ADVERTISEMENT

ಆಭರಣಪ್ರಿಯ ಗಂಡಸರು!: ಬಗೆಬಗೆ ಆಭರಣ ತೊಟ್ಟು ನಲಿಯುವ ಟ್ರೆಂಡ್‌

ಸುಕೃತ ಎಸ್.
Published 29 ಆಗಸ್ಟ್ 2025, 23:30 IST
Last Updated 29 ಆಗಸ್ಟ್ 2025, 23:30 IST
   
‘ಬಂಗಾರದೊಡವೆ ಬೇಕೇ ನೀರೆ’ ಎಂಬ ಗೀತೆಯ ಸಾಲುಗಳನ್ನು ಮುಂದೊಂದು ದಿನ ಬದಲಿಸಬೇಕಾಗಬಹುದು! ಏಕೆಂದರೆ, ಈಗ ಪುರುಷರಲ್ಲೂ ಆಭರಣಗಳ ಮೋಹ ಶುರುವಾಗಿದೆ, ಬಗೆಬಗೆ ಆಭರಣ ತೊಟ್ಟು ನಲಿಯುವ ಟ್ರೆಂಡ್‌ ಸೃಷ್ಟಿಯಾಗಿದೆ

ಬೆರಳಿಗೆ ಹಾಕಿಕೊಂಡಿದ್ದ ದೊಡ್ಡ ಉಂಗುರ, ಕೈಯಲ್ಲಿ ಮಿರುಗುತ್ತಿದ್ದ ಹರಳಿನ ಕಡಗ, ಕೊರಳಲ್ಲಿ ನಳನಳಿಸುತ್ತಿದ್ದ ಬಂಗಾರದ ಹಾರವನ್ನು ಕನ್ನಡಿ ಮುಂದೆ ನಿಂತು ಆಸೆಗಣ್ಣಿನಿಂದ ನೋಡುತ್ತಾ, ಅದರಿಂದ ಕಳೆಗಟ್ಟಿದ್ದ ತಮ್ಮ ರೂಪವನ್ನು ಆಸ್ವಾದಿಸುತ್ತಾ ನಿಂತಿದ್ದವರು ಖ್ಯಾತ ಚಿತ್ರನಟ ಮೋಹನ್‌ ಲಾಲ್‌!

ಇದು ಆಭರಣ ಕಂಪನಿಯೊಂದರ ಜಾಹೀರಾತು. ಈ ಜಾಹೀರಾತನ್ನು ನೋಡದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದರ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದವು. ಮೋಹನ್‌ ಲಾಲ್‌ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಸಾಮಾನ್ಯವಾಗಿ ಆಭರಣ ಮಳಿಗೆಗಳ ಜಾಹೀರಾತಿನಲ್ಲಿ ಹೆಣ್ಣುಮಕ್ಕಳದ್ದೇ ಪ್ರಾಬಲ್ಯ. ಅವರನ್ನೇ ಮಾಡೆಲ್‌ ಆಗಿಸಿಕೊಂಡು ಜಾಹೀರಾತು ಸಿದ್ಧಪಡಿಸಲಾಗುತ್ತದೆ ಮತ್ತು ಈ ಜಾಹೀರಾತುಗಳ ಗುರಿ ಕೂಡ ಮಹಿಳೆಯರೇ ಆಗಿರುತ್ತಾರೆ. ಆದರೆ, ಮೋಹನ್‌ ಲಾಲ್‌ ಅವರ ಈ ಜಾಹೀರಾತು ಮಾತ್ರ ಭಿನ್ನ ಸ್ವರೂಪದಲ್ಲಿದೆ. ಪುರುಷನೊಬ್ಬ ಆಭರಣದ ಜಾಹೀರಾತಿನ ಮಾಡೆಲ್‌ ಆದದ್ದು ಸಹ ಇದು ಭಾರಿ ಸದ್ದು ಮಾಡಿದ್ದಕ್ಕೆ ಕಾರಣವಾಗಿರಬಹುದು. ಎಲ್ಲ ಸಂಪ್ರದಾಯ, ಸಂಕೋಲೆಗಳನ್ನೂ ಮೀರಿದ ಜಾಹೀರಾತು ಇದು ಎಂದು ನೆಟ್ಟಿಗರು ಕೊಂಡಾಡಿದರು.

