ಪಟ್ನಾ: ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರದ ನಾಯಕರಿಗೆ ಮನವಿ ಮಾಡಿದ್ದೆವು. ಆದರೆ, ಬಜೆಟ್‌ನಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಯೋಜನೆಗಳು ಅಥವಾ ಅನುದಾನವನ್ನು ಘೋಷಣೆ ಮಾಡಿರುವುದು ಸಂತಸ ಮೂಡಿಸಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ವಿಶೇಷ ಸ್ಥಾನಮಾನಕ್ಕಾಗಿ ಕೇಂದ್ರದ ನಾಯಕರೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದೇನೆ. ಹಲವು ಬಾರಿ ಮನವಿಯೂ ಮಾಡಿದ್ದೇನೆ. ಆದರೂ ಬಿಹಾರದ ಅಭಿವೃದ್ಧಿಗೆ ಪೂರಕವಾದ ಹಲವು ಯೋಜನೆಗಳನ್ನು ಘೋಷಣೆ ಮಾಡಿರುವುದು ಸಮಾಧಾನ ತರಿಸಿದೆ’ ಎಂದಿದ್ದಾರೆ.
‘ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ ಇಟ್ಟಿದ್ದೆವು. ಇಂದಿನ ಬಜೆಟ್‌ನಲ್ಲಿ ಬಿಹಾರಕ್ಕೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ನೀರಾವರಿ ಯೋಜನೆಗಳ ಅನುಷ್ಠಾನದ ನಂತರ ಬಿಹಾರದ ಬೆಳವಣಿಗೆ ದರವು ಹೆಚ್ಚಾಗುತ್ತದೆ’ ಎಂದು ಜೆಡಿಯು ಸಂಸದ ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ (ಲಾಲನ್) ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮೂಲಸೌಕರ್ಯ ಮತ್ತು ವಿಶೇಷ ಹಣಕಾಸಿನ ನೆರವು ಸೇರಿದಂತೆ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಅಮೃತಸರ-ಕೋಲ್ಕತ್ತ ಕೈಗಾರಿಕಾ ಕಾರಿಡಾರ್‌ನಲ್ಲಿ ನಾವು ಬಿಹಾರದ ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸುತ್ತೇವೆ. ರಸ್ತೆ ಸಂಪರ್ಕ ಯೋಜನೆಗಳಾದ ಪಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸರ್ ನಿರ್ಮಾಣಕ್ಕೂ ಬೆಂಬಲ ನೀಡುತ್ತೇವೆ. ಬಗಲ್‌ಪುರ ಎಕ್ಸ್‌ಪ್ರೆಸ್‌ವೇ, ಬೋಧಗಯಾ-ರಾಜ್‌ಗೀರ್-ವೈಶಾಲಿ-ದರ್ಬಂಗಾ ಮತ್ತು ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆ ನಿರ್ಮಾಣಕ್ಕೆ ₹26,000 ಕೋಟಿ ಅನುದಾನ ನೀಡುವುದಾಗಿ ಸೀತಾರಾಮನ್ ಘೋಷಿಸಿದ್ದಾರೆ.
ಹೊಸ 2400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ ವಿದ್ಯುತ್ ಯೋಜನೆಗಳನ್ನು ₹21,400 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.