ADVERTISEMENT

ದೇಶದಲ್ಲಿ ಕಾರು ತಯಾರಿಕೆ ಸ್ಥಗಿತ: ವೆಂಟಿಲೇಟರ್‌ ಸಿದ್ಧಪಡಿಸಲು ಮುಂದಾದ ಮಹೀಂದ್ರಾ

ಏಜೆನ್ಸೀಸ್
Published 23 ಮಾರ್ಚ್ 2020, 7:12 IST
Last Updated 23 ಮಾರ್ಚ್ 2020, 7:12 IST
ಕಾರು ತಯಾರಿಕಾ ಘಟಕ– ಸಂಗ್ರಹ ಚಿತ್ರ
ಕಾರು ತಯಾರಿಕಾ ಘಟಕ– ಸಂಗ್ರಹ ಚಿತ್ರ   
""
""

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಹರಡುತ್ತಿರುವುದು ದೇಶದಲ್ಲಿ ಕಾರು ತಯಾರಿಕೆ ಕಂಪನಿಗಳ ಮೇಲೂ ಪರಿಣಾಮ ಬೀರಿದ್ದು, ಬಹುತೇಕ ಕಂಪನಿಗಳು ತಯಾರಿಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ.

ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಬಜಾಜ್‌ ಆಟೊ, ಮರ್ಸಿಡಿಸ್‌ ಬೆಂಜ್‌, ಫಿಯೆಟ್‌ ಕ್ರಿಸ್ಲರ್‌ ಆಟೊಮೊಬೈಲ್ಸ್‌ ಹಾಗೂ ಹುಂಡೈ ಮೋಟಾರ್‌ ಕಂಪನಿಗಳು ಕೊರೊರಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಕ್ರಮ ವಹಿಸುವುದಾಗಿ ತಿಳಿಸಿವೆ. ಘಟಕಗಳಲ್ಲಿ ತಯಾರಿಕೆ ನಿಲ್ಲಿಸುವ ನಿರ್ಧಾರ ಕೈಗೊಂಡಿವೆ.

ಸ್ಫೋರ್ಟ್‌ ಯುಟಿಲಿಟಿ ವಾಹನಗಳನ್ನು ತಯಾರಿಸುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ತನ್ನ ಘಟಕಗಳಲ್ಲಿ ಕೊರೊನಾ ವೈರಸ್‌ ಸೊಂಕಿತ ರೋಗಿಗಳಿಗಾಗಿ ವೆಂಟಿಲೇಟರ್‌ಗಳನ್ನು ತಯಾರಿಸುವ ಯೋಜನೆ ರೂಪಿಸಿದೆ. ಫೆರಾರಿ ಹಾಗೂ ಫಿಯೆಟ್‌ ಕಂಪನಿಗಳು ಇಂಥದ್ದೇ ಪ್ರಯತ್ನ ಮಾಡುತ್ತಿವೆ.

ADVERTISEMENT

ಮಹಾರಾಷ್ಟ್ರದ ಪುಣೆಯಲ್ಲಿ ಹೆಚ್ಚಿನ ಕಾರು ತಯಾರಿಕಾ ಕಂಪನಿಗಳು ಘಟಕಗಳನ್ನು ಹೊಂದಿದ್ದು, ಮಾರ್ಚ್‌ 31ರ ವರೆಗೂ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಿವೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ.

'ಮುಂದಿನ ಕೆಲವು ವಾರಗಳ ವರೆಗೂ ಲಾಕ್‌ಡೌನ್‌ ಮಾಡುವ ಕ್ರಮದಿಂದ ಸೋಂಕು ಹರಡುವಿಕೆ ಪ್ರಮಾಣವನ್ನು ಕುಗ್ಗಿಸಬಹುದು ಹಾಗೂ ವೈದ್ಯಕೀಯ ಸೇವೆಗಳ ಮೇಲೆ ಬೀಳುವ ಹೊರೆಯನ್ನು ತಪ್ಪಿಸಬಹುದು. ನಮ್ಮ ಹಾಲಿಡೇ ರೆಸಾರ್ಟ್‌ಗಳನ್ನು ತಾತ್ಕಾಲಿಕ ಆರೋಗ್ಯ ಕೇಂದ್ರಗಳಾಗಿ ಬಳಸಲು ಅನುವು ಮಾಡಿಕೊಳ್ಳಲಾಗುತ್ತದೆ ಹಾಗೂ ಅಂತಹ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ನೆರವಾಗಲಿದ್ದೇವೆ' ಎಂದು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ.

ಜಾಗತಿಕವಾಗಿ ಕೋವಿಡ್‌–19ನಿಂದಾಗಿ ಸಾವಿಗೀಡಾದವರ ಸಂಖ್ಯೆ 13 ಸಾವಿರ ದಾಟುತ್ತಿದ್ದಂತೆ ಕಳೆದ ವಾರ ಕಾರು ತಯಾರಿಕಾ ಕಂಪನಿಗಳು ಯುರೋಪ್‌, ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಘಟಕಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ಈ ಸಮಯದಲ್ಲಿ ಉದ್ಯೋಗ ಕಡಿತಗೊಳಿಸುವುದಿಲ್ಲ ಹಾಗೂ ಎಲ್ಲ ನೌಕರರಿಗೆ ವೇತನ ಮುಂದುವರಿಸುವುದಾಗಿ ಫಿಯೆಟ್‌ ಹೇಳಿದೆ. ಹೀರೊ ಮೋಟೊಕಾರ್ಪ್‌ ಲಿಮೆಟೆಡ್‌ ಸಹ ಭಾರತ, ಬಾಂಗ್ಲಾದೇಶ ಹಾಗೂ ಕೊಲಂಬಿಯಾದಲ್ಲಿನ ಬೈಕ್‌ ತಯಾರಿಕಾ ಘಟಕಗಳಲ್ಲಿ ಕಾರ್ಯಾಚರಣೆ ನಿಲ್ಲಿಸಿದೆ. ಟಾಟಾ ಮೋಟಾರ್ಸ್‌ ಲಿಮಿಟೆಡ್‌ ತಯಾರಿಕೆ ಪ್ರಮಾಣ ಇಳಿಕೆ ಮಾಡಲು ಎಲ್ಲ ಕ್ರಮ ವಹಿಸಿರುವುದಾಗಿ ಹೇಳಿದೆ.

ಭಾರತದಲ್ಲಿ ಕೊರೊನಾ ವೈರಸ್‌ ಸೊಂಕಿತರ ಸಂಖ್ಯೆ 400 ದಾಟಿದ್ದು, ಸಾವಿಗೀಡಾದವರ ಸಂಖ್ಯೆ 8 ಮುಟ್ಟಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಸಂಪರ್ಕ ಕಡಿಮೆ ಮಾಡಲು, ಸೋಂಕು ವ್ಯಾಪಿಸುವುದನ್ನು ತಡೆಯಲು ಲಾಕ್‌ಡೌನ್ ಕ್ರಮ ಅನುಸರಿಸುತ್ತಿವೆ. ರೈಲು, ಬಸ್‌ ಹಾಗೂ ಮೆಟ್ರೊ ಸಂಚಾರ ಸೇವೆಗಳು ಬಹುತೇಕ ಕಾರ್ಯ ಸ್ಥಗಿತಗೊಳಿಸಿವೆ. ಮಾರ್ಚ್‌ 31ರ ವರೆಗೂ 75ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.