ADVERTISEMENT

ಚಿತ್ರಕೃಪೆ–ಅರ್ಜುನ ಜುವೆಲರ್ಸ್‌

ಹಾಗಾದರೆ ಪುರುಷನನ್ನು, ಅದರಲ್ಲೂ ಒಬ್ಬ ಸೆಲೆಬ್ರಿಟಿಯನ್ನು ಆಭರಣ ಮಳಿಗೆಯ ಜಾಹೀರಾತಿಗೆ ಮಾಡೆಲ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇಕೆ? ಈ ಜಾಹೀರಾತಿನ ಮುಖ್ಯ ಗುರಿ ಏನು? ಯಾರನ್ನು ಸೆಳೆಯುವ ಸಲುವಾಗಿ ಅದನ್ನು ರೂಪಿಸಲಾಯಿತು ಎನ್ನುವಂತಹ ಪ್ರಶ್ನೆಗಳು ಕಾಡುವುದು ಸಹಜ. ಅಂತಹದ್ದೊಂದು ಕುತೂಹಲದಿಂದ ಹುಡುಕುತ್ತಾ ಹೋದರೆ, ಈ ವಿಭಿನ್ನ ಜಾಹೀರಾತಿನ ಹಿಂದೆ ಇರುವ ಒಂದು ಹೊಸ ಲೋಕವೇ ನಮ್ಮೆದುರು ತೆರೆದುಕೊಳ್ಳುತ್ತದೆ.

ಪುರುಷರ ಬಂಗಾರಪ್ರೇಮ!

ಭಾರತದ ಮಟ್ಟಿಗೆ ಇದು ಹೊಸ ವಿಷಯವೇನೂ ಅಲ್ಲ. ರಾಜ–ಮಹಾರಾಜರ ಕಾಲದಲ್ಲಿ ಪುರುಷರು ಬಂಗಾರದ ಆಭರಣಗಳನ್ನು ತೊಡುತ್ತಿದ್ದರು. ಅದು ಅಧಿಕಾರದ ಸಂಕೇತವಾಗಿತ್ತು. ಆದರೆ ಈಗ‌ ಇದು ಫ್ಯಾಷನ್‌ ಸ್ಟೇಟ್‌ಮೆಂಟ್‌ ಆಗಿದೆ. ಕಿವಿಗೆ ಒಂಟಿ, ಹೆಚ್ಚೆಂದರೆ ಕೊರಳಿಗೆ ಸಣ್ಣದಾದ ಸರ, ಕೈಗೆ ಸಣ್ಣ ಎಳೆಯ ಬ್ರೇಸ್ಲೆಟ್‌ಗಳನ್ನು ಪುರುಷರು ತೊಡುವುದು ಸಾಮಾನ್ಯ. ಒಂಟಿಯೊಂದನ್ನು ಬಿಟ್ಟು ಉಳಿದವೆಲ್ಲವೂ ವಿಶೇಷ ಸಮಾರಂಭಗಳಲ್ಲಿ ತೊಡುವಂತಹವಾಗಿದ್ದವು. ಅದರಲ್ಲೂ ಮದುವೆಯಂಥ ಸಮಾರಂಭಗಳಲ್ಲಿ ಮಧುಮಗ ಇವನ್ನೆಲ್ಲಾ ತೊಡುವುದು ರೂಢಿ.

