
ನವದೆಹಲಿ: ಸತತ 9ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಭಾನುವಾರ) ಬಜೆಟ್ ಮಂಡಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯಲ್ಲಿ ಸತತವಾಗಿ 9ನೇ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
2019ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಾಗ ಭಾರತದ ಮೊದಲ ಪೂರ್ಣವಾಧಿ ಹಣಕಾಸು ಸಚಿವೆಯಾಗಿ ಸೀತಾರಾಮನ್ ಅಧಿಕಾರ ವಹಿಸಿಕೊಂಡರು. 2024ರಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಈ ವೇಳೆ ಹಣಕಾಸು ಖಾತೆಯನ್ನು ಉಳಿಸಿಕೊಳ್ಳುವಲ್ಲಿ ನಿರ್ಮಲಾ ಸೀತಾರಾಮನ್ ಯಶಸ್ವಿಯಾದರು.
ಸೀತಾರಾಮನ್ ಅವರು 2026ರ ಜನವರಿ 31ಕ್ಕೆ ಆರು ವರ್ಷ ಎಂಟು ತಿಂಗಳುಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು. ಇಂದು ಅವರು ಸತತವಾಗಿ ದಾಖಲೆಯ ಒಂಬತ್ತನೇ ಬಜೆಟ್ ಅನ್ನು ಮಂಡಿಸಿದ್ದಾರೆ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ 10 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದರೆ, ಪಿ. ಚಿದಂಬರಂ ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದರು. ಆದರೆ ಇವರು ಸತತವಾಗಿ ಬಜೆಟ್ ಮಂಡಿಸಿಲ್ಲ.
1950 ಜೂನ್ 1ರಂದು ಹಣಕಾಸು ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಸಿ.ಡಿ. ದೇಶ್‌ಮುಖ್ ಅವರು ಸುಮಾರು ಆರು ವರ್ಷ ಮತ್ತು ಎರಡು ತಿಂಗಳುಗಳ ಕಾಲ ಅಧಿಕಾರದಲ್ಲಿದ್ದರು.
ಆರ್ಥಿಕ ಉದಾರೀಕರಣವನ್ನು ಉತ್ತೇಜಿಸಿದ ಮನಮೋಹನ್ ಸಿಂಗ್ ಅವರು 1990 ಜೂನ್ 21 ರಿಂದ 1996 ಜೂನ್ 16ರವರೆಗೆ ಸುಮಾರು ಐದು ವರ್ಷಗಳ ಕಾಲ ಹಣಕಾಸು ಸಚಿವರಾಗಿದ್ದರು.
ಮೊದಲ ಬಜೆಟ್
1947 ನವೆಂಬರ್ 26ರಂದು ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದರು.
ಗರಿಷ್ಠ ಬಜೆಟ್ ಮಂಡನೆ
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ದೇಸಾಯಿ ಒಟ್ಟು 10 ಬಜೆಟ್ ಮಂಡಿಸಿದ್ದಾರೆ.
ಅತಿ ಉದ್ದದ ಬಜೆಟ್ ಭಾಷಣ
2020 ಫೆಬ್ರವರಿ 1ರಂದು ಸೀತಾರಾಮನ್ ಅವರು ಎರಡು ಗಂಟೆ 40 ನಿಮಿಷಗಳ ಕಾಲ ಬಜೆಟ್ ಮಂಡಿಸುವ ಮೂಲಕ ಅತಿ ಉದ್ದದ ಬಜೆಟ್ ಭಾಷಣ ಮಾಡಿದ ದಾಖಲೆ ಹೊಂದಿದ್ದಾರೆ.
ಅತ್ಯಂತ ಚಿಕ್ಕ ಬಜೆಟ್ ಭಾಷಣ
1977 ರಲ್ಲಿ ಹಿರುಭಾಯ್ ಮುಲ್ಜಿಭಾಯ್ ಪಟೇಲ್ ಅವರು ಮಂಡಿಸಿದ ಬಜೆಟ್ ಭಾಷಣವು ಇಲ್ಲಿಯವರೆಗೆ ಮಂಡಿಸಿದ ಅತ್ಯಂತ ಚಿಕ್ಕ ಬಜೆಟ್ ಭಾಷಣ ಆಗಿದೆ. ಕೇವಲ 800 ಪದಗಳನ್ನು ಹೊಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.