ADVERTISEMENT

Union Budget 2021 | ನಿರ್ಮಲಾ ಬಜೆಟ್‌: ರಾಮರಾಜ್ಯವಿಲ್ಲ

ವಿನೋದ್‌ ವ್ಯಾಸುಲು
Published 1 ಫೆಬ್ರುವರಿ 2021, 19:30 IST
Last Updated 1 ಫೆಬ್ರುವರಿ 2021, 19:30 IST
ವಿನೋದ್‌ ವ್ಯಾಸುಲು
ವಿನೋದ್‌ ವ್ಯಾಸುಲು   

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಮಂಡಿಸಿದ ಬಜೆಟ್‌ ಒಂದು ಅತ್ಯುತ್ತಮ ಮಾಧ್ಯಮ ಕಾರ್ಯಕ್ರಮ ಹೊರತು ಬೇರೇನೂ ಅಲ್ಲ. ಆಸ್ತಿ ಹಣಗಳಿಕೆ ಎಂಬ ಹೊಸ ನುಡಿಗಟ್ಟನ್ನು ಆರಂಭಿಸಲಾಗಿದೆ. ಖಾಸಗೀಕರಣವನ್ನು ಬೇರೆ ಪದಗಳನ್ನು ಬಳಸಿ ಹೇಳಿದಾಗಲೂ ಅದು ತನ್ನ ನಿಜ ವಾಸನೆ ಬೀರದೆ ಇರಲಾರದು.

ವಾರ್ಷಿಕ ಹಣಕಾಸು ಹೇಳಿಕೆಯನ್ನು ಮಂಡಿಸಬೇಕಿರುವುದು ಸರ್ಕಾರದ ಸಾಂವಿಧಾನಿಕ ಅಗತ್ಯತೆ. ಬಹಳ ದೂರವ್ಯಾಪ್ತಿಯನ್ನು ಆವರಿಸುವಂತಹ ಪ್ರಕಟಣೆಗಳನ್ನು ಹಣಕಾಸು ಸಚಿವರು ಮಾಡಿದ್ದಾರೆ. ಅವರ ಭಾಷಣದಿಂದ ವಾರ್ಷಿಕ ಹಣಕಾಸು ಹೇಳಿಕೆಯ ವ್ಯಂಗ್ಯವನ್ನು ಕಂಡುಹಿಡಿಯುವುದು ಕಷ್ಟ. ಈ ಕಾಗದರಹಿತ ಸಾಧನೆಯ ಅನುಬಂಧವನ್ನು ನಾವು ನೋಡುವ ಅಗತ್ಯ ಇದೆ.

ದೆಹಲಿಯ ಸಮೀಪ ರೈತರು ನಡೆಸುತ್ತಿರುವ ಪ್ರತಿಭಟನೆ ಹಣಕಾಸು ಸಚಿವರ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಬಹುದೊಡ್ಡ ವಿತ್ತೀಯ ಕೊರತೆ ರೇಟಿಂಗ್‌ ಏಜೆನ್ಸಿಗಳಲ್ಲಿ ಯಾವುದೇ ಗುಲ್ಲೆಬ್ಬಿಸಿಲ್ಲ. ‘ಉತ್ತಮ ಆಡಳಿತ’ದ ಪೋಷಕರಾದ ಇವರನ್ನು ಹಣಕಾಸು ಸಚಿವರು ಅಸಮಾಧಾನಪಡಿಸಿಲ್ಲ.

ADVERTISEMENT

ಎಸ್ಟೇಟ್‌ ತೆರಿಗೆ, ಬಂಡವಾಳ ಗಳಿಕೆ ತೆರಿಗೆಯಂತಹ ತೆರಿಗೆಗಳನ್ನು ಜಾರಿಗೆ ತರದಿರುವುದರಿಂದ ದೇಶದ ಜನಸಂಖ್ಯೆಯಲ್ಲಿ ಶೇ 5ರಷ್ಟು ಇರಬಹುದಾದ ಶ್ರೀಮಂತ ವರ್ಗ ಖುಷಿಗೊಂಡಿದೆ. ಪೆಟ್ರೋಲ್‌/ ಡೀಸೆಲ್‌ ಮೇಲೆ ವಿಧಿಸಿರುವ ಶೇ 2.5 ಸೆಸ್‌ ಅನ್ನು ಕೊಡವಿ ಹಾಕಬಹುದು.