ಈಗ ಕಾಲ ಬದಲಾಗಿದೆ. ಬಂಗಾರ, ಪ್ಲ್ಯಾಟಿನಂ, ಡೈಮಂಡ್‌, ಬ್ಲ್ಯಾಕ್‌ಮೆಟಲ್‌, ಬೆಳ್ಳಿ... ಹೀಗೆ ವಿವಿಧ ಬಗೆಯ ಲೋಹಗಳಿಂದ ತಯಾರಿಸಿದ ಆಭರಣಗಳನ್ನು ಪುರುಷರೂ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಜೊತೆಗೆ, ಇವು ವಿಶೇಷ ಸಮಾರಂಭಗಳಲ್ಲಿ ಮಾತ್ರವೇ ಅವರು ತೊಡುವ ಆಭರಣಗಳಾಗಿ ಉಳಿದಿಲ್ಲ. ನಿತ್ಯವೂ ಇಂಥ ಆಭರಣಗಳನ್ನು ತೊಡಲು ಆರಂಭಿಸಿದ್ದಾರೆ.

ಇಂತಹವರನ್ನು ಸೆಳೆಯುವುದಕ್ಕಾಗಿಯೇ ವಿವಿಧ ಆಭರಣ ಕಂಪನಿಗಳು ತಮ್ಮ ಮಳಿಗೆಗಳಲ್ಲಿ ಪುರುಷರಿಗಾಗಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸಿವೆ. ಪುರುಷ ಗ್ರಾಹಕರನ್ನು ಗುರಿಯಾಗಿಟ್ಟು ಪ್ರತ್ಯೇಕ ವೆಬ್‌ಸೈಟ್‌ಗಳು ಸಹ ಶುರುವಾಗಿವೆ. ಬಂಗಾರವಲ್ಲದ ಲೋಹಗಳಿಂದ ತಯಾರಿಸಿದ, ನಿತ್ಯ ಬಳಕೆಯ ಫ್ಯಾಷನಬಲ್‌ ಆಭರಣದ ಮಾಹಿತಿಯುಳ್ಳ ನೂರಾರು ಪೇಜ್‌ಗಳು ಜಾಲತಾಣಗಳಲ್ಲಿ ಸೃಷ್ಟಿಯಾಗಿವೆ. ಈವರೆಗೆ ಇವೆಲ್ಲ ಮಹಿಳೆಯರಿಗೆ ಮಾತ್ರವೇ ಎನ್ನುವಂತಿದ್ದವು.

ಪುರುಷರ ಆಭರಣ ಪ್ರೇಮ ಸದ್ಯ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಮೆಟ್ರೊ ನಗರಗಳಿಗೆ ಸೀಮಿತವಾಗಿದೆ. ಬಂಗಾರ, ವಜ್ರದ ಬೆಲೆ ಗಗನಮುಖಿಯಾಗಿರುವ ಕಾರಣ ಹೆಚ್ಚಿನವರು ಇಂಥ ಆಭರಣಗಳನ್ನು ಖರೀದಿಸುವುದು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಇದೆ. ಆದರೆ, ಕಡಿಮೆ ಬೆಲೆಗೆ ಸಿಗುವ ವಿವಿಧ ಲೋಹದ ಆಭರಣಗಳ ಖರೀದಿ ನಡೆದೇ ಇದೆ.

