್ಯನೇ ಆಗಬೇಕಾಗಿಲ್ಲ. ಅನೇಕ ರೀತಿಯ ರೋಗಗಳು, ಸಾಮಾಜಿಕ, ಆರ್ಥಿಕ ಸಮಸ್ಯೆಗಳೂ ಮನುಷ್ಯನ ವೈರಿಗಳಾಗಬಹುದು. ಆದರೆ ಡಿ.ಕೆ.ಶಿವಕುಮಾರ್ ವಿರುದ್ಧದ ವೈರಿ ಶಕ್ತಿಗಳು ಯಾವುವು ಹಾಗಾದರೆ? ಈಗ ನಡೆಯುತ್ತಿರುವ ಅವರ ಪಾಲಿನ ಶನಿ ಮಹಾ ದಶಾ ಕಾಲ ನಿರ್ದಿಷ್ಟವಾದ ರೂಪದಲ್ಲಿ ವಿರೋಧಿಗಳನ್ನು, ವೈರಿಗಳನ್ನು ನಿರ್ಮಿಸುತ್ತಿದೆ. ಹಲವು ಹಂಬಲಗಳನ್ನು ಪುಡಿ ಮಾಡಿ ವಿಳಂಬಿಸುತ್ತಿದೆ. ತಲುಪಲು ಅಸಾಧ್ಯವೇ ಹಾಗಾದರೆ ಎಂಬ ತಲ್ಲಣವ ಹದಿಗಟ್ಟಿಸುತ್ತಿದೆ. ಅವರಲ್ಲಿ ‘ನಿರ್ದಿಷ್ಟವಾದ ಶ್ರೇಷ್ಠ ಸ್ಥಾನಮಾನ ದೊರಕಬೇಕು ನಿಮಗೆ‘ ಎಂದು ಜ್ಯೋತಿಷವನ್ನು ತಿಳಿದವರು ಎನ್ನಲಾದ ಅಪರೂಪದ ಜನ ಹಲವು ದಿನಗಳ ಹಿಂದಿನಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಯಾಕೆ ಈ ವಿಳಂಬ? ಕಿರಿಕಿರಿಯಾಗುವ ಪ್ರಶ್ನೆಗಳನ್ನು ಮಾಧ್ಯಮದವರು ಎತ್ತುತ್ತಿರುತ್ತಾರೆ.

ಖಡ್ಗ ಮಾಲಾ ಸ್ತೋತ್ರ ಪಠಣವು ಯಾವಾಗಲೂ ದೇವಿಯ ಪ್ರೀತ್ಯರ್ಥವಾಗಿ ಪಠಿಸಬೇಕಾದದ್ದು. ಒಂದು ಜನ್ಮ ಕುಂಡಲಿಯಲ್ಲಿ ಶುಕ್ರ ಗ್ರಹವನ್ನು ದೇವಿಯ ಸ್ವರೂಪದಲ್ಲಿ ಗಮನಿಸಲಾಗುತ್ತದೆ. ಇಂತಹ ಈ ಶುಕ್ರ ಗ್ರಹ ಶಿವಕುಮಾರ್ ಅವರ ಜನ್ಮ ಕುಂಡಲಿಯಲ್ಲಿ ಕೆಲವು ನ್ಯೂನತೆಗಳನ್ನು ಹೊಂದಿದ ಸ್ಥಿತಿಯಲ್ಲಿ ಇದೆ. ದುಷ್ಟ ಶಕ್ತಿಯ ವಿರುದ್ಧದ, ಶತ್ರು ಬಲದ ನಿವಾರಣೆಗಾಗಿ ಪ್ರಧಾನವಾಗಿ ಬೇಕಾದ ಅತುಳ ಬಲ ನಮ್ಮ ಆರ್ಷೇಯ ಪರಂಪರೆಯ ಪ್ರಕಾರ ಸದಾ ನಮಗೆ ದೇವಿಯಿಂದಲೇ ಒದಗಿ ಬರಬೇಕು. ಜಗದ ಏಕೈಕ ಬಲವೇ ಆದ ಶಿವ, ಅವನೇ ಮಹಾಬಲ. ಇಂತಹ ಶಿವನೇ ತಾಂಡವದ ಕಾಲ ಭೈರವನಾಗಲು ಅವನೊಳಗೆ ಶಕ್ತಿ ಸಮುಚ್ಚಯಳಾದ ಶಂಕರಿಯೇ ದೋರ್ದಂಡ ಸಮ್ಯಕ್ ಸ್ವರೂಪಿಣಿಯಾಗಿ ಬೇರೂರಬೇಕು. ಆಗಲೇ ಶಂಕರನಿಗೆ ಸರ್ವತ್ರವಾದ ಸಿದ್ಧಿ. ಅವನ ಮೂರನೇಯ ಕಣ್ಣಲ್ಲಿ ದುರ್ಗೆಯೇ ಬೆಂಕಿ. ವಿಷವೂ ಕಂಠ ದಾಟಿ ಸಾಗದು. ಆಗಲೇ ನಾಗಭೂಷಣ ಅವನು. ಪ್ರಾರ್ಥನೆ ಫಲ ನೀಡುತ್ತದೆ.

