
ಕಾವ್ಯ ಡಿ.
ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಸುಧಾರಣೆಯನ್ನು 2025-26ನೇ ಸಾಲಿನ ಬಜೆಟ್ ಮೂಲಕ ತಂದಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2026-27ನೇ ಸಾಲಿನ ಆಯವ್ಯಯದಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಬದಲಾವಣೆ ಮಾಡಿಲ್ಲ. ಜನಸಾಮಾನ್ಯರ ಖರೀದಿ ಶಕ್ತಿ ಹೆಚ್ಚಿಸಲು ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸುವುದು ಸೇರಿದಂತೆ ‘ಸ್ಟ್ಯಾಂಡರ್ಡ್ ಡಿಡಕ್ಷನ್’ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಲಿದ್ದಾರೆ ಎನ್ನುವ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಉದ್ಯೋಗಸ್ಥರು ಮತ್ತು ಮಧ್ಯಮ ವರ್ಗದವರ ತೆರಿಗೆ ಹೊರೆಯನ್ನು ಈಗಾಗಲೇ ಇಳಿಸಲಾಗಿದೆ, ಸದ್ಯಕ್ಕೇನಿದ್ದರೂ ತೆರಿಗೆ ವ್ಯವಸ್ಥೆಯ ಒಟ್ಟಾರೆ ಸುಧಾರಣೆಗಷ್ಟೇ ಆದ್ಯತೆ ಎಂಬ ಸಂದೇಶವನ್ನು ಸಚಿವರು ಬಜೆಟ್ ಮೂಲಕ ನೀಡಿದ್ದಾರೆ. ಅರ್ಥ ವ್ಯವಸ್ಥೆಗೆ ಪೆಟ್ಟು ಕೊಡದ ಸಣ್ಣಪುಟ್ಟ ಸುಧಾರಣೆಗಳನ್ನಷ್ಟೇ ತರುವ ಜೊತೆಗೆ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಭಾರ ಹೆಚ್ಚಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಕೈ ಹಾಕಿದ್ದಾರೆ.
ಬಜೆಟ್ ಪ್ರಕಾರ ಫ್ಯೂಚರ್ಸ್ ಟ್ರೇಡಿಂಗ್‌ನ ಎಸ್‌ಟಿಟಿ ಶೇ 0.02ರಿಂದ ಶೇ 0.05ಕ್ಕೆ ಜಿಗಿಯಲಿದೆ. ಆಪ್ಷನ್ಸ್ ಟ್ರೇಡಿಂಗ್‌ನ ಎಸ್‌ಟಿಟಿ ಶೇ 0.15ಕ್ಕೆ ಹೆಚ್ಚಿಸಲಾಗಿದೆ. ಹಣಕಾಸು ಸಚಿವರ ಈ ತೀರ್ಮಾನದಿಂದಾಗಿ ಆಯವ್ಯಯದ ದಿನವೇ ಸೆನ್ಸೆಕ್ಸ್ 1,546 ಅಂಶ ಕುಸಿದಿದೆ. ಸಣ್ಣ ಹೂಡಿಕೆದಾರರು ಫ್ಯೂಚರ್ಸ್ ಆ್ಯಂಡ್ ಆಪ್ಷನ್ಸ್‌ನಿಂದ ದೂರ ಉಳಿಯುವಂತೆ ಮಾಡುವ ಜೊತೆಗೆ ಆದಾಯ ಸಂಗ್ರಹ ಹೆಚ್ಚಳಕ್ಕೆ ಇಲ್ಲಿ ವಿತ್ತ ಸಚಿವರು ಪ್ರಯತ್ನಿಸಿದಂತಿದೆ. ಆದರೆ, ಈ ನಿರ್ಧಾರ ಸರಿಯೇ ಎಂಬುದನ್ನು ಪೂರ್ತಿಯಾಗಿ ಹೇಳಲು ಇನ್ನಷ್ಟು ಸಮಯ ಬೇಕಾಗುತ್ತದೆ.
ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನೂ ಸಚಿವರು ಘೋಷಿಸಿದ್ದಾರೆ. ಕಬ್ಬಿಣದ ಕಡಲೆ ಎನಿಸುವ ಆದಾಯ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಸರಳೀಕರಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. 22026ರ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನೀತಿ-2025 ಜಾರಿಗೆ ಬರುತ್ತಿದ್ದು, ಜನಸಾಮಾನ್ಯರು ಸುಲಭವಾಗಿ ಆದಾಯ ತೆರಿಗೆ ವಿವರ ಸಲ್ಲಿಸುವ ವ್ಯವಸ್ಥೆ ಬರಲಿದೆ ಎಂದಿದ್ದಾರೆ.
