ADVERTISEMENT

ಟೆಸ್ಲಾಗಿಂತ ಮೊದಲೇ ಹಾರುವ ಕಾರುಗಳ ತಯಾರಿಕೆ ಆರಂಭಿಸಿದ ಚೀನಾದ ಷಿಪೆಂಗ್

ಪಿಟಿಐ
Published 4 ನವೆಂಬರ್ 2025, 8:11 IST
Last Updated 4 ನವೆಂಬರ್ 2025, 8:11 IST
<div class="paragraphs"><p>ಷಿಪೆಂಗ್ ಏರೊಹ್ಟ್‌</p></div>

ಷಿಪೆಂಗ್ ಏರೊಹ್ಟ್‌

   

ಎಕ್ಸ್ ಚಿತ್ರ

ಬೀಜಿಂಗ್: ಮುಂದಿನ ತಲೆಮಾರಿನ ಸಾರಿಗೆಯಾದ ಹಾರುವ ಕಾರುಗಳ ಪ್ರಾಯೋಗಿಕ ತಯಾರಿಕೆಯನ್ನು ಚೀನಾ ಮೂಲದ ಕಂಪನಿ ಆರಂಭಿಸಿದೆ.

ADVERTISEMENT

ಷಿಪೆಂಗ್ ಏರೊಹ್ಟ್‌ ಎಂಬ ಈ ಹಾರುವ ಕಾರನ್ನು ಚೀನಾದ ವಿದ್ಯುತ್ ಚಾಲಿತ ಕಾರುಗಳ ತಯಾರಿಕ ಕಂಪನಿ ಷಿಪೆಂಗ್‌ ತಯಾರಿಸುತ್ತಿದೆ. ಸೋಮವಾರದಿಂದ ಇದರ ತಯಾರಿಕೆ ಆರಂಭವಾಗಿದೆ. ಇಂಥ ಹಾರುವ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಟೆಸ್ಲಾ ಸಹಿತ ಇತರ ಅಮೆರಿಕ ಮೂಲದ ಕಂಪನಿಗಳಿಗಿಂತಲೂ ಮೊದಲು ಈ ಕಂಪನಿ ಈ ಘೋಷಣೆ ಮಾಡಿದೆ.

ಚೀನಾದ ಗಾಂಗ್ಜೊ ಪ್ರಾಂತ್ಯದಲ್ಲಿರುವ ಹಾಂಗ್ಪು ಜಿಲ್ಲೆಯಲ್ಲಿ ಷಿಪೆಂಗ್‌ನ ತಯಾರಿಕಾ ಘಟಕವಿದೆ. 1.20 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿರುವ ಈ ಘಕಟದಲ್ಲಿ ನೆಲದಲ್ಲಿ ಚಲಿಸುವ ಕಾರಿನಿಂದ ಪ್ರತ್ಯೇಕಗೊಂಡು ಹಾರಾಟ ನಡೆಸುವ ಕಾರಿನ ಮೊದಲ ಮಾದರಿ ಸಿದ್ಧಗೊಂಡು ಬಿಡುಗಡೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಷಿನ್ಹುವಾ ವರದಿ ಮಾಡಿದೆ.

ಈ ಘಕಟಕವು ವಾರ್ಷಿಕ 10 ಸಾವಿರ ಹಾರುವ ಕಾರುಗಳನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ ಇದು 5 ಸಾವಿರ ಕಾರುಗಳನ್ನು ತಯಾರಿಸಲಿದೆ. ಪೂರ್ಣ ಪ್ರಮಾಣದಲ್ಲಿ ಕಾರು ತಯಾರಿಕೆ ಆರಂಭವಾದ ನಂತರ ಪ್ರತಿ 30 ನಿಮಿಷಗಳಿಗೆ ಒಂದು ಕಾರು ಇಲ್ಲಿ ತಯಾರಾಗಲಿದೆ ಎಂದು ಹೇಳಲಾಗಿದೆ.

ಅಮೆರಿಕದ ಸುದ್ದಿ ವಾಹಿನಿ ಫಾಕ್ಸ್‌ಗೆ ಇತ್ತೀಚೆಗೆ ಸಂದರ್ಶನ ನೀಡಿದ ಟೆಸ್ಲಾ ಸಂಸ್ಥಾಪಕ ಇಲಾನ್ ಮಸ್ಕ್‌ ಅವರಿಗೆ ಎದುರಾದ ಹಾರುವ ಕಾರುಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ‘ಮಡಚುವ ರೆಕ್ಕೆಗಳುಳ್ಳ ಹಾರುವ ಕಾರುಗಳ ಕ್ಷೇತ್ರದಲ್ಲಿ ಅವಿಸ್ಮರಣೀಯ ಉತ್ಪನ್ನವೊಂದು ಶೀಘ್ರದಲ್ಲಿ ಪರಿಚಯಗೊಳ್ಳಲಿದೆ. ತೀರಾ ಭಿನ್ನ ಹಾಗೂ ವಿಚಿತ್ರ ಎನಿಸುವ ತಂತ್ರಜ್ಞಾನ ಇದರಲ್ಲಿರಲಿದೆ. ಆದರೆ ಅದು ಕಾರ್ಯರೂಪಕ್ಕೆ ಬರುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದಿದ್ದರು.