ಡಿ.ಕೆ.ಶಿವಕುಮಾರ್ ಪ್ರಾರ್ಥನೆಯಲ್ಲಿ ನಂಬಿಗೆ ಇಟ್ಟವರು. ‘ಪ್ರಾರ್ಥನೆ ಫಲ ಕೊಡುತ್ತದೆ‘ ಎಂಬುವುದು ಅವರ ಜೀವನದ ಟ್ಯಾಗ್ ಲೈನ್. ಅವರ ಜಾತಕ ಕುಂಡಲಿಯಲ್ಲಿ ಪ್ರಧಾನ ಗ್ರಹಗಳು ಐದು ಮನೆಗಳಲ್ಲಿ ಹಂಚಿಹೋದುದು ಕಾರಣವಾಗಿ, ಅವರಿಗೆ ಸರ್ರನೆ 2017 ರಿಂದ ಅನೇಕ ಅಗ್ನಿ ಪರೀಕ್ಷೆಗಳು ಎದುರಾದವು. ಐಟಿ ರೇಡ್, ಇಡಿ ತಲ್ಲಣ, ತಿಹಾರ್ ಜೈಲು ಇತ್ಯಾದಿ. ಶನಿ ಮಹಾ ದಶಾದ ಕಾಲ ಘಟ್ಟ ಅವರನ್ನು ಬಸವಳಿಸುತ್ತಿದೆ ಎಂಬುದು ಸತ್ಯವೆ?  ಗುರು ದಶಾ ಕಾಲವು ತೀವ್ರ ವೇಗದಲ್ಲಿ ಅವರ ಎದುರಿನ ತಡೆ ಗೋಡೆಗಳನ್ನು ಒಡೆದು ತೆಗೆಯಲು ಅಸಾಧ್ಯ ಶಕ್ತಿಯನ್ನು ಕೊಟ್ಟಿದ್ದು ಸುಳ್ಳಲ್ಲ. ಆದರೆ ಈಗ ಶನಿ ಮಹಾ ದಶಾ ಕಾಲ ಶಿವಕುಮಾರ್ ಅವರಿಗೆ ಆ ರೀತಿಯ ಮಹಾ ಶಕ್ತಿಯನ್ನು ಒದಗಿಸಲು ಮುಂದಾಗುತ್ತಿಲ್ಲ ಎಂಬುದೇ ಶಿವಕುಮಾರರಲ್ಲಿ ಸಮಸ್ಯೆ ಎದ್ದೇಳಿಸಿದೆಯೆ ಹಾಗಾದರೆ? ಹೀಗಾಗಿಯೇ ದಿವ್ಯ ಶಕ್ತಿಯ ನೆರವು ಬಯಸಿ ಶಿವಕುಮಾರ್ ತಲುಪಬೇಕಾಗಿರುವ ಗುರಿ ಮುಟ್ಟಲು ತವಕದಲ್ಲಿದ್ದಾರೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ‘ನಾನು ಕಾಯಲು ಸಿದ್ಧನಿದ್ದೇನೆ. ಅವಸರವಿಲ್ಲ‘ ಎಂಬ ಮಾತನ್ನು ಸ್ವತಃ ಶಿವಕುಮಾರ್ ಅವರೇ ಸದಾ ಹೇಳುತ್ತಿರುತ್ತಾರೆ ಮಾಧ್ಯಮದವರ ಎದುರು.

