ADVERTISEMENT

ಹ್ಯುಂಡೇ ಜೊತೆ ಕೈಜೋಡಿಸಿದ ಟಿವಿಎಸ್‌: EV ತ್ರಿಚಕ್ರ ವಾಹನ ತಯಾರಿಕೆಗೆ ಒಪ್ಪಂದ

ಪಿಟಿಐ
Published 18 ಜನವರಿ 2025, 9:47 IST
Last Updated 18 ಜನವರಿ 2025, 9:47 IST
<div class="paragraphs"><p>ದೆಹಲಿಯ ಗ್ರೇಟರ್ ನೊಯಿಡಾದಲ್ಲಿ ಆಯೋಜನೆಗೊಂಡಿರುವ&nbsp;ಭಾರತ್‌ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಹ್ಯುಂಡೇ ಕಂಪನಿ ಪ್ರದರ್ಶಿಸಿದ ತ್ರಿಚಕ್ರ ವಾಹನಗಳ ಮಾದರಿ</p></div>

ದೆಹಲಿಯ ಗ್ರೇಟರ್ ನೊಯಿಡಾದಲ್ಲಿ ಆಯೋಜನೆಗೊಂಡಿರುವ ಭಾರತ್‌ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಹ್ಯುಂಡೇ ಕಂಪನಿ ಪ್ರದರ್ಶಿಸಿದ ತ್ರಿಚಕ್ರ ವಾಹನಗಳ ಮಾದರಿ

   

ಎಕ್ಸ್ ಚಿತ್ರ

ನವದೆಹಲಿ: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಹ್ಯುಂಡೇ ಕಂಪನಿಯು, ಆಟೋ ರಿಕ್ಷಾ ಸೇರಿದಂತೆ ಇತರ ಸಣ್ಣ ವಾಹನಗಳ ತಯಾರಿಕೆಯಲ್ಲಿ ಭಾರತದ ಟಿವಿಎಸ್‌ ಜತೆ ಒಪ್ಪಂದ ಮಾಡಿಕೊಂಡಿದೆ. 

ADVERTISEMENT

ಈ ಒಪ್ಪಂದದನ್ವಯ ಅತ್ಯಾಧುನಿಕ ಬ್ಯಾಟರಿ ಚಾಲಿತ ತ್ರಿಚಕ್ರ ಹಾಗೂ ಅತಿ ಸಣ್ಣ ನಾಲ್ಕು ಗಾಲಿಗಳ ವಾಹನಗಳನ್ನು ಭಾರತದಲ್ಲಿ ಪರಿಚಯಿಸುವ ಯೋಜನೆಯನ್ನು ಹ್ಯುಂಡೇ ಮತ್ತು ಟಿವಿಎಸ್‌ ಹೊಂದಿವೆ. ಇದರಿಂದ ಭಾರತದ ರಸ್ತೆಗಳಲ್ಲಿ ಕಟ್ಟಕಡೆಯ ಪ್ರದೇಶವನ್ನೂ ಸುಲಭವಾಗಿ ತಲುಪಲು ಪ್ರಯತ್ನಿಸುತ್ತಿರುವ ವಾಹನಗಳ ತಯಾರಿಕಾ ಮಾರುಕಟ್ಟೆಯನ್ನು ಈ ಎರಡು ಕಂಪನಿಗಳು ಆಯ್ಕೆ ಮಾಡಿಕೊಂಡಿವೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿವೆ.

ಹ್ಯುಂಡೇ ಮತ್ತು ಜೆನೆಸಿಸ್‌ ಗ್ಲೋಬಲ್ ಡಿಸೈನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಾಂಗ್‌ ಯೂಪ್‌ ಟೀ ಪ್ರತಿಕ್ರಿಯಿಸಿ, ‘ಟಿವಿಎಸ್‌ ಜತೆಗಿನ ಪಾಲುದಾರಿಕೆಯಿಂದ ಸ್ಥಳೀಯವಾಗಿ ತ್ರಿಚಕ್ರ ವಾಹನಗಳನ್ನು ತಯಾರಿಸಿ, ಜಾಗತಿಕ ಮಾರುಕಟ್ಟೆಯಲ್ಲಿರುವ ಸಣ್ಣ ನಾಲ್ಕು ಚಕ್ರಗಳ ವಾಹನಗಳ ಬೇಡಿಕೆಯ ಅವಕಾಶವನ್ನು ಪಡೆಯುವ ಯೋಜನೆ ಹೊಂದಲಾಗಿದೆ. ಇದರಿಂದ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತದ ರಸ್ತೆ ಸಂಚಾರವನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಈ ಒಪ್ಪಂದದಲ್ಲಿ ಹ್ಯುಂಡೇ ಕಂಪನಿಯು ವಾಹನಗಳ ವಿನ್ಯಾಸ, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನವನ್ನು ನೀಡಲಿದೆ. ಟಿವಿಎಸ್‌ ಕಂಪನಿಯು ತಯಾರಿಕೆ ಮತ್ತು ಮಾರುಕಟ್ಟೆ ವಿಭಾಗವನ್ನು ನಿರ್ವಹಿಸಲಿದೆ. ಜತೆಗೆ, ಸುಸ್ಥಿರತೆ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ವಾಹನಗಳ ಮಾರಾಟ ವಿಸ್ತರಿಸುವ ಹೊಣೆಯನ್ನು ಹೊರಲಿದೆ ಎಂದೆನ್ನಲಾಗಿದೆ.

ಭಾರತ್‌ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ಮೈಕ್ರೊ ಕಾರುಗಳ ಪರಿಕಲ್ಪನೆಯ ಮಾದರಿಗಳನ್ನು ಹ್ಯುಂಡೇ ಕಂಪನಿಯು ಅನಾವರಣಗೊಳಿಸಿದೆ. ಈ ಎಕ್ಸ್‌ಪೋ ಜ. 22ರವರೆಗೂ ದೆಹಲಿಯ ಗ್ರೇಟರ್‌ ನೊಯಿಡಾದಲ್ಲಿ ಮುಂದುವರಿಯಲಿದೆ.

‘ವಾಹನಗಳ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಅನುಭವ ಹೊಂದಿರುವ ಹ್ಯುಂಡೇ ಜತೆಗೂಡಿ ಮುಂದಿನ ತಲೆಮಾರಿನ ಅತಿ ಸಣ್ಣ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ತನ್ನ ಗಮನ ಕೇಂದ್ರೀಕರಿಸಿದೆ. ಆ ಮೂಲಕ ಭೂಮಿ ಮೇಲೆ ಕಡೆಯ ಪ್ರದೇಶದವರೆಗೂ ತಲುಪುವ ಗುರಿಯನ್ನು ಕಂಪನಿ ಹೊಂದಿದೆ’ ಎಂದು ಟಿವಿಎಸ್‌ ಕಂಪನಿಯ ಅಧ್ಯಕ್ಷ ಶರದ್‌ ಮಿಶ್ರಾ ಹೇಳಿದ್ದಾರೆ.

‘ಎರಡೂ ಕಂಪನಿಗಳು ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಹೊಸ ಬಗೆಯ ವಿನ್ಯಾಸದ, ಎಂಜಿನಿಯರಿಂಗ್‌ ಹಾಗೂ ತಂತ್ರಜ್ಞಾನ ಹೊಂದಿರುವ ಹಾಗೂ ಗುಣಮಟ್ಟದ ವಾಹನಗಳನ್ನು ಜನರಿಗೆ ಪರಿಚಯಿಸಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.