ADVERTISEMENT

ಬಂಡವಾಳ ಮಾರುಕಟ್ಟೆ | ಕ್ರೆಡಿಟ್‌ ಸ್ಕೋರ್ ಪರಿಶೀಲನೆ ಹೇಗೆ?

ಕಾವ್ಯ ಡಿ.
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
   

ಸಾಲಕ್ಕಾಗಿ ಯಾವುದೇ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದಾಗ ಬ್ಯಾಂಕ್‌ಗಳು ಮೊದಲು ನೋಡುವುದೇ ನಿಮ್ಮ ಕ್ರೆಡಿಟ್ ಸ್ಕೋರ್. ಇದು ಉತ್ತಮವಾಗಿದ್ದರೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ. ಕಡಿಮೆ ಇದ್ದರೆ ಹೆಚ್ಚಿನ ಬಡ್ಡಿ ವಿಧಿಸುತ್ತವೆ.  ತೀರಾ ಕಳಪೆ ಎನಿಸಿದರೆ ಸಾಲದ ಅರ್ಜಿಯನ್ನೇ ತಿರಸ್ಕರಿಸುತ್ತವೆ.

ಬ್ಯಾಂಕ್‌ಗಳು ಕ್ರೆಡಿಟ್ ಸ್ಕೋರ್ ಅನ್ನು ಎರಡು ಮಾದರಿಯಲ್ಲಿ ಪರೀಕ್ಷಿಸುತ್ತವೆ. ಒಂದನೆಯದ್ದು ಹಾರ್ಡ್ ಎನ್‌ಕ್ವೈರಿ; ಮತ್ತೊಂದು ಸಾಫ್ಟ್ ಎನ್‌ಕ್ವೈರಿ. ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಕ್ರೆಡಿಟ್ ಸ್ಕೋರ್‌ನ ಹಾರ್ಡ್ ಎನ್‌ಕ್ವೈರಿ ಆದಾಗ ಅದು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬನ್ನಿ ಕ್ರೆಡಿಟ್ ಸ್ಕೋರ್ ಮೇಲೆ ಹಾರ್ಡ್ ಎನ್‌ಕ್ವೈರಿ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸೋದು ಹೇಗೆ ಎಂಬುದನ್ನು ತಿಳಿಯೋಣ.

ಕ್ರೆಡಿಟ್ ಸ್ಕೋರ್ ಎಂದರೇನು?: ಸಾಲ ಪಡೆಯಲು ನೀವು ಎಷ್ಟು ಅರ್ಹರು ಎನ್ನುವುದನ್ನು ಕ್ರೆಡಿಟ್ ಸ್ಕೋರ್ ತಿಳಿಸುತ್ತದೆ. ನಿಮ್ಮ ಹಣಕಾಸಿನ ಶಿಸ್ತಿಗೆ ಇದು ಕನ್ನಡಿ ಇದ್ದಂತೆ. 300ರಿಂದ 900ರ ವರೆಗೆ ಕ್ರೆಡಿಟ್ ಸ್ಕೋರ್ ಇರುತ್ತದೆ. 750ಕ್ಕಿಂತ ಹೆಚ್ಚಿಗೆ ಇದ್ದರೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಸಾಲ ಪಡೆಯುವಿಕೆ ಮತ್ತು ನಿರ್ವಹಣೆಯಲ್ಲಿ ಎಷ್ಟು ಶಿಸ್ತು ಕಾಯ್ದುಕೊಳ್ಳುತ್ತಿರೋ ಅಷ್ಟು ಒಳ್ಳೆಯ ರೀತಿಯಲ್ಲಿ ಕ್ರೆಡಿಟ್ ಸ್ಕೋರ್ ಇರುತ್ತದೆ.

ADVERTISEMENT

ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೊ ಆಫ್ ಇಂಡಿಯಾ ಲಿಮಿಟೆಡ್ (ಸಿಬಿಲ್), ಎಕ್ಸ್ ಪೀರಿಯನ್, ಈಕ್ವಿಫ್ಯಾಕ್ಸ್ ಸಂಸ್ಥೆಗಳು ಬ್ಯಾಂಕ್‌ಗಳಿಂದ ಮಾಹಿತಿ ಪಡೆದುಕೊಂಡು ಸಾಲಗಾರರ ಮಾಹಿತಿ ಭರ್ತಿ ಮಾಡಿ ಕ್ರೆಡಿಟ್ ಸ್ಕೋರ್ ನೀಡುತ್ತವೆ.