ಅಮೆರಿಕದ ಅಲೆಫ್‌ ಏರೊನಾಟಿಕ್ಸ್‌ ಕಂಪನಿ ಕೂಡಾ ಹಾರುವ ಕಾರುಗಳ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆಸಿತ್ತು. ವಾಣಿಜ್ಯ ತಯಾರಿಕೆ ಶೀಘ್ರದಲ್ಲಿ ಆರಂಭಿಸುವುದಾಗಿ ಕಂಪನಿ ಇತ್ತೀಚೆಗೆ ಹೇಳಿತ್ತು. ಸುಮಾರು ಒಂದು ಶತಕೋಟಿ ಅಮೆರಿಕನ್ ಡಾಲರ್‌ ಮೊತ್ತದ ಮುಂಗಡ ಕಾಯ್ದಿರಿಸುವಿಕೆ ನಡೆದಿದೆ ಎಂದು ಕಂಪನಿಯ ಸಿಇಒ ಜಿಮ್ ಡುಖೋವ್ನಿ ಹೇಳಿದ್ದರು.

5.5 ಮೀಟರ್ ಉದ್ದದ ಹಾರುವ ಕಾರು

ಷಿಪೆಂಗ್‌ನ ಉತ್ಪನ್ನ ಬಿಡುಗಡೆಯಾದಾಗಿನಿಂದ ಸುಮಾರು 5 ಸಾವಿರ ಹಾರುವ ಕಾರುಗಳಿಗೆ ಬೇಡಿಕೆ ಬಂದಿದೆ. ಈ ಕಾರುಗಳು 2026ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಕಾರಿಗೆ ಆರು ಗಾಲಿಗಳಿರುತ್ತವೆ. ಇದನ್ನು ಹೊತ್ತೊಯ್ಯಲು ‘ಮದರ್‌ಶಿಪ್‌’ ಎಂಬ ಮೂಲ ವಾಹನವಿರುತ್ತದೆ. ಇದರೊಳಗಿರುವ ಹಾರುವ ಕಾರು ವಿದ್ಯುತ್ ಚಾಲಿತವಾಗಿದ್ದು, ನೆಲದಿಂದ ಹಾರುವ ಮತ್ತು ನೆಲಕ್ಕೆ ಮರಳುವ ಸಾಮರ್ಥ್ಯ ಹೊಂದಿದೆ.

ಷಿಪೆಂಗ್‌ನ ಇವೊಟೊಲ್‌ ಕಾರು ಸ್ವಯಂಚಾಲಿತ ಮತ್ತು ಹಸ್ತಚಾಲಿತ ಹಾರಾಟ ಮಾದರಿಯನ್ನು ಹೊಂದಿದೆ. ಇದರ ಸ್ವಯಂಚಾಲಿತ ಮಾದರಿಯಲ್ಲಿ ‘ಸ್ಮಾರ್ಟ್‌ ರೂಟ್‌ ಪ್ಲಾನಿಂಗ್‌’ ಸೌಲಭ್ಯ ಇದೆ. ಒಂದೇ ಸ್ಪರ್ಶದಲ್ಲಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಆಗಬಹುದಾದ ಸೌಕರ್ಯ ಇದರದ್ದು.

ಷಿಪೆಂಗ್ ಏರೊಹ್ಟ್‌ ಎಂಬ ಕಾರು 5.5 ಮೀಟರ್ ಉದ್ದವಿದೆ. ಸಾಮಾನ್ಯ ಚಾಲನಾ ಪರವಾನಗಿ ಮೂಲಕ ರಸ್ತೆಯಲ್ಲೂ ಇದರ ಚಾಲನೆ ಹಾಗೂ ನಿಲುಗಡೆ ಮಾಡಬಹುದು ಎಂದೂ ವರದಿಯಾಗಿದೆ.

ಚೀನಾದ ಪ್ರಯಾಣಿಕ ಕಾರುಗಳ ಒಕ್ಕೂಟದ ಮಾಹಿತಿ ಅನ್ವಯ, ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಚೀನಾದ 50ಕ್ಕೂ ಹೆಚ್ಚು ಇವಿ ಕಂಪನಿಗಳು ಸುಮಾರು 20 ಲಕ್ಷ ಶುದ್ಧ ಎಲೆಕ್ಟ್ರಿಕ್ ಕಾರುಗಳು ಮತ್ತು ಪ್ಲಗ್‌ಇನ್‌ ಹೈಬ್ರಿಡ್ ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ 51ರಷ್ಟು ಹೆಚ್ಚಳವಾಗಿದೆ’ ಎಂದಿದೆ.

ಆದರೆ ಚೀನಾದ ಬ್ಯಾಟರಿ ಚಾಲಿತ ವಾಹನಗಳ ಮೇಲೆ ಐರೋಪ್ಯ ಒಕ್ಕೂಟವು ಶೇ 27ರಷ್ಟು ಸುಂಕ ವಿಧಿಸಿರುವುದರಿಂದ ಚೀನಾದ ಕಾರುಗಳು ಒಂದಷ್ಟು ಹಿನ್ನೆಡೆ ಅನುಭವಿಸಿವೆ. ಮತ್ತೊಂದೆಡೆ ಚೀನಾದಲ್ಲಿ ಈಗ ಕಂಪನಿಗಳ ನಡುವೆ ಪೈಪೋಟಿ ಮುಗಿಲು ಮುಟ್ಟಿದ್ದು, ರಿಯಾಯಿತಿ ಯುದ್ಧ ನಡೆಯುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಬಿವೈಡಿ, ಲಿ ಆಟೊ, ಸಿರಿಸ್ ಮತ್ತು ಲೀಪ್‌ಮೋಟಾರ್‌ ಕಂಪನಿಗಳು ಲಾಭದ ಹಾದಿಯಲ್ಲಿವೆ ಎಂದು ಹಾಂಗ್‌ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.