
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ನಿರಂತರವಾಗಿ, ಅತ್ಯಂತ ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆ ನಿರ್ಮಲಾ ಅವರದ್ದು.
ನಿರ್ಮಲಾ ಅವರು 2019ರ ಮೇ 31ರಂದು ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಕೋವಿಡ್ ಸಾಂಕ್ರಾಮಿಕ, ಜಾಗತಿಕ ಮಟ್ಟದಲ್ಲಿನ ಹಲವು ಬಿಕ್ಕಟ್ಟುಗಳ ಸಂದರರ್ಭದಲ್ಲಿ ಅವರು ಈ ಹೊಣೆಯನ್ನು ನಿರ್ವಹಿಸಿದ್ದಾರೆ. ಭಾರತವು ಅವರ ಅವಧಿಯಲ್ಲಿ ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿರ್ಮಲಾ ಅವರು ಹಣಕಾಸು ಸಚಿವೆ ಆಗಿ ಜನವರಿ 31ರಂದು (ಶನಿವಾರ) ಆರು ವರ್ಷ, ಎಂಟು ತಿಂಗಳು ಕಳೆದಿವೆ. ಅವರು ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಆಗ ಅವರು ಸತತವಾಗಿ ಒಂಬತ್ತನೆಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಲಿದ್ದಾರೆ.
ನಿರ್ಮಲಾ ಅವರು ಸತತವಾಗಿ ಒಂಬತ್ತನೆಯ ಬಜೆಟ್ ಮಂಡಿಸಲಿರುವುದು ‘ಭಾರತದ ಸಂಸದೀಯ ಇತಿಹಾಸದಲ್ಲಿ ಒಂದು ಹೆಮ್ಮೆಯ ಸಂಗತಿಯಾಗಿ ದಾಖಲಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಹೇಳಿದ್ದರು.
ಮೊರಾರ್ಜಿ ದೇಸಾಯಿ ಅವರು ಒಟ್ಟು 10 ಬಾರಿ ಬಜೆಟ್ ಮಂಡನೆ ಮಾಡಿದ್ದರು, ಪಿ. ಚಿದಂಬರಂ ಅವರು ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದರು. ಆದರೆ ಇವರಿಬ್ಬರೂ ಸತತವಾಗಿ ಇಷ್ಟು ಬಾರಿ ಬಜೆಟ್ ಮಂಡನೆ ಮಾಡಿಲ್ಲ.
ಸಿ.ಡಿ. ದೇಶಮುಖ್ ಅವರು 1950ರ ಜೂನ್ 1ರಿಂದ ಆರು ವರ್ಷ ಎರಡು ತಿಂಗಳು ಹಣಕಾಸು ಸಚಿವರಾಗಿದ್ದರು.
ಮನಮೋಹನ್ ಸಿಂಗ್ ಅವರು 1990ರ ಜೂನ್ 21ರಿಂದ 1996ರ ಜೂನ್ 16ರವರೆಗೆ ಸರಿಸುಮಾರು ಐದು ವರ್ಷ ಹಣಕಾಸು ಸಚಿವರಾಗಿದ್ದರು. ನಂತರ ಪ್ರಧಾನಿಯಾಗಿ ಅವರು 2008ರಲ್ಲಿ ಹಾಗೂ 2012ರಲ್ಲಿ ಅಲ್ಪ ಅವಧಿಗೆ ಹಣಕಾಸು ಖಾತೆಯ ಹೊಣೆ ನಿರ್ವಹಿಸಿದ್ದರು.
ಚಿದಂಬರಂ ಅವರು ಒಟ್ಟು ಎಂಟು ವರ್ಷ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಸತತವಾಗಿ ಅಲ್ಲ.
ಮೊರಾರ್ಜಿ ದೇಸಾಯಿ (7 ವರ್ಷ 9 ತಿಂಗಳು)
ಪ್ರಣವ್ ಮುಖರ್ಜಿ (6 ವರ್ಷ 4 ತಿಂಗಳು)
ಅರುಣ್ ಜೇಟ್ಲಿ (4 ವರ್ಷ 8 ತಿಂಗಳು)
ವೈ.ಬಿ. ಚವಾಣ್ (4 ವರ್ಷ 3 ತಿಂಗಳು)
ಯಶವಂತ್ ಸಿನ್ಹಾ (4 ವರ್ಷ 4 ತಿಂಗಳು) ಸತತವಾಗಿ ಅಲ್ಲದಿದ್ದರೂ ಸುದೀರ್ಘ ಅವಧಿಗೆ ಹಣಕಾಸು ಸಚಿವರಾಗಿ ಕೆಲಸ ಮಾಡಿದ ಇತರ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.