ಕೋವಿಡ್‌ ಸಮಯದಲ್ಲೂ ನೇರ ತೆರಿಗೆ ವರಮಾನವನ್ನು ಹೆಚ್ಚಿಸಿಕೊಳ್ಳಲು ಸಚಿವರು ಬಯಸಿಲ್ಲ. ಲೋಕಸಭಾ ಚುನಾವಣೆ ಇನ್ನೂ ಬಹಳ ದೂರ ಇರುವುದರಿಂದ ಹಾಗೂ ತಕ್ಷಣದ ರಾಜಕೀಯ ಅಪಾಯ ಇಲ್ಲದ ಕಾರಣ ಈ ಕಠಿಣ ನಿರ್ಧಾರವನ್ನೂ ಅವರು ಸುಲಭವಾಗಿ ಕೈಗೊಳ್ಳಬಹುದಾಗಿತ್ತು.

ರಸ್ತೆ, ರೈಲಿನಂತಹ ಮೂಲಸೌಲಭ್ಯಗಳಿಗೆ ಹೂಡಿಕೆ (ಶೀಘ್ರ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ) ಮಾಡುವ ಪ್ರಸ್ತಾವವನ್ನು ಸಚಿವರು ಪ್ರಕಟಿಸಿದ್ದಾರೆ, ಆದರೆ ಅದಕ್ಕೆ ಹಣಕಾಸು ಒದಗಿಸಿಲ್ಲ. ನಿಯಂತ್ರಣಗಳನ್ನು ಸರಳಗೊಳಿಸುವ ಮೂಲಕ ವಿದೇಶಿ ಹೂಡಿಕೆದಾರರು ಗುಂಪುಗೂಡಿ ಮುಗಿಬೀಳುತ್ತಾರೆ ಎಂದು ಸಚಿವರು ಆಶಿಸಿದ್ದಾರೆ.

ಬಂಡವಾಳಗಾರರಿಗೆ ಮಣೆ: ನೇರ ತೆರಿಗೆಯಿಂದ ಅಧಿಕ ವರಮಾನದ ಅಗತ್ಯವಿಲ್ಲ, ಏಕೆಂದರೆ ಖಾಸಗಿ ಹೂಡಿಕೆದಾರರು ಅದರಲ್ಲೂ ಮುಖ್ಯವಾಗಿ ವಿದೇಶಿ ಹೂಡಿಕೆದಾರರಿಗೆ ನೆರವಾಗುವಂತಹ ಷರತ್ತುಗಳನ್ನು ವಿಧಿಸುವುದರಿಂದ ಅವರು ಇಲ್ಲಿ ಬಂಡವಾಳ ತೊಡಗಿಸಲಿದ್ದಾರೆ. ಇದು ಜನರಿಂದ ಆಯ್ಕೆಯಾದ ಸರ್ಕಾರವೊಂದರ ರಾಜಕೀಯ ಇಚ್ಛಾಶಕ್ತಿ. ಆದರಲ್ಲಿ ಇ‌ಚ್ಛಾಶಕ್ತಿ ಕೊರತೆ ತೋರಿಸಲು ಸಾಧ್ಯವಿಲ್ಲ. ಸರ್ಕಾರದ ಧೋರಣೆ ಇದುವೇ ಎಂಬುದು ಸ್ಪಷ್ಟ.

ದೇಶ ಎದುರಿಸಿದ ಭಾರಿ ಸಮಸ್ಯೆ ಎಂದರೆ ಕೋವಿಡ್‌ನಿಂದ ಉಂಟಾದ ವಿನಾಶ. ಮನೆಯಿಂದ ದೂರ ಇದ್ದ ಬಡ ಕೆಲಸಗಾರರ ಮೇಲೆ ಬಿದ್ದ ಹೊರೆ ಹಾಗೂ ಅವರ ಶೋಚನೀಯ ಪರಿಸ್ಥಿತಿ. ಕಳೆದ ಏಪ್ರಿಲ್‌ನಲ್ಲಿ ಇಂತಹ ಸಾವಿರಾರು ಮಂದಿ ಹತಾಶರಾಗಿ ನೂರಾರು ಕಿಲೋಮೀಟರ್‌ ನಡೆದೇ ತಮ್ಮ ಮನೆಗಳತ್ತ ತೆರಳಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹವರಿಗೆ ದೊರಕಿದ ಏಕೈಕ ಪರಿಹಾರವೆಂದರೆ ಒಂದು ದೇಶ ಒಂದು ಪಡಿತರ ಚೀಟಿ ಮಾತ್ರ. ಅದು ಸಹ ಸರಿಯಾಗಿ ಕೆಲಸ ಮಾಡಿದರೆ ಮಾತ್ರ.

