ADVERTISEMENT

Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?

ಮಹಾಬಲಮೂರ್ತಿ ಕೊಡ್ಲೆಕೆರೆ
Published 2 ಸೆಪ್ಟೆಂಬರ್ 2025, 6:30 IST
Last Updated 2 ಸೆಪ್ಟೆಂಬರ್ 2025, 6:30 IST
<div class="paragraphs"><p>ರಕ್ತ ಚಂದ್ರಗ್ರಹಣ</p></div>

ರಕ್ತ ಚಂದ್ರಗ್ರಹಣ

   
ಭಾರತದಲ್ಲಿ ಈ ತಿಂಗಳ ಏಳನೇ ತಾರೀಕಿನ ರಾತ್ರಿ 8.58ಕ್ಕೆ ಶುರುವಾಗಿ ಎಂಟನೇ ತಾರೀಕಿನ ದಿನದ ಪ್ರಾರಂಭಿಕ 22 ನಿಮಿಷಕ್ಕೆ ಮುಕ್ತಾಯವಾಗುವ ವಿಶೇಷವಾದ ರಾಹುಗ್ರಸ್ತ ಚಂದ್ರಗ್ರಹಣ ವಿವಿಧ ಕಾಲ ಘಟ್ಟವನ್ನು ವ್ಯಾಪಿಸಿಕೊಳ್ಳುತ್ತದೆ. ಏಷ್ಯಾ ಖಂಡದ ಬಹುತೇಕ ಕಡೆ ಗೋಚರಿಸುವ ಸೆ.7ರ ಚಂದ್ರಗ್ರಹಣವು ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್ ದೇಶಗಳ ಹಲವೆಡೆಯೂ ಗೋಚರಕ್ಕೆ ಬರುತ್ತಿದ್ದು, ಇದು 2025ನೇ ಇಸವಿಯ ಬಹು ಮುಖ್ಯ ಚಂದ್ರಗ್ರಹಣವಾಗಿದೆ.

ಚಂದ್ರಗ್ರಹಣ ಹೇಗೆ ಉಂಟಾಗುತ್ತದೆ?

ಸೂರ್ಯ ಮತ್ತು ಚಂದ್ರ ಗ್ರಹಗಳ ನಡುವೆ ಭೂಮಿಯು ಕೂಡ ನೇರ ಒಂದೇ ರೇಖೆಯಲ್ಲಿ ಒಗ್ಗೂಡಿದಾಗ ಚಂದ್ರ ಗ್ರಹಣ ಎಂಬ ಪ್ರಕ್ರಿಯೆ ಉಂಟಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರ ಕಾರಣದಿಂದಾಗಿಯೇ ಗ್ರಹಣ ಗ್ರಹಿಕೆಗೆ ಲಭ್ಯವಾಗುತ್ತದೆ. ರಾಹು ಗ್ರಸ್ತವಾಗಿರುವ ಈ ಗ್ರಹಣ ಧನಿಷ್ಠಾ ನಕ್ಷತ್ರ ಹಾಗೂ ಪೂರ್ವಾಭಾದ್ರ ನಕ್ಷತ್ರದವರನ್ನು ಕಾಡುವ ಗ್ರಹಣವಾಗಿದೆ.

ADVERTISEMENT

ಚಂದ್ರಗ್ರಹಣದಿಂದ ಯಾವ ರಾಶಿಯವರಿಗೆ ಸಂಕಷ್ಟ?

ಮುಖ್ಯವಾಗಿ ಕುಂಭ ರಾಶಿಯವರ ಪಾಲಿಗೆ ಮಿಸುಕಾಟ, ಕಿರಿಕಿರಿ ತರುವ ಗ್ರಹಣವಾದರೂ, ಮೀನ ರಾಶಿಯವರಿಗೆ ಕೂಡಾ ಕೆಲವು ಬಿಕ್ಕಳಿಕೆಗಳ ಉಗಮಕ್ಕೆ ಕಾರಣವಾಗುವ ಉಪದ್ವ್ಯಾಪವನ್ನು ಸೃಷ್ಟಿಸಬಹುದಾಗಿದೆ. ಜತೆಗೆ ಕೆಲವು ಸೂಕ್ಷ್ಮ ಕಿರು ಸಮಸ್ಯೆಗಳನ್ನು ಕಟಕ ಹಾಗೂ ಸಿಂಹ ರಾಶಿಯವರಿಗೂ ಅಲ್ಪ ಪ್ರಮಾಣದಲ್ಲಿ ಸೋಕಿಸಬಹುದಾಗಿದೆ.

ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ ಏನು?

ಪೌರಾಣಿಕ ಹಿನ್ನೆಲೆಯ ಅಮೃತ ಮಂಥನದ ಸಂದರ್ಭದ ಕತೆ, ರಾಹು ಹಾಗೂ ಕೇತು ಗ್ರಹಗಳು ರೂಪುಗೊಂಡ ಪರಿಯನ್ನು ವಿಶದವಾಗಿ ವಿವರಿಸುತ್ತದೆ. ಸಮುದ್ರಮಥನ ಕಾಲದಲ್ಲಿ ಅಮೃತವು ಹೊರಬಂದಾಗ, ದೇವತೆಗಳೊಂದಿಗೆ ಸ್ವಭಾನು ಎಂಬ ರಾಕ್ಷಸನಿಗೂ ಅದು ಸಲ್ಲುತ್ತಿದೆ ಎಂಬುದು ಅರಿವಿಗೆ ಬಂದಾಗ ಮಹಾವಿಷ್ಣುವು ಸ್ವಭಾನುವನ್ನು ಚಕ್ರಾಯುಧದಿಂದ ಮರ್ದಿಸುವ ಕಥೆಯದು. ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನ ಚಕ್ರದ ಏಟಿಗೆ ಒಂದೇ ಕಾಯವಾಗಿದ್ದ ಸರ್ಪ ಸ್ವರೂಪಿ ದೇಹವು ಮಿಂಚಿನ ಕಾರ್ಯಾಚರಣೆ ನಡೆಯಿತೆಂಬಂತೆ ಎರಡು ಹೋಳುಗಳಾಗಿ ಛೇದಿಸಲ್ಪಡುತ್ತವೆ. ಸರ್ಪದ ಹೆಡೆಯ ಭಾಗವನ್ನು ಅಂದರೆ ರುಂಡವನ್ನು ರಾಹು ಎಂಬ ಹೆಸರಿನಲ್ಲೂ, ಮುಂಡದ ಭಾಗವನ್ನು ಕೇತು ಎಂಬ ಹೆಸರಿನಲ್ಲಿಯೂ ಗುರುತಿಸುವ ಕ್ರಮ ನಮ್ಮ ಭಾರತೀಯ ಶಾಸ್ತ್ರದಲ್ಲಿದೆ.

ಹೀಗೆ ಅಮೃತದ ಅಂಶ ಸ್ವಭಾನು ಎಂಬ ರಾಕ್ಷಸನ ಮೋಸದ ತಂತ್ರದಿಂದಾಗಿ ಅಪವ್ಯಯವಾಗುತ್ತಿದೆ ಎಂಬ ಎಚ್ಚರವನ್ನು ಶ್ರೀ ಮನ್ನಾರಾಯಣನಿಗೆ ಒದಗಿಸಿದವರೇ ಸೂರ್ಯ ಹಾಗೂ ಚಂದ್ರರಾಗಿರುವುದರಿಂದ ಸಮಯ ಸಿಕ್ಕಾಗ ರಾಹು ಅಥವಾ ಕೇತುಗಳು ಸೂರ್ಯ, ಚಂದ್ರರನ್ನು ನುಂಗುವ ಅಥವಾ ಘಾಸಿಗೊಳಿಸುವ ಪ್ರಯತ್ನ ನಡೆಸಲು, ಸೇಡಿನ ವಿಷಜ್ವಾಲೆ ಹೊತ್ತವರಾಗಿ, ಆಗಾಗ ಮುಂದಾಗುತ್ತಲೇ ಇರುತ್ತಾರೆ ಎಂಬುದು ನಮ್ಮ ಆರ್ಷೇಯ ನಂಬಿಕೆ. ಹಾಗೂ ಈ ರೀತಿಯ ಚಂದ್ರ ಸೂರ್ಯರ ಮೇಲಿನ ರಾಹು ಕೇತುಗಳ ಆಕ್ರಮಣ, ಸಫಲವಾಗುವ ಕಾಲಘಟ್ಟವೇ ಗ್ರಹಣ ಎಂಬ ವಿಧದಲ್ಲಿ ನಾವು ಭಾರತೀಯರು ನಂಬಿಕೆಯನ್ನೂ ಹೊಂದಿದ್ದೇವೆ.