‘ಶಿವಕುಮಾರ್ ಅವರು ಶತ್ರು ಭೈರವಿ ಹೋಮ ಮಾಡಿಸಿದರು’ ಎಂಬುದು ವರದಿ ಆಯಿತು. ‘ಪ್ರತ್ಯಂಗಿರಾ ಆರಾಧನೆ ಮಾಡಿದರು’ ಎಂಬುದು ಸುದ್ದಿ ಆಯ್ತು. ‘ಆಸ್ಸಾಂ ರಾಜ್ಯದ ಕಾಮಾಕ್ಯಾ ದೇವಿಯ ದರ್ಶನ ಮಾಡಿದರು’ ಎಂಬುದು ಸುದ್ದಿ ಆಗಿತ್ತು. ’ಕಾರ್ತವೀರ್ಯಾರ್ಜುನ ಹೋಮ’ ಮಾಡಿಸಿದರು ಎಂಬುದೂ ವರದಿಯಲ್ಲಿ ಬಂತು. ಈಗ ಹಾಸನಾಂಬೆಯ ಎದರು ಖಡ್ಗ ಮಾಲಾ ಸ್ತೋತ್ರ ಪಠಿಸಿದರು ಎಂಬುದು ಸುದ್ದಿ ಆಯ್ತು. ಈ ಕುರಿತಾದ ಹಲವರ ವಿಶ್ಲೇಷಣೆಯೂ ಸಾಗಿದೆ. ಈ ವಿಶ್ಲೇಷಣೆಯ ಪ್ರಕಾರ, ಎಲ್ಲ ಅನಿಷ್ಟ ಹಾಗೂ ಶತ್ರುಗಳ ವಿರುದ್ಧ ಯಶಸ್ಸು ಪಡೆಯಲು, ಕೈಗೆ ಸಿಗದೆ ಜಾರಿ ಹೋಗುತ್ತಿರುವುದನ್ನು ಹಿಡಿದು ಕೈ ವಶಪಡಿಸಿಕೊಳ್ಳಲು ಶಿವಕುಮಾರ್ ಶಕ್ತಿಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಖಡ್ಗ ಮಾಲಾ ಸ್ತೋತ್ರ ಮಹತ್ತರ ಶಕ್ತಿ ಮಂತ್ರವೆ?

ನಂಬಿಕೆಯ ಪ್ರಕಾರ ಇದು ಮಹತ್ವದ ಶಕ್ತಿ ಮಂತ್ರ. ದುಷ್ಟರ ನಿವಾರಣೆಗಾಗಿ ಕೇವಲ ಒಂದು ಖಡ್ಗವನ್ನಲ್ಲ, ಅಸಂಖ್ಯಾ ಖಡ್ಗಗಳನ್ನು ಜೋಡಿಸಿದ ಮಾಲೆಯನ್ನೇ ಧರಿಸಿದವಳು ದೇವಿ. ಶಾಕ್ತ ಪರಂಪರೆ ನಮ್ಮ ಆರ್ಷೇಯ ವಿವರಗಳೊಂದಿಗೆ ದುಷ್ಟರ ವಿನಾಶವನ್ನು, ವೈರಿಗಳ ಸದೆ ಬಡಿಯುವಿಕೆಯನ್ನು ಕೆಲವು ಶಕ್ತಿ ಮಂತ್ರಗಳು, ಪೂಜೆಗಳು, ಹವನ ಹೋಮಾದಿಗಳು ಹೇಗೆ ಮಾಡುತ್ತವೆ ಎಂಬುದನ್ನು ದೇವಿಯ ಸೌಮ್ಯ ಸ್ವರೂಪವನ್ನು ಹಾಗೂ ಉಗ್ರ ಸ್ವರೂಪವನ್ನು ವಿಂಗಡಿಸಿ ವಿಶದೀಕರಿಸುತ್ತದೆ. ಈ ವಿಚಾರವನ್ನು ನಂಬಲೇಬೇಕೆಂದು ಅರಿತವರು ಒತ್ತಡ ಹೇರುವುದಿಲ್ಲ. ನಂಬುವವರಿಗೆ ದೈವಿಕ ಶಕ್ತಿಯ ಆಳ ಅಗಲ ಸರಳವಾಗಿ ಅರ್ಥವಾಗದೇ ಇರುವುದಿಲ್ಲ. ದಶ ಮಹಾ ವಿದ್ಯಾ ದೇವಿ ಉಪಾಸನೆಯಲ್ಲಿ ಘೋರ ರೂಪೇ ಮಹಾ ರಾವೇ ಸರ್ವ ಶತ್ರು ವಶಂಕರಿ ಎಂಬುದೇ ಪ್ರದಾನವಾದುದು.

