ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಕಂಪನಿಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಒಂದನೆಯದು ಲಾರ್ಜ್ ಕ್ಯಾಪ್, ಎರಡನೆಯದು ಮಿಡ್ ಕ್ಯಾಪ್ ಮತ್ತು ಮೂರನೆಯದು ಸ್ಮಾಲ್ ಕ್ಯಾಪ್. ಈ ಮೂರು ರೀತಿಯ ವಿಂಗಡಣೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲಿಗೆ ಮಾರ್ಕೆಟ್ ಕ್ಯಾಪ್ ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಕಂಪನಿಯೊಂದರ ಮೌಲ್ಯ ಎಷ್ಟು ಎಂದು ತಿಳಿಸುವ ಮಾನದಂಡವನ್ನು ಸರಳವಾಗಿ ಮಾರುಕಟ್ಟೆ ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಸೇಷನ್) ಅಂತ ಕರೆಯಬಹುದು. ಮಾರುಕಟ್ಟೆ ಮೌಲ್ಯ ಮೂಲಕ ಕಂಪನಿ ಯಾವ ಗಾತ್ರದ್ದು ಅಥವಾ ಎಷ್ಟು ದೊಡ್ಡದು ಎಂದು ತಿಳಿಯಬಹುದು. ನಿರ್ದಿಷ್ಟ ಕಂಪನಿಯೊಂದರ ಒಟ್ಟು ಷೇರುಗಳನ್ನು ಆ ಕಂಪನಿಯ ಷೇರಿನ ಪ್ರಸುತ ಬೆಲೆಯೊಂದಿಗೆ ಗುಣಿಸಿದಾಗ ಮಾರುಕಟ್ಟೆ ಮೌಲ್ಯ ತಿಳಿಯುತ್ತದೆ.
ಕಂಪನಿಯ ಷೇರಿನ ಬೆಲೆಯಲ್ಲಿ ಏರಿಳಿತವಾದಾಗ ಮಾರುಕಟ್ಟೆ ಮೌಲ್ಯವೂ ಬದಲಾಗುತ್ತದೆ. ಮಾರುಕಟ್ಟೆ ಮೌಲ್ಯ ತಿಳಿಯಲು ಸೂತ್ರ: (ಕಂಪನಿಯೊಂದರ ಒಟ್ಟು ಷೇರುಗಳು) x (ಷೇರಿನ ಪ್ರಸ್ತುತ ಬೆಲೆ) = (ಮಾರುಕಟ್ಟೆ ಮೌಲ್ಯ)
ಉದಾಹರಣೆ 1: 2025ರ ಜನವರಿಯಂದು ಎಂಆರ್‌ಎಫ್ ಕಂಪನಿಯ ಒಟ್ಟು ಷೇರುಗಳ ಸಂಖ್ಯೆ 42,41,114. ಜನವರಿ 9ರಂತೆ ಎಂಆರ್‌ಎಫ್ ಷೇರಿನ ಬೆಲೆ ₹1,18,885. ಈಗ 42,41,114 ಅನ್ನು ₹1,18,885 ರೊಂದಿಗೆ ಗುಣಿಸಿದಾಗ ₹50,420 ಕೋಟಿ ಆಗುತ್ತದೆ. ಅಂದರೆ ಈ ಲೆಕ್ಕಾಚಾರದಂತೆ ಎಂಆರ್‌ಎಫ್ ಕಂಪನಿಯ ಮಾರುಕಟ್ಟೆ ಮೌಲ್ಯ 2025ರ ಜನವರಿ 9ಕ್ಕೆ ಅನ್ವಯವಾಗುವಂತೆ ₹50,420 ಕೋಟಿ.
ಉದಾಹರಣೆ 2: 2025ರ ಜನವರಿಯಲ್ಲಿ ಜೆ.ಕೆ ಪೇಪರ್ ಕಂಪನಿಯ ಒಟ್ಟು ಷೇರುಗಳ ಸಂಖ್ಯೆ 16,93,14,888. ಜನವರಿ 9ರಂತೆ ಜೆ.ಕೆ ಪೇಪರ್ ಷೇರಿನ ಬೆಲೆ ₹405.90. ಈಗ 169,314,888 ಅನ್ನು ₹405.90ರೊಂದಿಗೆ ಗುಣಿಸಿದಾಗ ಸುಮಾರು ₹6,872 ಕೋಟಿ ಆಗುತ್ತದೆ. ಅಂದರೆ ಈ ಲೆಕ್ಕಾಚಾರದಂತೆ ಜೆ.ಕೆ ಪೇಪರ್ ಕಂಪನಿಯ ಮಾರುಕಟ್ಟೆ ಮೌಲ್ಯ 2025ರ ಜನವರಿ 9ಕ್ಕೆ ಅನ್ವಯವಾಗುವಂತೆ ₹6,872 ಕೋಟಿ.
ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ನಿರ್ಧಾರಕ್ಕೆ ಮಾರುಕಟ್ಟೆ ಮೌಲ್ಯ
ಆಧಾರ: ಷೇರು ಮಾರುಕಟ್ಟೆಯಲ್ಲಿರುವ ನಿರ್ದಿಷ್ಟ ಕಂಪನಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಮಿತಿಯಲ್ಲಿ ಬರುವುದೋ ಎನ್ನುವುದನ್ನು ಅರಿಯಲು ಮಾರುಕಟ್ಟೆ ಮೌಲ್ಯ ಆಧಾರವಾಗುತ್ತದೆ. ಷೇರುಪೇಟೆ ನಿಯಂತ್ರಣ ಮಂಡಳಿಯ ಪ್ರಕಾರ ಷೇರುಪೇಟೆ ಸೂಚ್ಯಂಕಕ್ಕೆ ಸೇರ್ಪಡೆಗೊಂಡಿರುವ ಅಗ್ರಮಾನ ನೂರು ದೊಡ್ಡ ಕಂಪನಿಗಳು ಲಾರ್ಜ್ ಕ್ಯಾಪ್ ಷೇರುಗಳು ಎನಿಸಿಕೊಳ್ಳುತ್ತವೆ. ನಂತರದ 101 ರಿಂದ 250 ಒಳಗೆ ಬರುವ ಕಂಪನಿಗಳು ಮಿಡ್ ಕ್ಯಾಪ್ (ಮಧ್ಯಮ ಗಾತ್ರ) ಷೇರುಗಳಾಗುತ್ತವೆ. ಷೇರು ಮಾರುಕಟ್ಟೆಯಲ್ಲಿ 250ನೇ ಕ್ರಮಾಂಕದ ನಂತರ ಬರುವ ಷೇರುಗಳನ್ನು ಸ್ಮಾಲ್ ಕ್ಯಾಪ್ (ಸಣ್ಣ ಗಾತ್ರ) ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಲಾರ್ಜ್ ಕ್ಯಾಪ್ ಕಂಪನಿಗಳ ಮಾರುಕಟ್ಟೆ ಮೌಲ್ಯ ₹60 ಸಾವಿರ ಕೋಟಿಗಿಂತ ಹೆಚ್ಚಿಗೆ ಇರುತ್ತದೆ. ಮಿಡ್ ಕ್ಯಾಪ್ ಕಂಪನಿಗಳ ಮಾರುಕಟ್ಟೆ ಮೌಲ್ಯ ₹12 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿಯ ಒಳಗೆ ಬರುತ್ತದೆ. ಇನ್ನು ₹12 ಸಾವಿರ ಕೋಟಿಗಿಂತ ಕಡಿಮೆ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳು ಸ್ಮಾಲ್ ಕ್ಯಾಪ್ ವ್ಯಾಪ್ತಿಗೆ ಸೇರುತ್ತವೆ.
ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗೆ ಉದಾಹರಣೆಗಳು: ಎಚ್‌ಡಿಎಫ್‌ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ರಿಲಯನ್ಸ್, ಹಿಂದುಸ್ತಾನ್ ಯುನಿಲಿವರ್, ಮಾರುತಿ ಸುಜುಕಿ, ಇನ್ಫೊಸಿಸ್ ಲಾರ್ಜ್ ಕ್ಯಾಪ್ ಕಂಪನಿಗಳಿಗೆ ಕೆಲ ಉದಾಹರಣೆಗಳು. ಅಶೋಕ್ ಲೇಲ್ಯಾಂಡ್, ಕೋಲ್ಗೇಟ್ ಪಾಮೋಲಿವ್ ಇಂಡಿಯಾ ಲಿಮಿಟೆಡ್, ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್, ಅಪೋಲೊ ಟೈರ್ಸ್, ಬ್ಯಾಂಕ್ ಆಫ್ ಇಂಡಿಯಾ, ವೋಲ್ಟಾಸ್ ಮಿಡ್ ಕ್ಯಾಪ್ ಷೇರುಗಳ ವ್ಯಾಪ್ತಿಗೆ ಬರುತ್ತವೆ. ಇನ್ನು ಫಿನೋಲೆಕ್ಸ್ ಕೇಬಲ್ಸ್, ಪಿವಿಆರ್ ಐನಾಕ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ನಾರಾಯಣ ಹೃದಯಾಲಯ, ಬಿಇಎಂಎಲ್ ಲಿಮಿಟೆಡ್, ಏಂಜಲ್ ಒನ್ ಸ್ಮಾಲ್ ಕ್ಯಾಪ್ ಕಂಪನಿಗಳಿಗೆ ಕೆಲ ಉದಾಹರಣೆಗಳು.