ರಾಜರ ಕಾಲದಲ್ಲಿ ಪುರುಷರು ಒಡವೆಗಳನ್ನು ಹಾಕಿಕೊಳ್ಳುತ್ತಿದ್ದರೂ ಕಾಲಾಂತರದಲ್ಲಿ ಈ ಸಂಪ್ರದಾಯ ಹಿಂದಕ್ಕೆ ಸರಿಯಿತು. ಆಭರಣಗಳು ಮಹಿಳೆಯರಿಗೆ ಮಾತ್ರವೇ ಸೀಮಿತ ಎನ್ನುವ ಕಾಲ ಬಂದಿತು. ಮಹಿಳೆ ಒಡವೆ ತೊಡುವುದೇ ಕ್ರಮ, ಅದೇ ಸಂಪ್ರದಾಯ ಎನ್ನುವ ಅಭಿಪ್ರಾಯದಲ್ಲಿ ಇಂದಿಗೂ ಹೆಚ್ಚಿನ ಬದಲಾವಣೆಯೇನಾಗಿಲ್ಲ. ಆದರೆ ಇದರ ನಡುವೆಯೇ ಬಹುತೇಕ ಪುರುಷರಲ್ಲಿ ಅದರಲ್ಲೂ ಯುವಕರಲ್ಲಿ ಆಭರಣ ಪ್ರೇಮ ಚಿಗುರೊಡೆಯುತ್ತಿದೆ. ಇಂಥ ಪುರುಷರನ್ನು ವಿಚಿತ್ರವಾಗಿ ನೋಡುವ ಕಣ್ಣುಗಳೂ ಇವೆ. ‘ಹೆಂಗಸರು ಹಾಕಿಕೊಳ್ಳುವುದನ್ನು ಹುಡುಗರು ಹಾಕಿಕೊಂಡಿದ್ದಾರಲ್ಲ. ಇದೆಂಥಾ ಕಾಲ ಬಂತಪ್ಪಾ’ ಎಂದು ನಮ್ಮೂರಿನ ಅಜ್ಜ, ಅಜ್ಜಿ ಟಿ.ವಿ. ನೋಡುತ್ತಾ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ದಿಲ್ಲಿಗೆ ಬಂದದ್ದು ಹಳ್ಳಿಗೆ ಬರಲಾರದೇ? ಸದ್ಯದ ಟ್ರೆಂಡ್‌ ಗಮನಿಸಿದರೆ, ಆಭರಣ ಮೋಹದಲ್ಲಿ ಪುರುಷರು ಮಹಿಳೆಯರೊಂದಿಗೆ ಸಮಾನತೆ ಸಾಧಿಸುವ ದಿನ ದೂರವಿಲ್ಲ ಎನಿಸುತ್ತದೆ.

ಇದು ವಿಶ್ವದ ಟ್ರೆಂಡ್‌
ಜಾಗತಿಕ ಮಟ್ಟದಲ್ಲಿ ಪುರುಷರ ಚಿನ್ನಾಭರಣ ಮಾರುಕಟ್ಟೆಯು 2024ರ ಅಂತ್ಯದ ವೇಳೆಗೆ 48 ಬಿಲಿಯನ್‌ ಡಾಲರ್‌ಗಳಷ್ಟಿತ್ತು (₹ 4.22 ಲಕ್ಷ ಕೋಟಿ). ಅದು ವಾರ್ಷಿಕ ಶೇ 10ರಷ್ಟು ಬೆಳವಣಿಗೆ ದಾಖಲಿಸುವ ಅಂದಾಜಿದೆ. ಏಷ್ಯಾದ ದೇಶಗಳಲ್ಲಿ ಈ ಬೆಳವಣಿಗೆಯು ಶೇ 10ಕ್ಕಿಂತಲೂ ಹೆಚ್ಚು ಎನ್ನಲಾಗಿದೆ. ಇದೆಲ್ಲ ಲೆಕ್ಕಾಚಾರದ ಮಾತಾಯಿತು. ಸೌಂದರ್ಯವರ್ಧನೆಗೆ ಹಣ ಹೊಂದಿಸಲು ಸಾಧ್ಯವಾಗುವಷ್ಟು ಆದಾಯ, ಕಣ್ಸೆಳೆಯುವ ವಿನ್ಯಾಸದ ಆಭರಣಗಳ ಪ್ರಮಾಣ ಹೆಚ್ಚಾದುದು ಪುರುಷರ ಚಿನ್ನಾಭರಣ ಮಾರುಕಟ್ಟೆಯ ಚಾಲಕ ಶಕ್ತಿ ಎನ್ನುತ್ತವೆ ಮಾರುಕಟ್ಟೆ ವಿಶ್ಲೇಷಣೆಗಳು.

