ADVERTISEMENT

ಏರಿದ STT, ಕುಸಿದ ಷೇರುಪೇಟೆ: ಒಂದೇ ದಿನದಲ್ಲಿ ಕರಗಿತು ₹9.40 ಲಕ್ಷ ಕೋಟಿ ಸಂಪತ್ತು

ಪಿಟಿಐ
Published 1 ಫೆಬ್ರುವರಿ 2026, 21:53 IST
Last Updated 1 ಫೆಬ್ರುವರಿ 2026, 21:53 IST
   

ಮುಂಬೈ: ಷೇರು ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಹೆಚ್ಚು ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ ನಂತರದಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ದೊಟ್ಟ ಮಟ್ಟದ ಕುಸಿತ ದಾಖಲಿಸಿದವು.

ಭಾನುವಾರ ಬಜೆಟ್‌ ಮಂಡನೆಯ ಕಾರಣದಿಂದಾಗಿ ಷೇರುಪೇಟೆಯಲ್ಲಿಯೂ ವಹಿವಾಟು ಇತ್ತು. ಆರಂಭಿಕ ಹಂತದಲ್ಲಿ ತುಸು ಏರಿಕೆ ಕಂಡಿದ್ದ ಬಿಎಸ್‌ಇ ಸೆನ್ಸೆಕ್ಸ್‌, ಫ್ಯೂಚರ್ಸ್‌ ವಹಿವಾಟಿನ ಮೇಲಿನ ಎಸ್‌ಟಿಟಿ ಪ್ರಮಾಣವನ್ನು ಶೇ 0.05ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ ನಂತರದಲ್ಲಿ 2,370 ಅಂಶಗಳಷ್ಟು ಕುಸಿಯಿತು. ವಹಿವಾಟಿನ ಅಂತ್ಯಕ್ಕೆ 1,546 ಅಂಶಗಳಷ್ಟು (ಶೇ 1.88) ಇಳಿಕೆ ದಾಖಲಿಸಿತು. ಎನ್‌ಎಸ್‌ಇ ನಿಫ್ಟಿ 495 ಅಂಶಗಳಷ್ಟು (ಶೇ 1.96ರಷ್ಟು) ಕುಸಿದಿದೆ. 

ಆರು ವರ್ಷಗಳ ಅವಧಿಯಲ್ಲಿ ಬಜೆಟ್‌ ಮಂಡನೆಯ ದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಪ್ರಮಾಣದಲ್ಲಿ ಕುಸಿದಿರುವುದು ಇದೇ ಮೊದಲು. 2020ರ ಫೆಬ್ರುವರಿ 1ರ ಸೆನ್ಸೆಕ್ಸ್‌ ಶೇ 2.42ರಷ್ಟು ಹಾಗೂ ನಿಫ್ಟಿ ಶೇ 2.51ರಷ್ಟು ಇಳಿಕೆ ಕಂಡಿತ್ತು. ಭಾನುವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹9.40 ಲಕ್ಷ ಕೋಟಿಯಷ್ಟು ಕರಗಿದೆ. 

ADVERTISEMENT

‘ವಾಯಿದಾ ವಹಿವಾಟಿಗೆ ಸಂಬಂಧಿಸಿದ ಎಸ್‌ಟಿಟಿ ಹೆಚ್ಚಳದ ಕಾರಣ ದಿಂದಾಗಿ ಸೂಚ್ಯಂಕಗಳು ಕುಸಿದಿವೆ. ಕಳೆದ ವರ್ಷದಲ್ಲಿ ಬಂಡವಾಳ ವೃದ್ಧಿ ತೆರಿಗೆಯನ್ನು ಹೆಚ್ಚು ಮಾಡಲಾಗಿತ್ತು. ಈಗ ಎಸ್‌ಟಿಟಿ ಹೆಚ್ಚಾಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ವೆಚ್ಚಗಳು ಹೆಚ್ಚಲಿವೆ’ ಎಂದು ಎಕ್ಸಿಸ್‌ ಸೆಕ್ಯುರಿಟೀಸ್‌ನ ಸಿಇಒ ಪ್ರಣವ್ ಹರಿದಾಸನ್ ಹೇಳಿದ್ದಾರೆ.

ಸಣ್ಣ ಹೂಡಿಕೆದಾರರು ಸಾಮಾನ್ಯ ವಾಗಿ ಫ್ಯೂಚರ್ಸ್‌ ವಹಿವಾಟಿನಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವುದಿಲ್ಲ. ಹೀಗಾಗಿ ಎಸ್‌ಟಿಟಿ ಹೆಚ್ಚು ಮಾಡು ವುದರಿಂದ ಉದ್ದೇಶ ಈಡೇರುತ್ತದೆಯೇ ಅಥವಾ ಅದರ ಪರಿಣಾಮವು ಭಾರತದ ಬಂಡವಾಳ ಮಾರುಕಟ್ಟೆಗಳ ಇತರ ಅಂಶಗಳ ಮೇಲೆ ಉಂಟಾಗುತ್ತದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

‘ಈ ಕಳವಳವನ್ನು ವಿದೇಶಿ ಹೂಡಿಕೆ ದಾರರು ಹಾಗೂ ದೇಶಿ ವರ್ತಕರು ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯು ತಕ್ಷಣಕ್ಕೆ ನೀಡಿರುವ ಪ್ರತಿಕ್ರಿಯೆ ಎಸ್‌ಟಿಟಿಗೆ ಸಂಬಂಧಿಸಿದ್ದಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಎಸ್‌ಟಿಟಿ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಪ್ರಸ್ತಾವನೆಯು ಅಲ್ಪಾವಧಿಗೆ ಬಂಡವಾಳ ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಆದರೆ ದೀರ್ಘಾವಧಿಯಲ್ಲಿ ಅದು ಒಳ್ಳೆಯದನ್ನು ಮಾಡಬಹುದು’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಧೀರಜ್ ರೆಲ್ಲಿ ಹೇಳಿದ್ದಾರೆ.

ಜಾಗತಿಕ ವ್ಯಾಪಾರದಲ್ಲಿ ಸುಂಕದ ಪರಿಣಾಮವಾಗಿ ತೊಂದರೆಗೆ ಒಳಗಾಗಿ ರುವ ವಲಯಗಳಿಗೆ ಬಜೆಟ್‌ ನೆರವಾಗಿದೆ. ದತ್ತಾಂಶ ಕೇಂದ್ರಗಳು, ಜಿಸಿಸಿ, ಸೆಮಿಕಂಡಕ್ಟರ್‌ಗಳು, ವಿರಳ ಲೋಹ ಮತ್ತು ತಯಾರಿಕೆ ಸೇರಿದಂತೆ ಮುಂದೆ ಅಭಿವೃದ್ಧಿಗೆ ಉತ್ತೇಜನ ನೀಡುವ ಕ್ಷೇತ್ರಗಳ ಮೇಲೆ ಗಮನ ನೀಡಿದೆ ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ಹೀಗಿದ್ದರೂ ಮಾರುಕಟ್ಟೆಯು ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಇದಕ್ಕೆ ಒಂದು ಮುಖ್ಯ ಕಾರಣ ಎಸ್‌ಟಿಟಿ ಶುಲ್ಕ ಹೆಚ್ಚಳ. ಇದರಿಂದಾಗಿ, ಹೆಚ್ಚಿನ ಆಲೋಚನೆ ಇಲ್ಲದ ತಕ್ಷಣದ ಪ್ರತಿಕ್ರಿಯೆ ಮಾರುಕಟ್ಟೆಗಳಲ್ಲಿ ಕಂಡುಬಂದಿದೆ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.