ಸಾಫ್ಟ್ ಎನ್‌ಕ್ವೈರಿ ಎಂದರೇನು?:

ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂದು ನೀವೇ ಪರಿಶೀಲನೆ ಮಾಡುವುದು ಅಥವಾ ಬ್ಯಾಂಕ್‌ಗಳು ಸಾಲದ ಆಫರ್‌ ನೀಡಲು ಸ್ವಯಂ ಪ್ರೇರಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುವುದಕ್ಕೆ ಸಾಫ್ಟ್ ಎನ್‌ಕ್ವೈರಿ ಎಂದು ಕರೆಯಲಾಗುತ್ತದೆ. ಇದು ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೆ ಹೀಗೆ ಮಾಡುವುದರಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಪ್ರಶ್ನಿಸಿ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಾರ್ಡ್ ಎನ್‌ಕ್ವೈರಿ ಎಂದರೇನು?:

ಸಾಲ ಕೊಡುವ ಸಂಸ್ಥೆ ನಿಮಗೆ ಸಾಲ ಕೊಡಬಹುದೇ ಅಥವಾ ಇಲ್ಲವೋ ಎಂದು ತೀರ್ಮಾನಿಸಲು ಮಾಡುವ ಕ್ರೆಡಿಟ್ ಸ್ಕೋರ್ ಪರಿಶೀಲನೆಯನ್ನು ಹಾರ್ಡ್ ಎನ್‌ಕ್ವೈರಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಹೊಸ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ, ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋದಾಗ, ಅಡಮಾನ ಸಾಲಕ್ಕೆ ಮುಂದಾದಾಗ ಬ್ಯಾಂಕ್‌ಗಳು ಈ ತಪಾಸಣೆ ಮಾಡುತ್ತವೆ.

ಈ ಪ್ರಕ್ರಿಯೆಯು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಒಂದು ಹಾರ್ಡ್ ಎನ್‌ಕ್ವೈರಿಯಿಂದ ಕ್ರೆಡಿಟ್ ಸ್ಕೋರ್‌ನ 5ರಿಂದ 10 ಅಂಕ ಕಡಿಮೆಯಾಗುತ್ತದೆ. ಈ ಬಗೆಗಿನ ಮಾಹಿತಿ ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಸುಮಾರು ಎರಡು ವರ್ಷದ ವರೆಗೂ ಗೋಚರಿಸುತ್ತದೆ. ಆರು ತಿಂಗಳ ಅವಧಿಯಲ್ಲಿ ಮೂರಕ್ಕಿಂತ ಹೆಚ್ಚು ಹಾರ್ಡ್ ಎನ್‌ಕ್ವೈರಿ ಇದ್ದರೆ ಬ್ಯಾಂಕ್‌ಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆ.

ವ್ಯಕ್ತಿಯೊಬ್ಬ ಆರು ತಿಂಗಳ ಅವಧಿಯಲ್ಲಿ ಮೇಲಿಂದ ಮೇಲೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದು ಏಕೆ ಎಂದು ಬ್ಯಾಂಕ್‌ಗಳು ಅನುಮಾನದಿಂದ ನೋಡುತ್ತವೆ. ಹಾಗಾಗಿ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಮುನ್ನಡೆಯಿರಿ. ನಿಮಗೆ ಸರಿಹೊಂದುವ ಸಾಲ ಯಾವುದು ಎಂದು ಮನಗಂಡು ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಅರ್ಜಿ ಸಲ್ಲಿಸಿ. ಹೀಗೆ ಮಾಡದಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕಿವಿಮಾತು: ಹಾರ್ಡ್ ಎನ್‌ಕ್ವೈರಿ ಮತ್ತು ಸಾಫ್ಟ್ ಎನ್‌ಕ್ವೈರಿ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದರಿಂದ ಕ್ರೆಡಿಟ್ ಸ್ಕೋರ್ ನಿರ್ವಹಣೆಯು ಸುಲಭವಾಗುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಂಡರೆ ಬ್ಯಾಂಕ್‌ಗಳು ನಿಮಗೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ.

ಪುಟಿದೆದ್ದ ಷೇರು ಸೂಚ್ಯಂಕಗಳು

ಮಾರ್ಚ್ 21ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದಿವೆ. ನಾಲ್ಕು ವರ್ಷದ ಅವಧಿಯಲ್ಲಿ ಕಂಡುಬಂದ ಅತ್ಯುತ್ತಮ ವಾರದ ಗಳಿಕೆ ಇದಾಗಿದೆ. 76905 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 4.19ರಷ್ಟು ಗಳಿಸಿಕೊಂಡಿದೆ. 23350 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 4.26ರಷ್ಟು ಗಳಿಸಿಕೊಂಡಿದೆ.

