ADVERTISEMENT

ಡಿಸ್ಕ್‌ ಬ್ರೇಕ್‌ ಬಗ್ಗೆ ಒಂದಿಷ್ಟು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ಡಿಸ್ಕ್‌ ಬ್ರೇಕ್ (ಚಿತ್ರ: ವಿಕಿಕಾಮನ್ಸ್‌)
ಡಿಸ್ಕ್‌ ಬ್ರೇಕ್ (ಚಿತ್ರ: ವಿಕಿಕಾಮನ್ಸ್‌)   

‘ಕಾರಿಗೆ ಡಿಸ್ಕ್‌ ಬ್ರೇಕ್‌ ಉಂಟು ಅಲ್ವಾ’ ಎಂಬ ಪ್ರಶ್ನೆ ಸಾಮಾನ್ಯ. ‘ಹೌದು, ಇದೆ’ ಎನ್ನುವ ಉತ್ತರವೂ ಅಷ್ಟೇ ಸಾಮಾನ್ಯ. ಆದರೆ, ಈಗೀಗ ಜನ ಡಿಸ್ಕ್‌ ಬ್ರೇಕ್‌ಗಳ ಬಗ್ಗೆ ಹೆಚ್ಚು ಒಲವು ತೋರುತ್ತ ಇರಲು ಕಾರಣಗಳು ಏನಿರಬಹುದು? ಆಲೋಚಿಸಿದ್ದೀರಾ?

* ಡಿಸ್ಕ್‌ ಬ್ರೇಕ್‌ ಇರುವ ವಾಹನಗಳು ಬ್ರೇಕ್‌ ಹಾಕಿದ ಬಹಳ ಕಡಿಮೆ ಸಮಯದಲ್ಲಿ ನಿಲುಗಡೆಯ ಹಂತ ತಲುಪುತ್ತವೆ. ಸಾಂಪ್ರದಾಯಿಕ ರಿಮ್‌ ಬ್ರೇಕ್‌ಗಳಲ್ಲಿ, ವಾಹನ ನಿಲುಗಡೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ.

* ಡಿಸ್ಕ್‌ ಬ್ರೇಕ್‌ ಇರುವ ವಾಹನಗಳಲ್ಲಿ, ಬ್ರೇಕ್‌ ಹಾಕಿದಾಗ ಚಕ್ರದ ರಿಮ್‌ ಬಿಸಿ ಆಗುವುದಿಲ್ಲ. ರಿಮ್‌ ಬ್ರೇಕ್‌ ಇರುವ ವಾಹನಗಳಲ್ಲಿ ಬ್ರೇಕ್‌ ಹಾಕಿದಾಗ, ರಿಮ್‌ ಬಿಸಿ ಆಗುತ್ತದೆ. ಇದರಿಂದ ವಾಹನದ ಟಯರ್‌ಗೆ ಅಪಾಯ ಹೆಚ್ಚು. ಹಾಗಾಗಿ ದೂರದ ಪ್ರಯಾಣಗಳ ಸಂದರ್ಭದಲ್ಲಿ ಡಿಸ್ಕ್‌ ಬ್ರೇಕ್‌ ಇರುವ ವಾಹನಗಳೇ ಹೆಚ್ಚು ಸೂಕ್ತ.

ADVERTISEMENT

* ವಾತಾವರಣದಲ್ಲಿ ತೇವಾಂಶ ಜಾಸ್ತಿ ಇದ್ದಾಗ ಡಿಸ್ಕ್‌ ಬ್ರೇಕ್ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ರಿಮ್‌ ಬ್ರೇಕ್‌ ವ್ಯವಸ್ಥೆ ಅಷ್ಟೊಂದು ಪರಿಣಾಮಕಾರಿ ಅಲ್ಲ.

ಹೊಸ ಕಾಲದ ಕಾರು, ಬೈಕುಗಳಲ್ಲಿ ಇರುವುದು ಡಿಸ್ಕ್‌ ಬ್ರೇಕ್‌ ವ್ಯವಸ್ಥೆಯೇ. ಹೀಗಿದ್ದರೂ ತಜ್ಞರು ಸಾಂಪ್ರದಾಯಿಕ ರಿಮ್‌ ಬ್ರೇಕ್‌ ವ್ಯವಸ್ಥೆಯಲ್ಲಿ ಇರುವ ಒಳ್ಳೆಯ ಅಂಶಗಳನ್ನೂ ಮರೆಯಬೇಡಿ ಎಂದು ಹೇಳುತ್ತಾರೆ.

ರಿಮ್‌ ಬ್ರೇಕ್‌ಗಳು ಡಿಸ್ಕ್‌ ಬ್ರೇಕ್‌ಗಳಿಗಿಂತ ಹಗುರ. ಇವುಗಳನ್ನು ರಿಪೇರಿ ಮಾಡುವುದು ಸುಲಭದ ಕೆಲಸ. ಹಾಗೆಯೇ, ರಿಮ್‌ ಬ್ರೇಕ್‌ಗಳು ಡಿಸ್ಕ್‌ ಬ್ರೇಕ್‌ಗಳಿಗಿಂತ ಕಡಿಮೆ ವೆಚ್ಚದವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಒಂದಿಷ್ಟು ಮೈಲಿಗಲ್ಲುಗಳು

ಮೊದಲ ಬಾರಿಗೆ ಡಿಸ್ಕ್‌ ಬ್ರೇಕ್‌ಗಳ ಮೇಲೆ ಪೇಟೆಂಟ್‌ ಪಡೆದುಕೊಂಡ ವ್ಯಕ್ತಿಯ ಹೆಸರು ಫ್ರೆಡ್ರಿಕ್‌ ವಿಲಿಯಂ ಲ್ಯಾಂಚೆಸ್ಟರ್. ಪೇಟೆಂಟ್‌ ಪಡೆದಿದ್ದು 1902ರಲ್ಲಿ.

ಡಿಸ್ಕ್‌ ಬ್ರೇಕ್ ಇರುವ ಕಾರುಗಳನ್ನು ರೇಸಿಂಗ್ ಸ್ಪರ್ಧೆಯಲ್ಲಿ ಮೊದಲು ಬಳಸಿದ್ದು 1951ರಲ್ಲಿ. ನಂತರ 1953ರಲ್ಲಿ ಜಾಗ್ವಾರ್‌ ಸಿ–ಟೈಪ್‌ ಕಾರಿನಲ್ಲಿ ಕೂಡ ಸುಧಾರಿತ ಡಿಸ್ಕ್‌ ಬ್ರೇಕ್‌ ಬಳಕೆ ಮಾಡಲಾಯಿತು. ಇದು ಕೂಡ ಬಳಕೆಯಾಗಿದ್ದು ರೇಸಿಂಗ್‌ ಕಾರಿನಲ್ಲಿ.

ಆಧುನಿಕ ಡಿಸ್ಕ್‌ ಬ್ರೇಕ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಶುರುವಾಗಿದ್ದು 1955ರಲ್ಲಿ. ಈ ಡಿಸ್ಕ್‌ ಬ್ರೇಕ್‌ ವ್ಯವಸ್ಥೆಯನ್ನು ಹೊಂದಿದ್ದ 15 ಲಕ್ಷ ಕಾರುಗಳು 20 ವರ್ಷಗಳ ಅವಧಿಯಲ್ಲಿ ಮಾರಾಟವಾದವು.

(ಆಧಾರ: ವಿವಿಧ ಮೂಲಗಳಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.