ನವದೆಹಲಿ:ನಾಗರಿಕರ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹ 69,000 ಕೋಟಿ ಮೀಸಲಿರಿಸಿದೆ. ಅಲ್ಲದೆ, 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತಕ್ಕಾಗಿ ‘ಟಿಬಿ ಹರೇಗಾ ದೇಶ್ ಜೀತೇಗಾ’ಅಭಿಯಾನವನ್ನು ಆರಂಭಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆರೋಗ್ಯ ಕೇತ್ರಕ್ಕೆ ಮೀಸಲಿಟ್ಟಿರುವ ಒಟ್ಟು ಹಣದಲ್ಲಿಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ (ಪಿಎಂಜೆಎವೈ–ಆಯುಷ್ಮಾನ್ ಭಾರತ್) ₹ 6,429 ಕೋಟಿ ನೀಡಲಾಗುವುದು. ಪ್ರಸ್ತುತ 20,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಪಿಎಂಜೆಎವೈ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯನ್ನು 2 ಮತ್ತು 3ನೇ ಹಂತದ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಜನೌಷಧಿ ಕೇಂದ್ರಗಳನ್ನು ಎಲ್ಲ ಜಿಲ್ಲೆಗಳಲ್ಲೂ ತೆರೆಯಲಾಗುವುದು.ಕೈಗೆಟಕುವ ದರದಲ್ಲಿ ಅಗತ್ಯ 2,000 ಔಷಧಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುವುದು. ವೈದ್ಯಕೀಯ ಯಂತ್ರಗಳ ಮೇಲೆ ತೆರಿಗೆಯನ್ನು ಇಳಿಸಲಾಗಿದ್ದು, ಈ ಮೂಲಕ ಎಲ್ಲ ಆಸ್ಪತ್ರೆಗಳನ್ನು ಉನ್ನತೀಕರಿಸಲು ಸಹಾಯ ಮಾಡಲಾಗುವುದು ಎಂದರು.
ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ಯುವ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಲಾಗುವುದು ಎಂಬ ಭರವಸೆ ನೀಡಿದರು.
ಆಯುಷ್ಮಾನ್ ಭಾರತ್ ಯೋಜನೆ ಅಡಿ ಕೃತಿಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮಾರಕ ರೋಗಗಳ ಶಮನಗೊಳಿಸುವ ಹೊಸ ದಾರಿಗಳನ್ನು ಸೃಷ್ಟಿಸಲು ವೈದ್ಯಕೀಯ ಸಮುದಾಯಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.