ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)
ಬಂಗಾರ ತುಟ್ಟಿಯಾಗುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪ ಆಗುತ್ತಿದೆ. ಆದರೆ, ಸದ್ದಿಲ್ಲದೆ ಗಳಿಕೆಯಲ್ಲಿ ಚಿನ್ನವನ್ನು ಹಿಂದಿಕ್ಕಿ ಬೆಳ್ಳಿ ಮುಂದೆ ಸಾಗುತ್ತಿದೆ. ಹೂಡಿಕೆ ಕಾರಣವಷ್ಟೇ ಅಲ್ಲದೆ ಕೈಗಾರಿಕಾ ಉದ್ದೇಶಗಳಿಗೂ ಬೆಳ್ಳಿ ಬಳಕೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ.
ಎಲೆಕ್ಟ್ರಾನಿಕ್ಸ್, ನವೀಕೃತ ಇಂಧನ ಉತ್ಪಾದನೆ, ಅತ್ಯುನ್ನತ ಉತ್ಪಾದನಾ ಘಟಕಗಳ ನಿರ್ಮಾಣ ಸೇರಿ ಅನೇಕ ಕಡೆಗಳಲ್ಲಿ ಬೆಳ್ಳಿ ಬಳಕೆಯಾಗುತ್ತಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹90 ಸಾವಿರದ ಗಡಿ ದಾಟಿದ್ದರೆ, 1 ಕೆ.ಜಿ ಬೆಳ್ಳಿ ಬೆಲೆಯು ₹1 ಲಕ್ಷದ ಗಡಿ ದಾಟಿದೆ. ಬನ್ನಿ, ಮುಂದಿನ ದಿನಗಳಲ್ಲಿ ಬಡವರ ಬಂಗಾರವಾದ ಬೆಳ್ಳಿ ಹೇಗೆ ಮೌಲ್ಯ ವೃದ್ಧಿಸಿಕೊಳ್ಳಲಿದೆ ಎಂಬುದನ್ನು ನೋಡೋಣ.
ಚಿನ್ನಕ್ಕಿಂತ ಹೆಚ್ಚು ಗಳಿಕೆ ಕೊಡುತ್ತದೆಯೇ?: ಅಂಕಿಅಂಶ ನೋಡಿದಾಗ ಕೆಲ ಸಂದರ್ಭಗಳಲ್ಲಿ ಚಿನ್ನಕ್ಕಿಂತ ಬೆಳ್ಳಿಯು ಹೆಚ್ಚಿನ ಗಳಿಕೆ ಕೊಟ್ಟಿರುವುದು ಕಂಡುಬರುತ್ತದೆ. 2020ರ ಕೋವಿಡ್ ಸಾಂಕ್ರಾಮಿಕದ ವೇಳೆ ಬೆಳ್ಳಿ ಬೆಲೆಯು ಶೇ 63ರಷ್ಟು ಹೆಚ್ಚಳ ಕಂಡಿತ್ತು. ಚಿನ್ನವನ್ನು ಹಿಂದಿಕ್ಕಿ ಹೂಡಿಕೆದಾರರಿಗೆ ಹೆಚ್ಚಿನ ಗಳಿಕೆ ತಂದುಕೊಟ್ಟಿತ್ತು.
2024ರಲ್ಲಿ ಚಿನ್ನದ ದರ ಶೇ 26ರಷ್ಟು ಜಿಗಿತ ಕಂಡರೆ, ಬೆಳ್ಳಿ ಸದ್ದಿಲ್ಲದೆ ಶೇ 34ರಷ್ಟು ಹೆಚ್ಚಳ ಕಂಡಿದೆ.