ಚಂದ್ರಗ್ರಹಣ ಪರಿಣಾಮದಿಂದಾದ ವಿಪತ್ತುಗಳು
ಜ್ಯೋತಿಷ ಶಾಸ್ತ್ರದ ಆಧಾರದ ಲೆಕ್ಕಾಚಾರಗಳನ್ನು ನೀವು ನಂಬುವುದಾದರೆ ಗ್ರಹಣಗಳು ಮನುಷ್ಯನ ಜೀವನದಲ್ಲಿ ಬಾಧೆಗಳನ್ನು ತರುತ್ತವೆ. ಕೇವಲ ಒಂದೇ ಮತದಿಂದ ಅಂದಿನ ಪ್ರಧಾನಿ ದಿ.ವಾಜಪೇಯಿ ಅವರ ಸರಕಾರ ಉರುಳಿದ್ದು, ಆದಾಯಕ್ಕಿಂತ ಜಾಸ್ತಿಯಾದ ಆಸ್ತಿ ಹೊಂದಿದ್ದ ಕಾರಣದಿಂದ ಜಯಲಲಿತಾ ಅವರು ಜೈಲು ಸೇರಿದ್ದು, ಸ್ವಂತ ಅಳಿಯ ಚಂದ್ರಬಾಬು ನಾಯ್ಡು ಅವರೇ ತಮ್ಮ ಮಾವ ಎನ್.ಟಿ.ರಾಮ ರಾವ್ ಅವರ ಮಂತ್ರಿ ಮಂಡಲ ಉರುಳಿಸಿದ್ದು ಇತ್ಯಾದಿ ಗ್ರಹಣದ ಫಲದಿಂದಲೇ ಎಂದರೆ ನೀವು ವಿಸ್ಮಯ ಪಡಬಹುದೇನೋ? ವಾಟರ್ ಗೇಟ್ ಹಗರಣದ ಕಾರಣ ಹರಳುಗಟ್ಟಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅಧ್ಯಕ್ಷ ಪಟ್ಟದಿಂದ ಪದಚ್ಯುತಗೊಂಡು ಮುಖಭಂಗ ಅನುಭವಿಸಿದ್ದು ಚಂದ್ರ ಗ್ರಹಣದ ಫಲವಾಗಿಯೇ ಎಂಬುದು ಜ್ಯೋತಿಷದ ವಿಶ್ಲೇಷಣೆ.

ಚಂದ್ರಗ್ರಹಣ

ಚಂದ್ರಗ್ರಹಣದಿಂದ ಯಾವ ದೇಶಗಳಿಗೆ ಸಮಸ್ಯೆ?

ಈಗ ಸೆ.7ರಂದು ಭಾನುವಾರ ಸಂಭವಿಸಲಿರುವ ಗ್ರಹಣವು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳಿಗೆ ಇನ್ನು ಹತ್ತು ತಿಂಗಳ ಅವಧಿಯವರೆಗೂ ಯಾವುದೇ ವೇಳೆಯಲ್ಲಿ ವಿಪರೀತವಾದ ಪ್ರಾಕೃತಿಕ ವಿಕೋಪ ತರಬಹುದಾಗಿದೆ. ಇದೀಗ ಒಂದು ವಾರದ ಅವಧಿಗೂ ಮುನ್ನವೇ ಅಪಘಾನಿಸ್ತಾನ ದೇಶವು ಭೂಕಂಪನದಿಂದಾಗಿ ತತ್ತರಿಸಿದೆ ಎಂಬುದನ್ನು ನಾವು ಗಮನಿಸಬೇಕು. ಭಾರೀ ತೊಂದರೆಗಳನ್ನು ತರುವ ರೀತಿಯಲ್ಲಿ ಗ್ರಹಗಳು ಭೂಮಿಯ ಚಲನವಲನದ ಲಯಬದ್ಧ ಚಲನಶೀಲತೆಗೆ ಭಂಗ ತರುತ್ತಿರುತ್ತವೆ.

ಚಂದ್ರಗ್ರಹಣದಿಂದ ಈ ನಕ್ಷತ್ರಗಳವರಿಗೆ ಹಾನಿ, ಸರಳ ಪರಿಹಾರ ಏನು?

