ನವದೆಹಲಿ: ಚೀನಾ ಮತ್ತು ಪಾಕಿಸ್ತಾನದಿಂದಾಗಿ ಕ್ಷಿಪ್ರವಾಗಿ ಹೆಚ್ಚುತ್ತಿರುವ ಪ್ರಾದೇಶಿಕ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಸೇನೆಯ ಆಧುನೀಕರಣದ ಮೇಲೆ ಗಮನ ಕೇಂದ್ರೀಕರಿಸಿರುವ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವೆಚ್ಚಕ್ಕೆ ₹6,81,210 ಕೋಟಿ ಮೀಸಲಿರಿಸಿದೆ. ಕಳೆದ ಬಾರಿಗೆ ಹೋಲಿಸಿದರೆ, ಶೇ 9.53ರಷ್ಟು ಅನುದಾನವನ್ನು ಹೆಚ್ಚಿಸಿದೆ.
ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧ ನೌಕೆಗಳು ಹಾಗೂ ಇತರ ಸೇನಾ ಉಪಕರಣಗಳ ಖರೀದಿಯು ಒಳಗೊಂಡಿರುವ ಬಂಡವಾಳ ವೆಚ್ಚವಾಗಿ ₹1,92 ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ರಕ್ಷಣಾ ಸೇವೆಗಳಿಗಾಗಿ ₹12,387 ತೆಗೆದಿರಿಸಲಾಗಿದೆ.
2024-25ರಲ್ಲಿ ಬಂಡವಾಳ ಹೂಡಿಕೆಯಾಗಿ ₹1.72 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಅದರಲ್ಲಿ ಸುಮಾರು ₹13,500 ಕೋಟಿ ಇನ್ನೂ ಖರ್ಚಾಗಿಲ್ಲ. ಪರಿಷ್ಕೃತ ಅಂದಾಜಿನ ಪ್ರಕಾರ ಅದು ₹1.59 ಲಕ್ಷ ಕೋಟಿ ಆಗಿದೆ.
ಬಂಡವಾಳ ವೆಚ್ಚದ ಅಡಿಯಲ್ಲಿ ವಿಮಾನ ಮತ್ತು ಏರೋ ಎಂಜಿನ್‌ಗಳಿಗೆ ₹48,614 ಕೋಟಿ, ನೌಕಾಪಡೆಗೆ ₹24,390 ಕೋಟಿ, ಇತರೆ ಉಪಕರಣಗಳ ಖರೀದಿಗೆ ₹63,099 ಕೋಟಿ ಮೀಸಲಿಡಲಾಗಿದೆ. ಅಲ್ಲದೆ, ನೌಕಾನೆಲೆ ಯೋಜನೆಗಳಿಗೆ ಪ್ರತ್ಯೇಕವಾಗಿ ₹4,500 ಕೋಟಿ ಮೀಸಲಿರಿಸಲಾಗಿದೆ.
ಸೇನಾ ಆಧುನೀಕರಣ ಬಜೆಟ್‌ನ ಶೇಕಡಾ 75ರಷ್ಟು ಹಣವನ್ನು ಅಂದರೆ, ₹1.11 ಲಕ್ಷ್ ಕೋಟಿಗಳನ್ನು ದೇಶೀಯವಾಗಿಯೇ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮೀಸಲಿಡಲಾಗಿದೆ. ಇದರಲ್ಲಿ ಶೇ 25ರಷ್ಟು ದೇಶೀಯವಾದ ಖಾಸಗಿ ರಕ್ಷಣಾ ಉದ್ಯಮಗಳಿಂದ ಸೇನಾ ಉಪಕರಣಗಳ ಖರೀದಿಗೆ ಮೀಸಲಿರಿಸಲಾಗಿದೆ.
ಗಡಿಯಲ್ಲಿನ ಮೂಲಸೌಕರ್ಯ ಸುಧಾರಿಸಲು ಮತ್ತು ದುರ್ಗಮ ಭೂಪ್ರದೇಶಗಳಲ್ಲೂ ಸಶಸ್ತ್ರ ಪಡೆಗಳು ಸುಗಮವಾಗಿ ಕಾರ್ಯಾಚರಣೆ ನಡೆಸಲು ಬಂಡವಾಳ ವೆಚ್ಚದಡಿ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ₹ 7,146 ಕೋಟಿ ಅನುದಾನ ನೀಡಲಾಗಿದೆ.
ಡಿಆರ್‌ಡಿಒಗೂ ಅನುದಾನ ಹೆಚ್ಚಳ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಅನುದಾನ ಹೆಚ್ಚಿಸಿದ್ದು, ಈ ಬಾರಿ ₹26,816 ಕೋಟಿ ನೀಡಲಾಗಿದೆ. ಕಳೆದ ಬಾರಿ ₹23,855 ಕೋಟಿ ನೀಡಲಾಗಿತ್ತು.
ಇದರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳ ವೆಚ್ಚಕ್ಕಾಗಿ ₹14,923 ಕೋಟಿ ನಿಗದಿಪಡಿಸಲಾಗಿದೆ. ಇದು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಡಿಆರ್‌ಡಿಒ ಅನ್ನು ಆರ್ಥಿಕವಾಗಿ ಬಲಪಡಿಸಲಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ₹ 6,21,940 ಕೋಟಿ ಇಡಲಾಗಿತ್ತು.
‘ವಿಕಸಿತ ಭಾರತ’ಕ್ಕೆ ದೊಡ್ಡ ಜಿಗಿತವಿದು– ರಾಜನಾಥ್ ಸಿಂಗ್: ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಗೆ ದೊಡ್ಡ ಉತ್ತೇಜನ ಸಿಕ್ಕಿದೆ ಎಂದು ಹೇಳಿದ್ದಾರೆ.
ನಮ್ಮ ರಕ್ಷಣಾ ಪಡೆಗಳ ಆಧುನೀಕರಣ, ತಾಂತ್ರಿಕ ಪ್ರಗತಿ ಮತ್ತು ಸಾಮರ್ಥ್ಯ ವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಈ ಬಜೆಟ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ‘ವಿಕಸಿತ ಭಾರತ’ ಕಲ್ಪನೆ ಸಾಕಾರಗೊಳಿಸುವಲ್ಲಿ ದೊಡ್ಡ ಜಿಗಿತವೆನಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.