
ವಿಮಾನ
ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಎರಡು ವಿಮಾನಯಾನ ಕಂಪನಿಗಳಿಗೆ ಸೇವೆ ಆರಂಭಿಸಲು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ನಿರಾಕ್ಷೇಪಣಾ ಪತ್ರವನ್ನು ಪಡೆದಿರುವ ಕಂಪನಿಗಳು.
ಇವೆರಡು ಕಂಪನಿಗಳಲ್ಲದೆ ಉತ್ತರ ಪ್ರದೇಶ ಮೂಲದ ಶಂಖ ಏರ್ 2026ರಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಈ ಕಂಪನಿಯು ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಈಗಾಗಲೇ ಪಡೆದಿದೆ. ಅಲ್ ಹಿಂದ್ ಏರ್ ಕಂಪನಿಯ ಮಾಲೀಕತ್ವವನ್ನು ಕೇರಳ ಮೂಲದ ಅಲ್‌ಹಿಂದ್ ಸಮೂಹ ಹೊಂದಿದೆ.
ದೇಶದಲ್ಲಿ ವಿಮಾನಯಾನ ಸೇವೆಗಳನ್ನು ಒದಗಿಸುವ ಕಂಪನಿಗಳ ಸಂಖ್ಯೆಯು ಇನ್ನಷ್ಟಾಗಬೇಕು ಎಂಬುದು ನಾಗರಿಕ ವಿಮಾನಯಾನ ಸಚಿವಾಲಯದ ಬಯಕೆ. ಜಗತ್ತಿನಲ್ಲಿ ಅತಿಹೆಚ್ಚು ವೇಗದ ಬೆಳವಣಿಗೆ ಕಾಣುತ್ತಿರುವ ದೇಶಿ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಭಾರತವೂ ಸೇರಿದೆ.
ದೇಶದಲ್ಲಿ ಈಗ ಒಂಬತ್ತು ಕಂಪನಿಗಳು ವಿಮಾನಯಾನ ಸೇವೆ ಒದಗಿಸುತ್ತಿವೆ. ‘ಫ್ಲೈ ಬಿಗ್’ ಹೆಸರಿನ ಪ್ರಾದೇಶಿಕ ವಿಮಾನಯಾನ ಕಂಪನಿಯು ಅಕ್ಟೋಬರ್‌ನಿಂದ ತನ್ನ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸಿದೆ.
ಇಂಡಿಗೊ ಮತ್ತು ಏರ್ ಇಂಡಿಯಾ ಸಮೂಹ (ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್) ಒಟ್ಟಾಗಿ ದೇಶದ ಮಾರುಕಟ್ಟೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ. ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಾರುಕಟ್ಟೆಯಲ್ಲಿ ಎರಡೇ ಕಂಪನಿಗಳು ಅಧಿಪತ್ಯ ಹೊಂದಿವೆ ಎಂಬ ಕಳವಳವು ಈ ತಿಂಗಳ ಆರಂಭದಲ್ಲಿ ತೀವ್ರವಾಗಿ ವ್ಯಕ್ತವಾಗಿತ್ತು.
ಶೇ 65ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿರುವ ಇಂಡಿಗೊ ಕಂಪನಿಯ ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದ ಭಾರಿ ಸಂಖ್ಯೆಯ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಇದು ಈ ಪ್ರಮಾಣದ ಕಳವಳಕ್ಕೆ ದಾರಿ ಮಾಡಿಕೊಟ್ಟಿತ್ತು.
‘ಕಳೆದ ಒಂದು ವಾರದಲ್ಲಿ ನಾನು ಹೊಸ ವಿಮಾನಯಾನ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇನೆ. ಶಂಖ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಕಂಪನಿಗಳು ಗಗನಕ್ಕೆ ನೆಗೆಯುವ ಆಕಾಂಕ್ಷೆಯನ್ನು ಹೊಂದಿವೆ. ಶಂಖ ಏರ್ ಕಂಪನಿಗೆ ಸಚಿವಾಲಯದ ನಿರಾಕ್ಷೇಪಣಾ ಪತ್ರ ಈಗಾಗಲೇ ದೊರೆತಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
ಉಡಾನ್ ಯೋಜನೆಯು ಸಣ್ಣ ಕಂಪನಿಗಳಾದ ಸ್ಟಾರ್ ಏರ್, ಇಂಡಿಯಾ ಒನ್ ಏರ್ ಮತ್ತು ಫ್ಲೈ91 ಕಂಪನಿಗಳಿಗೆ ಪ್ರಾದೇಶಿಕ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಮುಖ್ಯ ಪಾತ್ರ ವಹಿಸಲು ನೆರವಾಗಿದೆ ಎಂದು ನಾಯ್ಡು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಗೋ ಫಸ್ಟ್ ಮತ್ತು ಜೆಟ್ ಏರ್‌ವೇಸ್ ಸಾಲದ ಸುಳಿಗೆ ಸಿಲುಕಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.