ಆರ್ಥಿಕವಾಗಿ ತೆರಿಗೆದಾರರಿಗೆ ಇದರಿಂದ ಯಾವುದೇ ಅನುಕೂಲವಾಗದಿದ್ದರೂ ಇದೊಂದು ಜನಸ್ನೇಹಿ ಸುಧಾರಣೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಗೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿಸೆಂಬರ್ 31ರವರೆಗೆ ಇದ್ದ ಗಡುವನ್ನು ಈಗ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಆದರೆ, ಅದಕ್ಕೆ ಸಣ್ಣ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಅದೇ ರೀತಿ, ವಿದೇಶದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ವಿಧಿಸಲಾಗುತ್ತಿದ್ದ ಶೇ. 5ರಷ್ಟು ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮೊತ್ತವನ್ನು ಶೇ. 2ಕ್ಕೆ ತಗ್ಗಿಸಲಾಗಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳಿಗೆ ವಿಧಿಸಲಾಗುತ್ತಿದ್ದ ಶೇ 5ರಿಂದ ಶೇ 20ರವರೆಗಿನ ಟಿಸಿಎಸ್ ಮೊತ್ತವನ್ನು ಶೇ. 2ಕ್ಕೆ ತಗ್ಗಿಸಲಾಗಿದೆ. ಇವೆಲ್ಲ ಒಂದು ಬಗೆಯಲ್ಲಿ ಸಣ್ಣ–ಪುಟ್ಟ ತೆರಿಗೆ ಸುಧಾರಣೆಗಳು ಎಂದು ವಿಶ್ಲೇಷಿಸಬಹುದು.
ಇನ್ನು ವಿದೇಶಕ್ಕೆ ಹೋಗಿ ಅಲ್ಲಿ ದುಡಿಮೆ ಮಾಡುವ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಟೆಕಿಗಳು, ಭಾರತಕ್ಕೆ ವಾಪಸ್ ಮರಳಿರುವ ಅನಿವಾಸಿ ಭಾರತೀಯರು ತಮ್ಮ ವಿದೇಶಿ ಆದಾಯವನ್ನು ಘೋಷಿಸಿಕೊಂಡು ತಪ್ಪು ಸರಿಪಡಿಸಿಕೊಳ್ಳಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಸಮಸ್ಯೆಯಲ್ಲಿ ಸಿಲುಕಿರುವವರು ತೆರಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಎನ್ನಬಹುದಾಗಿದೆ.
ಎಲ್ಲದಕ್ಕಿಂತಲೂ ಪ್ರಮುಖವಾಗಿ ಅಪಘಾತ ಪ್ರಕರಣಗಳಲ್ಲಿ ಮೋಟಾರು ಅಪಘಾತ ಕ್ಲೇಮ್ ನ್ಯಾಯಮಂಡಳಿಯಿಂದ ಪಡೆದುಕೊಳ್ಳುವ ಬಡ್ಡಿ ಮೊತ್ತಕ್ಕೆ ಯಾವುದೇ ಆದಾಯ ತೆರಿಗೆ ಅಥವಾ ಟಿಡಿಎಸ್ ವಿಧಿಸುವುದಿಲ್ಲ ಎಂದು ಘೋಷಿಸಲಾಗಿದೆ. ಅಪಘಾತದಿಂದ ನೊಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರದಿಂದ ಒಂದಷ್ಟು ಸಮಾಧಾನ ಸಿಗಬಹುದು.
ಒಟ್ಟಾರೆಯಾಗಿ ₹13 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ, ಪತಿ-ಪತ್ನಿಗೆ ಒಂದೇ ಆದಾಯ ತೆರಿಗೆ ವಿವರ, ಸ್ಟ್ಯಾಂಡರ್ಡ್ ಡಿಡಕ್ಷನ್ ₹1 ಲಕ್ಷಕ್ಕೆ ಹೆಚ್ಚಳ, ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಗೆ (ಎಲ್‌ಟಿಸಿಜಿ) ಒಳಪಡುವ ಮೊತ್ತವನ್ನು ₹1.25 ಲಕ್ಷದಿಂದ ₹1.50 ಲಕ್ಷಕ್ಕೆ ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ನಿರೀಕ್ಷೆಗಳು ವೇತನದಾರರಿಗೆ ಇದ್ದವು. ಅವೆಲ್ಲವಕ್ಕೂ ಮುಂದಿನ ಒಂದು ವರ್ಷದ ಅವಧಿಗೆ ವಿರಾಮ ನೀಡಲಾಗಿದೆ!
ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.