ಚಂದ್ರನು ಈ ಬಾರಿಯ ಗ್ರಹಣದ ಅವಧಿಯಲ್ಲಿ ಸ್ಥಾಯಿಗೊಳ್ಳಲಿರುವ ಧನಿಷ್ಠಾ ಮತ್ತು ಪೂರ್ವಾಭಾದ್ರ ನಕ್ಷತ್ರಗಳಿಗೆ ಅನುಗುಣವಾದ ಕುಂಭ ರಾಶಿಯಲ್ಲಿಯೇ ಮೂರು ತಿಂಗಳಿನಿಂದಲೂ ಬೀಡುಬಿಟ್ಟ ರಾಹು ಗ್ರಹದ ಗೋಚಾರದ ಸ್ಥಿತಿಯಿಂದಾಗಿ ಈ ನಕ್ಷತ್ರದವರಿಗೆ ತೊಂದರೆಗಳು ಇದ್ದೇ ಇರುತ್ತವೆ. ಈ ನಕ್ಷತ್ರದವರಿಗೆ ಸದ್ಯ ಸಾಡೇಸಾತಿ ಕಾಟದ ಪರದಾಟಗಳೂ ಸುತ್ತಿಕೊಂಡೇ ಇವೆ. ಹೀಗಾಗಿ ಗ್ರಹಣ ಶಾಂತಿಯ ಬಗ್ಗೆ ಆಯಾ ಊರುಗಳಲ್ಲಿ ರಾಹು ಪೀಡಾ ಹಾಗೂ ಚಂದ್ರ ಪೀಡಾ ಸ್ತೋತ್ರಗಳನ್ನು ಪಠಿಸಿದರೆ ಕ್ಷೇಮ. ಗ್ರಹಣ ಪೀಡೆಯ ದೋಷ ಉಳ್ಳವರು ನಡೆಸಬಹುದಾದ ಸರಳವಾದ ಪರಿಹಾರ ಇದಾಗಿದೆ.

ವಿವಿಧ ಬಗೆಯ ಅರಿಷ್ಟ ಫಲಗಳಿಂದ ಮುಂದಿನ ಎಂಟು ತಿಂಗಳುಗಳ ಕಾಲ ಹೆಚ್ಚಿನ ಅವಘಡಗಳಿಂದ ದೂರವಾಗಲು "ಉಡು ರಕ್ಷಾ ಶಾಂತಿ ಯಂತ್ರ"ವನ್ನು ಕೂಡಾ ಧರಿಸುವುದು ಸೂಕ್ತವೇ ಆಗಿದೆ. ಆರ್ಥಿಕ, ಆರೋಗ್ಯ ಸಂಬಂಧಿ ಬಾಧೆ, ಉದ್ಯೋಗ, ಪಾಲುದಾರಿಕೆ, ವ್ಯಾಜ್ಯ ಅಥವಾ ಕೋರ್ಟ್, ಒಮ್ಮೆಗೇ ಹಿನ್ನಡೆ ತರುವ ನಷ್ಟ, ದಾಂಪತ್ಯದ ಬಿರುಕು, ಮಕ್ಕಳ ಕಿರಿಕಿರಿ, ಕಾರಣವಿರದ ಸ್ವಜನರ ಅಥವಾ ಸಹೋದ್ಯೋಗಿಗಳ ದ್ವೇಷ ಇತ್ಯಾದಿ ಇತ್ಯಾದಿ ಕುಂಭ ಹಾಗೂ ಮೀನ ರಾಶಿಯವರಿಗೆ ವಕ್ಕರಿಸಬಹುದಾಗಿದೆ. ಕರ್ಕಾಟಕ ಹಾಗೂ ಸಿಂಹ ರಾಶಿಯವರಿಗೆ ಯಾವ ಕಾಲಕ್ಕೂ ಒದಗಬಾರದ ಕೆಲವು ಮುಖಭಂಗ ಎದುರಿಸಲು ವೇದಿಕೆ ಸಜ್ಜಾಗಬಹುದಾಗಿದೆ.

ಬೆಂಕಿಯ ಕುರಿತಾದ ಎಚ್ಚರಿಕೆ, ಗಾಳಿಯಿಂದ ಚಲನವಲನ ಪಡೆದ ಕ್ಷೇತ್ರ ಸೂಕ್ಷ್ಮಗಳಿಂದಾಗಿ ಕುಂಭ ಹಾಗೂ ಮೀನರಾಶಿಯವರಿಗೆ ಅಧಿಕ ಪ್ರಮಾಣದಲ್ಲಿ, ಸಿಂಹ ಹಾಗೂ ಕಟಕ ರಾಶಿಯವರಿಗೆ ಅಲ್ಪ ಪ್ರಮಾಣದಲ್ಲಿ ತೊಂದರೆಗಳನ್ನು ನಿರ್ಮಿಸುವ ಘಾತಕ ಶಕ್ತಿಯನ್ನು ಈ ರಕ್ತಾಚ್ಛಾದನ ಚಂದ್ರಗ್ರಹಣವು ಆಂತರ್ಯದಲ್ಲಿ ಪಡೆದಿರುತ್ತದೆ.

