ADVERTISEMENT

ಅಕ್ಷಯ ತೃತೀಯ: ರಾಜ್ಯದಲ್ಲಿ 2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ

₹3 ಸಾವಿರ ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 23:30 IST
Last Updated 30 ಏಪ್ರಿಲ್ 2025, 23:30 IST
<div class="paragraphs"><p>ಅಕ್ಷಯ ತೃತೀಯ ಅಂಗವಾಗಿ ಬುಧವಾರ ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯರು ಆಭರಣ ಖರೀದಿಸಿದರು </p></div>

ಅಕ್ಷಯ ತೃತೀಯ ಅಂಗವಾಗಿ ಬುಧವಾರ ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯರು ಆಭರಣ ಖರೀದಿಸಿದರು

   

–ಚಿತ್ರ ಎಸ್‌.ಕೆ ದಿನೇಶ್‌

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಕ್ಷಯ ತೃತೀಯ ದಿನವಾದ ಬುಧವಾರ ಆಭರಣದ ಅಂಗಡಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿ ಜೋರಾಗಿತ್ತು.

ADVERTISEMENT

ಈ ಮಂಗಳಕರ ದಿನದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗಲಿದೆ ಎಂಬುದು ಜನರ ನಂಬಿಕೆ. ಹಾಗಾಗಿ, ಹಳದಿ ಲೋಹ ಮತ್ತು ಬೆಳ್ಳಿ ಬೆಲೆ ಏರಿಕೆಯಾದರೂ ಗ್ರಾಹಕರಲ್ಲಿ ಖರೀದಿ ಉತ್ಸಾಹ ಕಡಿಮೆಯಾಗಿರಲಿಲ್ಲ. ಬೆಳಿಗ್ಗೆಯಿಂದಲೇ ಅಂಗಡಿಗಳಿಗೆ ದಾಂಗುಡಿ ಇಟ್ಟಿದ್ದರು. 

ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಂದೇ ದಿನ ಸುಮಾರು ₹3 ಸಾವಿರ ಕೋಟಿ ವಹಿವಾಟು ನಡೆದಿದೆ. ಕಳೆದ ವರ್ಷದ ಅಕ್ಷಯ ತೃತೀಯ ದಿನದಂದು ನಡೆದ ವಹಿವಾಟಿಗೆ ಹೋಲಿಸಿದರೆ ಚಿನ್ನಾಭರಣ ಮಾರಾಟದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ.

‘ಮಂಗಳಕರ ದಿನದಂದು ಗ್ರಾಹಕರು ಉತ್ಸಾಹದಿಂದಲೇ ಚಿನ್ನದ ಆಭರಣಗಳ ಖರೀದಿಗೆ ಮುಂದಾಗಿದ್ದರು. ರಾಜ್ಯದಲ್ಲಿ 2,380 ಕೆ.ಜಿ ಚಿನ್ನ ಮತ್ತು 4,560 ಕೆ.ಜಿ ಬೆಳ್ಳಿ ಮಾರಾಟವಾಗಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ. ರಾಮಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನಾಭರಣ ಮಾರಾಟದಲ್ಲಿ ಶೇ 30ರಷ್ಟು ಮತ್ತು ಬೆಳ್ಳಿ ಆಭರಣಗಳ ಮಾರಾಟದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ’ ಎಂದರು.

ಈ ಬಾರಿ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಅಕ್ಷಯ ತೃತೀಯ ಹಬ್ಬವನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಹಾಗಾಗಿ, ಬಸವಣ್ಣ, ಶಂಕರಾಚಾರ್ಯ ಅವರ ಚಿತ್ರವಿರುವ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು ಎಂದು ವಿವರಿಸಿದರು.

‘ಸಿನಿಮಾ ನಟರು ಧರಿಸುವ ಕರುಂಗಲಿ ಮಾಲೆ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಬಾರಿ ಚಿನ್ನದ ಕರುಂಗಲಿ ಮಾಲೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು’ ಎಂದರು.

ಗ್ರಾಹಕರನ್ನು ಸೆಳೆಯಲು ಚಿನ್ನದ ಅಂಗಡಿಳಿಂದ ರಿಯಾಯಿತಿ ಘೋಷಿಸಲಾಗಿತ್ತು. ಅಲ್ಲದೆ, ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್‌ಗಳಿಂದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ತಯಾರಿಕೆ ವೆಚ್ಚದಲ್ಲಿ ರಿಯಾಯಿತಿ ಪ್ರಕಟಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.