ಕೈಗಾರಿಕಾ ವಲಯದಲ್ಲಿ ಬೇಡಿಕೆ: ಚಿನ್ನವನ್ನು ಹೂಡಿಕೆಗಾಗಿ ಹೆಚ್ಚು ಮಂದಿ ಪರಿಗಣಿಸಿದರೆ, ಬೆಳ್ಳಿ ಅತ್ಯಾಧುನಿಕ ತಂತ್ರಜ್ಞಾನ ನಿರ್ಮಾಣದಲ್ಲಿ ಕಚ್ಚಾ ವಸ್ತುವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಜಗತ್ತಿನ ಅರ್ಧಕ್ಕೂ ಹೆಚ್ಚಿನ ಬೆಳ್ಳಿ ಬೇಡಿಕೆಯು ಎಲೆಕ್ಟ್ರಾನಿಕ್ಸ್, ಸೌರ ಫಲಕ ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ವಲಯದಿಂದ ಬರುತ್ತದೆ. ಅಮೆರಿಕದ ಸಿಲ್ವರ್ ಇನ್‌ಸ್ಟಿಟ್ಯೂಟ್ ವರದಿ ಪ್ರಕಾರ, ಪ್ರಸಕ್ತ ವರ್ಷದಲ್ಲಿ ಕೈಗಾರಿಕಾ ವಲಯದಲ್ಲಿ ಬೆಳ್ಳಿಗೆ ಇರುವ ಬೇಡಿಕೆ ಸುಮಾರು 700 ಮಿಲಿಯನ್ ಔನ್ಸ್. ಹಾಗಾಗಿ, ಈ ವರ್ಷವೂ ಬೆಳ್ಳಿಗೆ ಬೇಡಿಕೆಯು ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆಯಿದೆ.
ಪೂರೈಕೆ ಕೊರತೆ: ಹಲವು ವರ್ಷಗಳಿಂದ ಬೆಳ್ಳಿ ಪೂರೈಕೆಯಲ್ಲಿ ಕೊರತೆಯಿದೆ. ಕಳೆದ ವರ್ಷ ಬೆಳ್ಳಿಯ ಮಾರುಕಟ್ಟೆ ಸುಮಾರು 200 ಮಿಲಿಯನ್ ಔನ್ಸ್‌ನಷ್ಟು ಕೊರತೆ ಎದುರಿಸಿದೆ. ಇದು ಇತ್ತೀಚಿನ ಸಂದರ್ಭದಲ್ಲಿನ ಬಹಳ ದೊಡ್ಡ ಕೊರತೆ ಎಂದು ತಜ್ಞರು ಹೇಳುತ್ತಾರೆ. ಈ ನಡುವೆ ಪ್ರಸಕ್ತ ವರ್ಷವೂ ಈ ಕೊರತೆ ಸಮಸ್ಯೆ ಎದುರಾಗುವುದರಿಂದ ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಹೂಡಿಕೆ: ಹೂಡಿಕೆದಾರರು ಚಿನ್ನದಂತೆ ಬೆಳ್ಳಿಯನ್ನೂ ಹೂಡಿಕೆ ದೃಷ್ಟಿಯಿಂದ ನೋಡುತ್ತಿರುವ ಕಾರಣ ಬೆಳ್ಳಿ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹಣದುಬ್ಬರ, ಸರ್ಕಾರದ ಹಣಕಾಸು ನೀತಿಗಳನ್ನು ಮೀರಿ ಬೆಳವಣಿಗೆ ಸಾಧಿಸುವ ಅವಕಾಶ ಬೆಳ್ಳಿಗೂ ಇದೆ.
