ADVERTISEMENT

Karnataka Budget 2023| ನೀರಾವರಿಗೆ ಇಲ್ಲ ಆರ್ಥಿಕ ಸಂಪನ್ಮೂಲ!

‘ಬಿಜೆಪಿ ಸರ್ಕಾರದ ವಿವೇಚನಾ ರಹಿತ ಕ್ರಮಗಳು ಕಾರಣ’ ಎಂದ ಮುಖ್ಯಮಂತ್ರಿ

ಆದಿತ್ಯ
Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ವಿವೇಚನಾ ರಹಿತ ಕ್ರಮಗಳಿಂದಾಗಿ ಜಲಸಂಪನ್ಮೂಲ ಇಲಾಖೆಯಲ್ಲಿ ಈ ಬಾರಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ’.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಭಾಷಣದಲ್ಲಿ ಹಿಂದಿನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಈ ಇಲಾಖೆಗೆ ಆಯವ್ಯಯ ಹಂಚಿಕೆಯು ವಾರ್ಷಿಕವಾಗಿ ಸರಾಸರಿ ₹ 20 ಸಾವಿರ ಕೋಟಿ ಇದ್ದು ಅನುಮೋದಿಸಿರುವ ಯೋಜನೆಗಳ ಅಂದಾಜು ಮೊತ್ತ ಐದು ಪಟ್ಟು ಹೆಚ್ಚಳವಾಗಿದೆ. ಇದು, ವಿತ್ತೀಯ ಶಿಸ್ತಿನ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಆರು ತಿಂಗಳ ಅವಧಿಯಲ್ಲಿ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ವಿತ್ತೀಯ ಅಶಿಸ್ತಿನ ಪರಮಾವಧಿ ಅಲ್ಲದೇ ಇನ್ನೇನು’ ಎಂದು ಸಿ.ಎಂ ಪ್ರಶ್ನಿಸಿದರು.

ADVERTISEMENT

ಆ ಮೂಲಕ ಜಲಸಂಪನ್ಮೂಲ ಇಲಾಖೆಗೆ ಅನುದಾನ ನೀಡದೇ ನಿರಾಸೆಗೊಳಿಸಿದ್ದಾರೆ. ಇದಕ್ಕೆ ‘ವಿತ್ತೀಯ ಅಶಿಸ್ತಿನ ಪರಮಾವಧಿ’ ಕಾರಣವನ್ನೂ ನೀಡಿರುವ ಅವರು ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗೆ ‘ದೊಡ್ಡ ಕೊಡುಗೆ’ಯನ್ನು ಅವರು ಘೋಷಿಸಿಲ್ಲ.

ಏ‌ಪ್ರಿಲ್‌1ರವರೆಗೆ ಅನುಮೋದಿಸಿರುವ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಪಾಯಿ ಅವಶ್ಯಕತೆ ಇದೆ. ಈ ಯೋಜನೆಗಳ ವೆಚ್ಚವು ಕಾಮಗಾರಿ, ಭೂಸ್ವಾಧೀನ ವೆಚ್ಚ ಹೆಚ್ಚಳದ ಕಾರಣ ₹ 25 ಸಾವಿರ ಕೋಟಿಯಿಂದ ₹ 40 ಸಾವಿರ ಕೋಟಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. 6 ತಿಂಗಳಲ್ಲಿ ₹ 25,548 ಕೋಟಿ ಅಂದಾಜು ವೆಚ್ಚದ 1,274 ಕಾಮಗಾರಿ ಕೈಗೆತ್ತಿಕೊಳ್ಳಲು ಚಾಲನೆ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

₹ 770 ಕೋಟಿ ವೆಚ್ಚದಲ್ಲಿ ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಒಟ್ಟು 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಅಭಯ ನೀಡಿದ್ದಾರೆ.

ಎತ್ತಿನಹೊಳೆ ಯೋಜನೆಯ ಅಂದಾಜು ವೆಚ್ಚ ₹ 12,912 ಕೋಟಿಯಿಂದ ₹ 23,252 ಕೋಟಿಗೆ ಪರಿಷ್ಕೃತಗೊಂಡಿದೆ. ಹಿಂದಿನ ಸರ್ಕಾರ ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸದಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಯೋಜನೆ ಪೂರ್ಣಕ್ಕೆ ಆದ್ಯತೆ ಕೊಡುವುದಾಗಿ ಘೋಷಿಸಿದ್ದಾರೆ.

ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ ಹಾಗೂ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಸ್ತಾಪಿಸಿದ್ದಾರೆ. ಆದರೆ, ಅನುದಾನ ಬಗ್ಗೆ ಪ್ರಸ್ತಾಪಿಸಿಲ್ಲ.

ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ₹ 5,300 ಕೋಟಿ ಅನುದಾನ ಘೋಷಿಸಿದೆ. ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಕಳಸಾ– ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಅಗತ್ಯ ತೀರುವಳಿ ಪಡೆಯಲು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ 3ರ ಅಡಿ ಭೂಸ್ವಾಧೀನ, ಪುನರ್‌ ವಸತಿಗೆ ಆದ್ಯತೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.