ADVERTISEMENT

Karnataka Budget 2022: ಬೆಂಗಳೂರು ಅಭಿವೃದ್ಧಿಗೆ ₹ 8,409 ಕೋಟಿ

ಹಳೆ ಯೋಜನೆಗಳನ್ನೇ ಮತ್ತೆ ಉಲ್ಲೇಖಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 10:07 IST
Last Updated 4 ಮಾರ್ಚ್ 2022, 10:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದ ರಾಜಧಾನಿಯ ಸಮಗ್ರ ಅಭಿವೃದ್ಧಿಗಾಗಿ 2022–23ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹ 8409 ಕೋಟಿ ಹಂಚಿಕೆ ಮಾಡಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ ಕಾರ್ಯಕ್ರಮಗಳು ಈಗಾಗಲೇ ಜಾರಿಯಲ್ಲಿರುವಂತಹವು. ಅವುಗಳ ಜೊತೆಗೆ ಎಸ್‌ಟಿಪಿಗಳ ಪುನಃಶ್ಚೇತನ, ಹೊಸ ರಸ್ತೆ ನಿರ್ಮಾಣ, ಬೆಂಗಳೂರು ಪಬ್ಲಿಕ್ ಶಾಲೆ’ಗಳ ಅಭಿವೃದ್ಧಿಯಂತಹ ಕಾರ್ಯಕ್ರಮಗಳು ಈ ಬಾರಿಯ ಬಜೆಟ್‌ನಲ್ಲಿ ಗಮನ ಸೆಳೆದಿವೆ.

2021–22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಈ ವರ್ಷ ಒಟ್ಟು ₹ 614 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಘೋಷಣೆ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಒಟ್ಟು ₹ 7,795 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

‘ಬೆಂಗಳೂರು ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಗರವಾಗಿದೆ. ಐ.ಟಿ, ಬಿ.ಟಿ ಸಂಶೋಧನಾ ವಲಯಗಳಂತಹ ಜ್ಞಾನಾಧಾರಿತ ಉದ್ದಿಮೆಗಳ ನೆಲೆಯಾಗಿದೆ. ಈ ಎಲ್ಲಾ ಕಾರಣಗಳಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಜನ ಜೀವನ ಸುಗಮ ಗೊಳಿಸಲು ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಲಾದ ನಮ್ಮ ಮೆಟ್ರೊ, ಉಪನಗರ ರೈಲು, ಪೆರಿಫೆರಲ್ ವರ್ತುಲ ರಸ್ತೆ ಮತ್ತಿತರ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತು ನೀಡಲಾಗುವುದು. ನಗರದ ಪರಿಸರದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ಸೌಂದರ್ಯ ವೃದ್ಧಿಗೂ ಆದ್ಯತೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ₹ 6,000 ಕೋಟಿ ವೆಚ್ಚದಲ್ಲಿ 'ಅಮೃತ ನಗರೋತ್ಥಾನ' ಯೋಜನೆಯನ್ನು ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಳಿಸುವುದಾಗಿ 2022ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ ಅಭಿವೃದ್ಧಿ, ರಾಜಕಾಲುವೆ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿ ಕಟ್ಟಡಗಳು, ಕಸ ನಿರ್ವಹಣೆ, ಬೀದಿ ದೀಪಗಳು, ಕೊಳೆಗೇರಿ ಅಭಿವೃದ್ಧಿ ಮೊದಲಾದ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಈ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಮತ್ತೆ ಉಲ್ಲೇಖ ಮಾಡಿದ್ದಾರೆ.

