ADVERTISEMENT

12 ರಾಜ್ಯಗಳಿಂದ ಜಿಎಸ್‌ಟಿ ಪರಿಹಾರ ಮುಂದುವರಿಕೆಗೆ ಒತ್ತಾಯ

ಪಿಟಿಐ
Published 29 ಜೂನ್ 2022, 15:35 IST
Last Updated 29 ಜೂನ್ 2022, 15:35 IST

ಚಂಡೀಗಡ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ತಂದಿದ್ದರಿಂದಾಗಿ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ಕೊಡುವುದನ್ನು ಇನ್ನೂ ಕೆಲವು ವರ್ಷ ಮುಂದುವರಿಸಬೇಕು ಎಂದು 12 ರಾಜ್ಯಗಳು ಒತ್ತಾಯಿಸಿವೆ.

ಆದರೆ, ಜಿಎಸ್‌ಟಿ ಮಂಡಳಿಯು ಈ ವಿಚಾರವಾಗಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ರಾಜ್ಯಗಳಿಗೆ ಪರಿಹಾರ ನೀಡುವ ಸೌಲಭ್ಯವು ಗುರುವಾರಕ್ಕೆ (ಜೂನ್ 30) ಕೊನೆಗೊಳ್ಳಲಿದೆ.

ಪರಿಹಾರದ ವಿಚಾರವಾಗಿ ಅಂತಿಮ ತೀರ್ಮಾನವನ್ನು ಆಗಸ್ಟ್‌ ಮೊದಲ ವಾರದಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ADVERTISEMENT

‘ಜಿಎಸ್‌ಟಿ ಪರಿಹಾರ ಕುರಿತು 16 ರಾಜ್ಯಗಳು ಅಭಿಪ್ರಾಯ ಮಂಡಿಸಿದವು. ಈ ಪೈಕಿ ಮೂರರಿಂದ ನಾಲ್ಕು ರಾಜ್ಯಗಳು, ಪರಿಹಾರವನ್ನು ನೆಚ್ಚಿಕೊಳ್ಳಬಾರದು, ತಾವು ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕು ಎಂದು ಹೇಳಿದವು’ ಎಂದು ನಿರ್ಮಲಾ ತಿಳಿಸಿದ್ದಾರೆ.

ರಾಜ್ಯಗಳಿಗೆ ಪರಿಹಾರದ ರೂಪದಲ್ಲಿ ನೀಡಲು ಅಗತ್ಯವಿರುವ ಹಣವನ್ನು ಕೆಲವು ಉತ್ಪನ್ನಗಳ ಮೇಲೆ ಸೆಸ್ ವಿಧಿಸುವ ಮೂಲಕ ಸಂಗ್ರಹಿಸಲಾಗುತ್ತಿದೆ.

ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಛತ್ತೀಸಗಡ, ಕೇರಳ ಮತ್ತು ರಾಜಸ್ಥಾನ ರಾಜ್ಯಗಳು ಪರಿಹಾರವನ್ನು ಇನ್ನೂ ಐದು ವರ್ಷಗಳಿಗೆ ನೀಡಬೇಕು ಎಂದು ಆಗ್ರಹಿಸಿವೆ. ಇದಾಗದಿದ್ದರೆ, ಜಿಎಸ್‌ಟಿ ವರಮಾನದಲ್ಲಿ ಶೇ 70ರಿಂದ ಶೇ 80ರಷ್ಟನ್ನು ರಾಜ್ಯಗಳ ಪಾಲಿಗೆ ಬಿಟ್ಟುಕೊಡಬೇಕು ಎಂದು ಅವು ಆಗ್ರಹಿಸಿವೆ. ಬಿಜೆಪಿ ಆಡಳಿತ ಇರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡ ಪರಿಹಾರ ನೀಡುವುದನ್ನು ಮುಂದುವರಿಸಬೇಕು ಎಂದು ಕೇಳಿದೆ.

ಕ್ಯಾಸಿನೊ, ಕುದುರೆ ರೇಸ್ ಹಾಗೂ ಆನ್‌ಲೈನ್‌ ಆಟಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಕುರಿತು ಮಂಡಳಿಯು ತೀರ್ಮಾನ ಕೈಗೊಂಡಿಲ್ಲ.

ಕೆಲವು ಉತ್ಪನ್ನಗಳ ಮೆಲಿನ ತೆರಿಗೆ ಪ್ರಮಾಣ ಜಾಸ್ತಿ ಮಾಡಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಅರಿವು ಜಿಎಸ್‌ಟಿ ಮಂಡಳಿಯ ಸದಸ್ಯರಿಗೆ ಇದೆ ಎಂದು ನಿರ್ಮಲಾ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ.

‘ಇದು ಎಲ್ಲ ಸಚಿವರಿಗೂ ಗೊತ್ತಿದೆ. ಅದನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ಅವರೆಲ್ಲ ವ್ಯವಸ್ಥೆಯನ್ನು ನೋಡುತ್ತಿದ್ದಾರೆ. ತೆರಿಗೆ ಪ್ರಮಾಣ ಜಾಸ್ತಿ ಮಾಡುವುದಕ್ಕೆ ಯಾವ ರಾಜ್ಯದಿಂದಲೂ ವಿರೋಧ ವ್ಯಕ್ತವಾಗಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.