ಕಿವಿಮಾತು: ಒಂದು ಕಡೆ ಬೇಡಿಕೆ ಹೆಚ್ಚಾಗುತ್ತಿರುವುದು; ಮತ್ತೊಂದೆಡೆ ಪೂರೈಕೆ ಕೊರತೆ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ಬೆಳ್ಳಿಯು ಅತ್ಯುತ್ತಮ ಹೂಡಿಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಸಾಂಪ್ರದಾಯಿಕವಾಗಿ ಚಿನ್ನವನ್ನು ಜನರು ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಪರಿಗಣಿಸುತ್ತಿದ್ದರು. ಆದರೆ, ಬೆಳ್ಳಿ ಸುರಕ್ಷಿತ ಹೂಡಿಕೆ ಆಯ್ಕೆಯಾಗುವ ಜೊತೆಗೆ ಕೈಗಾರಿಕಾ ವಲಯದಲ್ಲೂ ಬೇಡಿಕೆ ಪಡೆದುಕೊಳ್ಳುತ್ತಿದೆ. ಚಿನ್ನವನ್ನು ಹಿಂದಿಕ್ಕಿ, ಈ ವರ್ಷವೂ ಹೆಚ್ಚಿನ ಗಳಿಕೆ ತಂದುಕೊಡುವ ನಿರೀಕ್ಷೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)
ಮತ್ತೆ ಮುಗ್ಗರಿಸಿದ ಷೇರುಪೇಟೆ
ಏಪ್ರಿಲ್ 4ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ. 75364 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.64ರಷ್ಟು ಕುಸಿದಿದೆ. 22904 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.61ರಷ್ಟು ತಗ್ಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 2.5ರಷ್ಟು ಇಳಿಕೆ ಕಂಡರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 2.61ರಷ್ಟು ತಗ್ಗಿದೆ.
ಅಮೆರಿಕದ ಪ್ರತಿ ಸುಂಕ ಸಮರ ಆರ್ಥಿಕತೆ ಬೆಳವಣಿಗೆ ಕುಂಠಿತ ಭೀತಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಷೇರುಪೇಟೆ ಮುಗ್ಗರಿಸಲು ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 9ರಷ್ಟು ಕುಸಿದಿದೆ. ನಿಫ್ಟಿ ಲೋಹ ಸೂಚ್ಯಂಕ ಶೇ 7.5 ಅನಿಲ ಮತ್ತು ತೈಲ ಸೂಚ್ಯಂಕ ಶೇ 4 ಮತ್ತು ನಿಫ್ಟಿ ರಿಯಲ್ ಎಸ್ಟೇಟ್ ಮತ್ತು ಆಟೊ ಸೂಚ್ಯಂಕಗಳು ತಲಾ ಶೇ 3ರಷ್ಟು ತಗ್ಗಿವೆ. ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 2.5ರಷ್ಟು ಕುಸಿದಿದೆ. ಡಾಬರ್ ಇಂಡಿಯಾ ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಎಚ್‌ಸಿಎಲ್ ಟೆಕ್ನಾಲಜೀಸ್ ವಾರೀ ಎನರ್ಜೀಸ್ ಇನ್ಫೊ ಎಡ್ಜ್ ಇಂಡಿಯಾ ಟಿಸಿಎಸ್ ವೇದಾಂತ ಕಂಪನಿಯ ಷೇರಿನ ಮೌಲ್ಯ ಕುಸಿದಿದೆ.
ಇಂಡಸ್ ಇಂಡ್ ಬ್ಯಾಂಕ್ ಇಂಡಸ್ ಟವರ್ಸ್ ಟಾಟಾ ಕನ್ಸೂಮರ್ ಪ್ರಾಡೆಕ್ಟ್ಸ್ ಟ್ರೆಂಟ್ ಮತ್ತು ಕೆನರಾ ಬ್ಯಾಂಕ್ ಷೇರಿನ ಮೌಲ್ಯ ಜಿಗಿತ ಕಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹13730 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹5632 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮುನ್ನೋಟ: ಏಪ್ರಿಲ್ 9ರಂದು ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರದ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಏಪ್ರಿಲ್ 11ರಂದು ಕೈಗಾರಿಕಾ ಉತ್ಪಾದನೆಯ ಅಂಕಿಅಂಶಗಳು ಹೊರಬೀಳಲಿವೆ. ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶದ ಪರ್ವ ಶುರುವಾಗಲಿದೆ. ಉಳಿದಂತೆ ಜಾಗತಿಕ ವಿದ್ಯಮಾನ ಅಮೆರಿಕದ ಸುಂಕ ಸಮರ ಸೇರಿ ಪ್ರಮುಖ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.