ಮರೆತ ಎಂಎಸ್‌ಎಂಇ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ನೆರವಾಗುವ ಅವಕಾಶವನ್ನು ಕೈಚೆಲ್ಲಲಾಗಿದೆ. ಇದೊಂದು ಸ್ಪಷ್ಟ ನಿರ್ಧಾರವೇ ಹೊರತು ಕಣ್ತಪ್ಪಿನಿಂದ ಆಗಿರುವುದಲ್ಲ. ಇದೊಂದು ದೊಡ್ಡ ಉದ್ಯಮ ಸ್ನೇಹಿ ಸರ್ಕಾರ. ಸರ್ಕಾರದ ನಿರ್ಧಾರ ಯೋಗ್ಯವಾದುದು ಎಂದೇ ಸಾರುತ್ತಿದೆ ಷೇರು ಮಾರುಕಟ್ಟೆಯ ಪ್ರತಿಕ್ರಿಯೆ.

ಈ ಎಂಎಸ್‌ಎಂಇಗಳು ದೊಡ್ಡ ಉದ್ಯಮ ಸಮೂಹಗಳಲ್ಲ. ಇವುಗಳು ನೀಡುವುದೇನಿದ್ದರೂ ಅನೌಪಚಾರಿಕ ಕ್ಷೇತ್ರದ ಉದ್ಯೋಗಗಳನ್ನು. ‘ಉದ್ಯೋಗ’ ಎಂದಮೇಲೆ ಭವಿಷ್ಯ ನಿಧಿ, ಆರೋಗ್ಯದಂತಹ ಸೌಲಭ್ಯಗಳೂ ಇರಬೇಕು. ಇಲ್ಲಿ ಅದು ಅನ್ವಯವಾಗುವುದೇ ಇಲ್ಲ.‌

ಕೂಲಿ ಸಬ್ಸಿಡಿಯನ್ನಾದರೂ ವ್ಯರ್ಥವಾಗಿ ಹೋಗುವುದನ್ನು ಬಿಟ್ಟು ಕಾರ್ಮಿಕರಿಗೆ ನೀಡುತ್ತಿದ್ದರೆ ಉದ್ಯೋಗ ಕಳೆದುಕೊಂಡು ನೂರಾರು ಕಿಲೋಮೀಟರ್ ನಡೆದೇ ತಮ್ಮ ಮನೆಗೆಳಿಗೆ ತೆರಳಿದ ಜನರಿಗೆ ಒಂದಿಷ್ಟು ಸಾಂತ್ವನವಾಗಿಬಿಡುತ್ತಿತ್ತು. ಖ್ಯಾತ ಡಿಬಿಟಿ.ಬ್ರಿಟನ್‌ ಸಂಸ್ಥೆ ಇದನ್ನು ಮಾಡಿ ತೋರಿಸಿದೆ.

ದರಿದ್ರ ನಾರಾಯಣನತ್ತ ಇಂದು ಕರುಣೆಯಂತೂ ಉಳಿದಿಲ್ಲ.

(ಲೇಖಕರು ಬೆಂಗಳೂರಿನ ಅರ್ಥಶಾಸ್ತ್ರಜ್ಞರು ಹಾಗೂ ಸೆಂಟರ್ ಫಾರ್ ಬಜೆಟ್‌ ಆ್ಯಂಡ್‌ ಪಾಲಿಸಿ ಸ್ಟಡೀಸ್‌ ಸಂಸ್ಥೆಯ ಸಹವರ್ತಿ)

ಇವನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.