ಮೆಟ್ರೋ 3 ಹಂತಕ್ಕೆ ₹ 11,250 ಕೋಟಿ

'ನಮ್ಮ ಮೆಟ್ರೊ’ ಮೂರನೇ ಹಂತದ ಮಾರ್ಗವು ಹೊರವರ್ತುಲ ರಸ್ತೆ ಮೂಲಕ ಹಾದು ಹೋಗಲಿದೆ ಎಂದು ಈ ಹಿಂದಿನ ಬಜೆಟ್‌ನಲ್ಲೇ ಸರ್ಕಾರ ಘೋಷಿಸಿತ್ತು. ಮೂರನೇ ಹಂತದ ಯೋಜನೆಯನ್ನು ₹ 11,250 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ವಿಸ್ತತ ಯೋಜನಾ ವರದಿಯನ್ನು (ಡಿ.ಪಿ.ಆರ್) ತಯಾರಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು'ಎಂದು ಮುಖ್ಯಮಂತ್ರಿ ಈ ಸಲ ಪ್ರಕಟಿಸಿದ್ದಾರೆ.

ಹೆಬ್ಬಾಳದಿಂದ ಜೆ.ಪಿ. ನಗರದವರೆಗೆ 32 ಕಿ.ಮೀ ಉದ್ದದ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 13 ಕಿ.ಮೀ.ಗಳ ಮಾರ್ಗವನ್ನು ಮೂರನೇ ಹಂತವು ಒಳಗೊಂಡಿದೆ.

‘2021-22ನೇ ಸಾಲಿನಲ್ಲಿ ನಮ್ಮ ಮೆಟ್ರೊ ಎರಡನೇ ಹಂತದಲ್ಲಿ 7.53 ಕಿ.ಮೀ ಉದ್ದದ ಹೆಚ್ಚುವರಿ ಮಾರ್ಗವನ್ನು ಕಾರ್ಯಾರಂಭ ಮಾಡಿದ್ದು, ಮಾರ್ಗವನ್ನು 2022-23ನೇ ಸಾಲಿನಲ್ಲಿ 33 ಕಿ.ಮೀ ಉದ್ದದ ಮಾರ್ಗವನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು. ಇದರಿಂದ ಮೆಟ್ರೊ ಮಾರ್ಗದ ಒಟ್ಟು ಉದ್ದ 89 ಕಿ.ಮೀಗೆ ಹೆಚ್ಚಲಿದೆ. ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19 ಕಿ.ಮೀ ಉದ್ದದ ಮೆಟ್ರೊ ಮಾರ್ಗ ಕಾಮಗಾರಿ ಪ್ರಾರಂಭಗೊಂಡಿದ್ದು, 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ₹ 15,267 ಕೋಟಿ ಅಂದಾಜು ವೆಚ್ಚದಲ್ಲಿ 2026ರ ಒಳಗೆ ಜಾರಿಗೆ ತರಲಾಗುತ್ತಿದೆ. 148 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್‌ಗಳನ್ನು ನಿರ್ಮಿಸುವ ಈ ಯೋಜನೆಯಲ್ಲಿ ಚಿಕ್ಕಬಾಣಾವರ-ಬೈಯ್ಯಪ್ಪನಹಳ್ಳಿ ಕಾರಿಡಾರ್‌ನ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ಯೋಜನೆಗೆ 2022–23ನೇ ಸಾಲಿನಲ್ಲಿ ₹ 850 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಉಲ್ಲೇಖಿಸಿಲ್ಲ.

ಬಿ– ಖಾತಾ ಸಮಸ್ಯೆಗೆ ಮುಕ್ತಿ?

ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರಗಳನ್ನು ಬಿ–ವಹಿಯಲ್ಲಿ (ಬಿ– ಖಾತಾ) ದಾಖಲಿಸಲಾಗಿದೆ. ಇವುಗಳಿಗೆ ಎ– ಖಾತಾ ನೀಡಬೇಕು ಎಂಬುದು ದಶಕಗಳ ಬೇಡಿಕೆ. ಈ ಬಗ್ಗೆ ಬಜೆಟ್‌ನಲ್ಲೇ ಉಲ್ಲೇಖಿಸಲಾಗಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಕಾಯ್ದೆ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆಗಳಡಿಯಲ್ಲೇ ಇದಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನಿಡಿದ್ದಾರೆ.