ರಕ್ತಚಂದ್ರಗ್ರಹಣ ಅಂತ ಯಾಕೆ ಕರೆಯುತ್ತಾರೆ?
ರಕ್ತಕ್ಕೂ, ಗ್ರಹಣಕ್ಕೂ ಸಂಬಂಧವಿಲ್ಲ. ಪೂರ್ತಿಯಾಗಿ ಭೂಮಿಯ ನೆರಳಿನಿಂದಾಗಿ ಮರೆಯಾಗುವ ಚಂದ್ರನ ಗ್ರಹಣದ ಅವಸ್ಥೆ ಒದಗಿದಾಗ, ಚಂದ್ರ ಅನೇಕ ರೀತಿಯ ಬೆಳಕು ಹಾಗೂ ನೆರಳಿನ ಪೃಥಃಕರಣದಿಂದಾಗಿ (Refraction) ರಕ್ತದಲ್ಲಿ ಅದ್ದಿ ತೆಗೆದಂತೆ ನಸು ನೀಲಿ ಛಾಯೆಯ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗಾಗಿ ಇದು ರಕ್ತ ಸಿಕ್ತ ಚಂದ್ರ ಗ್ರಹಣ ಎಂದೂ ಕರೆಯಲ್ಪಡುತ್ತದೆ.

ನೆಳಲು ಬೆಳಕಿನ ಆಟ

ಗ್ರಹಣಗಳೆಲ್ಲವೂ ಬಾನಂಗಳದ ನೆಳಲು ಬೆಳಕಿನ ಆಟವಾಗಿದೆ ಎಂಬುದರ ಹೊರತಾಗಿ ಇವು ಮನುಷ್ಯರಿಗಾಗಲಿ, ಇತರ ಯಾವುದೇ ಜೀವಿಗಳಿಗೇ ಇರಲಿ, ಸಸ್ಯ ರಾಶಿಗಳಿಗಾಗಲಿ ತೊಂದರೆ ತಾರದು ಎಂದು ವಿಜ್ಞಾನಿಗಳು ನಿಶ್ಚಿತವಾಗಿ, ನಿಸ್ಸಂಶಯವಾಗಿ ಸಾದರಪಡಿಸುತ್ತಾರೆ. ಇವರ ಧ್ವನಿಯಲ್ಲಿ ತಾವು ಮಂಡಿಸುತ್ತಿರುವ ವಿಷಯದಲ್ಲಿನ ದೃಢತೆ ಹಾಗೂ ಖಚಿತತೆ ಇದೆ ಎಂದು ನಂಬಿಕೆ ಇರುತ್ತದೆ. ಹೀಗಾಗಿಯೇ ಆತ್ಮವಿಶ್ವಾಸದ ಧ್ವನಿಯಲ್ಲಿ ಗ್ರಹಣಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ. ಹಾಗೆಂದು ಆಧುನಿಕ ವಿಜ್ಞಾನ ಹೇಳುವುದನ್ನೆಲ್ಲ ನಂಬಲೇ ಬೇಕೆಂಬ ಶಾಸನವನ್ನು ಯಾರೂ ಮಾಡಿಲ್ಲ. ಹಾಗೆಯೇ ಭಾರತೀಯ ಜ್ಯೋತಿಷ ವಿಜ್ಞಾನ ಪ್ರಣೀತವಾದ ಪರದಾಟಗಳು ಇರುತ್ತವೆ ಎಂಬ ವಿಚಾರಗಳನ್ನೂ ನಂಬಲೇಬೇಕೆಂಬ ಶಾಸನ ಕೂಡಾ ಖಂಡಿತವಾಗಿ ಇಲ್ಲ.