ದೇವಿ ಪುರಾಣ, ದೇವಿ ಭಾಗವತ, ದೇವಿ ಸಪ್ತಶತಿ ಪಾರಾಯಣ ಇತ್ಯಾದಿ ಪಠಣಗಳೆಲ್ಲ ಜೀವಿಗಳ ಉನ್ಮಾದ, ಕ್ರೌರ್ಯ, ಕ್ರೋಧ, ಮದ, ಸೇಡು, ಬುದ್ಧಿ ಮಾಂದ್ಯತೆಗಳ ವಿರುದ್ಧ ಯಶಸ್ಸು ಪಡೆಯಲೇ ಆಗಿವೆ. ಜನ್ಮ ಕುಂಡಲಿಯಲ್ಲಿ ಮೂಡಿಕೊಳ್ಳುವ ಕುಜ ದೋಷ, ಅನಿಯಂತ್ರಿತ ಕಾಮ ಸ್ವೇಚ್ಛಾ ದೋಷ ದೌರ್ಜನ್ಯಗಳ ವಿರುದ್ಧ ರಕ್ಷೆ ಪಡೆಯಲೇ ಆಗಿದೆ. ಖಡ್ಗ ಮಾಲಾ ಸ್ತೋತ್ರ ಕೂಡಾ ಜನ್ಮ ಕುಂಡಲಿಯ ದೋಷದ ಕಾರಣವಾಗಿ ಎದುರಾಗುವ ಸಂಕಷ್ಟಗಳ ನಿವಾರಣೆಗೇ ಪಠಣ ಯೋಗ್ಯವಾಗಿದೆ.

ಸದ್ಯ ಕೇಂದ್ರ ಸರಕಾರದ ಸಚಿವರೂ, ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳೂ ಆದ ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮದೇ ಆದ ಪ್ರತಿಕ್ರಿಯೆಯನ್ನು ಕೂಡ ಕೊಟ್ಟರು‌. ‘ಪಠಣ ದೋಷಗಳಿಂದ ಕೂಡಿದರೆ ಶಕ್ತ ಮಂತ್ರ ಪಠಣಗಳಿಂದ ಅಪಾಯವೇ’ ಜಾಸ್ತಿ ಎಂದು ಅಂದರು. ಇನ್ನು, ಕೆಲವರು ಶಿವಕುಮಾರ್ ಅವರ ಪೂಜೆಗಳು ಸಾರ್ವಜನಿಕರಿಗೆ ತಿಳಿಯುವಂತಾಗುವುದೇ ಸಮಸ್ಯೆ ನಿರ್ಮಿಸುತ್ತದೆ ಎಂದೂ ಹೇಳುತ್ತಾರೆ. ಅಂತೂ ಖಡ್ಗ ಮಾಲಾ ಸ್ತೋತ್ರ ಪಠಣ ಒಳಿತಿಗಾಗಿ ದಾರಿ ಆಗಿದೆ ಎಂದು ಅರಿತವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.