ಮಾರಾಟದ ಒತ್ತಡಕ್ಕೆ ನಲುಗಿದ ಷೇರುಪೇಟೆ
ಜನವರಿ 10ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿವೆ. 77378 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.33ರಷ್ಟು ಇಳಿಕೆಯಾಗಿದೆ. 23431 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.39 ರಷ್ಟು ತಗ್ಗಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 5.77ರಷ್ಟು ಕುಸಿದಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 7.29 ರಷ್ಟು ಕೆಳಗಿಳಿದಿದೆ.
ರೂಪಾಯಿ ಮೌಲ್ಯ ಕುಸಿತ 3ನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಗಳ ಗಳಿಕೆಗೆ ಹಿನ್ನಡೆಯಾಗಲಿದೆ ಎಂಬ ಅಂದಾಜು ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಮಾತ್ರ ಶೇ 4.42 ರಷ್ಟು ಗಳಿಸಿಕೊಂಡಿದ್ದು ಉಳಿದೆಲ್ಲ ಸೂಚ್ಯಂಕಗಳು ನೆಲಕಚ್ಚಿವೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 8.07 ರಿಯಲ್ಸ್ ಎಸ್ಟೇಟ್ ಶೇ 7.83 ಮಾಧ್ಯಮ ಶೇ 6.34 ಲೋಹ ಶೇ 5.35 ಬ್ಯಾಂಕ್ ನಿಫ್ಟಿ ಶೇ 4.42 ಫೈನಾನ್ಸ್ ಶೇ 4.24 ವಾಹನ ಉತ್ಪಾದನೆ ಶೇ 4.11 ಫಾರ್ಮಾ ಶೇ 3.79 ಮತ್ತು ಎಫ್‌ಎಂಸಿಜಿ ಶೇ 1.21 ರಷ್ಟು ಕುಸಿದಿವೆ. ಇಳಿಕೆ – ಗಳಿಕೆ: ನಿಫ್ಟಿಯಲ್ಲಿ ಶ್ರೀರಾಮ್ ಫೈನಾನ್ಸ್ ಶೇ 12.73 ಟ್ರೆಂಟ್ ಶೇ 9.92 ಎನ್‌ಟಿಪಿಸಿ ಶೇ 9.31 ಟಾಟಾ ಸ್ಟೀಲ್ ಶೇ 7.88 ಅಲ್ಟ್ರಾಟೆಕ್ ಸಿಮೆಂಟ್ ಶೇ 7.52 ಅದಾನಿ ಎಂಟರ್ ಪ್ರೈಸಸ್ ಶೇ 7.43 ಭಾರತ್ ಎಲೆಕ್ಟ್ರಾನಿಕ್ಸ್ ಶೇ 7.18 ಅದಾನಿ ಪೋರ್ಟ್ಸ್ ಶೇ 7.17 ಕೋಲ್ ಇಂಡಿಯಾ ಶೇ 6.42 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 6.35 ಬಿಪಿಸಿಎಲ್ ಶೇ 6.33 ಮತ್ತು ಇಂಡಸ್‌ಇಂಡ್ ಬ್ಯಾಂಕ್ ಶೇ 6.06 ರಷ್ಟು ಕುಸಿದಿವೆ.
ಟಿಸಿಎಸ್ ಶೇ 4.06 ಟಾಟಾ ಕನ್ಸ್ಯೂಮರ್ ಶೇ 3.47 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 2.48 ಬ್ರಿಟಾನಿಯಾ ಶೇ 2.1 ವಿಪ್ರೊ ಶೇ 2.09 ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 1.9 ಒಎನ್‌ಜಿಸಿ ಶೇ 1.76 ಹಿಂದುಸ್ತಾನ್ ಯುನಿಲಿವರ್ ಶೇ 1.52 ಇನ್ಫೊಸಿಸ್ ಶೇ 1.37 ಏರ್‌ಟೆಲ್ ಶೇ 1.32 ಟೆಕ್ ಮಹೀಂದ್ರ ಶೇ 0.82 ಮತ್ತು ನೆಸ್ಲೆ ಇಂಡಿಯಾ ಶೇ 0.6ರಷ್ಟು ಗಳಿಸಿಕೊಂಡಿವೆ.
ಮುನ್ನೋಟ: ಈ ವಾರ ಎಚ್‌ಸಿಎಲ್ ಟೆಕ್ನಾಲಜೀಸ್ ಏಂಜಲ್ ಒನ್ ಡೆಲ್ಟಾ ಕಾರ್ಪ್ ಸಿಯೆಟ್ ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಇನ್ಫೊಸಿಸ್ ಎಕ್ಸಿಸ್ ಬ್ಯಾಂಕ್ ಹ್ಯಾವೆಲ್ಸ್ ಇಂಡಿಯಾ ವಿಪ್ರೊ ಕೋಟಕ್ ಮಹೀಂದ್ರ ಬ್ಯಾಂಕ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಬಜೆಟ್ ಮಂಡನೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರದ ಕುರಿತಾಗಿ ಫೆಬ್ರುವರಿಯಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬ ವಿಚಾರ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.
(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.