ADVERTISEMENT

ಬೆಂಗಳೂರಿನಲ್ಲಿ ಚದರ ಅಡಿ ₹7,388: ಮನೆ ಬೆಲೆ ಶೇ 19ರಷ್ಟು ಹೆಚ್ಚಳ

ಪಿಟಿಐ
Published 7 ಜನವರಿ 2026, 16:19 IST
Last Updated 7 ಜನವರಿ 2026, 16:19 IST
.
.    

ನವದೆಹಲಿ: ದೇಶದ ಪ್ರಮುಖ ಎಂಟು ನಗರಗಳಲ್ಲಿ ಮನೆಗಳ ಸರಾಸರಿ ಬೆಲೆಯು 2025ರಲ್ಲಿ ಶೇಕಡ 19ರವರೆಗೆ ಏರಿಕೆ ಆಗಿದೆ, ಬೆಂಗಳೂರಿನಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಇದೇ ಅವಧಿಯಲ್ಲಿ ಮನೆಗಳ ಮಾರಾಟ ಶೇ 1ರಷ್ಟು ಇಳಿಕೆ ಆಗಿದೆ. 2025ರಲ್ಲಿ 3,48,207 ಮನೆಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ, ಸದೃಢ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ಇಳಿಕೆಯಂತಹ ಅಂಶಗಳು ಮನೆಗಳಿಗೆ ಬೇಡಿಕೆ ಉಳಿಸಿಕೊಳ್ಳಲು ನೆರವಾಗಿವೆ ಎಂದು ವರದಿ ಹೇಳಿದೆ.

ADVERTISEMENT

‘ಮನೆಗಳ ಬೆಲೆ ಹೆಚ್ಚಳದ ನಡುವೆಯೂ ಮಾರಾಟವು ಮುಂದುವರಿದಿದೆ’ ಎಂದು ನೈಟ್‌ ಫ್ರಾಂಕ್‌ ಇಂಡಿಯಾದ ಸಿಎಂಡಿ ಶಿಶಿರ್ ಬೈಜಲ್ ಹೇಳಿದ್ದಾರೆ.

ಮನೆಗಳ ಮಾರಾಟದಲ್ಲಿ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಕೊಡುಗೆ ಶೇ 15ಕ್ಕೆ ಏರಿಕೆಯಾಗಿದೆ. ದಶಕದ ಹಿಂದೆ ಈ ಪ್ರಮಾಣ ಒಂದಂಕಿಯಲ್ಲಿ ಇತ್ತು. 2026ರಲ್ಲಿ ಮನೆಗಳ ಮಾರಾಟವು ಆಶಾದಾಯಕ ಆಗಿರಲಿದೆ ಎಂದು ಹೇಳಿದ್ದಾರೆ. 

ಮುಂಬೈನಲ್ಲಿ ಮನೆಗಳ ಮಾರಾಟವು ಶೇ 1ರಷ್ಟು ಏರಿಕೆ ಆಗಿದ್ದು, 97,188 ಮನೆಗಳು ಮಾರಾಟವಾಗಿವೆ. ಬೆಂಗಳೂರಿನಲ್ಲಿ 55,373 ಮನೆಗಳ ಮಾರಾಟವಾಗಿದ್ದು, ಮನೆಗಳ ಸರಾಸರಿ ಬೆಲೆಯಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ. ಪ್ರತಿ ಚದರ ಅಡಿ ಬೆಲೆ ₹7,388 ಇದೆ.

ಪುಣೆ (ಶೇ 3), ದೆಹಲಿ–ಎನ್‌ಸಿಆರ್ (ಶೇ 9), ಕೋಲ್ಕತ್ತದಲ್ಲಿ (ಶೇ 3) ಮನೆಗಳ ಮಾರಾಟದಲ್ಲಿ ಇಳಿಕೆ ಆಗಿದೆ. ಹೈದರಾಬಾದ್ (ಶೇ 4), ಅಹಮದಾಬಾದ್‌ (ಶೇ 2) ಮತ್ತು ಚೆನ್ನೈನಲ್ಲಿ ಮನೆಗಳ ಮಾರಾಟದಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ.

ಮಾರಾಟವಾಗದೆ ಉಳಿದ 5.77 ಲಕ್ಷ ಮನೆ: 2025ರಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆ 5.77 ಲಕ್ಷ ಆಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಇತ್ತೀಚೆಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.