ಪಿ.ಆರ್.ಆರ್‌ ಮತ್ತೆ ಪ್ರಸ್ತಾಪ: ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು 2006ರಲ್ಲೇ ಘೋಷಣೆ ಮಾಡಿದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಯೋಜನೆ ಬಗ್ಗೆ ಈ ವರ್ಷವೂ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಯೋಜನೆಯನ್ನು ಸ್ವಿಸ್‌ ಚಾಲೆಂಜ್‌ ಮಾದರಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿ ಸರ್ಕಾರ 2021–22 ನೇ ಸಾಲಿನ ಬಜೆಟ್‌ನಲ್ಲಿ ಘೊಷಿಸಿತ್ತು.

‘ನಗರದ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್ ರಸ್ತೆಯ ಮೂಲಕ ಹಾದು ಹೋಗಿ ಹೊಸೂರು ರಸ್ತೆಯನ್ನು ಸೇರುವ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲಾಗುತ್ತದೆ. 73 ಕಿ.ಮೀ ಉದ್ದ ಹಾಗೂ 100 ಮೀ ಅಗಲದ ಈ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ವೆಚ್ಚವೂ ಸೇರಿ ₹ 21,091 ಕೋಟಿ ಬಂಡವಾಳ ಬೇಕಾಗುತ್ತದೆ. ಈ ಯೋಜನೆಗೆ ಈಗಾಗಲೇ ಅನುಮೋದನೆ ನಿಡಲಾಗಿದೆ. ವಿನ್ಯಾಸಗೊಳಿಸಿ, ನಿರ್ಮಿಸಿ. ಹಣಕಾಸು ಹೊಂದಿಸಿ, ನಿರ್ವಹಿಸಿ ಹಸ್ತಾಂತರಿಸುವ (ಡಿಬಿಎಫ್‌ಒಟಿ) ಮಾದರಿಯಲ್ಲಿ ಪ್ರಸಕ್ತ ವರ್ಷದಲ್ಲೇ ಈ ಯೋಜನೆಗೆ ಟೆಂಡರ್‌ ಕರೆದು ಚಾಲನೆ ನೀಡಲಾಗುತ್ತದೆ. ಗುತ್ತಿಗೆದಾರರೇ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಭರಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಿ ಎಲ್ಲಾ ವಾಹನಗಳ ಸಿಗ್ನಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಗ್ರೇಡ್ ಸೆಪರೇಟರ್ ಮತ್ತು ಮೇಲುಸೇತುವೆ ನಿರ್ಮಾಣ ಮಾಡಬೇಕೆಂಬುದು ದಶಕಗಳ ಬೇಡಿಕೆ. ಬಿಬಿಎಂಪಿ, ಬಿಡಿಎ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆಗೆಬಿಡಿಎ ಇದುವರೆಗೆ 2671 ಎಕರೆ ಭೂಸ್ವಾಧೀನ ಮಾಡಿದೆ. ಇನ್ನೂ 1,297 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಈ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್ ಸಿಟಿಯಾಗಿ ಈ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸರ್.ಎಂ.ವಿಶ್ವೇಶರಯ್ಯ, ಬನಶಂಕರಿ 6ನೇ ಹಂತ ಮತ್ತು ಅಂಜನಾಪುರ ಬಡಾವಣೆಗಳಲ್ಲಿನ ರಸ್ತೆ, ಚರಂಡಿಗಳು, ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ₹ 404 ಕೋಟಿ ವೆಚ್ಚದಲ್ಲಿ ಬಿಡಿಎ ವತಿಯಿಂದ ನಿರ್ಮಿಸಿ ಮುಂದಿನ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

‘ಕಾವೇರಿ 5ನೇ ಹಂತ 2025ರ ಒಳಗೆ ಪೂರ್ಣ’

ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ನಿತ್ಯ 77.50 ಕೋಟಿ ಲೀಟರ್ ಕಾವೇರಿ ನೀರನ್ನು ತರುವ ₹ 5,550 ಕೋಟಿ ವೆಚ್ಚದ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಜಾರಿಯಲ್ಲಿದೆ. ಇಲ್ಲಿಯವರೆಗೆ ₹ 1,556 ಕೋಟಿ ವೆಚ್ಚ ಮಾಡಲಾಗಿದೆ. ಈ ಯೋಜನೆಯನ್ನು 2024-25ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.