ಆದಾಗ್ಯೂ ಒಂದು ರೀತಿಯ ಹೊಯ್ದಾಟದಲ್ಲಿ, ತಲ್ಲಣಗಳಲ್ಲಿ ಜನರು ಇಕ್ಕಟ್ಟಿಗೆ ಸಿಲುಕುತ್ತಾರೆ. ಯಾರನ್ನು ನಂಬುವುದು ಗ್ರಹಣದ ವಿಚಾರದಲ್ಲಿ ಎಂಬುದರ ಬಗ್ಗೆ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ವಿಜ್ಞಾನ ಬೋಧಿಸುವ ವಿಜ್ಞಾನಿಗಳೇ ಗ್ರಹಣ ಕಾಲದ ಸ್ನಾನ, ಧ್ಯಾನ, ಗ್ರಹಣ ದೋಷ ಪರಿಹಾರ ಇತ್ಯಾದಿ ಮಾಡಿಸುವವರೂ ಇದ್ದಾರೆ. ಅಪ್ಪಟ ಕರ್ಮಠ ಸನಾತನಿ ಈತ ಎಂದು ಅಂದುಕೊಂಡರೆ ಆ ವ್ಯಕ್ತಿಯೇ ಗ್ರಹಣದ ವಿಚಾರದ ಯಾವ ಅನುಷ್ಠಾನ, ಧ್ಯಾನ, ದಾನ, ಆಚರಣೆಗಳನ್ನು ನಡೆಸದ ನಿರಾಳತೆಯನ್ನೂ ಪ್ರದರ್ಶಿಸಬಹುದು. ಇದೊಂದು ಚೋದ್ಯವೇ ಸರಿ. ಮನುಷ್ಯನಲ್ಲ ಮನಸ್ಸಿನ ಆಲೋಚನೆಗಳು, ಸೂಕ್ಷ್ಮಗಳು ಯಾವಾಗಲೂ ನಿಗೂಢವೇ. ಅವರವರ ನಂಬಿಕೆಯ ವಿಚಾರವದು.

ರಾಹು ಕೇತುಗಳು ನಮ್ಮ ಗೋಚರಕ್ಕೆ, ಇಲ್ಲಾ ಸ್ಪರ್ಶಕ್ಕೆ ನಿಲುಕದ ಗ್ರಹಗಳಾದರೂ ಇವು ನಡೆಸುವ ಉಪದ್ವ್ಯಾಪಗಳಿರಲಿ ಅಥವಾ ನಮ್ಮ ವರ್ಚಸ್ಸು ಹಾಗೂ ಜೀವಮಾನದ ಉತ್ಕರ್ಷಗಳನ್ನು ಒಮ್ಮೆಲೇ ಮೇಲೇರಿಸುವ ಹಾರ್ದಿಕತೆಯಾಗಲಿ ಅನನ್ಯ. ಗ್ರಹಣದ ಸಂದರ್ಭದಲ್ಲಿ ಕೆಲವರನ್ನು ಒಮ್ಮೆಗೇ ಬಹು ದೊಡ್ಡ ಸ್ತರಕ್ಕೆ ಎತ್ತಿ ನಿಲ್ಲಿಸಬಹುದು. ಹಾಗೆಯೇ ಹಲವರನ್ನು ಅಧಃಪತನಕ್ಕೆ ದೂಡಿ ಇನ್ನು ಇವರುಗಳು ಜೀವನದಲ್ಲಿ ಸರ್ವಥಾ ಮೇಲೇಳಲು ಸಾಧ್ಯವೇ ಆಗದ ಪ್ರಪಾತಕ್ಕೆ ಕೂಡಾ ತಳ್ಳಬಹುದು. ಭೂಕಂಪನ, ಜ್ವಾಲಾಮುಖಿ, ಮೇಘ ಸ್ಫೋಟ, ಚಂಡಮಾರುತ, ಹಿಮಪಾತ, ಕಂಡು ಕೇಳರಿಯದ ತೀವ್ರತಮ ಭೂಕುಸಿತಗಳಿಗೆ ಕಾರಣ ಮಾಡಬಹುದು. ನಮ್ಮ ಆಹಾರ ಪದಾರ್ಥಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿ ಗ್ರಹಣದ ಸಂದರ್ಭದಲ್ಲಿ ಯದ್ವಾತದ್ವಾ ತೊಂದರೆಗಳ ಪೂರವನ್ನೇ ನಿರ್ಮಿಸಬಹುದು. ದೇಶ ದೇಶಗಳ ನಡುವಣ ಯುದ್ಧ, ಪ್ರಪಂಚದ ಭೂಪಟದಲ್ಲೇ ಈ ಭೂಪ್ರದೇಶ ಅಥವಾ ದೇಶಗಳು ಇಲ್ಲವೇ ಇಲ್ಲ ಎಂಬ ಘೋರ ನಾಶಕ್ಕೆ, ಪ್ರಳಯಕ್ಕೆ ಕಾರಣ ಮಾಡುವಂಥಹಾ ಸಾಧ್ಯತೆಗಳೂ ಇರುತ್ತವೆ.

