ADVERTISEMENT

9e SUV ಖರೀದಿಸಿದ ಸ್ಕಾರ್ಪಿಯೊ ವಿನ್ಯಾಸಕ ಡಾ. ಗೊಯೆಂಕಾ: ಮಹೀಂದ್ರಾ ಭಾವುಕ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2025, 13:09 IST
Last Updated 28 ಮಾರ್ಚ್ 2025, 13:09 IST
<div class="paragraphs"><p>ಮಮತಾ ಮತ್ತು ಡಾ. ಪವನ್ ಗೊಯೆಂಕಾ, ಆನಂದ್ ಮಹೀಂದ್ರಾ</p></div>

ಮಮತಾ ಮತ್ತು ಡಾ. ಪವನ್ ಗೊಯೆಂಕಾ, ಆನಂದ್ ಮಹೀಂದ್ರಾ

   

ಮುಂಬೈ: ಅಮೆರಿಕದಲ್ಲಿ ಜನರಲ್ ಮೋಟಾರ್ಸ್‌ನಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ಕಂಪನಿ ತೊರೆದು ಭಾರತಕ್ಕೆ ಬಂದಿದ್ದ ಐಐಟಿಯ ಪದವೀಧರ ಡಾ. ಪವನ್ ಗೊಯೆಂಕಾ ಅವರನ್ನು ತನ್ನತ್ತ ಸೆಳೆದವರು ಮಹೀಂದ್ರಾ ಕಂಪನಿಯ ಆನಂದ್. ಬಹುಬೇಡಿಕೆಯ ಸ್ಕಾರ್ಪಿಯೊ ವಿನ್ಯಾಸದಿಂದ ಖ್ಯಾತಿ ಪಡೆದ ಗೊಯೆಂಕಾ, ನಿವೃತ್ತಿಯ ನಂತರ ಬ್ಯಾಟರಿ ಚಾಲಿತ 9ಇ ಖರೀದಿಸಿದ್ದಾರೆ.

ಈ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಮೂರು ದಶಕಗಳ ಸಂಬಂಧ ಮೆಲುಕು ಹಾಕಿದರೆ ಕಣ್ತುಂಬಿ ಬರುತ್ತದೆ ಎಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

‘1990ರ ಸಮಯವದು. ಗೊಯೆಂಕಾ ಭಾರತಕ್ಕೆ ಮರಳಲು ನಿರ್ಧರಿಸಿದ್ದರು. ಮಹೀಂದ್ರಾ ಕಂಪನಿ ಅವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿತು. ನಾಸಿಕ್‌ನಲ್ಲಿದ್ದ ತನ್ನ ಸಂಶೋಧನಾ ಕೇಂದ್ರದ ಉಪ ಮುಖ್ಯಸ್ಥರನ್ನಾಗಿ ನೇಮಕಗೊಂಡ ಗೊಯೆಂಕಾ, ಮೊದಲಿಗೆ ಆರಂಭಿಸಿದ್ದು ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ.

‘ಇದರೊಂದಿಗೆ ಮಹೀಂದ್ರಾ ಕಂಪನಿಯ ಬಹು ಪ್ರಸಿದ್ಧ ಸ್ಕಾರ್ಪಿಯೊ ವಿನ್ಯಾಸ, ಅಭಿವೃದ್ಧಿಯಲ್ಲಿ ಅವರು ತೊಡಗಿದರು. ಇದರ ಯಶಸ್ಸಿನ ಬೆನ್ನಲ್ಲೇ ಕಂಪನಿಯ ಹಲವು ಉತ್ತಮ ಉತ್ಪನ್ನಗಳ ಅಭಿವೃದ್ಧಿಯ ಜತೆಗೆ, ಸಂಶೋಧನಾ ಕೇಂದ್ರವನ್ನು ವಿಶ್ವದರ್ಜೆಗೆ ಏರಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಅನುಭವ ಹೆಚ್ಚಾದಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹುದ್ದೆಗೂ ಗೊಯೆಂಕಾ ಏರಿದರು. ಅದರ ಮೂಲಕ ಕಂಪನಿಯೂ ತಾಂತ್ರಿಕವಾಗಿ ಆಧುನಿಕವಾಗುತ್ತಾ ಸಾಗಿತು’ ಎಂದು ಆನಂದ್ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

‘ನಿವೃತ್ತಿಯ ನಂತರ 2021ರಲ್ಲಿ ಗೊಯೆಂಕಾ ಅವರು ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಲ್ಲಿ ತಮ್ಮ ಅನುಭವ ಧಾರೆ ಎರೆದರು. ಭಾರತದ ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ನೀಡಿ ಪುರಸ್ಕರಿಸಿತು. ಗೊಯೆಂಕಾ ಅವರು ತಮ್ಮ ಪತ್ನಿ ಮಮತಾ ಅವರೊಂದಿಗೆ ಮಹೀಂದ್ರಾ ಮಳಿಗೆಗೆ ಭೇಟಿ ನೀಡಿ ಎಸ್‌ಯುವಿ ಎಕ್ಸ್‌ಇವಿ 9ಇ ಕಾರನ್ನು ಖರೀದಿಸಿದ್ದು ಮೂರು ದಶಕಗಳ ಹಿಂದಿನ ಎಲ್ಲಾ ನೆನಪನ್ನೂ ಕಣ್ಣೆದುರು ತಂದಿತು. ಗೊಯೆಂಕಾ ಅವರು ಈಗಲೂ ಕಂಪನಿಯ ಮತ್ತು ಕಂಪನಿಯ ಉತ್ಪನ್ನಗಳ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಈ ದೃಶ್ಯ ಕನ್ನಡಿ ಹಿಡಿದಂತಿದೆ’ ಎಂದು ಹೇಳಿದ್ದಾರೆ.

ಕಾರ್ಪೊರೇಟ್‌ ಸಾಧನೆ ಹಿಂದೆ, ಡಾ. ಪವನ್ ಗೊಯೆಂಕಾ ಅವರು ಕಾನ್ಪುರ ಐಐಟಿಯಿಂದ ಬಿ.ಟೆಕ್. ಪದವಿ, ಕಾರ್ನೆಲ್‌ ವಿಶ್ವವಿದ್ಯಾಲಯದಿಂದ ಪಿಎಚ್.ಡಿ., ಹಾರ್ವರ್ಡ್‌ ಬ್ಯುಸಿನೆಸ್ ಸ್ಕೂಲ್‌ನಿಂದ ಅಡ್ವಾನ್ಸ್ಡ್‌ ಮ್ಯಾನೇಜ್ಮೆಂಟ್‌ ಪೂರ್ಣಗೊಳಿಸಿದ್ದಾರೆ. 14 ವರ್ಷಗಳ ಕಾಲ ಜನರಲ್ ಮೋಟಾರ್ಸ್‌ನಲ್ಲಿ, 28 ವರ್ಷಗಳ ಕಾಲ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯಲ್ಲಿ ದುಡಿದವರು ಅವರು.

ಸದ್ಯ ಗೊಯೆಂಕಾ ಅವರು ಐಐಟಿ ಮದ್ರಾಸ್‌ನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಕೈಗಾರಿಕಾ ಸಚಿವಾಲಯದ ಅಡ್ವಾನ್ಸಿಂಗ್ ಲೋಕಲ್ ವ್ಯಾಲ್ಯೂ ಆ್ಯಡ್‌ ಅಂಡ್‌ ಎಕ್ಸ್‌ಪೋರ್ಟ್ಸ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.