ಇನ್ನು ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ ಶೇ 7.74ರಷ್ಟು ಗಳಿಸಿಕೊಂಡರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಒಂದು ವಾರದ ಅವಧಿಯಲ್ಲಿ ಶೇ 8.64ರಷ್ಟು ಜಿಗಿದಿದೆ. ಅಮೆರಿಕದ ಫೆಡರಲ್ ರಿಸರ್ವ್‌ ಈ ವರ್ಷ ಎರಡು ಬಾರಿ ಬಡ್ಡಿದರ ಇಳಿಕೆ ಮಾಡುವ ಮುನ್ಸೂಚನೆ ನೀಡಿದೆ. ಅಲ್ಲದೆ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ವಿದೇಶಿ ಹೂಡಿಕೆದಾರರಿಂದ ಖರೀದಿ ಉತ್ಸಾಹ ಡಾಲರ್ ಎದುರು ರೂಪಾಯಿ ಚೇತರಿಕೆ ಸೇರಿ ಹಲವು ಅಂಶಗಳು ಷೇರುಪೇಟೆ ಚೇತರಿಸಿಕೊಳ್ಳಲು ಕೊಡುಗೆ ನೀಡಿವೆ.

ನಿಫ್ಟಿ ಸೂಚ್ಯಂಕದಲ್ಲಿ ವಲಯವಾರು ಲೆಕ್ಕಾಚಾರದಲ್ಲಿ ವಾರದ ಪ್ರಗತಿ ನೋಡಿದಾಗ ರಿಯಲ್ ಎಸ್ಟೇಟ್ ಶೇ 7.82 ಮಾಧ್ಯಮ ಶೇ 7.64 ಎನರ್ಜಿ ಶೇ 6.33 ಫಾರ್ಮಾ ಶೇ 6.08 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6 ಆಟೊ ಶೇ 5.85 ಫೈನಾನ್ಸ್ ಶೇ 5.49 ಬ್ಯಾಂಕ್ ಸೂಚ್ಯಂಕ ಶೇ 5.27 ಸರ್ವಿಸ್ ಶೇ 489 ಲೋಹ ಶೇ 4.85 ಎಫ್‌ಎಂಸಿಜಿ ಶೇ 2.1 ಮತ್ತು ಮಾಹಿತಿ ತಂತ್ರಜ್ಞಾನ ಶೇ 1.61ರಷ್ಟು ಗಳಿಸಿಕೊಂಡಿವೆ. ಗಳಿಕೆ–ಇಳಿಕೆ: ವಾರದ ಗಳಿಕೆ ಲೆಕ್ಕಾಚಾರದಲ್ಲಿ ನಿಫ್ಟಿಯಲ್ಲಿ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 11.52 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 9.25 ಶ್ರೀರಾಮ್ ಫೈನಾನ್ಸ್ ಶೇ 8.9 ಅಪೋಲೊ ಹಾಸ್ಪಿಟಲ್ಸ್ ಶೇ 8.65 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 8.42 ಬಜಾಜ್ ಆಟೊ ಶೇ 7.84 ಒಎನ್‌ಜಿಸಿ ಶೇ 7.58 ಕೋಲ್ ಇಂಡಿಯಾ ಶೇ 7.34 ಐಸಿಐಸಿಐ ಬ್ಯಾಂಕ್ ಶೇ 7.29 ಟಾಟಾ ಮೋಟರ್ಸ್ ಶೇ 7.24 ಎಲ್ ಆ್ಯಂಡ್ ಟಿ ಶೇ 7.18 ಮತ್ತು ಎಕ್ಸಿಸ್ ಬ್ಯಾಂಕ್ ಶೇ 6.58ರಷ್ಟು ಗಳಿಸಿಕೊಂಡಿವೆ.

ಟೆಕ್ ಮಹೀಂದ್ರ ಶೇ 1.6 ಮತ್ತು ಐಟಿಸಿ ಶೇ 1.47ರಷ್ಟು ಕುಸಿದಿವೆ. ಮುನ್ನೋಟ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಏಪ್ರಿಲ್ 7ರಿಂದ 9ರ ನಡುವೆ ನಡೆಯುವ ಆರ್‌ಬಿಐ ಹಣಕಾಸು ಸಮಿತಿ ಸಭೆಯಲ್ಲಿ ಬಡ್ಡಿದರದ ಬಗ್ಗೆ ಕೈಗೊಳ್ಳುವ ತೀರ್ಮಾನ ಸೇರಿ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.