ಜೆನ್‌–ಝಿ ಗ್ರಾಹಕರು

ಚಿತ್ರನಟರು, ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಕಾರಣದಿಂದಾಗಿ ಜೆನ್‌–ಝಿ ಹುಡುಗರಲ್ಲಿ ಫ್ಯಾಷನ್‌ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ. ಅವರಂತೆ ತಾವೂ ಆಭರಣಗಳನ್ನು ಧರಿಸಬೇಕು ಎನ್ನುವ ಕಾರಣಕ್ಕೆ ಬಗೆಬಗೆ ಲೋಹಗಳ ಆಭರಣಗಳತ್ತ ಅವರು ಮುಖ ಮಾಡಿದ್ದಾರೆ.

ಬಾಲಿವುಡ್‌ ನಟರು, ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ತಮ್ಮ ಆಭರಣ ಪ್ರೇಮವನ್ನು ತೋರಿಸಿಕೊಳ್ಳಲು ಆರಂಭಿಸಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳ ಮಕ್ಕಳ ಮದುವೆಗಳಲ್ಲಿ, ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸೆಲೆಬ್ರಿಟಿಗಳು ಯಾವ ಹೆಂಗಳೆಯರಿಗೂ ಕಮ್ಮಿ ಇಲ್ಲ ಎಂಬಂತೆ ಚಿನ್ನ, ವಜ್ರದ ದೊಡ್ಡ ದೊಡ್ಡ ಹಾರಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದು ಕೂಡ ಜೆನ್‌–ಝಿ ಪೀಳಿಗೆಯನ್ನು ಆಕರ್ಷಿಸಿದೆ.

ಜೆನ್‌– ಝಿ ಅಂದರೆ, 1997ರಿಂದ 2012ರ ನಡುವೆ ಜನಿಸಿದವರು‌. 2025ರ ಹೊತ್ತಿಗೆ 13ರಿಂದ 28 ವರ್ಷ ವಯೋಮಾನದ ಒಳಗೆ ಇರುವವರು.

ಬೆಳೆಯುತ್ತಿದೆ ಮಾರುಕಟ್ಟೆ
ಪುರುಷರು ಈಗ ಹೆಚ್ಚು ಹೆಚ್ಚು ಆಭರಣ ಖರೀದಿ ಮಾಡುತ್ತಿದ್ದಾರೆ. ಇದು ದೊಡ್ಡ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಮೊದಲೆಲ್ಲ ಹುಟ್ಟಿದ ಹೆಣ್ಣುಮಕ್ಕಳಿಗೆ ಬಂಗಾರ ಖರೀದಿ ಮಾಡುತ್ತಿದ್ದರು. ಈಗ ಗಂಡುಮಕ್ಕಳಿಗೂ ವಿವಿಧ ವಿನ್ಯಾಸದ ಆಭರಣಗಳನ್ನು ಜನ ಖರೀದಿಸುತ್ತಿದ್ದಾರೆ. ಯುವಕರು ಹೆಚ್ಚು ಹಗುರವಾದ ಒಡವೆಗಳನ್ನು ಇಷ್ಟಪಡುತ್ತಿದ್ದಾರೆ. ಸಾಮಾನ್ಯವಾಗಿ ಉಳಿತಾಯದ ಆಲೋಚನೆಯಲ್ಲಿಯೇ ಬಂಗಾರವನ್ನು ಜನ ಕೊಳ್ಳುತ್ತಾರೆ. ಆದರೆ, ಯುವಕರು ಫ್ಯಾಷನ್‌ಗಾಗಿಯೂ ಒಡವೆಗಳನ್ನು ಖರೀದಿಸುತ್ತಿದ್ದಾರೆ. ಪುರುಷರ ಆಭರಣಪ್ರಿಯತೆ ಕುರಿತು ಭಾರತದಲ್ಲಿ ಅಷ್ಟೊಂದು ಅಂಕಿ–ಅಂಶಗಳು ಲಭ್ಯವಿಲ್ಲ ಮತ್ತು ಈ ಕುರಿತು ಸಮೀಕ್ಷೆಗಳೂ ನಡೆಯುತ್ತಿಲ್ಲ. ರಾಹುಲ್‌ ಜೈನ್‌, ಅರ್ಜುನ್‌ ಜುವೆಲರ್ಸ್‌ ಜಯನಗರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.