ಸಾಂದರ್ಭಿಕ ಚಿತ್ರ
ನವದೆಹಲಿ: ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿಗೂ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ₹1 ಲಕ್ಷ ಕೋಟಿ ಮೀಸಲಿಟ್ಟಿದೆ.
ಮೂಲ ಸಂಶೋಧನೆ ಮತ್ತು ಮೂಲ ಮಾದರಿ ಅಭಿವೃದ್ಧಿಗಾಗಿ ‘ಅನುಸಂಧಾನ ರಾಷ್ಟ್ರೀಯ ಸಂಶೋಧನಾ ನಿಧಿ’ಯಡಿ ಅನುದಾನ ಒದಗಿಸಲಾಗುತ್ತದೆ.
ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿಯವರನ್ನೂ ತೊಡಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಖಾಸಗಿ ವಲಯದಲ್ಲಿ ನಡೆಯುವ ಸಂಶೋಧನೆ ಮತ್ತು ನಾವೀನ್ಯವನ್ನು ವಾಣಿಜ್ಯಿಕವಾಗಿ ಬಳಕೆ ಬಳಕೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ಬಾಹ್ಯಾಕಾಶ ಆರ್ಥಿಕತೆ
ಬಾಹ್ಯಾಕಾಶ ಕ್ಷೇತ್ರಕ್ಕೂ ಕೇಂದ್ರ ಸರ್ಕಾರ ಆದ್ಯತೆಯನ್ನು ಮುಂದುವರಿಸಿದೆ. ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯನ್ನು 5 ಪಟ್ಟು ವಿಸ್ತರಿಸುವ ಗುರಿ ಹೊಂದಿದೆ. ಈ ಉದ್ದೇಶಕ್ಕಾಗಿ ₹1,000 ಕೋಟಿ ಮೊತ್ತದ ನಿಧಿ ಸ್ಥಾಪಿಸಲಾಗುತ್ತಿದೆ.
ಭವಿಷ್ಯದ ಸುಧಾರಣೆಗಳು
ಉದ್ಯೋಗಾವಕಾಶಗಳು ಮತ್ತು ಹೆಚ್ಚಿನ ಸುಸ್ಥಿರ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಭವಿಷ್ಯದ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಆರ್ಥಿಕ ಅಭಿವೃದ್ಧಿಗೆ ವ್ಯಾಪಕವಾದ ವಿಧಾನ ಅನುಸರಿಸಲು ಮತ್ತು ಉದ್ಯೋಗ ಅವಕಾಶಗಳನ್ನು ಸುಗಮಗೊಳಿಸಲು ಆರ್ಥಿಕ ನೀತಿ ಚೌಕಟ್ಟನ್ನು ರೂಪಿಸಲಾಗುತ್ತಿದೆ.
ಉತ್ಪಾದಕತೆಗೆ ಅಗತ್ಯವಿರುವ ಅಂಶಗಳಲ್ಲಿ ಸುಧಾರಣೆ ತರುವುದು, ಮಾರುಕಟ್ಟೆಗಳು ಮತ್ತು ವಲಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅನುಕೂಲವಾಗುವಂತೆ ಸುಧಾರಣೆಗಳನ್ನು ಪ್ರಾರಂಭಿಸಿ, ಉತ್ತೇಜಿಸಲಾಗುವುದು.
ಈ ಸುಧಾರಣೆಗಳು ಉತ್ಪಾದನೆಯ ಎಲ್ಲಾ ಅಂಶಗಳನ್ನು ಒಳಗೊಂಡಿರಲಿವೆ. ಅವುಗಳೆಂದರೆ ಭೂಮಿ, ಕಾರ್ಮಿಕರು, ಬಂಡವಾಳ ಮತ್ತು ಉದ್ಯಮಶೀಲತೆ, ತಂತ್ರಜ್ಞಾನ. ಈ ಒಟ್ಟು ಅಂಶಗಳು ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡಲಿವೆ.
ಈ ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಮನ್ವಯ– ಒಮ್ಮತ ಅಗತ್ಯ. ಆ ಮೂಲಕ, ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ ಉತ್ತೇಜಿಸುವುದು ಹಾಗೂ ಈ ಸುಧಾರಣೆಗಳ ತ್ವರಿತ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲವನ್ನೂ ಒದಗಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.