ಜಲ ಮಾಲಿನ್ಯ ತಡೆಗಟ್ಟಲು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿರುವ ಹಳೆಯ 20 ಕೊಳಚೆ ನೀರು ಶುದ್ಧೀಕರಣ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣ ಕಾಮಗಾರಿಯನ್ನು ₹ 1,500 ಕೋಟಿ ವೆಚ್ಚದಲ್ಲಿ ಬೆಂಗಳೂರು ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಮೆಗಾಸಿಟಿ ಆವರ್ತ ನಿಧಿ ಅಡಿಯಲ್ಲಿ ಅರ್ಕಾವತಿ ನೀರಿನ ಮೂಲವನ್ನು ಪುನರುಜ್ಜೀವನಗೊಳಿಸಲು ಹಾಗೂ ಎತ್ತಿನಹೊಳೆ ಯೋಜನೆಯಿಂದ 1.7 ಟಿ.ಎಂ.ಸಿ. ಅಡಿ ನೀರನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳುವುದಕ್ಕೆ ₹ 312 ಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಇದನ್ನು 2022-23ನೇ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ನಗರದ ಕೋರಮಂಗಲ ರಾಜಕಾಲುವೆಯನ್ನು ಕೆ.ಆರ್. ಮಾರುಕಟ್ಟೆ ಜಂಕ್ಷನ್‌ನಿಂದ ಬೆಳ್ಳಂದೂರು ಕೆರೆವರೆಗೆ ವಿಹಾರ ತಾಣವಾಗಿ ಅಭಿವೃದ್ಧಿಪಡಿಸುವ ಕೆ-100 ನಾಗರಿಕರ ನೀರ ಹಾದಿ ( ಸಿಟಿಜನ್ ವಾಟರ್ ವೇ ಯೋಜನೆಯನ್ನು ಕಳೆದ ವರ್ಷ ಬಜೆಟ್‌ನಲ್ಲೇ ಪ‌್ರಕಟಿಸಲಾಗಿತ್ತು. ₹ 195 ಕೋಟಿ ವೆಚ್ಚದ ಈ ಯೋಜನೆಯಡಿ ರಾಜಕಾಲುವೆಗಳಲ್ಲಿ ಕೊಳಚೆ ನೀರನ್ನು ಬೇರ್ಪಡಿಸಿ, ಪುನರುಜ್ಜೀವನಗೊಳಿಸಿ, ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಮತ್ತೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಯೋಜನೆಯಲ್ಲಿ ಈಗಾಗಲೇ ಶೇ 46ರಷ್ಟು ಭೌತಿಕ ಪ್ರಗತಿ ಹಾಗೂ ಶೇ 25ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ.

ನಗರದ ರಾಜಗಾಲುವೆಗಳನ್ನುಮಳೆ ನೀರು ಹರಿಯುವಿಕೆಗೆ ಮಾತ್ರ ಬಳಸಲು ಮತ್ತು ಮಳೆ ಸುರಿದಾಗ ಪ್ರವಾಹ ಉಂಟಾಗದಂತೆ ತಡೆಯಲು ರಾಜಕಾಲುವೆ ಅಭಿವೃದ್ಧಿಗಾಗಿ ₹ 1,500 ಕೋಟಿ ನೀಡುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಘೋಷಣೆ ಮಾಡಿದ್ದರು. ಈ ಬಗ್ಗೆ ಬಜೆಟ್‌ನಲ್ಲೂ ಉಲ್ಲೇಖಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಷಿಪ್‌ ನಿರ್ಮಿಸುವುದಾಗಿ 2021–22ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಇಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಈ ಸಲದ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಘೋಷಣೆಗಳು

* ಬನಶಂಕರಿ ಜಂಕ್ಷನ್‌ನಲ್ಲಿ ₹ 45 ಕೋಟಿ ವೆಚ್ಚದಲ್ಲಿ ‘ಸ್ಕೈವಾಕ್’ ನಿರ್ಮಾಣ ಮಾಡಲಾಗುವುದು.

* ವೈಟ್‌ಫೀಲ್ಡ್, ಕೆ.ಆರ್‌.ಪುರ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ನಿಲ್ದಾಣಗಳಲ್ಲಿ ರೈಲ್ವೆಯೊಂದಿಗೆ ನಮ್ಮ ಮೆಟ್ರೊ ಸಂಪರ್ಕಿಸಲು ₹ 55 ಕೋಟಿ ಅನುದಾನ ನೀಡಲಾಗುವುದು.

* ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೇರಿ ವೃತ್ತದ ಮೂಲಕ ಹೆಬ್ಬಾಳದವರೆಗೆ ₹ 15 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ರೂಪಿಸಲು ಡಿಪಿಆರ್ ತಯಾರಿಸಲಾಗುವುದು

* ಎನ್‌ಜಿಇಎಫ್‌ನಲ್ಲಿ 105 ಎಕರೆ ಪ್ರದೇಶದಲ್ಲಿ ಸಿಂಗಾಪುರದ ಮಾದರಿಯಲ್ಲಿ ‘ಗ್ರೀನ್ ಎಕ್ಸ್‌ಪೊ’
ನಿರ್ಮಿಸುವ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನ, ಪರಿಸರಸ್ನೇಹಿ ಸಾರಿಗೆ, ಹಸಿರು ಮೂಲಸೌಕರ್ಯ, ಹಸಿರು ನವೋದ್ಯಮಗಳ ಪ್ರಾತ್ಯಕ್ಷಿಕೆ ನೀಡಲಾಗುವುದು

* ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು

* ₹ 89 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಆಯ್ದ 20 ಶಾಲೆಗಳನ್ನು ‘ಬೆಂಗಳೂರು ಪಬ್ಲಿಕ್
ಶಾಲೆ’ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.

* ಬೆಂಗಳೂರಿನ ಮಡಿವಾಳ ಮತ್ತು ಎಲೆ ಮಲ್ಲಪ್ಪಶೆಟ್ಟಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುವುದು.

ಇವನ್ನೂ ಓದಿ:
ಕರ್ನಾಟಕ ಬಜೆಟ್–2022 | ನೀರಾವರಿಗೆ ಆದ್ಯತೆ; ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ
Karnataka Budget: ಮೇಕೆದಾಟು ಯೋಜನೆಗೆ ₹1,000 ಕೋಟಿ ಮೀಸಲು–ಬೊಮ್ಮಾಯಿ
Karnataka Budget 2022: ಬೆಂಗಳೂರಿಗೆ ಏನೇನು?
ಬೊಮ್ಮಾಯಿ ಬಜೆಟ್‌: ಕೃಷಿ ಕ್ಷೇತ್ರಕ್ಕೇನು ಕೊಡುಗೆ? ಇಲ್ಲಿದೆ ವಿವರ
Karnataka Budget: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಜೆಟ್ ಪ್ರತಿ ಹಿಡಿದು ಮಿಂಚಿದ ಸಿಎಂ ಬೊಮ್ಮಾಯಿ
ಕರ್ನಾಟಕ ಬಜೆಟ್–2022: ತೆರಿಗೆ ದರದಲ್ಲಿ ಯಥಾಸ್ಥಿತಿ –ಸಿಎಂ ಬೊಮ್ಮಾಯಿ





ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.