ವಿಜ್ಞಾನಿಗಳು ಹೇಳುತ್ತಿರುತ್ತಾರೆ ಗ್ರಹಣಗಳು ನಿರುಪದ್ರವಿಗಳು ಎಂದು. ಆದರೆ ಪ್ರತಿ ಬಾರಿ ಗ್ರಹಣ ಸಂಭವಿಸಿದಾಗಲೂ ಪ್ರಪಂಚದ ಮೇಲೆ ಗ್ರಹಣದ ಪ್ರಭಾವಗಳೇನು ಎಂಬುದನ್ನು ವಿಜ್ಞಾನಿಗಳು ಅಭ್ಯಸಿಸುತ್ತಲೇ ಇರುತ್ತಾರೆ. ಸಹಜವಾದ ಸ್ವರೂಪದ ವಿದ್ಯಮಾನಗಳು ಗ್ರಹಗಳು ಎಂಬ ವಿಚಾರ ನಿಖರವಾಗಿ ತಿಳಿದಿದ್ದರೆ ಈ ಅಭ್ಯಾಸ ಹಾಗೂ ಪ್ರಯೋಗಗಳ ಅವಶ್ಯಕತೆ ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ಅಪಾಯಕರ ಆಗಿರುವ ವಿಚಾರಗಳು ಯಾಕೆ ಎಂಬುದನ್ನು ಭಾರತೀಯ ಆರ್ಷೇಯ ವಿಚಾರಗಳು ಸಾಕಷ್ಟು ಸೂಕ್ತವಾಗಿ ಹೇಳಿವೆ. ಗ್ರಹಣಕ್ಕೆ ಹೆದರಿ ಮುದುಡುವ ಪ್ರವೃತ್ತಿ ಹೊಂದಿದವರು ಭಾರತೀಯರೊಂದೇ ಅಲ್ಲ. ಪ್ರಪಂಚದಾದ್ಯಂತವೂ ಸಾಕಷ್ಟು ಜನರು ಗ್ರಹಣವೆಂಬ ಮಾರಿಗೆ ಹೆದರುತ್ತಾರೆ. ಆದರೆ ಗ್ರಹಣಗಳು ಕೇವಲ ಹೆಮ್ಮಾರಿಗಳು ಎಂಬುದೇ ಅರ್ಥವಲ್ಲ. ಜೀವಂತಿಕೆಯ ಸಂಪನ್ನತೆಗಾಗಿನ ಮಾತೃ ಹೃದಯವನ್ನು ಹೊತ್ತ ಗ್ರಹಣಗಳೂ ಇರಬಲ್ಲವು ಹಾಗೂ ಇರುತ್ತವೆ. ಹೀಗಾಗಿ ಯಾರ ಜಾತಕದ ಮೇಲೆ ಗ್ರಹಣ ಯಾವೆಲ್ಲ ಪರಿಣಾಮ ಮಾಡಿಯಾವು ಎಂಬ ವಿಚಾರ ಜಾತಕಗಳನ್ನು ಪರಿಶೀಲಿಸಿಯೇ ನಿರ್ಧಾರಕ್ಕೆ ಬರಬೇಕು. ಯಾವ ಪ್ರದೇಶ, ವರ್ತಮಾನ ಗ್ರಹಣದ ಭೀಕರತೆಗೆ ತತ್ತರಿಸಬಲ್ಲವು ಎಂಬುದನ್ನೂ ಸರಿಯಾಗಿ ಗುರುತಿಸಿಯೇ ನಿರ್ಧಾರಕ್ಕೆ ಬರಬೇಕು.

ಅಂತೂ ಪ್ರಸ್ತುತ ಗ್ರಹಣವು ಯಾರಿಗೂ, ಯಾವ ಭೂಭಾಗಕ್ಕೂ, ಯಾವ ಸಂದರ್ಭಕ್ಕೂ ತೊಂದರೆಗಳನ್ನು ತಾರದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.