ADVERTISEMENT

ಹಿಂಡನ್‌ಬರ್ಗ್‌ 2.0: ಅದಾನಿ ಷೇರುಗಳ ಮೌಲ್ಯ ಕುಸಿತ; ಆರೋಪ ಅಲ್ಲಗಳೆದ ಕಂಪನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2023, 6:29 IST
Last Updated 31 ಆಗಸ್ಟ್ 2023, 6:29 IST
<div class="paragraphs"><p>ಅದಾನಿ ಸಮೂಹ</p></div>

ಅದಾನಿ ಸಮೂಹ

   

ಮುಂಬೈ: ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಮಾಡಿದ ಹೊಸ ಆರೋಪಗಳನ್ನು ನಿರಾಕರಿಸಿದ ನಂತರವೂ ಅದಾನಿ ಸಮೂಹ ಕಂಪನಿಗಳ ಷೇರುಗಳ ಮಾರಾಟ ಗುರುವಾರ ಒತ್ತಡಕ್ಕೆ ಸಿಲುಕಿದವು. 

ಗುರುವಾರ ಬೆಳಿಗ್ಗೆ ಷೇರುಪೇಟೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅದಾನಿ ಸಮೂಹದ ಎಲ್ಲಾ ಷೇರುಗಳು ನಷ್ಟಕ್ಕೆ (ರೆಡ್‌ ಝೋನ್) ಜಾರಿದವು.

ADVERTISEMENT

ಅದಾನಿ ಪವರ್‌ ಷೇರು ಮೌಲ್ಯ ಶೇ 3ರಷ್ಟು ಕುಸಿತ ಕಂಡಿದೆ. ಅದಾನಿ ಟ್ರಾನ್ಸ್‌ಮಿಷನ್ ಷೇರು ಬೆಲೆ ಶೇ 3.3ರಷ್ಟು, ಅದಾನಿ ಎಂಟರ್‌ಪ್ರೈಸಸ್‌ನ ಷೇರು ಬೆಲೆ ಶೇ 2.5ರಷ್ಟು, ಅದಾನಿ ಗ್ರೀನ್ ಎನರ್ಜಿ ಹಾಗೂ ಅದಾನಿ ಟೋಟಲ್ ಗ್ಯಾಸ್‌ನ ಷೇರು ಬೆಲೆ ಶೇ 2.25ರಷ್ಟು ಕುಸಿತ ಕಂಡಿದೆ.

ಮಾರಿಷಸ್ ಮೂಲಕ ಅಪಾರದರ್ಶಕ ಹೂಡಿಕೆಯನ್ನು ಅದಾನಿ ಸಮೂಹ ಮಾಡುತ್ತಿದೆ ಎಂದು ಒಸಿಸಿಆರ್‌ಪಿ ಆರೋಪ ಮಾಡಿದೆ. ಇಂಥ ಎರಡು ಪ್ರಕರಣಗಳನ್ನು ಪತ್ತೆ ಮಾಡಿರುವುದಾಗಿ ಈ ಸಂಸ್ಥೆ ಹೇಳಿದೆ. ಇವುಗಳಲ್ಲಿ ಹೂಡುಕೆದಾರರು ವಿದೇಶಿ ವ್ಯವಸ್ಥೆಯ ಮೂಲಕ ಷೇರುಗಳ ಖರೀದಿ ಹಾಗೂ ಮಾರಾಟ ನಡೆಸಿರುವುದು ಪತ್ತೆಯಾಗಿದೆ ಎಂದೂ ಹೇಳಿದೆ.

ಅದಾನಿ ಸಮೂಹವು ಈ ಆರೋಪಗಳನ್ನು ಅಲ್ಲಗಳೆದಿದೆ. ಗುರುವಾರ ಷೇರುಪೇಟೆ ಆರಂಭಕ್ಕೂ ಮೊದಲು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅದಾನಿ ಸಮೂಹವು, ಅರ್ಹತೆ ಇಲ್ಲದ ಹಿಂಡನ್‌ಬರ್ಗ್‌ ಅನ್ನು ಬೆಂಬಲಿಸುವ ವಿದೇಶಿ ಮಾಧ್ಯಮದ ಒಂದು ವಲಯ ಸಂಘಟಿತವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದೆ.

‘ಓವರ್‌ ಇನ್‌ವಾಯ್ಸ್‌, ವಿದೇಶಕ್ಕೆ ಹಣ ವರ್ಗಾವಣೆ, ಪಕ್ಷದ ವಹಿವಾಟು ಹಾಗೂ ಎಫ್‌ಪಿಐ ಮೂಲಕ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಶಕದ ಹಿಂದೆ ಡೈರೆಕ್ಟರೇಟ್‌ ಆಫ್ ರೆವೆನ್ಯೂ ಇಂಟೆಲಿಜೆನ್ಸಿ (ಡಿಆರ್‌ಐ) ನಡೆಸಿ, ಮುಕ್ತಾಯಗೊಂಡ ತನಿಖೆಯ ಭಾಗವನ್ನೇ ಈಗ ಆರೋಪಿಸಲಾಗಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದು ಮೇಲ್ಮನವಿ ಪ್ರಾಧಿಕಾರ ದೃಢಪಡಿಸಿದೆ. 2023ರಲ್ಲಿ ಸುಪ್ರೀಂ ಕೋರ್ಟ್‌ ಕೂಡಾ ಕಂಪನಿ ಪರವಾಗಿ ತೀರ್ಪು ನೀಡಿದೆ. ಆದರೆ ಈಗ ಈ ಹಣ ವರ್ಗಾವಣೆಯ ಆರೋಪಗಳಿಗೆ ಯಾವುದೇ ಪ್ರಸ್ತುತತೆ ಹಾಗೂ ಆಧಾರವಿಲ್ಲ’ ಎಂದು ಹೇಳಿದೆ.

‘ಇಂಥ ಪ್ರಯತ್ನಗಳ ಮೂಲಕ ನಮ್ಮ ಕಂಪನಿಯ ಷೇರುಗಳ ಮೌಲ್ಯವನ್ನು ಕುಸಿಯುವಂತೆ ಮಾಡುವ ಪ್ರಯತ್ನದ ಕುರಿತು ವಿವಿಧ ತನಿಖಾ ಸಂಸ್ಥೆಗಳು ಹಾಗೂ ಪ್ರಾಧಿಕಾರಗಳು ತನಿಖೆ ನಡೆಸುತ್ತಿವೆ. ಈ ನಡುವೆ ಈ ವಿಷಯ ಕುರಿತು  ಸುಪ್ರೀಂ ಕೋರ್ಟ್ ಮತ್ತು ಸೆಬಿ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ನಿಯಂತ್ರಣ ಪ್ರಕ್ರಿಯೆಯನ್ನು ಗೌರವಿಸುವುದು ಅತ್ಯಗತ್ಯ’ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

‘ಕಾನೂನಿನ ಪ್ರಕ್ರಿಯೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ಎಲ್ಲದರ ನಡುವೆ ಬಂದಿರುವ ವರದಿಯ ಸತ್ಯಾಸತ್ಯತೆ ಕುರಿತು ಅನುಮಾನ ಮೂಡುವಂತಿವೆ. ಹೀಗಾಗಿ ವರದಿಯಲ್ಲಿರುವ ಆರೋಪಗಳನ್ನು ನಾವು ನಿರಾಕರಿಸುತ್ತೇವೆ’ ಎಂದು ಅದಾನಿ ಸಮೂಹ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.