ಜಿಪಿಎಸ್ ವ್ಯವಸ್ಥೆ
ಬೆಂಗಳೂರು: ಟೋಲ್ ಸಂಗ್ರಹ ಕೇಂದ್ರಗಳಲ್ಲಿ 2025 ರ ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೆಲ ವರದಿಗಳು ಹೇಳಿದ್ದವು.
ಆದರೆ, ಈ ವರದಿಗಳನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ತಳ್ಳಿಹಾಕಿ ಸ್ಪಷ್ಟನೆ ನೀಡಿದೆ.
‘ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್ ವ್ಯವಸ್ಥೆ ಬರಲಿದೆ ಎಂದು ಕೆಲ ಮಾಧ್ಯಮಗಳು ಹೇಳಿವೆ. ಆದರೆ, ಆ ರೀತಿಯ ಯಾವುದೇ ನಿರ್ಧಾರವನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ತೆಗೆದುಕೊಂಡಿರುವುದಿಲ್ಲ’ ಎಂದು ‘ಪಿಐಬಿ’ ಮೂಲಕ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
‘ದೇಶದ ಎಲ್ಲ ಕಡೆಗೆ ಸದ್ಯ ಫಾಸ್ಟ್ಯಾಗ್ (FASTag) ವ್ಯವಸ್ಥೆಯೇ ಮುಂದುವರೆಯಲಿದೆ. ಆದರೆ, ಕೆಲವು ಕಡೆಗೆ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಟೋಲ್ ವಸೂಲಿ ಮಾಡುವ ವಿಧಾನ (NPR-FASTag) ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಚಿಂತನೆ ಮಾಡಲಾಗುತ್ತಿದೆ. ಅದರ ಸಾಧಕ–ಬಾಧಕಗಳನ್ನು ನೋಡಿಕೊಂಡು ಉಳಿದ ಕಡೆಗೆ ಅಳವಡಿಸಲು ತಯಾರಿ ಮಾಡಿಕೊಳ್ಳಲಾಗುತ್ತದೆ’ ಎಂದು ಪ್ರಾಧಿಕಾರ ಹೇಳಿದೆ.
ಸದ್ಯದ ಫಾಸ್ಟ್ಯಾಗ್ ವ್ಯವಸ್ಥೆ ಲೋಪದೋಷಗಳ ಬಗ್ಗೆ ಹಲವು ಬಳಕೆದಾರರು ಎನ್‌ಎಚ್‌ಎಐಗೆ ನಿರಂತರವಾಗಿ ದೂರುಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಹೀಗಾಗಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬರಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.