
ನಿರ್ಮಲಾ ಸೀತಾರಾಮನ್-
ನವದೆಹಲಿ: ದೇಶದ ಆರ್ಥಿಕ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಮಂಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ಮಲಾ ಸೀತಾರಾಮನ್ , ಆರ್ಥಿಕತೆ ಮತ್ತು ಅದರ ಮೂಲಭೂತ ಅಂಶಗಳು ಪ್ರಬಲವಾಗಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಜವಳಿ, ರೈತರು ಮತ್ತು ಮಹಿಳಾ ಉದ್ಯಮಿಗಳಿಗಾಗಿ ಹಲವಾರು ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯಲ್ಲಿ ಬದಲಾವಣೆ ತಂದಿದ್ದೇವೆ. ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಸ್ವ-ಸಹಾಯ ಉದ್ಯಮಿ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಬಜೆಟ್ ಮಂಡಿಸಲಾಗಿದೆ. ಬಿಜೆಪಿ ಅಧಿಕಾರ ವಹಿಸಿಕೊಂಡ 12 ವರ್ಷಗಳಿಂದ ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಕೂಡಿದೆ. ಹೆಚ್ಚಿದ ಅನಿಶ್ಚಿತತೆ ಮತ್ತು ಅನೇಕ ಕ್ಲಿಷ್ಟದ ಸಮಯದಲ್ಲಿಯೂ ನಮ್ಮ ಪ್ರಜ್ಞಾಪೂರ್ವಕ ನಿರ್ಧಾರಗಳು ಜನರಿಗೆ ಅನುಕೂಲ ಮಾಡಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ದೂರದೃಷ್ಟಿಯ ರಚನಾತ್ಮಕ ಸುಧಾರಣೆಗಳು ಹಾಗೂ ವಿತ್ತೀಯ ಸ್ಥಿರತೆಯನ್ನು ಅನುಸರಿಸಿದ್ದೇವೆ. ಅದೇ ವೇಳೆ ಸಾರ್ವಜನಿಕ ಹೂಡಿಕೆಗೂ ಒತ್ತು ನೀಡಿದ್ದೇವೆ ಎಂದು ಸೀತಾರಾಮನ್ ಹೇಳಿದ್ದಾರೆ.
ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ದಿಕ್ಸೂಚಿಯಾಗಿ ಇಟ್ಟುಕೊಂಡು, ದೇಶೀಯ ಉತ್ಪಾದನಾ ಸಾಮರ್ಥ್ಯ, ಇಂಧನ ಸುರಕ್ಷತೆ ಹಾಗೂ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.