ADVERTISEMENT

Budget 2025: 500 ನಗರಗಳ ಶೇ 70ರಷ್ಟು ಭಾಗಕ್ಕೆ ನೀರು ಸರಬರಾಜು –ಆರ್ಥಿಕ ಸಮೀಕ್ಷೆ

ಪಿಟಿಐ
Published 1 ಫೆಬ್ರುವರಿ 2025, 2:25 IST
Last Updated 1 ಫೆಬ್ರುವರಿ 2025, 2:25 IST
   

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಅಮೃತ್‌' ಅಡಿ, 500 ನಗರಗಳಲ್ಲಿ ನೀರು ಸರಬರಾಜು ವ್ಯಾಪ್ತಿಯು ಶೇ 70ಕ್ಕೆ ಹಾಗೂ ಒಳಚರಂಡಿ ವ್ಯಾಪ್ತಿಯು ಶೇ 62 ಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್ (ಅಮೃತ್) ವರದಿಯಲ್ಲಿ, ಪ್ರತಿನಿತ್ಯ ನೀರಿನ ಸಂಸ್ಕರಣಾ ಸಾಮರ್ಥ್ಯವನ್ನು 464 ಕೋಟಿ ಲೀಟರ್‌ನಷ್ಟಕ್ಕೆ ಏರಿಸಲಾಗಿದೆ. 2,439 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 5,070 ಎಕರೆ ಪ್ರದೇಶವನ್ನು ಹಸಿರಾಗಿಸಲಾಗಿದೆ.

2021ರಲ್ಲಿ ಪರಿಚಯಿಸಲಾದ ಅಮೃತ್‌ ಯೋಜನೆ ಸಲುವಾಗಿ, 2021–22ರಿಂದ 2025–26ರ ವರೆಗೆ 2.77 ಲಕ್ಷ ಕೋಟಿ ನಿಗದಿಪಡಿಸಲಾಗಿದೆ. ಈವರೆಗೆ ಅಂದಾಜು ₹ 1.89 ಲಕ್ಷ ಕೋಟಿ ವೆಚ್ಚದಲ್ಲಿ 8,923 ಯೋಜನೆಗಳನ್ನು ಆರಂಭಿಸಲಾಗಿದೆ.

ADVERTISEMENT

2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಳೆದ ನವೆಂಬರ್‌ 25ರ ವರೆಗೆ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ ಒಟ್ಟು 1.18 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 89 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಪಿಎಂಎವೈ ಅನ್ನು, 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಮುಂದಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ 6 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುತ್ತದೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ₹ 1.64 ಲಕ್ಷ ಕೋಟಿ ವೆಚ್ಚದ ಅಂದಾಜಿನಲ್ಲಿ ಪ್ರಸ್ತಾಪಿಸಲಾಗಿದ್ದ ಒಟ್ಟು 8,058 ಯೋಜನೆಗಳ ಪೈಕಿ 7,479 ಇದೇ ತಿಂಗಳ 13ರ ವರೆಗೆ ಪೂರ್ಣಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.